ಇಸ್ಲಾಮಾಬಾದ್ ನ ನ್ಯಾಯಾಲಯದ ಹೊರಗೆ ಬಾಂಬ್ ಸ್ಫೋಟ ಪ್ರಕರಣದಲ್ಲಿ ೭ ಶಂಕಿತರ ಬಂಧನ

ಇಸ್ಲಾಮಾಬಾದ್ (ಪಾಕಿಸ್ತಾನ) – ಪಾಕಿಸ್ತಾನದಲ್ಲಿ ನಡೆದ ೨ ಪ್ರಮುಖ ಆತ್ಮಹುತಿ ದಾಳಿಗಳ ಕುರಿತು ಗೃಹ ಸಚಿವ ಮೊಹ್ಸಿನ್ ನಖ್ವಿ ಅವರು ನವೆಂಬರ್ ೧೪ ರಂದು ಸಂಸತ್ತಿನಲ್ಲಿ ಮಾಹಿತಿ ನೀಡಿದರು. ಅವರ ಹೇಳಿಕೆಯ ಪ್ರಕಾರ, ಎರಡೂ ಕಡೆ ದಾಳಿ ಮಾಡಿದವರು ಆಫ್ಘಾನ್ ಪ್ರಜೆಗಳಾಗಿದ್ದರು. ಇಸ್ಲಾಮಾಬಾದ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ೭ ಜನರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

೧. ಮಾಧ್ಯಮಗಳು ನೀಡಿದ ಮಾಹಿತಿ ಪ್ರಕಾರ, ನವೆಂಬರ್ ೧೧ ರಂದು ಇಸ್ಲಾಮಾಬಾದ್‌ನ ಜಿಲ್ಲಾ ನ್ಯಾಯಾಂಗ ಸಂಕೀರ್ಣದ ಪ್ರವೇಶ ದ್ವಾರದ ಬಳಿ ನಡೆದ ಆತ್ಮಹುತಿ ಸ್ಫೋಟದಲ್ಲಿ ೧೨ ಜನರು ಸಾವನ್ನಪ್ಪಿದ್ದಾರೆ ಮತ್ತು ೩೦ ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ವರದಿಗಳ ಪ್ರಕಾರ, ರಾವಲ್ಪಿಂಡಿಯಲ್ಲಿ ಭಯೋತ್ಪಾದನಾ ನಿಗ್ರಹ ವಿಭಾಗವು ೭ ಶಂಕಿತರನ್ನು ಬಂಧಿಸಿದೆ. ಕೆಲವರನ್ನು ಸೈನಿಕ ವಸಾಹತು ಮತ್ತು ಧೋಕೆ ಕಾಶ್ಮೀರಿಯನ್ ಪ್ರದೇಶದಿಂದ ಬಂಧಿಸಲಾಗಿದೆ. ಹಾಗೆಯೇ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದಲ್ಲಿಯೂ ದಾಳಿ ನಡೆಸಲಾಯಿತು.

೨. ನವೆಂಬರ್ ೧೦ ರಂದು ದಕ್ಷಿಣ ವಜೀರಿಸ್ತಾನದಲ್ಲಿ ಅಫ್ಘಾನ್ ಗಡಿಯ ಸಮೀಪವಿರುವ ಕೆಡೆಟ್ ಕಾಲೇಜಿನ ಮುಖ್ಯ ಪ್ರವೇಶ ದ್ವಾರಕ್ಕೆ ಸ್ಫೋಟಕ ತುಂಬಿದ ವಾಹನವನ್ನು ಗುದ್ದಲಾಯಿತು. ೨ ದಾಳಿಕೋರರು ಸ್ಥಳದಲ್ಲೇ ಸಾವನ್ನಪ್ಪಿದರು, ಹಾಗೂ ಮೂವರು ಕಾಲೇಜಿನೊಳಗೆ ನುಗ್ಗುವಲ್ಲಿ ಯಶಸ್ವಿಯಾಗಿದ್ದರು. ಅಫ್ಘಾನ್ ಗಡಿಯ ಸಮೀಪ ಕಾರ್ಯನಿರ್ವಹಿಸುತ್ತಿರುವ ಸಶಸ್ತ್ರ ಗುಂಪುಗಳು ಪಾಕಿಸ್ತಾನದಲ್ಲಿ ದಾಳಿಗಳನ್ನು ನಡೆಸುತ್ತಿವೆ ಎಂದು ಪಾಕಿಸ್ತಾನವು ಆರೋಪಿಸಿದೆ, ಆದರೆ ಅಫ್ಘಾನಿಸ್ತಾನವು ಈ ಆರೋಪಗಳನ್ನು ನಿರಾಕರಿಸಿದೆ.