ತೆಲಂಗಾಣ: ಆರ್ಥಿಕ ನಷ್ಟದ ನೆಪ; ಬಾಸರ ಜ್ಞಾನ ಸರಸ್ವತಿ ದೇವಸ್ಥಾನದಲ್ಲಿ ಉಚಿತ ಪ್ರಸಾದ ವಿತರಣೆ ರದ್ದು!

ಹಿಂದೂ ಜನಜಾಗೃತಿ ಸಮಿತಿಯ ವಿರೋಧ

ನಿರ್ಮಲ್ (ತೆಲಂಗಾಣ) – ನಿರ್ಮಲ್ ಜಿಲ್ಲೆಯ ಬಾಸರದಲ್ಲಿರುವ ಜ್ಞಾನ ಸರಸ್ವತಿ ದೇವಾಲಯದಲ್ಲಿ ಸಾಕ್ಷಾತ್ ಮಹರ್ಷಿ ವ್ಯಾಸಮುನಿಗಳು ಶ್ರೀ ಸರಸ್ವತಿ ಮಾತೆಯ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದರು. ಇಡೀ ಭಾರತದಲ್ಲಿ ಸರಸ್ವತಿ ಮಾತೆಯ ಕೇವಲ ಎರಡು ದೇವಾಲಯಗಳಿವೆ, ಒಂದು ಕಾಶ್ಮೀರದಲ್ಲಿ ಮತ್ತು ಇನ್ನೊಂದು ಬಾಸರದಲ್ಲಿ! ಈ ದೇವಸ್ಥಾನದಲ್ಲಿ ಚಿಕ್ಕ ಮಕ್ಕಳಿಗೆ ‘ಅಕ್ಷರಾಭ್ಯಾಸ’ ಮಾಡುವ ಸಂಪ್ರದಾಯವಿದೆ. ಸರಸ್ವತಿ ಮಾತೆಯ ಸಾಕ್ಷಿಯಲ್ಲಿ ಚಿಕ್ಕ ಮಕ್ಕಳ ಕೈಯಿಂದ ಅಕ್ಕಿಯ ಮೇಲೆ ‘ಓಂ’ ಎಂದು ಬರೆಸಿ ಶಿಕ್ಷಣಾರಂಭ ಮಾಡಲಾಗುತ್ತದೆ.

ಈ ದೇವಸ್ಥಾನವು ತೆಲಂಗಾಣ ಸರಕಾರದ ಸುಪರ್ದಿಯಲ್ಲಿದ್ದು, ಇಲ್ಲಿ ಕೆಲ ದಿನಗಳ ಹಿಂದೆ ಒಂದು ಸೂಚನೆಯನ್ನು ಅಳವಡಿಸಲಾಗಿತ್ತು. ಈ ಸೂಚನೆ ಪ್ರಕಾರ, ‘ಅಕ್ಷರಾಭ್ಯಾಸ’ ಮಾಡುವವರಿಗೆ ಪ್ರಸಾದವಾಗಿ ನೀಡುತ್ತಿದ್ದ ಒಂದು ಲಡ್ಡು ಈಗ ಉಚಿತವಾಗಿ ನೀಡಲು ಸಾಧ್ಯವಿಲ್ಲ; ಏಕೆಂದರೆ ಇದರಿಂದ ದೇವಸ್ಥಾನಕ್ಕೆ ಆರ್ಥಿಕ ನಷ್ಟವಾಗುತ್ತಿದೆ.’ ಆ ಸೂಚನೆಯ ಪ್ರಕಾರ ‘ಈ ಪ್ರಸಾದ ಲಡ್ಡುವಿನ ಬೆಲೆ ಮೊದಲು ₹೧೦೦ ಆಗಿತ್ತು, ಅದನ್ನು ಈಗ ₹೧೫೦ಕ್ಕೆ ಏರಿಸಲಾಗುತ್ತಿದೆ. ಈ ಬಗ್ಗೆ ಯಾರಿಗಾದರು ಆಕ್ಷೇಪವಿದ್ದರೆ ದೇವಸ್ಥಾನದ ಕಚೇರಿಯನ್ನು ಸಂಪರ್ಕಿಸಿ ಮತ್ತು ದೂರು ದಾಖಲಿಸಬಹುದು’ ಎಂದು ಬರೆಯಲಾಗಿತ್ತು. ದೂರು ನೀಡಲು ೧೫ ದಿನಗಳ ಕಾಲಾವಕಾಶ ನೀಡಲಾಗಿತ್ತು.

ಇದನ್ನು ವಿರೋಧಿಸಿದ ಹಿಂದೂ ಜನಜಾಗೃತಿ ಸಮಿತಿಯು ‘ಈ ಸೂಚನೆಯನ್ನು ತಕ್ಷಣ ಹಿಂಪಡೆಯಬೇಕು, ಲಡ್ಡುವಿನ ಬೆಲೆ ಏರಿಕೆ ಮತ್ತು ಪ್ರಸಾದ ನೀಡದಿರುವ ನಿರ್ಧಾರವನ್ನು ರದ್ದುಗೊಳಿಸಬೇಕೆಂದು’ ಆಗ್ರಹಿಸಿದೆ. ‘ಸರಕಾರವು ಈ ಬೇಡಿಕೆಯನ್ನು ಒಪ್ಪದಿದ್ದರೆ, ದೊಡ್ಡ ಆಂದೋಲನವನ್ನು ಹಮ್ಮಿಕೊಳ್ಳಲಾಗುವುದು,’ ಎಂದು ಸಹ ಸಮಿತಿ ಎಚ್ಚರಿಕೆ ನೀಡಿದೆ.

ದೇವಸ್ಥಾನದ ಸೂಚನೆ ಮರೆಮಾಚುವ ಪ್ರಯತ್ನ

ಲಡ್ಡುವಿಗೆ ಸಂಬಂಧಿಸಿದ ಸೂಚನೆಯನ್ನು ದೇವಸ್ಥಾನದಿಂದ ಸುಮಾರು ೫೦೦ ಮೀಟರ್ ದೂರದಲ್ಲಿರುವ ಕಾರ್ಯನಿರ್ವಾಹಕ ಅಧಿಕಾರಿಗಳ ಕಚೇರಿಯ ಫಲಕದ ಮೇಲೆ ಅಳವಡಿಸಲಾಗಿತ್ತು, ಈ ಕಚೇರಿಯ ಕಡೆ ಸಾಮಾನ್ಯವಾಗಿ ಭಕ್ತರು ಹೋಗುವುದಿಲ್ಲ. ಭಕ್ತರು ದೇವಸ್ಥಾನಕ್ಕೆ ಬಂದು, ದರ್ಶನ ಪಡೆದು ಹೊರಟು ಹೋಗುತ್ತಾರೆ. ಆದ್ದರಿಂದ, ಸಾಮಾನ್ಯ ಭಕ್ತರಿಗೆ ಈ ನಿರ್ಧಾರದ ಮಾಹಿತಿ ತಿಳಿಯಬಾರದೆಂಬ ಉದ್ದೇಶದಿಂದಲೇ ಈ ಸೂಚನೆಯನ್ನು ಅಳವಡಿಸಲಾಗಿತ್ತು. ಈ ವಿಷಯ ಹಿಂದೂ ಜನಜಾಗೃತಿ ಸಮಿತಿಯ ಗಮನಕ್ಕೆ ಬಂದ ತಕ್ಷಣ, ಸಮಿತಿಯು ಕೂಡಲೇ ಈ ಬಗ್ಗೆ ಒಂದು ವೀಡಿಯೊ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರ ಮಾಡಿತು, ಮತ್ತು ಜನರು ತಮ್ಮ ದೂರುಗಳನ್ನು ಕಚೇರಿಯಲ್ಲಿ ದಾಖಲಿಸಬೇಕು ಅಥವಾ ದೂರವಾಣಿ ಮೂಲಕ ತಿಳಿಸಬೇಕೆಂದು ಕರೆ ನೀಡಿತು.

ಆರ್ಥಿಕ ನಷ್ಟವಾಗುತ್ತಿದೆ ಎಂಬ ಹೇಳಿಕೆ ತಪ್ಪು!

ಬಾಸರದಲ್ಲಿರುವ ಸರಸ್ವತಿ ಮಾತೆಯ ಈ ದೇವಸ್ಥಾನವು ಅತ್ಯಂತ ಪ್ರಸಿದ್ಧವಾಗಿದ್ದು, ಸಾವಿರಾರು ಭಕ್ತರು ಇಲ್ಲಿ ‘ಅಕ್ಷರಾಭ್ಯಾಸ’ ಮಾಡಲು ಬರುತ್ತಾರೆ. ‘ಅಕ್ಷರಾಭ್ಯಾಸ’ಕ್ಕಾಗಿ ₹೧,೦೦೦ ಶುಲ್ಕ ವಿಧಿಸಲಾಗುತ್ತದೆ. ಕುಂಕುಮಾರ್ಚನೆ, ಲಡ್ಡು ಪ್ರಸಾದ, ಚಂಡಿ ಹೋಮ ಮುಂತಾದ ವಿವಿಧ ಪೂಜೆಗಳಿಗೆ ಪ್ರತ್ಯೇಕ ಶುಲ್ಕವನ್ನು ತೆಗೆದುಕೊಳ್ಳಲಾಗುತ್ತದೆ. ದೇವಸ್ಥಾನದ ಆವರಣದಲ್ಲಿರುವ ಅನೇಕ ಅಂಗಡಿಗಳನ್ನು ಬಾಡಿಗೆಗೆ ನೀಡಲಾಗಿದ್ದು, ಇದರಿಂದ ದೇವಸ್ಥಾನಕ್ಕೆ ಲಕ್ಷಾಂತರ ರೂಪಾಯಿಗಳ ಆದಾಯ ಬರುತ್ತದೆ. ವಸತಿಗಾಗಿ ಇರುವ ಕೊಠಡಿಗಳಿಗೆ ಬಾಡಿಗೆ ವಿಧಿಸಲಾಗುತ್ತಿದ್ದು, ಅದರಿಂದಲೂ ದೇವಸ್ಥಾನಕ್ಕೆ ದೊಡ್ಡ ಆದಾಯ ದೊರೆಯುತ್ತದೆ. ದಾನ ಪೆಟ್ಟಿಗೆಯಿಂದಲೂ ದೇವಸ್ಥಾನಕ್ಕೆ ದೊಡ್ಡ ಪ್ರಮಾಣದ ನಿಧಿ ಲಭಿಸುತ್ತದೆ. ‘ಕೋಟ್ಯಂತರ ರೂಪಾಯಿಗಳ ಆದಾಯವಿರುವ ದೇವಸ್ಥಾನವು ಕೇವಲ ಪ್ರಸಾದ ರೂಪದಲ್ಲಿ ನೀಡಲಾಗುವ ಒಂದು ಲಡ್ಡುವಿನಿಂದ ಆರ್ಥಿಕ ನಷ್ಟವಾಗುತ್ತಿದೆ ಎಂದು ಹೇಳುವುದು ಸಂಪೂರ್ಣವಾಗಿ ತಪ್ಪು’, ಎಂದು ಸಮಿತಿಯು ಹೇಳಿದೆ.

ಸಂಪಾದಕೀಯ ನಿಲುವು

ದೇವಸ್ಥಾನಗಳ ಸರಕಾರೀಕರಣದ ದುಷ್ಪರಿಣಾಮಗಳನ್ನು ತಿಳಿಯಿರಿ!