ಗುಜರಾತ್: ಗೋಹತ್ಯೆಗಾಗಿ 3 ಮುಸಲ್ಮಾನರಿಗೆ ಜೀವಾವಧಿ ಶಿಕ್ಷೆ!

ಹಿಂದೂ ಧರ್ಮದಲ್ಲಿ ಹಸುವನ್ನು ಪವಿತ್ರವೆಂದು ಪರಿಗಣಿಸಲಾಗಿದ್ದರೂ, ಗೋಹತ್ಯೆ ಮಾಡಲಾಯಿತು! – ಸೆಷನ್ಸ್ ನ್ಯಾಯಾಧೀಶೆ ರಿಜ್ವಾನಾ ಬುಖಾರಿ

ಅಮ್ರೇಲಿ (ಗುಜರಾತ್) – ಅಮ್ರೇಲಿ ಜಿಲ್ಲೆಯ ಸೆಷನ್ಸ್ ನ್ಯಾಯಾಲಯವು ನವೆಂಬರ್ 10 ರಂದು ಗೋಹತ್ಯೆ ಪ್ರಕರಣದಲ್ಲಿ ಮೂವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿತು. ಹಿಂದೂ ಧರ್ಮದಲ್ಲಿ ಹಸುವನ್ನು ಪವಿತ್ರವೆಂದು ಪರಿಗಣಿಸಲಾಗಿದೆ ಎಂಬುದು ತಿಳಿದಿದ್ದರೂ ಸಹ, ಮೂವರು ಉದ್ದೇಶಪೂರ್ವಕವಾಗಿ ಈ ಅಪರಾಧ ಮಾಡಿದ್ದಾರೆ ಎಂದು ನ್ಯಾಯಾಲಯ ಹೇಳಿದೆ. ಈ ತೀರ್ಪನ್ನು ರಾಜ್ಯ ಸರಕಾರವು ‘ಐತಿಹಾಸಿಕ ನಿರ್ಧಾರ’ ಎಂದು ಬಣ್ಣಿಸಿದ್ದು, ‘ಇಂತಹ ಅಪರಾಧಗಳ ಮೇಲೆ ಯಾವುದೇ ಮೃದುತ್ವವನ್ನು ತೋರಿಸಲಾಗುವುದಿಲ್ಲ’ ಎಂದು ಸ್ಪಷ್ಟಪಡಿಸಿದೆ.

ಮೊದಲ ಬಾರಿಗೆ ಗೋಹತ್ಯೆಗೆ ಜೀವಾವಧಿ

ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶೆ ರಿಜ್ವಾನಾ ಬುಖಾರಿ ಅವರು ಆರೋಪಿಗಳಾದ ಖಾಸಿಮ್ ಹಾಜಿ ಸೋಲಂಕಿ, ಸತ್ತಾರ್ ಇಸ್ಮಾಯಿಲ್ ಸೋಲಂಕಿ ಮತ್ತು ಅಕ್ರಮ್ ಹಾಜಿ ಸೋಲಂಕಿ ಅವರನ್ನು ತಪ್ಪಿತಸ್ಥರೆಂದು ಘೋಷಿಸಿದರು. ಮೂವರಿಗೆ ಒಟ್ಟು ₹18 ಲಕ್ಷ ದಂಡವನ್ನೂ ಸಹ ವಿಧಿಸಲಾಗಿದೆ. ಗೋಹತ್ಯೆಗಾಗಿ ಗುಜರಾತ್ ನಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾದ ಮೊದಲ ಪ್ರಕರಣ ಇದಾಗಿದೆ.

ಘಟನೆಯ ವಿವರ

2023 ರಲ್ಲಿ, ಆರ್ಥಿಕ ಲಾಭಕ್ಕಾಗಿ ಈ ಮೂವರು ಅಮ್ರೇಲಿ ನಗರದಲ್ಲಿ ಹಸುಗಳನ್ನು ಕೊಂದಿದ್ದರು. ಸ್ಥಳದಿಂದ ಅಂದಾಜು 40 ಕೆಜಿ ಗೋಮಾಂಸ ಮತ್ತು ಹತ್ಯೆಗೆ ಬಳಸಿದ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ರಾಜ್ಯದ ಕಾನೂನಿನಲ್ಲಿ ಗೋಹತ್ಯೆಗೆ ಜೀವಾವಧಿ ಶಿಕ್ಷೆಯ ಅವಕಾಶ

ರಾಜ್ಯ ಸರಕಾರದ ವಕ್ತಾರರಾದ ಜಿತು ವಾಘಾನಿ ಅವರು ಈ ಕುರಿತು ಮಾತನಾಡಿ, ಗೋರಕ್ಷಣೆಗಾಗಿ ರಾಜ್ಯ ಸರಕಾರ ಸಂಪೂರ್ಣವಾಗಿ ಬದ್ಧವಾಗಿದೆ ಎಂದು ತಿಳಿಸಿದರು. ನರೇಂದ್ರ ಮೋದಿ ಅವರು ಮುಖ್ಯಮಂತ್ರಿಯಾಗಿದ್ದಾಗ 2011 ರಲ್ಲಿ ಗೋಹತ್ಯೆ ನಿಷೇಧ ಕಾನೂನನ್ನು ಕಠಿಣಗೊಳಿಸಲಾಗಿತ್ತು. 2017 ರಲ್ಲಿ, ಈ ಕಾನೂನಿನಲ್ಲಿ ತಿದ್ದುಪಡಿ ತಂದು ಜೀವಾವಧಿ ಶಿಕ್ಷೆಯ ಅವಕಾಶ ಕಲ್ಪಿಸಲಾಯಿತು ಎಂದು ವಾಘಾನಿ ಅವರು ವಿವರಿಸಿದರು.