ದೇಶದ ಎಲ್ಲಾ ಸೇತುವೆಗಳಿಗೆ ರಚನಾತ್ಮಕ ಪರೀಕ್ಷೆ ಕಡ್ಡಾಯಗೊಳಿಸಲು ಮತ್ತು ಡಿಜಿಟಲ್ ‘ಆರೋಗ್ಯ ಕಾರ್ಡ್‌’ ವ್ಯವಸ್ಥೆ ಜಾರಿಗೊಳಿಸಲು ಆಗ್ರಹ

ಸುರಾಜ್ಯ ಅಭಿಯಾನ’ದಿಂದ ಕೇಂದ್ರ ಸರಕಾರಕ್ಕೆ ಮನವಿ

 

ನವದೆಹಲಿ – ದೇಶಾದ್ಯಂತ ಆಗಾಗ್ಗೆ ಸಂಭವಿಸುತ್ತಿರುವ ಸೇತುವೆಗಳ ದುರಂತಗಳಿಂದಾಗಿ ನಾಗರಿಕರ ಸುರಕ್ಷತೆಯ ಪ್ರಶ್ನೆ ಗಂಭೀರ ಸ್ವರೂಪದಲ್ಲಿ ಮುಂದೆ ಬಂದಿದೆ. ಈ ಹಿನ್ನೆಲೆಯಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಉಪಕ್ರಮವಾಗಿರುವ ‘ಸುರಾಜ್ಯ ಅಭಿಯಾನ’ದ ವತಿಯಿಂದ ಕೇಂದ್ರ ಸರಕಾರಕ್ಕೆ ಒಂದು ಮಹತ್ವದ ಮನವಿಯನ್ನು ಸಲ್ಲಿಸಲಾಗಿದೆ. ಇದರಲ್ಲಿ ದೇಶದ ಎಲ್ಲಾ ಸೇತುವೆಗಳಿಗೆ ‘ರಚನಾತ್ಮಕ ಪರೀಕ್ಷೆ (ಸ್ಟ್ರಕ್ಚರಲ್ ಆಡಿಟ್)’ ಕಡ್ಡಾಯಗೊಳಿಸಲು ಮತ್ತು ಡಿಜಿಟಲ್ ‘ಆರೋಗ್ಯ ಕಾರ್ಡ್ (ಹೆಲ್ತ್ ಕಾರ್ಡ)’ ವ್ಯವಸ್ಥೆಯನ್ನು ರಾಷ್ಟ್ರೀಯ ಮಟ್ಟದಲ್ಲಿ ಜಾರಿಗೊಳಿಸಲು ಆಗ್ರಹಿಸಲಾಗಿದೆ. (ಸೇತುವೆಗಳ ‘ರಚನಾತ್ಮಕ ಪರೀಕ್ಷೆ’ಗೆ ಏಕೆ ಆಗ್ರಹಿಸಬೇಕಾಗಿದೆ? ಆಡಳಿತ ತಾನಾಗಿಯೇ ಅದನ್ನು ಏಕೆ ಮಾಡುವುದಿಲ್ಲ? – ಸಂಪಾದಕರು) ಈ ಮನವಿಯನ್ನು ಕೇಂದ್ರ ಸಚಿವರಾದ ನಿತಿನ್ ಗಡ್ಕರಿ (ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳು), ಮನೋಹರ್ ಲಾಲ್ ಖಟ್ಟರ್ (ವಸತಿ ಮತ್ತು ನಗರ ವ್ಯವಹಾರಗಳು) ಮತ್ತು ಶಿವರಾಜ್ ಸಿಂಗ್ ಚೌಹಾಣ್ (ಗ್ರಾಮೀಣಾಭಿವೃದ್ಧಿ ಮತ್ತು ಕೃಷಿ) ಅವರಿಗೆ ಕಳುಹಿಸಲಾಗಿದೆ. ‘ಸುರಾಜ್ಯ ಅಭಿಯಾನ’ದ ಮಹಾರಾಷ್ಟ್ರ ರಾಜ್ಯ ಸಮನ್ವಯಕ ಶ್ರೀ. ಅಭಿಷೇಕ ಮುರಕುಟೆಯವರು ಈ ಸಂದರ್ಭದಲ್ಲಿ ದೇಶವ್ಯಾಪಿ ನೀತಿಯ ಅಗತ್ಯವನ್ನು ಒತ್ತಿಹೇಳಿದ್ದಾರೆ.

ಮಹಾರಾಷ್ಟ್ರ ಮತ್ತು ಬಿಹಾರ ರಾಜ್ಯಗಳ ಮಾದರಿಗಳು ಆದರ್ಶವಾಗಬಹುದು!

ಮನವಿಯಲ್ಲಿ ನಮೂದಿಸಿರುವಂತೆ, ಮಹಾರಾಷ್ಟ್ರ ಸರಕಾರವು ಜೂನ್ 30, 2025 ರಂದು ಸರಕಾರಿ ನಿರ್ಣಯವನ್ನು ಪ್ರಕಟಿಸಿ, ಎಲ್ಲಾ ನಗರ ಪರಿಷತ್ತುಗಳು, ಮಹಾನಗರ ಪಾಲಿಕೆಗಳು ಮತ್ತು ಸ್ಥಳೀಯ ಸ್ವ-ಸಂಸ್ಥೆಗಳಿಗೆ ತಮ್ಮ ಅಧಿಕಾರ ವ್ಯಾಪ್ತಿಯಲ್ಲಿರುವ ಎಲ್ಲ ಸೇತುವೆಗಳ ‘ಸ್ಟ್ರಕ್ಚರಲ್ ಆಡಿಟ್’ ಮತ್ತು ನಿರ್ವಹಣೆಯನ್ನು ಕಡ್ಡಾಯಗೊಳಿಸಿದೆ. ಮತ್ತೊಂದೆಡೆ, ಬಿಹಾರ ರಾಜ್ಯವು ದೇಶದಲ್ಲಿ ಮೊದಲ ಬಾರಿಗೆ 3 ಸಾವಿರ 500 ಕ್ಕೂ ಹೆಚ್ಚು ಸೇತುವೆಗಳಿಗಾಗಿ ಕೃತಕ ಬುದ್ಧಿಮತ್ತೆ (ಎಐ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್), ‘ಸೆನ್ಸಾರ್ ಡೇಟಾ’ ಮತ್ತು ಕ್ಯೂ.ಆರ್. ಕೋಡ್ ತಂತ್ರಜ್ಞಾನದ ಸಹಾಯದಿಂದ ಡಿಜಿಟಲ್ ‘ಆರೋಗ್ಯ ಕಾರ್ಡ್’ ವ್ಯವಸ್ಥೆಯನ್ನು ಜಾರಿಗೊಳಿಸಿದೆ, ಇದರಿಂದ ಸೇತುವೆಗಳ ಸ್ಥಿತಿ ಮತ್ತು ನಿರ್ವಹಣೆಯ ಅಗತ್ಯತೆಯ ಪರೀಕ್ಷೆ ಸಾಧ್ಯವಾಗಿದೆ.

ಸುರಕ್ಷಿತ ಸೇತುವೆ ಎಂದರೆ ಸುರಕ್ಷಿತ ಭಾರತ!

ಮನವಿಯಲ್ಲಿ ತಿಳಿಸಿರುವಂತೆ, ಭಾರತದಲ್ಲಿ ಪ್ರಸ್ತುತ ಸುಮಾರು 1 ಲಕ್ಷ 60 ಸಾವಿರ ಸೇತುವೆಗಳಿವೆ; ಆದರೆ ಅವುಗಳಲ್ಲಿ ಅನೇಕ ಸೇತುವೆಗಳ ಸಂಪೂರ್ಣ ಸುರಕ್ಷತಾ ಮೌಲ್ಯಮಾಪನ ಇನ್ನೂ ಆಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ರಚನಾತ್ಮಕ ಪರಿಶೀಲನೆ ಮತ್ತು ‘ಡಿಜಿಟಲ್ ಮಾನಿಟರಿಂಗ್’ ಅನ್ನು ಕಡ್ಡಾಯಗೊಳಿಸಿದರೆ ಭವಿಷ್ಯದ ದುರಂತಗಳನ್ನು ತಪ್ಪಿಸಬಹುದು ಮತ್ತು ಶತಕೋಟಿ ರೂಪಾಯಿಗಳ ಮೂಲಸೌಕರ್ಯ ಹೂಡಿಕೆಯನ್ನು ರಕ್ಷಿಸಬಹುದು.

ಕೇಂದ್ರವು ತಕ್ಷಣ ಕ್ರಮ ಕೈಗೊಳ್ಳಬೇಕು!

ಸುರಾಜ್ಯ ಅಭಿಯಾನವು ತನ್ನ ಮನವಿಯಲ್ಲಿ, ಈ ಉಪಕ್ರಮದ ಅನುಷ್ಠಾನವು ದೇಶದ ಸೇತುವೆಗಳ ಸುರಕ್ಷತೆಗಾಗಿ, ಹಾಗೆಯೇ ಸುಸ್ಥಿರ ಮೂಲಸೌಕರ್ಯ ಅಭಿವೃದ್ಧಿಗಾಗಿ ನಿರ್ಣಾಯಕವಾಗಲಿದೆ ಎಂದು ಹೇಳಿದೆ. ಸಾರ್ವಜನಿಕ ಸುರಕ್ಷತೆಗೆ ಆದ್ಯತೆ ನೀಡಿ ಕೇಂದ್ರ ಸರಕಾರವು ತಕ್ಷಣವೇ ರಾಷ್ಟ್ರೀಯ ನೀತಿಯನ್ನು ಸಿದ್ಧಪಡಿಸಬೇಕು. ಮನವಿಯೊಂದಿಗೆ ಬಿಹಾರದಲ್ಲಿ ಸೇತುವೆಗಳಿಗಾಗಿ ‘ಆರೋಗ್ಯ ಕಾರ್ಡ್ ವ್ಯವಸ್ಥೆ’ಗೆ ಸಂಬಂಧಿಸಿದ ವೃತ್ತಪತ್ರಿಕಾ ವರದಿ ಮತ್ತು ಮಹಾರಾಷ್ಟ್ರ ಸರಕಾರದ ‘ಸ್ಟ್ರಕ್ಚರಲ್ ಆಡಿಟ್’ಗೆ ಸಂಬಂಧಿಸಿದ ಸರಕಾರಿ ನಿರ್ಣಯ – ಈ ಪುರಾವೆಗಳನ್ನು ಲಗತ್ತಿಸಲಾಗಿದೆ.