ಅಮೆರಿಕದಲ್ಲಿ ಪ್ರತಿಭಾವಂತ ಜನರ ಕೊರತೆಯಿಂದಾಗಿ ನುರಿತ ವಿದೇಶಿ ಜನರ ಅವಶ್ಯಕತೆ ಇದೆ : ಪೇಚಿಗೆ ಸಿಲುಕಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ವಾಷಿಂಗ್ಟನ (ಅಮೆರಿಕ) – ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಾತನಾಡುತ್ತಾ, ‘ದೇಶದಲ್ಲಿ ಅನೇಕ ಪ್ರಮುಖ ಕೆಲಸಗಳಿಗೆ ಸಾಕಷ್ಟು ಪ್ರತಿಭಾವಂತ ಜನರು ಇಲ್ಲ, ಆದ್ದರಿಂದ ನುರಿತ ವಿದೇಶಿ ಕಾರ್ಮಿಕರ ಅಗತ್ಯವಿದೆ’ ಎಂದು ಹೇಳಿದ್ದಾರೆ. ಟ್ರಂಪ್ ಅವರು ‘ಫಾಕ್ಸ್ ನ್ಯೂಸ್’ಗೆ ನೀಡಿದ ಸಂದರ್ಶನದಲ್ಲಿ ಈ ಹೇಳಿಕೆ ನೀಡಿದ್ದಾರೆ.

1. ನಿರೂಪಕಿ ಲಾರಾ ಇಂಗ್ರಾಹಂ ಅವರು ಟ್ರಂಪ್ ಅವರನ್ನು, ಅಮೆರಿಕದ ಕಾರ್ಮಿಕರ ವೇತನದ ಮೇಲೆ ಪರಿಣಾಮ ಬೀರುತ್ತಿರುವುದರಿಂದ ‘ಎಚ್1ಬಿ ವೀಸಾ’ಗಳ ಸಂಖ್ಯೆಯನ್ನು ಕಡಿಮೆ ಮಾಡಲಾಗುವುದೇ ಎಂದು ಕೇಳಿದರು. ಇದಕ್ಕೆ ಟ್ರಂಪ್ ಅವರು ಸಹಮತಿ ಸೂಚಿಸಿದರು; ಆದರೆ ‘ಹೊರಗಿನಿಂದಲೂ ಪ್ರತಿಭೆಯನ್ನು ತರಬೇಕಾಗುತ್ತದೆ’ ಎಂದು ಸಹ ಹೇಳಿದರು.

2. ‘ಅಮೆರಿಕದಲ್ಲಿ ಸಾಕಷ್ಟು ಪ್ರತಿಭಾವಂತ ಜನರಿದ್ದಾರೆ’ ಎಂದು ನಿರೂಪಕಿ ಹೇಳಿದಾಗ, ಅದಕ್ಕೆ ಉತ್ತರಿಸಿದ ಟ್ರಂಪ್, ಇಲ್ಲ ನಮ್ಮಲ್ಲಿ ಕೆಲವು ನಿರ್ದಿಷ್ಟ ಕ್ಷೇತ್ರಗಳಲ್ಲಿ ಪ್ರತಿಭೆ ಇಲ್ಲ. ನೀವು ಕೇವಲ ನಿರುದ್ಯೋಗಿ ಜನರನ್ನು ಎತ್ತಿಕೊಂಡು ಕ್ಷಿಪಣಿ ಕಾರ್ಖಾನೆಗೆ ಕಳುಹಿಸಲು ಸಾಧ್ಯವಿಲ್ಲ, ಎಂದು ಹೇಳಿದರು.

ವಿದೇಶಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಮಾಡಿದರೆ, ಅಮೆರಿಕದಲ್ಲಿ ಅರ್ಧದಷ್ಟು ಕಾಲೇಜುಗಳು ಮುಚ್ಚುವ ಸಾಧ್ಯತೆ – ಟ್ರಂಪ್

1. ಟ್ರಂಪ್ ಅವರು ಈಗ ವಿದೇಶಿ ವಿದ್ಯಾರ್ಥಿಗಳ ಕುರಿತಾದ ತಮ್ಮ ಹಿಂದಿನ ನಿಲುವಿಗೆ ವಿರುದ್ಧವಾದ ನಿಲುವನ್ನು ತೆಗೆದುಕೊಂಡಿದ್ದಾರೆ. ಅವರು ಮಾತನಾಡಿ, ವಿದೇಶಿ ವಿದ್ಯಾರ್ಥಿಗಳಿಗೆ ಅಮೆರಿಕದಲ್ಲಿ ಅಧ್ಯಯನ ಮಾಡಲು ಅವಕಾಶ ನೀಡಬೇಕು; ಏಕೆಂದರೆ ಅವರು ಕೇವಲ ದೇಶದ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸುವುದಲ್ಲದೆ, ವಿಶ್ವವಿದ್ಯಾಲಯಗಳ ಆರ್ಥಿಕ ಕಲ್ಯಾಣಕ್ಕೂ ಬೆಂಬಲ ನೀಡುತ್ತಾರೆ ಎಂದು ಅವರು ಹೇಳಿದರು. ಚೀನಾ ಮತ್ತು ಇತರ ದೇಶಗಳಿಂದ ಬರುವ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆಯನ್ನು ಕಡಿಮೆ ಮಾಡಿದರೆ, ಅಮೆರಿಕದಲ್ಲಿ ಸುಮಾರು ಅರ್ಧದಷ್ಟು ಕಾಲೇಜುಗಳನ್ನು ಮುಚ್ಚಬೇಕಾಗುತ್ತದೆ ಎಂದು ಹೇಳಿದರು.

2. ಪ್ರಪಂಚದಾದ್ಯಂತ ಬರುವ ಶೇ‌. 50 ರಷ್ಟು ವಿದ್ಯಾರ್ಥಿಗಳನ್ನು ನಾವು ತಡೆಯಲು ಸಾಧ್ಯವಿಲ್ಲ. ಹೀಗೆ ಮಾಡಿದರೆ ನಮ್ಮ ಕಾಲೇಜು ಮತ್ತು ವಿಶ್ವವಿದ್ಯಾಲಯ ವ್ಯವಸ್ಥೆಗೆ ಗಂಭೀರ ಹಾನಿಯಾಗುತ್ತದೆ. ನನಗೆ ಅದು ಬೇಕಾಗಿಲ್ಲ. ವಿದೇಶಿ ವಿದ್ಯಾರ್ಥಿಗಳು ಇರುವುದು ಒಳ್ಳೆಯದು ಎಂದು ನಾನು ಭಾವಿಸುತ್ತೇನೆ ಮತ್ತು ನಾನು ಪ್ರಪಂಚದೊಂದಿಗೆ ಉತ್ತಮ ಸಂಬಂಧವನ್ನು ಇಟ್ಟುಕೊಳ್ಳಲು ಬಯಸುತ್ತೇನೆ, ಎಂದು ಸಹ ಟ್ರಂಪ್ ಹೇಳಿದರು.
ಅಮೆರಿಕದ ವಿಶ್ವವಿದ್ಯಾಲಯಗಳಲ್ಲಿ ಆರು ತಿಂಗಳ ಹಿಂದೆ ಯಹೂದಿ ವಿರೋಧಿ ಮತ್ತು ಕಮ್ಯುನಿಸ್ಟ್ ವಿಚಾರಗಳನ್ನು ನಿಯಂತ್ರಿಸುವ ಉದ್ದೇಶದಿಂದ ಈ ವರ್ಷ ಮೇ ತಿಂಗಳಲ್ಲಿ ವಿದೇಶಿ ವಿದ್ಯಾರ್ಥಿಗಳಿಗೆ ಹೊಸ ‘ವೀಸಾ’ಗಳ ಸಂದರ್ಶನಗಳನ್ನು ನಿಲ್ಲಿಸಲಾಗಿತ್ತು.

3. ಟ್ರಂಪ್ ಆಡಳಿತವು ಅಮೆರಿಕಕ್ಕೆ ಬರುವ ವಿದ್ಯಾರ್ಥಿಗಳ ಸಾಮಾಜಿಕ ಮಾಧ್ಯಮ ಖಾತೆಗಳ ಪರಿಶೀಲನೆಯನ್ನು ಕಠಿಣಗೊಳಿಸಲಿದೆಯೆಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರು ವಿಶ್ವಾದ್ಯಂತದ ಅಮೆರಿಕನ್ ರಾಯಭಾರ ಕಚೇರಿಗಳಿಗೆ ವಿದ್ಯಾರ್ಥಿ ವೀಸಾಗಾಗಿ ಹೊಸ ಸಂದರ್ಶನಗಳನ್ನು ನಡೆಸದಂತೆ ಆದೇಶಗಳನ್ನು ನೀಡಿದ್ದಾರೆ.

4. ಅವರು ತಮ್ಮ ಮಾತು ಮುಂದುವರಿಸಿ, ಮುಂದಿನ ಮಾರ್ಗಸೂಚಿ ಅಂಶಗಳು ಪ್ರಕಟವಾಗುವವರೆಗೆ ತಕ್ಷಣದಿಂದ ಜಾರಿಗೆ ಬರುವಂತೆ ವಿದ್ಯಾರ್ಥಿ ಅಥವಾ ‘ಎಕ್ಸ್‌ಚೇಂಜ್ ವಿಸಿಟರ್’ (ಶಿಕ್ಷಣ, ಕಲೆ ಮತ್ತು ವಿಜ್ಞಾನ ಕ್ಷೇತ್ರಗಳಿಗೆ ಸಂಬಂಧಿಸಿದ ಕಾರ್ಯಕ್ರಮಗಳಿಗಾಗಿ ನಿರ್ದಿಷ್ಟ ಅವಧಿಗೆ ಅಮೆರಿಕದಲ್ಲಿ ವಾಸಿಸುವ ವಿದ್ಯಾರ್ಥಿ) ವೀಸಾಗಳಿಗಾಗಿ ಹೊಸ ನೇಮಕಾತಿಗಳಿಗೆ ಅನುಮತಿ ನೀಡಬಾರದು ಎಂದು ತಿಳಿಸಿದರು.

5. ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ಕುರಿತು ಟ್ರಂಪ್ ಆಡಳಿತ ತೆಗೆದುಕೊಂಡ ನಿರ್ಧಾರಗಳಿಂದಾಗಿ ವೀಸಾ ಪಡೆಯುವಲ್ಲಿ ಅಡಚಣೆ ಮತ್ತು ವೀಸಾ ನಿರಾಕರಣೆಯ ಪ್ರಮಾಣ ಹಠಾತ್ತನೆ ಹೆಚ್ಚಾಗಿದೆ, ಇದರಿಂದ ಅಮೆರಿಕದಲ್ಲಿ ಅಧ್ಯಯನ ಮಾಡುವ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಶೇ. 70 ರಷ್ಟು ಇಳಿಕೆಯಾಗಿದೆ. ಇದರ ಪರಿಣಾಮವಾಗಿ ವಿದ್ಯಾರ್ಥಿಗಳು ಇತರ ದೇಶಗಳಲ್ಲಿ ಅಧ್ಯಯನದ ಆಯ್ಕೆಗಳನ್ನು ಹುಡುಕುತ್ತಿದ್ದಾರೆ.

ಸಂಪಾದಕೀಯ ನಿಲುವು

ಅಮೆರಿಕವು ತನ್ನ ನಾಗರಿಕರಿಂದಾಗಿ ಅಲ್ಲ, ಬದಲಾಗಿ ಹೆಚ್ಚಿನ ಪ್ರಮಾಣದಲ್ಲಿ ಭಾರತದ ಪ್ರತಿಭಾವಂತ ಜನರಿಂದಾಗಿ ಮಹಾಶಕ್ತಿಯಾಗಿ ಉಳಿದಿತ್ತು. ಇದು ಟ್ರಂಪ್ ಅವರ ನೀತಿಗಳಿಂದಾಗಿ ಹಿನ್ನಡೆ ಅನುಭವಿಸಿದೆ. ಅಮೆರಿಕವು ತನ್ನ ಮಹಾಶಕ್ತಿಯ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕಾದರೆ, ಅಮೆರಿಕನ್ ನಾಗರಿಕರ ಮೇಲೆ ಅವಲಂಬಿತರಾಗಲು ಸಾಧ್ಯವಿಲ್ಲ ಎಂಬುದು ಈಗ ಟ್ರಂಪ್ ಅವರಿಗೆ ಅರಿವಾಗುತ್ತಿರುವುದರಿಂದಲೇ ಅವರು ತಮ್ಮ ಅಭಿಪ್ರಾಯಗಳನ್ನು ಬದಲಾಯಿಸುತ್ತಿದ್ದಾರೆ!