ಭಾರತದಲ್ಲಿ ಬಾಂಬ್‌ ಸ್ಫೋಟ ನಡೆಸಲು ಭಯೋತ್ಪಾದಕರಿಗೆ ಟರ್ಕಿಯಿಂದ ಆದೇಶಗಳು ಬರುತ್ತಿತ್ತು!

  • ಅಯೋಧ್ಯೆ ಮತ್ತು ಕಾಶಿ ಪ್ರಮುಖ ಗುರಿಯಾಗಿತ್ತು.

  • ದೀಪಾವಳಿಗೆ ಸಾಧ್ಯವಾಗದ ಕಾರಣ ಈಗ ಸ್ಫೋಟ ನಡೆಸಲಾಗಿದೆ.

  • ಜನವರಿ 26 ರಂದೂ ಸಹ ಸ್ಫೋಟ ನಡೆಸಲು ಸಂಚು ರೂಪಿಸಲಾಗಿತ್ತು.

ನವದೆಹಲಿ – ಭಯೋತ್ಪಾದಕರಾದ ಡಾ. ಉಮರ್ ನಬಿ ಮತ್ತು ಡಾ. ಮುಜಮ್ಮಿಲ್ ಶಕೀಲ್ ಅವರ ಪಾಸ್‌ ಪೋರ್ಟ್‌ಗಳ ಪರಿಶೀಲನೆಯಲ್ಲಿ ಅವರು ಟರ್ಕಿಗೆ ಭೇಟಿ ನೀಡಿರುವ ದಾಖಲೆಗಳು ಲಭ್ಯವಾಗಿವೆ. ಭಾರತದಲ್ಲಿ ಭಯೋತ್ಪಾದಕ ದಾಳಿಯ ಸಂಚು ರೂಪಿಸಲು ಅವರಿಗೆ ಟರ್ಕಿಯಿಂದಲೇ ಆದೇಶಗಳು ಬರುತ್ತಿದ್ದವು ಎಂಬುದು ಸಹ ತನಿಖೆಯಲ್ಲಿ ಬಹಿರಂಗವಾಗಿದೆ. ಉಮರ್ ನಬಿ ಮತ್ತು ಮುಜಮ್ಮಿಲ್ ಶಕೀಲ್ ಅವರು ಕೆಲವು ಸಂಶಯಾಸ್ಪದ ‘ಟೆಲಿಗ್ರಾಂ’ ಗುಂಪುಗಳಿಗೆ ಸೇರಿದ ನಂತರ ತಕ್ಷಣವೇ ಟರ್ಕಿ ಪ್ರವಾಸ ಕೈಗೊಂಡಿದ್ದರು. ಟರ್ಕಿ ಮತ್ತು ಅಫ್ಘಾನಿಸ್ತಾನದ ನಂಗರ್‌ ಹಾರ್ ಪ್ರಾಂತ್ಯದಲ್ಲಿ ನೆಲೆಸಿದ್ದ ‘ಹ್ಯಾಂಡ್ಲರ್‌ಗಳು’ (ಸೂತ್ರದಾರರು) ನಿರಂತರವಾಗಿ ಡಾ. ಉಮರ್ ಹಾಗೂ ಇತರ ಭಯೋತ್ಪಾದಕರೊಂದಿಗೆ ಸಂಪರ್ಕದಲ್ಲಿದ್ದರು. ಬಂಧಿತ ಭಯೋತ್ಪಾದಕರು ಉತ್ತರ ಪ್ರದೇಶದ ದೇವಸ್ಥಾನಗಳು, ವಿಶೇಷವಾಗಿ ಅಯೋಧ್ಯೆ, ಕಾಶಿ ಮತ್ತು ವಾರಣಾಸಿಯ ದೇವಸ್ಥಾನಗಳನ್ನು ಗುರಿಯಾಗಿಸಿದ್ದರು. ಉಗ್ರರ ಟಾರ್ಗೆಟ್ ನಲ್ಲಿ ಶ್ರೀರಾಮ ಮಂದಿರವೂ ಸೇರಿರುವ ಸಾಧ್ಯತೆಯಿದೆ.

ಮೌಲ್ವಿ ಇರ್ಫಾನ್ ಪ್ರಮುಖ ಸೂತ್ರಧಾರ

ಮೂಲಗಳ ಪ್ರಕಾರ, ಟರ್ಕಿಯಲ್ಲಿದ್ದ ಒಬ್ಬ ‘ಹ್ಯಾಂಡ್ಲರ್’ ಫರಿದಾಬಾದ್ ನ ಭಯೋತ್ಪಾದಕ ಗುಂಪಿಗೆ ಸೇರಿದ್ದ ವೈದ್ಯರಿಗೆ ತಮ್ಮ-ತಮ್ಮ ಪ್ರದೇಶಗಳಲ್ಲಿ ಗುರಿಗಳನ್ನು ನಿಗದಿಪಡಿಸಿ ಹರಡಬೇಕೆಂದು ಆದೇಶ ನೀಡಿದ್ದನು: ಉಗ್ರರ ಟಾರ್ಗೆಟ್ ಗಳಲ್ಲಿ ಫರಿದಾಬಾದ್ ಮತ್ತು ಉತ್ತರ ಪ್ರದೇಶದ ಸಹಾರನಪುರ ಸೇರಿದ್ದವು. ಅವರು ಟರ್ಕಿ ಪ್ರವಾಸದ ನಂತರವೇ ಈ ಎರಡೂ ಸ್ಥಳಗಳನ್ನು ಆಯ್ಕೆ ಮಾಡಿಕೊಂಡಿದ್ದರು. ಈ ಹಿಂದೆ ಶ್ರೀನಗರದಲ್ಲಿ ಬಂಧಿತನಾಗಿದ್ದ ಮೌಲ್ವಿ (ಇಸ್ಲಾಂ ಧಾರ್ಮಿಕ ನಾಯಕ) ಇರ್ಫಾನ್ ಅಹ್ಮದನನ್ನು ಫರಿದಾಬಾದ್ ಗುಂಪಿನ ಸೂತ್ರಧಾರ ಎಂದು ಪರಿಗಣಿಸಲಾಗಿದ್ದು, ಅವನು ಭಾರತದಿಂದಲೇ ಅಫ್ಘಾನಿಸ್ತಾನದ ‘ಹ್ಯಾಂಡ್ಲರ್‌’ಗಳ ಸಂಪರ್ಕದಲ್ಲಿದ್ದನು.

ಮೌಲ್ವಿ ಇರ್ಫಾನ್ ಅಹ್ಮದ್ ಫರಿದಾಬಾದ್ ಭಯೋತ್ಪಾದಕ ಗುಂಪಿನ ಮುಖ್ಯ ಸೂತ್ರಧಾರನಾಗಿದ್ದನು. ಅವನು ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳನ್ನು ಮೂಲಭೂತವಾದಿಗಳನ್ನಾಗಿ ಮಾಡುತ್ತಿದ್ದನು. ಉನ್ನತ ಶಿಕ್ಷಣ ಪಡೆದ ವಿದ್ಯಾರ್ಥಿಗಳ ಮನ ಪರಿವರ್ತನೆ ಮಾಡಿ ಅವರನ್ನು ಜಿಹಾದ್ ಗೆ ಸಿದ್ಧಪಡಿಸುತ್ತಿದ್ದನು. ಇರ್ಫಾನ್ ಶ್ರೀನಗರದ ಸರಕಾರಿ ವೈದ್ಯಕೀಯ ಕಾಲೇಜಿನಲ್ಲಿ ‘ಪ್ಯಾರಾಮೆಡಿಕಲ್’ (ವೈದ್ಯಕೀಯ ಸೇವೆಗೆ ಸಂಬಂಧಿಸಿದ ಸಹಾಯಕ) ನೌಕರನಾಗಿ ಕೆಲಸ ಮಾಡುತ್ತಿದ್ದನು.

ಇರ್ಫಾನ್ ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದನು. ಅಲ್ಲದೇ ನೌಗಾಮನಲ್ಲಿರುವ ಒಂದು ಮಸೀದಿಯಲ್ಲಿ ಇಮಾಮ್ ಆಗಿ ಸಹ ಕೆಲಸ ಮಾಡುತ್ತಿದ್ದನು. ಇರ್ಫಾನ್ ಮುಖ್ಯವಾಗಿ ಫರಿದಾಬಾದ್ ನ ವಿದ್ಯಾರ್ಥಿಗಳನ್ನು ಜಿಹಾದಿಗಳನ್ನಾಗಿ ಪರಿವರ್ತಿಸಿದ್ದನು.

ಇರ್ಫಾನ್ ಮೇಲೆ ‘ಜೈಷ್’ ಪ್ರಭಾವ

ಇರ್ಫಾನ್ ಅಹ್ಮದ್ ‘ಜೈಷ್-ಎ-ಮಹಮ್ಮದ್’ ಎಂಬ ಭಯೋತ್ಪಾದಕ ಸಂಘಟನೆಯಿಂದ ಪ್ರಭಾವಿತನಾಗಿದ್ದನು. ಅವನು ವಿದ್ಯಾರ್ಥಿಗಳಿಗೆ ‘ಜೈಷ್’ಗೆ ಸಂಬಂಧಿಸಿದ ಮತ್ತು ‘ಜೈಷ್’ ಮುಖ್ಯಸ್ಥ ಮಸೂದ್ ಅಜಹರ್ ನ ಭಾಷಣಗಳ ವೀಡಿಯೊಗಳನ್ನು ತೋರಿಸುತ್ತಿದ್ದನು. ಅಲ್ಲದೆ, ಅವನು ಉಪಗ್ರಹ (ಸ್ಯಾಟಲೈಟ್) ಫೋನ್ ಮೂಲಕ ಅಫ್ಘಾನಿಸ್ತಾನದ ವ್ಯಕ್ತಿಗಳೊಂದಿಗೆ ಸಂಪರ್ಕದಲ್ಲಿದ್ದನು. ಇರ್ಫಾನ್ ಅಹ್ಮದ್ ಮತ್ತು ಡಾ. ಉಮರ್ ನಿರಂತರ ಸಂಪರ್ಕದಲ್ಲಿದ್ದರು.

ಮತ್ತೊಬ್ಬ ವೈದ್ಯನ ಬಂಧನ

ಈ ಪ್ರಕರಣದಲ್ಲಿ ದಕ್ಷಿಣ ಕಾಶ್ಮೀರದ ಡಾ. ತಜಾಮುಲ್‌ ನನ್ನು ಬಂಧಿಸಲಾಗಿದೆ. ಈತ ಶ್ರೀನಗರದ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದನು.

ಇನ್ನೂ 300 ಕೆಜಿ ಅಮೋನಿಯಂ ನೈಟ್ರೇಟ್ ನಾಪತ್ತೆ

ಕಾಶ್ಮೀರದಿಂದ 3,200 ಕೆಜಿ ಅಮೋನಿಯಂ ನೈಟ್ರೇಟ್ ಅನ್ನು ಫರಿದಾಬಾದ್ ಗೆ ಕಳುಹಿಸಲಾಗಿತ್ತು. ಅದರಲ್ಲಿ 2,900 ಕೆಜಿಗಿಂತಲೂ ಹೆಚ್ಚು ವಶಪಡಿಸಿಕೊಳ್ಳಲಾಗಿದ್ದರೂ, ಇನ್ನೂ 300 ಕೆಜಿ ನಾಪತ್ತೆಯಾಗಿದೆ ಮತ್ತು ಅದರ ಶೋಧನೆ ನಡೆಯುತ್ತಿದೆ. ಅಮೋನಿಯಂ ನೈಟ್ರೇಟ್ ನ ಕೆಲ ಭಾಗವನ್ನು ದೆಹಲಿಯ ಸ್ಫೋಟದಲ್ಲಿ ಬಳಸಲಾಗಿರುವ ಸಾಧ್ಯತೆಯೂ ಇದೆ. ಈ ಸ್ಫೋಟಕಗಳು ಬಾಂಗ್ಲಾದೇಶದ ಮಾರ್ಗವಾಗಿ ನೇಪಾಳಕ್ಕೆ ಮತ್ತು ನಂತರ ಭಾರತದ ಕಾಶ್ಮೀರಕ್ಕೆ ತಲುಪಿದ್ದವು ಎಂದು ಪ್ರಾಥಮಿಕ ಮಾಹಿತಿಯಿದೆ. ಅಮೋನಿಯಂ ನೈಟ್ರೇಟ್ ಅನ್ನು ಗೊಬ್ಬರ ತಯಾರಿಕಾ ಸಂಸ್ಥೆಯಿಂದ ಕಳವು ಮಾಡಿ ಪಡೆಯಲಾಗಿತ್ತು ಎಂಬುದು ಬಹಿರಂಗವಾಗಿದೆ.

ಕೆಂಪುಕೋಟೆ ಬಳಿಯ ಸ್ಫೋಟ ಪೂರ್ವನಿಯೋಜಿತ

ದೆಹಲಿಯ ಕೆಂಪುಕೋಟೆಯ ಬಳಿ ಜಿಹಾದಿ ಭಯೋತ್ಪಾದಕರಿಂದ ನಡೆದ ಬಾಂಬ್‌ ಸ್ಫೋಟವು ಪೂರ್ವನಿಯೋಜಿತವಾಗಿತ್ತು ಎಂದು ಪ್ರಾಥಮಿಕ ತನಿಖೆಯಿಂದ ಹೊರಬರುತ್ತಿದೆ ಎಂದು ಹೇಳಲಾಗುತ್ತಿದೆ. ಮೂಲತಃ ಈ ಭಯೋತ್ಪಾದಕರು ದೀಪಾವಳಿ ಮತ್ತು ಮುಂಬರುವ ಗಣರಾಜ್ಯೋತ್ಸವವನ್ನು ಟಾರ್ಗೆಟ್ ಮಾಡುವವರಿದ್ದರು. ದೀಪಾವಳಿಯ ಸಮಯದಲ್ಲಿ ಅವರಿಗೆ ಬಾಂಬ್‌ ಸ್ಫೋಟ ನಡೆಸಲು ಸಾಧ್ಯವಾಗಲಿಲ್ಲ. ಈ ನಡುವೆ ಉಗ್ರರ ಮೇಲೆ ಕ್ರಮ ಕೈಗೊಂಡ ಕಾರಣ, ಅವಸರದಲ್ಲಿ ಕೆಂಪುಕೋಟೆ ಬಳಿ ಸ್ಫೋಟ ನಡೆಸಿದ್ದಾರೆ ಎಂದು ಮಾಹಿತಿ ಲಭಿಸಿದೆ.

ಬಂಧಿತ ಭಯೋತ್ಪಾದಕ ಡಾ. ಮುಜಮ್ಮಿಲ್ ವಿಚಾರಣೆಯಲ್ಲಿ, ಜನವರಿ 2025 ರ ಆರಂಭದಲ್ಲಿ ತಾನು ಮತ್ತು ಡಾ. ಉಮರ್ ಕೆಂಪುಕೋಟೆ ಪ್ರದೇಶದ ಬಗ್ಗೆ ಮಾಹಿತಿ ಸಂಗ್ರಹಿಸಿದ್ದೆವು ಎಂದು ತಿಳಿಸಿದ್ದಾನೆ. ಮುಂದಿನ ವರ್ಷ ಜನವರಿ 26 ರಂದು ದೆಹಲಿಯಲ್ಲಿ ದೊಡ್ಡ ಸ್ಫೋಟ ನಡೆಸಲು ಅವರು ಸಂಚು ರೂಪಿಸಿದ್ದರು. ಇದರ ಜೊತೆಗೆ, ಇತ್ತೀಚೆಗೆ ನಡೆದ ದೀಪಾವಳಿಯಲ್ಲಿ ಜನದಟ್ಟಣೆಯ ಮಾರುಕಟ್ಟೆ ಮೇಲೆ ದಾಳಿ ಮಾಡುವ ಸಂಚೂ ಸಹ ಇತ್ತು; ಆದರೆ ಅದು ಕೊನೆಯ ಕ್ಷಣದಲ್ಲಿ ರದ್ದುಗೊಂಡಿತು. ಮೂಲಗಳ ಪ್ರಕಾರ, ಫರಿದಾಬಾದ್ ನಲ್ಲಿ ದಾಳಿ ನಡೆದ ನಂತರ ಡಾ. ಉಮರ್ ಹೆದರಿ ಸ್ಫೋಟಕಗಳನ್ನು ತೆಗೆದುಕೊಂಡು ಕಾರಿನಲ್ಲಿ ದೆಹಲಿಯ ಕಡೆಗೆ ಹೊರಟನು. ಆ ಸಂದರ್ಭದಲ್ಲಿಯೇ ಕೆಂಪುಕೋಟೆ ಬಳಿ ಸ್ಫೋಟ ನಡೆಸಲಾಯಿತು.

ಡಾ. ಮುಜಮ್ಮಿಲ್ ನ ಮೊಬೈಲ್ ಫೋನ್ ಪರಿಶೀಲನೆ ನಡೆಸಿದಾಗ ಆತ ಈ ವರ್ಷ ಹಲವು ಬಾರಿ ದೆಹಲಿಗೆ ಭೇಟಿ ನೀಡಿದ್ದಾನೆ ಎಂದು ತಿಳಿದುಬಂದಿದೆ. ಅವನ ಮೊಬೈಲ್ ನಲ್ಲಿ ದೆಹಲಿಯ ಕೆಲವು ಸ್ಥಳಗಳ ಚಿತ್ರಗಳು ಸಹ ಲಭ್ಯವಾಗಿವೆ. ಮುಜಮ್ಮಿಲ್ ದೆಹಲಿಯಲ್ಲಿ ಯಾರನ್ನು ಭೇಟಿಯಾಗಲು ಬರುತ್ತಿದ್ದ ಎಂಬುದರ ತನಿಖೆ ನಡೆಯುತ್ತಿದೆ.

ಕಾಶ್ಮೀರದಲ್ಲಿ 200 ಕಡೆ ದಾಳಿ

ಕಾಶ್ಮೀರದಲ್ಲಿ ತನಿಖಾ ಸಂಸ್ಥೆಗಳು 200 ಕಡೆ ದಾಳಿ ನಡೆಸಿವೆ ಎಂದು ಹೇಳಲಾಗುತ್ತಿದೆ. ಇದರಲ್ಲಿ ಶೋಪಿಯಾನ್ ನಲ್ಲಿ ‘ಜಮಾತ್-ಎ-ಇಸ್ಲಾಮಿ’ ಸಂಘಟನೆಯ ಕಾರ್ಯಕರ್ತರ ಮನೆಗಳ ಮೇಲೆ ದಾಳಿ ನಡೆಸಲಾಯಿತು. ಪೊಲೀಸರು ಮೌಲಾನಾ ಇಶ್ತೆಫಾಕ್‌‌ ನನ್ನು ಬಂಧಿಸಿದ್ದಾರೆ. ವಶಪಡಿಸಿಕೊಂಡ ಸ್ಫೋಟಕಗಳನ್ನು ಸುಮಾರು 30 ರಿಂದ 40 ದಿನಗಳ ಅವಧಿಯಲ್ಲಿ ಸಿದ್ಧಪಡಿಸಲಾಗಿತ್ತು ಮತ್ತು ಅವನ್ನು 3-4 ಹಂತಗಳಲ್ಲಿ ಫರಿದಾಬಾದ್ ಗೆ ತರಲಾಗಿತ್ತು. ಹರಿಯಾಣದ ಒಬ್ಬ ಮೌಲ್ವಿ ಸಹ ಈ ಪ್ರಕರಣದಲ್ಲಿ ಬಂಧಿಸಲಾಗಿದೆ, ಆತ ‘ಅಲ್ ಫಲಾಹ್ ವಿಶ್ವವಿದ್ಯಾಲಯ’ದಲ್ಲಿ ವಾಸಿಸುತ್ತಿದ್ದನು.

ಡಾ. ಶಾಹೀನ್ 2 ವರ್ಷಗಳಿಂದ ಸ್ಫೋಟಕಗಳನ್ನು ಸಂಗ್ರಹಿಸುತ್ತಿದ್ದಳು.

ಭಯೋತ್ಪಾದಕಿ ಡಾ. ಶಾಹೀನ್ ಶಾಹಿದ್ ಕಳೆದ 2 ವರ್ಷಗಳಿಂದ ಸ್ಫೋಟಕ ಸಾಮಗ್ರಿಗಳನ್ನು ಸಂಗ್ರಹಿಸುತ್ತಿದ್ದಳು ಎಂದು ತನಿಖೆಯಲ್ಲಿ ಹೇಳಲಾಗಿದೆ. ತನ್ನ ಸಹೋದ್ಯೋಗಿ ವೈದ್ಯರೊಂದಿಗೆ ಸೇರಿ ದೇಶದಾದ್ಯಂತ ಭಯೋತ್ಪಾದಕ ದಾಳಿಯ ಸಂಚು ರೂಪಿಸುತ್ತಿದ್ದಳು ಎಂಬುದನ್ನು ಆಕೆ ವಿಚಾರಣೆಯ ವೇಳೆ ಒಪ್ಪಿಕೊಂಡಿದ್ದಾಳೆ.
ಡಾ. ಶಾಹೀನ್ ‘ಜೈಷ್’ನ ಮಹಿಳಾ ನೇಮಕಾತಿ ವಿಭಾಗಕ್ಕೆ ಸೇರಿಕೊಂಡಿದ್ದಳು. ಅವಳಿಗೆ ಮಹಿಳೆಯರನ್ನು ನೇಮಕ ಮಾಡುವ ಜವಾಬ್ದಾರಿಯನ್ನು ನೀಡಲಾಗಿತ್ತು. ವೈದ್ಯಕೀಯ ಶಿಕ್ಷಣವನ್ನು ಪಡೆಯುತ್ತಿದ್ದ ವಿದ್ಯಾರ್ಥಿನಿಯರ ಮೇಲೆ ಸಂಶಯ ಮೂಡುವುದಿಲ್ಲವೆಂದು ಈಕೆ ವೈದ್ಯಕೀಯ ವಿದ್ಯಾರ್ಥಿನಿಯರನ್ನು ಟಾರ್ಗೆಟ್ ಮಾಡುತ್ತಿದ್ದಳು.

ಡಾ. ಶಾಹೀನ್ ಸಹೋದರ ಡಾ. ಪರ್ವೇಜ್ ವಿಚಾರಣೆ

ಬಂಧಿತ ಭಯೋತ್ಪಾದಕಿ ಡಾ. ಶಾಹೀನ್‌ ನ ಸಹೋದರ ಡಾ. ಪರ್ವೇಜ್ ನನ್ನು ಲಕ್ಷಣಪುರಿಯ ಮನೆಯಿಂದ ವಶಕ್ಕೆ ತೆಗೆದುಕೊಂಡು ವಿಚಾರಣೆಗಾಗಿ ದೆಹಲಿಗೆ ಕರೆದೊಯ್ಯಲಾಗಿದೆ. ಡಾ. ಶಾಹೀನ್ ನಿರಂತರವಾಗಿ ಡಾ. ಪರ್ವೇಜ್‌ ನ ಸಂಪರ್ಕದಲ್ಲಿದ್ದಳು.

ಮುಂಬಯಿಯ ದಾಳಿಯಂತಹ ಸಂಚು: 200 ಬಾಂಬ್‌ ಗಳನ್ನು ತಯಾರಿಸುವ ಗುರಿ.

ಭಯೋತ್ಪಾದಕ ಗುಂಪು 200ಕ್ಕೂ ಹೆಚ್ಚು ಶಕ್ತಿಶಾಲಿ ಬಾಂಬ್‌ ಗಳನ್ನು ತಯಾರಿಸುವ ಉದ್ದೇಶ ಹೊಂದಿತ್ತು ಎಂದು ಹರಿಯಾಣದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅದಕ್ಕಾಗಿ, 2,900 ಕೆಜಿ ಸ್ಫೋಟಕಗಳು, ಟೈಮರ್ ಮತ್ತು ಬಾಂಬ್‌ ತಯಾರಿಸುವ ಸಾಮಗ್ರಿಗಳನ್ನು ತರಲಾಗಿತ್ತು. ಈ ಭಯೋತ್ಪಾದಕರು ನವೆಂಬರ್ 26, 2008 ರ ಮುಂಬಯಿ ದಾಳಿಯಂತಹ ದೊಡ್ಡ ದಾಳಿಯನ್ನು ನಡೆಸಲು ಸಂಚು ರೂಪಿಸುತ್ತಿದ್ದರು. ಅನೇಕ ನಗರಗಳಲ್ಲಿ ಏಕಕಾಲದಲ್ಲಿ ಬಾಂಬ್‌ ಸ್ಫೋಟಗಳನ್ನು ನಡೆಸುವುದು ಮಾತ್ರವಲ್ಲದೆ, ಸಾರ್ವಜನಿಕ ಸ್ಥಳಗಳಲ್ಲಿ ‘ಎಕೆ-56’ ಮತ್ತು ‘ಎಕೆ-47’ ನಂತಹ ರೈಫಲ್‌ಗಳಿಂದ ಗುಂಡು ಹಾರಿಸಿ ಜನರನ್ನು ಕೊಲ್ಲುವ ಸಂಚು ಕೂಡ ರೂಪಿಸಲಾಗಿತ್ತು. ಅಷ್ಟೇ ಅಲ್ಲ, ಆಸ್ಪತ್ರೆಗಳನ್ನು ಸಹ ಗುರಿಯಾಗಿಸಲು ಯೋಜಿಸಲಾಗಿತ್ತು.

ಧಾರ್ಮಿಕ ಉದ್ವಿಗ್ನತೆ ಸೃಷ್ಟಿಸುವ ಪ್ರಯತ್ನವಿತ್ತು!

ದೆಹಲಿಯಲ್ಲಿ ಧಾರ್ಮಿಕ ಉದ್ವಿಗ್ನತೆ ಸೃಷ್ಟಿಸಲು ಭಯೋತ್ಪಾದಕರು ಕೆಂಪುಕೋಟೆ, ಇಂಡಿಯಾ ಗೇಟ್ ಮತ್ತು ಕಾನ್‌ಸ್ಟಿಟ್ಯೂಷನ್ ಕ್ಲಬ್, ಹಾಗೂ ಉತ್ತರ ಪ್ರದೇಶದ ಧಾರ್ಮಿಕ ಸ್ಥಳಗಳನ್ನು ಗುರಿಯಾಗಿಸಲು ಯೋಜಿಸಿದ್ದರು ಎಂದು ಹರಿಯಾಣದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಗುರುಗ್ರಾಮ್ ಮತ್ತು ಫರಿದಾಬಾದ್ ನಲ್ಲಿಯೂ ಇದೇ ರೀತಿಯ ಗುರಿಗಳನ್ನು ಆರಿಸಲಾಗಿತ್ತು.

‘ಅಲ್ ಫಲಾಹ್ ವಿಶ್ವವಿದ್ಯಾಲಯ’ದ ವೆಬ್‌ಸೈಟ್ ಹ್ಯಾಕ್ ಮಾಡಿ, ‘ಭಾರತದಲ್ಲಿ ಜಿಹಾದಿಗಳಿಗೆ ಸ್ಥಳವಿಲ್ಲ’ ಎಂದು ಬರೆದಿದ್ದು!

ಹರಿಯಾಣದ ಫರಿದಾಬಾದ್ ನಲ್ಲಿರುವ ‘ಅಲ್-ಫಲಾಹ್ ವಿಶ್ವವಿದ್ಯಾಲಯ’ದ ವೆಬ್‌ಸೈಟ್ ಅನ್ನು ಹ್ಯಾಕ್ ಮಾಡಲಾಗಿದೆ. ವೆಬ್‌ಸೈಟ್‌ನಲ್ಲಿ “ಭಾರತೀಯ ಭೂಮಿಯಲ್ಲಿ ಇಂತಹ ಇಸ್ಲಾಮಿಕ್ ವಿಶ್ವವಿದ್ಯಾಲಯಕ್ಕೆ ಜಾಗವಿಲ್ಲ. ನೀವು ಭಾರತದಲ್ಲಿರಲು ಬಯಸಿದರೆ, ನೀವು ಶಾಂತಿಯುತವಾಗಿ ಇರಬೇಕು. ಇಲ್ಲದಿದ್ದರೆ, ಇಸ್ಲಾಮಿಕ್ ಜಿಹಾದ್ ನಲ್ಲಿ ಭಾಗಿಯಾಗಿರುವವರು ಭಾರತವನ್ನು ಬಿಟ್ಟು ಪಾಕಿಸ್ತಾನಕ್ಕೆ ಹೋಗಬೇಕು. ಇದೊಂದು ಎಚ್ಚರಿಕೆ ಎಂದು ಭಾವಿಸಿ; ಏಕೆಂದರೆ ನಾವು ನಿಮ್ಮ ದೇಶ ವಿರೋಧಿ ಚಟುವಟಿಕೆಗಳ ಮೇಲೆ ಕಣ್ಣಿಟ್ಟಿದ್ದೇವೆ. ಅದನ್ನು ನಿಲ್ಲಿಸಿ, ಇಲ್ಲದಿದ್ದರೆ ನಾವು ನಿಮ್ಮನ್ನು ನಾಶ ಮಾಡುತ್ತೇವೆ, ಎಂದು ಬರೆಯಲಾಗಿದೆ.

ದೆಹಲಿ ಸ್ಫೋಟದ ನಂತರ ಪೊಲೀಸರು ‘ಅಲ್-ಫಲಾಹ್ ವಿಶ್ವವಿದ್ಯಾಲಯ’ದ ಮೇಲೆ ದಾಳಿ ಮಾಡಿ ಶೋಧ ನಡೆಸಿದರು. ಪೊಲೀಸ್ ಮೂಲಗಳ ಪ್ರಕಾರ, ಈ ವಿಶ್ವವಿದ್ಯಾಲಯದಿಂದ 7 ವೈದ್ಯರು, 5 ವಿದ್ಯಾರ್ಥಿಗಳು ಮತ್ತು ಒಬ್ಬ ಯುವತಿ ಸೇರಿದಂತೆ 13 ಜನರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಸ್ಫೋಟ ಸಂಭವಿಸಿದ ಕಾರನ್ನು ಚಾಲನೆ ಮಾಡುತ್ತಿದ್ದ ಡಾ. ಉಮರ್ ಇದೇ ವಿಶ್ವವಿದ್ಯಾಲಯದಲ್ಲಿ ಬೋಧಿಸುತ್ತಿದ್ದನು. ಸ್ಫೋಟದಲ್ಲಿ ಬಳಸಲಾದ ಕಾರು ಹಲವು ದಿನಗಳಿಂದ ವಿಶ್ವವಿದ್ಯಾಲಯದ ಆವರಣದಲ್ಲಿ ನಿಲ್ಲಿಸಲಾಗಿತ್ತು.

ದೆಹಲಿ ಬಾಂಬ್‌ ಸ್ಫೋಟದ ಹಿಂದೆ ಪಾಕಿಸ್ತಾನಿ ಸೇನೆಯ ಕೈವಾಡ! – ಪಾಕಿಸ್ತಾನಿ ಪತ್ರಕರ್ತ ತಾಹಾ ಸಿದ್ದಿಕಿ ಅವರ ಹೇಳಿಕೆ

‘ದೆಹಲಿ ಬಾಂಬ್‌ ಸ್ಫೋಟ ಮತ್ತು ಪಾಕಿಸ್ತಾನದ ಇಸ್ಲಾಮಾಬಾದ್ ನಲ್ಲಿ ನಡೆದ ಸ್ಫೋಟದ ಹಿಂದೆ ಪಾಕಿಸ್ತಾನಿ ಸೇನೆಯ ಕೈವಾಡವಿದೆ’ ಎಂದು ಪಾಕಿಸ್ತಾನಿ ಪತ್ರಕರ್ತ ತಾಹಾ ಸಿದ್ದಿಕಿ ಹೇಳಿದ್ದಾರೆ. ಎರಡೂ ಸ್ಫೋಟಗಳಲ್ಲಿ ಆತ್ಮಹತ್ಯಾ ಭಯೋತ್ಪಾದಕರನ್ನು ಬಳಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಪಾಕಿಸ್ತಾನದ ಸೇನಾ ಮುಖ್ಯಸ್ಥರು ಭಯೋತ್ಪಾದನೆಯನ್ನು ತಮ್ಮ ವಿದೇಶಾಂಗ ನೀತಿಯ ಭಾಗವಾಗಿ ಬಳಸುತ್ತಿದ್ದಾರೆ. ಇದರಿಂದ ದಕ್ಷಿಣ ಏಷ್ಯಾದಲ್ಲಿ ಶಾಂತಿಯ ಬದಲು ಅಶಾಂತಿಯೇ ನೆಲೆಸಿದೆ ಎಂದು ತಾಹಾ ಸಿದ್ದಿಕಿ ಬರೆದಿದ್ದಾರೆ.