1971 ರ ಯುದ್ಧದ ನಂತರ ಪ್ರಥಮ ಬಾರಿಗೆ ಬಾಂಗ್ಲಾದೇಶಕ್ಕೆ ಬಂದಿಳಿದ ಪಾಕಿಸ್ತಾನದ ಯುದ್ಧನೌಕೆ – Pakistan War Ship

ಢಾಕಾ (ಬಾಂಗ್ಲಾದೇಶ) – ವರ್ಷ 1971 ರ ಯುದ್ಧದ ನಂತರ ಮೊದಲ ಬಾರಿಗೆ ಪಾಕಿಸ್ತಾನದ ಯುದ್ಧನೌಕೆಯೊಂದು ಬಾಂಗ್ಲಾದೇಶಕ್ಕೆ ಆಗಮಿಸಿದೆ. ಪಾಕಿಸ್ತಾನ ನೌಕಾಪಡೆಯ ‘ಪಿ.ಎನ್.ಎಸ್. ಸೈಫ್’ ಯುದ್ಧನೌಕೆಯು ಬಂಗಾಳಕೊಲ್ಲಿಯ ಮೂಲಕ ಪ್ರಯಾಣಿಸಿ, 4 ದಿನಗಳ ಸದ್ಭಾವನಾ ಭೇಟಿಗಾಗಿ ಇತ್ತೀಚೆಗೆ ಚಿತ್ತಗಾಂಗ್ ಬಂದರನ್ನು ತಲುಪಿದೆ. ಎರಡೂ ದೇಶಗಳ ನಡುವಿನ ರಕ್ಷಣಾ ಸಂಬಂಧಗಳನ್ನು ಬಲಪಡಿಸುವ ಉದ್ದೇಶದಿಂದ ಈ ಹೆಜ್ಜೆಯನ್ನು ಇಡಲಾಗಿದೆ ಎಂದು ವರದಿಯಾಗಿದೆ. ಬಾಂಗ್ಲಾದೇಶ ನೌಕಾಪಡೆಯ ‘ಬಿ.ಎನ್.ಎಸ್. ಶಾದಿನೋಟಾ’ ಯುದ್ಧನೌಕೆಯು ಪಾಕಿಸ್ತಾನಿ ಯುದ್ಧನೌಕೆಯನ್ನು ಸ್ವಾಗತಿಸಿ, ಅದನ್ನು ಬಂದರಿಗೆ ಕರೆತಂದಿತು. ಈ ಸಂದರ್ಭದಲ್ಲಿ ಎರಡೂ ಕಡೆಯ ಅಧಿಕಾರಿಗಳು ಪರಸ್ಪರ ಭೇಟಿಯಾದರು. (‘ಶತ್ರುವಿನ ಶತ್ರು ನಮ್ಮ ಮಿತ್ರ’ ಎಂಬ ನ್ಯಾಯದಲ್ಲಿ ಇದು ನಡೆಯುತ್ತಿದ್ದರೂ, ಈ ಎರಡೂ ದೇಶಗಳು ಹಿಂದೆ ಒಂದಾಗಿದ್ದವು ಮತ್ತು ಅವುಗಳ ನಡುವಿನ ಭಾಷೆಯ ವಿವಾದದಿಂದಾಗಿ ಪಾಕಿಸ್ತಾನವು ಬಾಂಗ್ಲಾದೇಶಿಗಳ ಮೇಲೆ ದೌರ್ಜನ್ಯ ಎಸಗಿತ್ತು ಎನ್ನುವುದನ್ನು ಯಾರೂ ಮರೆಯುವುದಿಲ್ಲ! – ಸಂಪಾದಕರು)

ಆಗಸ್ಟ್ 2024 ರಲ್ಲಿ ಶೇಖ್ ಹಸೀನಾ ಅವರ ಸರಕಾರವನ್ನು ಬೀಳಿಸಿದ ನಂತರ, ಮಹಮ್ಮದ್ ಯೂನುಸ್ ಅವರ ಮಧ್ಯಂತರ ಸರಕಾರವನ್ನು ಸ್ವಾಗತಿಸಿದ ಮೊದಲ ರಾಷ್ಟ್ರ ಪಾಕಿಸ್ತಾನವಾಗಿತ್ತು. ಅಂದಿನಿಂದ ಎರಡೂ ದೇಶಗಳ ನಡುವಿನ ಸಂಬಂಧಗಳು ವೇಗವಾಗಿ ಸುಧಾರಿಸುತ್ತಿವೆ. ಈ ಅವಧಿಯಲ್ಲಿ ಬಾಂಗ್ಲಾದೇಶ ಮತ್ತು ಭಾರತದ ನಡುವಿನ ಸಂಬಂಧಗಳು ಹೆಚ್ಚು ಬಿಗಿಯಾಗಿವೆ.