ಸಾರ್ವಜನಿಕ ಸ್ಥಳಗಳಿಂದ ಬೀದಿ ನಾಯಿಗಳನ್ನು ತಕ್ಷಣವೇ ತೆರವುಗೊಳಿಸಿ! – ಸುಪ್ರೀಂ ಕೋರ್ಟ್ ಆದೇಶ

ನವದೆಹಲಿ – ಶೈಕ್ಷಣಿಕ ಸಂಸ್ಥೆಗಳು, ಆಸ್ಪತ್ರೆಗಳು, ಕ್ರೀಡಾ ಸಂಕೀರ್ಣಗಳು, ಬಸ್ ನಿಲ್ದಾಣಗಳು ಮತ್ತು ಡಿಪೋಗಳು, ರೈಲು ನಿಲ್ದಾಣಗಳು ಮುಂತಾದ ಸಾರ್ವಜನಿಕ ಸ್ಥಳಗಳಿಂದ ಬೀದಿ ನಾಯಿಗಳನ್ನು ತಕ್ಷಣವೇ ತೆರವುಗೊಳಿಸಬೇಕು. ವಿಶೇಷ ಆಶ್ರಯ ವ್ಯವಸ್ಥೆಯಲ್ಲಿ ಬೀದಿ ನಾಯಿಗಳನ್ನಿರಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಜೊತೆಗೆ, ಈ ನಾಯಿಗಳಿಗೆ ಮೊದಲು ಸಂತಾನ ಶಕ್ತಿಹರಣ ಮತ್ತು ಲಸಿಕೆ ಹಾಕಬೇಕು ಎಂದೂ ಸಹ ನ್ಯಾಯಾಲಯ ಸ್ಪಷ್ಟಪಡಿಸಿದೆ. ‘ಈ ಆದೇಶಗಳು ದೇಶಾದ್ಯಂತ ಅನ್ವಯಿಸುತ್ತವೆ. ಎಲ್ಲಾ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮುಖ್ಯಸ್ಥರು ಮತ್ತು ಕೇಂದ್ರ ರಸ್ತೆ ಸಾರಿಗೆ ಸಚಿವರು 8 ವಾರಗಳಲ್ಲಿ ಈ ಆದೇಶಗಳ ಅನುಷ್ಠಾನಕ್ಕೆ ಸಂಬಂಧಿಸಿದ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು’ ಎಂದೂ ನ್ಯಾಯಾಲಯ ನಿರ್ದೇಶನ ನೀಡಿದೆ.

ಯಾವ ಸ್ಥಳದಿಂದ ಹಿಡಿದು ತರಲಾಗಿದೆಯೋ, ಅಲ್ಲಿ ಮತ್ತೆ ಬಿಡಬಾರದು!

‘ನಾವು ಸಂಪೂರ್ಣ ಚಿಂತನೆಯ ನಂತರ ಈ ಆದೇಶಗಳನ್ನು ನೀಡಿದ್ದೇವೆ: ಬೀದಿ ನಾಯಿಗಳನ್ನು ಯಾವ ಸ್ಥಳದಿಂದ ಹಿಡಿಯಲಾಗಿದೆಯೋ, ಅಲ್ಲಿ ಅವುಗಳನ್ನು ಮತ್ತೆ ಬಿಡಬಾರದು; ಏಕೆಂದರೆ ಹಾಗೆ ಮಾಡಿದರೆ, ಅಂತಹ ಸಾರ್ವಜನಿಕ ಸ್ಥಳಗಳಲ್ಲಿ ಈ ನಾಯಿಗಳಿಂದ ಉಂಟಾಗುವ ತೊಂದರೆಯನ್ನು ಕಡಿಮೆ ಮಾಡುವ ಮೂಲ ಉದ್ದೇಶಕ್ಕೆ ಧಕ್ಕೆಯಾಗುತ್ತದೆ’ ಎಂದು ಸುಪ್ರೀಂ ಕೋರ್ಟ್ ಈ ಸಂದರ್ಭದಲ್ಲಿ ಹೇಳಿದೆ. ಸಂತಾನ ಶಕ್ತಿಹರಣದ ನಂತರ ನಾಯಿಗಳನ್ನು ಮತ್ತೆ ಬಿಡುವುದು ವಿಚಾರಣೆಯ ಸಮಯದಲ್ಲಿ ಪ್ರಸ್ತಾಪವಾಗಿತ್ತು. ಆ ಮೇಲೆ ನ್ಯಾಯಾಲಯವು ಈ ಸ್ಪಷ್ಟ ನಿರ್ದೇಶನಗಳನ್ನು ನೀಡಿದೆ. ‘ಮುಂದಿನ ವಾರಗಳಲ್ಲಿ ಅಂತಹ ಎಲ್ಲಾ ಸಾರ್ವಜನಿಕ ಸ್ಥಳಗಳ ಪಟ್ಟಿ ಸಿದ್ಧಪಡಿಸಬೇಕು ಮತ್ತು ಅದರಂತೆ ಕ್ರಮ ಕೈಗೊಳ್ಳಬೇಕು’ ಎಂದು ಹೇಳುತ್ತಾ ಸುಪ್ರೀಂ ಕೋರ್ಟ್, ಸರ್ಕಾರಕ್ಕೆ ಜನವರಿ 13, 2026 ರಂದು ವರದಿ ಸಲ್ಲಿಸುವಂತೆ ಆದೇಶಿಸಿದೆ.

ನಾಯಿಗಳಿಂದ ರಕ್ಷಣೆಗಾಗಿ ತಂತಿಗಳು, ಗೋಡೆಗಳು ಇತ್ಯಾದಿಗಳ ಬೇಲಿ ಹಾಕಿ!

ಇದಕ್ಕಾಗಿ ಕಾರ್ಯನಿರ್ವಹಿಸುವ ಸ್ಥಳೀಯ ಆಡಳಿತ ಯಂತ್ರಗಳು ಮತ್ತು ಅವುಗಳ ಮುಖ್ಯಸ್ಥರು ಜಿಲ್ಲಾ ಆಡಳಿತದ ಮಾರ್ಗದರ್ಶನದಲ್ಲಿ ಎಲ್ಲಾ ಅಗತ್ಯ ವಿಷಯಗಳನ್ನು ಪೂರೈಸಬೇಕು. ಬೀದಿ ನಾಯಿಗಳನ್ನು ಯಾವ ಸಾರ್ವಜನಿಕ ಸ್ಥಳದಿಂದ ತೆರವುಗೊಳಿಸಲಾಗಿದೆಯೋ, ಅಲ್ಲಿ ಮತ್ತೆ ಇಂತಹ ತೊಂದರೆ ಆಗಬಾರದೆಂಬ ದೃಷ್ಟಿಯಿಂದ, ತಂತಿ ಬೇಲಿ, ಸಂರಕ್ಷಕ ಗೋಡೆಗಳು, ಬಾಗಿಲು ಅಥವಾ ಅನ್ಯ ಸಂರಕ್ಷಕ ನಿರ್ಮಾಣವನ್ನು ಅಗತ್ಯಕ್ಕೆ ತಕ್ಕಂತೆ ನಿರ್ಮಿಸಬೇಕೆಂದು ಸುಪ್ರೀಂ ಕೋರ್ಟ್ ಆದೇಶದಲ್ಲಿ ಹೇಳಿದೆ.

ಸರಕಾರಿ ಸಂಸ್ಥೆಗಳಿಗೂ ಜವಾಬ್ದಾರಿ!

ಸುಪ್ರೀಂ ಕೋರ್ಟ್ ಸರಕಾರಿ ಸಂಸ್ಥೆಗಳಿಗೂ ಜವಾಬ್ದಾರಿಯನ್ನು ವಹಿಸಿದೆ. ಶೈಕ್ಷಣಿಕ ಸಂಸ್ಥೆಗಳು, ಆಸ್ಪತ್ರೆಗಳು, ಕ್ರೀಡಾ ಸಂಕೀರ್ಣಗಳು, ಬಸ್ ನಿಲ್ದಾಣಗಳು, ರೈಲು ನಿಲ್ದಾಣಗಳಂತಹ ಸಂಸ್ಥೆಗಳ ನಿರ್ವಹಣೆಯು ಈ ಕಾರ್ಯಾಚರಣೆಯ ಮೇಲೆ ನಿಗಾ ಇಡಲು ಒಬ್ಬ ವ್ಯಕ್ತಿಯನ್ನು ನೇಮಿಸಬೇಕು. ಸಂಬಂಧಿತ ಸಂಸ್ಥೆಯ ಆವರಣವನ್ನು ಸ್ವಚ್ಛವಾಗಿಟ್ಟು, ಬೀದಿ ನಾಯಿಗಳು ಆವರಣವನ್ನು ಪ್ರವೇಶಿಸದಂತೆ ಖಚಿತಪಡಿಸಿಕೊಳ್ಳುವ ಜವಾಬ್ದಾರಿಯು ಸಂಬಂಧಿತ ಅಧಿಕಾರಿಯ ಮೇಲಿರುತ್ತದೆ ಎಂದೂ ಸುಪ್ರೀಂ ಕೋರ್ಟ್ ಹೇಳಿದೆ.

ಪ್ರತಿ 3 ತಿಂಗಳಿಗೊಮ್ಮೆ ಸರಕಾರಿ ಸಂಸ್ಥೆಗಳ ಪರಿಶೀಲನೆ ಕಡ್ಡಾಯ

ಸಂಬಂಧಿತ ಅಧಿಕಾರಿಯ ಹೆಸರು ಮತ್ತು ಇತರೆ ವಿವರಗಳನ್ನು ಸಂಬಂಧಿತ ಸಂಸ್ಥೆಯ ಪ್ರವೇಶ ದ್ವಾರದಲ್ಲಿ ಶಾಶ್ವತವಾಗಿ ಹಾಕಬೇಕು, ಈ ಮಾಹಿತಿಯನ್ನು ಸ್ಥಳೀಯ ಆಡಳಿತಕ್ಕೂ ನೀಡಬೇಕು. ಸ್ಥಳೀಯ ಆಡಳಿತವು ಪ್ರತಿ 3 ತಿಂಗಳಿಗೊಮ್ಮೆ ಕನಿಷ್ಠ ಒಂದು ಬಾರಿ ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡುವುದು ಕಡ್ಡಾಯವಾಗಿರುತ್ತದೆ. ಈ ಸಂಸ್ಥೆಗಳ ಆವರಣದಲ್ಲಿ ಯಾವುದೇ ರೀತಿಯಲ್ಲಿ ಬೀದಿ ನಾಯಿಗಳ ವಸತಿಯಿಲ್ಲ ಎಂದು ಸ್ಥಳೀಯ ಆಡಳಿತ ಖಚಿತಪಡಿಸಿಕೊಳ್ಳಬೇಕು. ಸ್ಥಳೀಯ ಆಡಳಿತದಿಂದ ಯಾವುದೇ ಲೋಪವಾದರೆ ಅದನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದೂ ಸುಪ್ರೀಂ ಕೋರ್ಟ್ ಎಚ್ಚರಿಕೆ ನೀಡಿದೆ.

ಇತರ ಪ್ರಾಣಿಗಳಿಗೂ ಯೋಜನೆ ರೂಪಿಸಿ!

ಎಲ್ಲಾ ರಾಜ್ಯಗಳ ಮಹಾನಗರ ಪಾಲಿಕೆ ಆಡಳಿತ, ರಸ್ತೆ ಸಾರಿಗೆ ಇಲಾಖೆ, ಲೋಕೋಪಯೋಗಿ ಇಲಾಖೆ, ಕೇಂದ್ರಾಡಳಿತ ಪ್ರದೇಶಗಳು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಜಂಟಿಯಾಗಿ ಕೆಲಸ ಮಾಡಿ, ಹೆದ್ದಾರಿ ಅಥವಾ ಎಕ್ಸ್‌ಪ್ರೆಸ್‌ವೇಗಳ ಮೇಲೆ ಬೀದಿ ಹಸುಗಳು, ಎತ್ತುಗಳು ಅಥವಾ ಇತರ ಪ್ರಾಣಿಗಳು ಪದೇ-ಪದೇ ರಸ್ತೆಗೆ ಬರುವಂತಹ ಪ್ರದೇಶಗಳನ್ನು ಗುರುತಿಸಬೇಕು. ಈ ಪ್ರಾಣಿಗಳನ್ನು ಆಶ್ರಯ ವ್ಯವಸ್ಥೆಗೆ ಸ್ಥಳಾಂತರಿಸಲು ಸಂಬಂಧಿತ ಆಡಳಿತ ಯಂತ್ರಗಳು ತಕ್ಷಣವೇ ಕ್ರಮ ಕೈಗೊಳ್ಳಬೇಕೆಂದು ಸುಪ್ರೀಂ ಕೋರ್ಟ್ ಈ ಸಂದರ್ಭದಲ್ಲಿ ಆದೇಶ ನೀಡಿದೆ.

ಸಂಪಾದಕೀಯ ನಿಲುವು

  • ಸುಪ್ರೀಂ ಕೋರ್ಟ್‌ಗೆ ಇಂತಹ ಆದೇಶ ಏಕೆ ನೀಡಬೇಕಾಗುತ್ತದೆ? ರಾಜ್ಯದ ಸರಕಾರಗಳಿಗೆ ಇದು ಏಕೆ ಅರ್ಥವಾಗುವುದಿಲ್ಲ? ಸರಕಾರಗಳು ಮಾಡುವ ತಪ್ಪಿನಿಂದಾಗಿ ಸಾಮಾನ್ಯ ಜನರಿಗೆ ತೊಂದರೆಯಲ್ಲವೇ? ಜನರು ತಮ್ಮ ಸಮಸ್ಯೆಗಳಿಗಾಗಿ ಪ್ರತಿ ಬಾರಿಯೂ ನ್ಯಾಯಾಲಯದ ಮೊರೆ ಹೋಗಬೇಕಾಗುತ್ತದೆ, ಮತ್ತು ತಿಂಗಳುಗಳು ಅಥವಾ ವರ್ಷಗಳ ವಿಚಾರಣೆಯ ನಂತರ ಇಂತಹ ಆದೇಶ ನ್ಯಾಯಾಲಯ ನೀಡಿದ ನಂತರವೇ ಸರಕಾರ ಕ್ರಮ ಕೈಗೊಳ್ಳುವುದಾದರೆ, ಸರ್ಕಾರ ಎಂಬುದು ಯಾಕೆ ಬೇಕು? ಬದಲಾಗಿ ನ್ಯಾಯಾಲಯವೇ ದೇಶವನ್ನು ಆಳಲಿ ಎಂದು ಜನರಿಗೆ ಅನಿಸಿದರೆ, ಅದರಲ್ಲಿ ತಪ್ಪೇನಿದೆ?
  • ನ್ಯಾಯಾಲಯದ ಆದೇಶದ ನಂತರವಾದರೂ ಸರಕಾರ ಕೆಲಸ ಮಾಡುತ್ತದೆಯೇ? ಎಂಬ ಪ್ರಶ್ನೆ ಜನರ ಮನಸ್ಸಿನಲ್ಲಿ ಮೂಡುವುದು ಖಚಿತ!