ಇಂದು ಯಾವುದೇ ದೇಶವೂ ಏಕಾಂಗಿಯಾಗಿ ಸುರಕ್ಷಿತವಿಲ್ಲ! – ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ

ನವ ದೆಹಲಿ – ಪ್ರಸ್ತುತ ಪ್ರಪಂಚವು ಅನೇಕ ಬೆದರಿಕೆಗಳನ್ನು ಎದುರಿಸುತ್ತಿವೆ ಮತ್ತು ವೇಗವಾಗಿ ಬದಲಾಗುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ, ಯಾವುದೇ ದೇಶವೂ ಏಕಾಂಗಿಯಾಗಿ ಸುರಕ್ಷಿತವಾಗಿರಲು ಸಾಧ್ಯವಿಲ್ಲ. ಈಗ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ರಕ್ಷಣಾ ಕ್ಷೇತ್ರದಲ್ಲಿ ಸಹಯೋಗವು ಅತ್ಯಂತ ಬಲವಾದ ಭದ್ರತಾ ಕವಚವಾಗಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರು ಇಲ್ಲಿ ಹೇಳಿದರು. ‘ಇಂಡಿಯಾ ಡಿಫೆನ್ಸ್ ಕಾನ್ಕ್ಲೇವ್ 2025’ ನಲ್ಲಿ ಅವರು ಮಾತನಾಡುತ್ತಿದ್ದರು. ಈ ಕಾರ್ಯಕ್ರಮದಲ್ಲಿ ಹಿರಿಯ ಸೇನಾ ಅಧಿಕಾರಿಗಳು, ರಕ್ಷಣಾ ತಜ್ಞರು ಮತ್ತು ಕೈಗಾರಿಕಾ ಕ್ಷೇತ್ರದ ಗಣ್ಯರು ಉಪಸ್ಥಿತರಿದ್ದರು.

1. ಜನರಲ್ ದ್ವಿವೇದಿ ಅವರು, “ಯುದ್ಧವು ನಮ್ಮ ವಿಚಾರಗಳನ್ನು ಶಕ್ತಿಯನ್ನಾಗಿ ಪರಿವರ್ತಿಸುವ ಸಾಮರ್ಥ್ಯವನ್ನು ಅವಲಂಬಿಸಿರುತ್ತದೆ. ಭವಿಷ್ಯದಲ್ಲಿ ನಡೆಯುವ ಯುದ್ಧವು ಯಾವುದೇ ಒಂದು ವಿಧಾನ ಅಥವಾ ಪ್ರದೇಶಕ್ಕೆ ಸೀಮಿತವಾಗಿರುವುದಿಲ್ಲ. ನಮ್ಮ ಕಲ್ಪನೆಗಳನ್ನು ನಾವು ಎಷ್ಟು ಬೇಗ ವಾಸ್ತವಿಕ ಶಕ್ತಿ ಮತ್ತು ಸಾಮರ್ಥ್ಯಗಳಾಗಿ ಪರಿವರ್ತಿಸುತ್ತೇವೆ ಎಂಬುದರ ಮೇಲೆ ಭವಿಷ್ಯದ ಯುದ್ಧಗಳು ಅವಲಂಬಿತವಾಗಿರುತ್ತವೆ. ಕಲ್ಪನೆಯಿಂದ ಸಾಮರ್ಥ್ಯದ ಕಡೆಗೆ ಸಾಗುವುದು ಎಂದರೆ, ಅವಲಂಬನೆಯಿಂದ ಸ್ವಾವಲಂಬನೆಯ ಕಡೆಗೆ ಮತ್ತು ನಂತರ ಸ್ವಾವಲಂಬನೆಯಿಂದ ಶಕ್ತಿಯ ಕಡೆಗೆ ಸಾಗುವುದು” ಎಂದು ದ್ವಿವೇದಿ ಅವರು ಹೇಳಿದರು.

2. ಯುದ್ಧದ ವಿಧಾನವು ಬದಲಾಗಿದೆ ಮತ್ತು ಸಂಘರ್ಷಗಳು ಇನ್ನು ಮುಂದೆ ಗಡಿಗಳಿಗೆ ಸೀಮಿತವಾಗಿರುವುದಿಲ್ಲ; ಆದರೆ, ಯುದ್ಧದ ಸ್ವರೂಪ ಏನೇ ಇರಲಿ, ಅಂತಿಮವಾಗಿ ನೆಲದ ಮೇಲೆ ಸಾಧಿಸಿದ ವಿಜಯವೇ ನಿಜವಾದ ಅಳತೆಗೋಲಾಗಿದೆ, ಯಶಸ್ಸಿನ ಅಂತಿಮ ನಿರ್ಣಾಯಕವಾಗಿದೆ ಎಂದು ಜನರಲ್ ದ್ವಿವೇದಿ ಅವರು ಸ್ಪಷ್ಟಪಡಿಸಿದರು.