ಮತಾಂತರವನ್ನು ವಿರೋಧಿಸಲು ಪಾದ್ರಿಗಳ ಪ್ರವೇಶವನ್ನು ನಿಷೇಧಿಸುವ ಫಲಕಗಳು ಸಂವಿಧಾನ-ವಿರೋಧಿ ಅಲ್ಲ! – ಛತ್ತೀಸ್‌ಗಢ ಉಚ್ಚ ನ್ಯಾಯಾಲಯದ ತೀರ್ಪು

ಬಿಲಾಸ್‌ಪುರ (ಛತ್ತೀಸ್‌ಗಢ) – ಆಮಿಷ ತೋರಿಸಿ ಅಥವಾ ವಂಚನೆಯ ಮಾರ್ಗಗಳಿಂದ ನಡೆಯುವ ಮತಾಂತರಕ್ಕೆ ಕಡಿವಾಣ ಹಾಕಲು ಪಾದ್ರಿಗಳು ಮತ್ತು ಕ್ರೈಸ್ತರಿಗೆ ಪ್ರವೇಶ ನಿಷೇಧಕ್ಕಾಗಿ ಹಾಕಲಾದ ಫಲಕಗಳು (ಹೋರ್ಡಿಂಗ್ಸ್) ಸಂವಿಧಾನ-ವಿರೋಧಿ ಆಗಲಾರವು ಎಂದು ಛತ್ತೀಸ್‌ಗಢ ಉಚ್ಚ ನ್ಯಾಯಾಲಯವು ಒಂದು ಅರ್ಜಿಯ ಕುರಿತು ತೀರ್ಪು ನೀಡುವಾಗ ಸ್ಪಷ್ಟಪಡಿಸಿತು. ರಾಜ್ಯದ ಕಾಂಕೇರ್ ಜಿಲ್ಲೆಯ ಕೆಲವು ಗ್ರಾಮಗಳಲ್ಲಿ ಮತಾಂತರಕ್ಕಾಗಿ ಬರುವ ಪಾದ್ರಿಗಳಿಗೆ ಪ್ರವೇಶ ನಿಷೇಧದ ಮಾಹಿತಿಯನ್ನು ನೀಡುವ ಫಲಕಗಳನ್ನು ಹಾಕಲಾಗಿತ್ತು. ಈ ಫಲಕಗಳನ್ನು ತೆಗೆಯಬೇಕು ಎಂದು ಕೋರಿ ಅರ್ಜಿಯನ್ನು ದಾಖಲು ಮಾಡಲಾಗಿತ್ತು, ಅದರ ವಿಚಾರಣೆ ಮಾಡುವಾಗ ಉಚ್ಚ ನ್ಯಾಯಾಲಯವು ಈ ತೀರ್ಪು ನೀಡಿತು.

ಅರ್ಜಿದಾರರಾದ ದಿಗ್ಬಾಲ್ ಟಾಂಡಿ ಅವರು ಸಲ್ಲಿಸಿದ ರಿಟ್ ಅರ್ಜಿಯಲ್ಲಿ (ಮೂಲಭೂತ ಸಾಂವಿಧಾನಿಕ ಹಕ್ಕುಗಳ ಉಲ್ಲಂಘನೆಯ ಪ್ರಕರಣಗಳಲ್ಲಿ ಉಚ್ಚ ಅಥವಾ ಸರ್ವೋಚ್ಚ ನ್ಯಾಯಾಲಯವು ತಕ್ಷಣ ಗಮನ ಹರಿಸಲು ವಿನಂತಿಸುವ ಅರ್ಜಿ) ‘ಪಾದ್ರಿಗಳು ಮತ್ತು ಮತಾಂತರಗೊಂಡ ಕ್ರೈಸ್ತರಿಗೆ ಗ್ರಾಮದ ಗಡಿಯಲ್ಲಿ ಪ್ರವೇಶ ನಿಷೇಧಿಸುವ ಫಲಕಗಳನ್ನು ತೆಗೆಯಬೇಕು’ ಎಂದು ಬೇಡಿಕೆ ಇಡಲಾಗಿತ್ತು. ಅವರ ಪ್ರಕಾರ, ಇಂತಹ ಫಲಕಗಳಿಂದ ಕ್ರೈಸ್ತ ಸಮಾಜವನ್ನು ಮುಖ್ಯವಾಹಿನಿಯಿಂದ ದೂರ ಮಾಡಲಾಗುತ್ತಿದೆ.

ಬಲವಂತದ ಮತಾಂತರ ಗಂಭೀರ ವಿಷಯ ! – ಉಚ್ಚ ನ್ಯಾಯಾಲಯ

ಈ ಫಲಕಗಳನ್ನು ಗ್ರಾಮಸಭೆಗಳು ಬುಡಕಟ್ಟು ಸಮುದಾಯದ ಹಿತರಕ್ಷಣೆಗಾಗಿ ಮತ್ತು ಅವರ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಗಾಗಿ ಹಾಕಿದ್ದಾರೆ ಎಂದು ಉಚ್ಚ ನ್ಯಾಯಾಲಯ ಹೇಳಿದೆ. ಬಲವಂತದ ಮತಾಂತರ ಒಂದು ಗಂಭೀರ ವಿಷಯ ಮತ್ತು ಅದನ್ನು ತಡೆಯಲು ಹಾಕಿದ ಫಲಕಗಳು ಸಂವಿಧಾನ-ವಿರೋಧಿ ಅಲ್ಲ, ಎಂದು ಹೇಳಿದೆ.

ಗ್ರಾಮೀಣ ಜನರ ಹೇಳಿಕೆಯ ಪ್ರಕಾರ, ಅವರ ಫಲಕ ಹಾಕುವ ನಿರ್ಧಾರವು ಭಾರತೀಯ ಸಂವಿಧಾನದ ೫ನೇ ಅನುಸೂಚಿಗೆ (Schedule) ಅನುಗುಣವಾಗಿದೆ, ಇದು ಹಿಂದುಳಿದ ಬುಡಕಟ್ಟು ಪ್ರದೇಶಗಳಿಗೆ ಸ್ವ-ಆಡಳಿತ ಮತ್ತು ಸಾಂಸ್ಕೃತಿಕ ರಕ್ಷಣೆಯನ್ನು ಒದಗಿಸುತ್ತದೆ. ಕಾಂಕೇರ್ ಜಿಲ್ಲೆಯಲ್ಲಿ ಇಲ್ಲಿಯವರೆಗೆ ೧೨ ಗ್ರಾಮಗಳು ಇಂತಹ ಫಲಕಗಳನ್ನು ಹಾಕಿವೆ.

ಸಂಪಾದಕೀಯ ನಿಲುವು

ಛತ್ತೀಸ್‌ಗಢ ಉಚ್ಚ ನ್ಯಾಯಾಲಯದ ಶ್ಲಾಘನೀಯ ನಿರ್ಧಾರ! ಈಗ ಇಂತಹ ಫಲಕಗಳನ್ನು ಹಿಂದೂಗಳು ಎಲ್ಲೆಡೆ ಹಾಕಬೇಕು!