ಆರೋಪಿಯನ್ನು ಸಾಯುವವರೆಗೂ ನೇಣಲ್ಲಿ ನೇತು ಹಾಕಿ! – ನ್ಯಾಯಾಲಯದ ಆದೇಶ Death Penalty Court Order

ಶಾಹಜಹಾನ್‌ಪುರ (ಉತ್ತರಪ್ರದೇಶ)ದಲ್ಲಿ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನ ಮತ್ತು ಕೊಲೆ ಮಾಡಿದ ಪ್ರಕರಣ

ಶಾಹಜಹಾನ್‌ಪುರ (ಉತ್ತರಪ್ರದೇಶ) – ಇಲ್ಲಿನ ೭ ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಯತ್ನ ನಡೆಸಿದ ಹಾಗೂ ಆ ಸಂತ್ರಸ್ತೆಯ ೫ ವರ್ಷದ ತಂಗಿಯನ್ನು ಕೊಲೆ ಮಾಡಿದ ಆರೋಪಿಗೆ ನ್ಯಾಯಾಲಯವು ಗಲ್ಲು ಶಿಕ್ಷೆ ವಿಧಿಸಿದೆ. ಈ ಪ್ರಕರಣವನ್ನು ನ್ಯಾಯಾಲಯವು ‘ಅಪರೂಪದಲ್ಲಿ ಅಪರೂಪ’ದ ಅಪರಾಧಗಳೆಂದು ವರ್ಗೀಕರಿಸಿದೆ. ನ್ಯಾಯಾಧೀಶರು, ಆರೋಪಿಗೆ ‘ಸಾಯುವವರೆಗೆ ಗಲ್ಲು ಶಿಕ್ಷೆ ವಿಧಿಸಬೇಕು’ ಎಂದು ಆದೇಶ ನೀಡಿದ್ದಾರೆ. ನ್ಯಾಯಾಲಯವು ಆರೋಪಿಗೆ ೧ ಲಕ್ಷದ ೩೭ ಸಾವಿರದ ೫೦೦ ರೂಪಾಯಿಗಳ ದಂಡವನ್ನೂ ವಿಧಿಸಿದೆ. ಈ ಘಟನೆಯು ೨೦೨೧ರಲ್ಲಿ ಕಾಂತ ಪೊಲೀಸ್ ಠಾಣೆಯ ವ್ಯಾಪ್ತಿಯ ಒಂದು ಗ್ರಾಮದಲ್ಲಿ ನಡೆದಿತ್ತು.

೧. ಅಜೀಜಗಂಜ್ ಪ್ರದೇಶದ ಅನಿಲ ಅಲಿಯಾಸ್ ಚಮೇಲಿ ಎಂಬ ಯುವಕನು ಗ್ರಾಮದಲ್ಲಿ ಜೇನು ತೆಗೆಯಲು ಹೋಗುತ್ತಿದ್ದನು. ೨೦೨೧ರ ಫೆಬ್ರವರಿ ೨೨ರಂದು ಆರೋಪಿಯು ಜೇನು ತೆಗೆಯಲು ಹೋದಾಗ, ಇಬ್ಬರು ಬಾಲಕಿಯರು ನಲ್ಲಿಯ ಬಳಿ ಸ್ನಾನ ಮಾಡುತ್ತಿದ್ದರು. ಅವರಲ್ಲಿ ಒಬ್ಬಳು ೭ ವರ್ಷದವಳು ಮತ್ತು ಇನ್ನೊಬ್ಬಳು ೫ ವರ್ಷದವಳು.

೨. ಆರೋಪಿಯು ಇಬ್ಬರೂ ಬಾಲಕಿಯರಿಗೆ ಜೇನು ಕುಡಿಸುವ ನೆಪದಲ್ಲಿ ಒಂದು ನಿರ್ಜನ ಪ್ರದೇಶಕ್ಕೆ ಕರೆದೊಯ್ದನು. ಅಲ್ಲಿ ಅವನು ೭ ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮಾಡಲು ಪ್ರಯತ್ನಿಸಿದನು. ಸಂತ್ರಸ್ತ ಬಾಲಕಿ ಕಿರುಚುತ್ತಿದ್ದಂತೆ, ಆಕೆಯ ತಂಗಿಯೂ ಕಿರುಚಲು ಪ್ರಾರಂಭಿಸಿದಳು.

೩. ಆರೋಪಿ ಅನಿಲ್, ಜೇನು ತೆಗೆಯುವ ಸಾಧನದಿಂದ ಚಿಕ್ಕ ಬಾಲಕಿಯ ಮುಖದ ಮೇಲೆ ಹಲವು ಬಾರಿ ಹೊಡೆದು ಕೊಲೆ ಮಾಡಿದನು. ಅವನು ಹಿರಿಯ ಸಹೋದರಿಯ ಮೇಲೆಯೂ ದಾಳಿ ಮಾಡಿದನು. ‘ಅವರಿಬ್ಬರೂ ಸತ್ತಿದ್ದಾರೆ’ ಎಂದು ಭಾವಿಸಿ ಅನಿಲ್ ಅಲ್ಲಿಂದ ಓಡಿಹೋದನು.