ಗಾಯನ, ವಾದನ, ನೃತ್ಯ ಮತ್ತು ನಾಟಕ ಕಲೆಗಳಿಂದ ‘ಈಶ್ವರಪ್ರಾಪ್ತಿಗಾಗಿ ಸಾಧನೆಯ ಪ್ರಾಸ್ತಾವಿಕ ವಿವೇಚನೆ !

ಸಂಗೀತದ ವ್ಯಾಖ್ಯೆ ಮತ್ತು ಆಧ್ಯಾತ್ಮಿಕ ಪರಿಭಾಷೆ ! (ಲೇಖನ -೨)

ಕಲೆ ಎಂದರೆ ಮಾನವನ ಅಂತರಮನಸ್ಸಿನ ವಿಚಾರ, ಭಾವನೆ ಮತ್ತು ಅನುಭವ ಇವುಗಳ ಸಂಗೀತ, ನೃತ್ಯ, ನಾಟಕ, ಸಾಹಿತ್ಯ, ಶಿಲ್ಪ, ಚಿತ್ರಕಲೆ ಇತ್ಯಾದಿ ವಿವಿಧ ಮಾಧ್ಯಮಗಳ ಮೂಲಕ ಸೃಜನಾತ್ಮಕ, ಸೌಂದರ್ಯಮಯ ಮತ್ತು ಅಭಿವ್ಯಕ್ತಗೊಂಡ ರೂಪವಾಗಿದೆ.

ಮನುಷ್ಯನ ಜೀವನವು ಸಂಗೀತಮಯವಾಗಿದೆ. ಸಂಗೀತವನ್ನು ಇಷ್ಟಪಡದವರು ಯಾರಾದರೂ ಇದ್ದರೆ ಅದು ವಿರಳವೇ ಆಗಿದೆ. ಚಿಕ್ಕ ಮಗುವಿನ ಅಳು ನಿಲ್ಲಿಸಿ, ಅದು ನಿದ್ರಿಸಲು ಹಾಡುವ ಜೋಗುಳ ಗೀತೆಯೊಂದಿಗೆ ಮನುಷ್ಯನ ಜೀವನದಲ್ಲಿ ಸಂಗೀತದ ಪ್ರವಾಸ ಪ್ರಾರಂಭವಾಗುತ್ತದೆ. ಅದರ ನಂತರದ ಮಾನವನ ಜೀವನ ಪ್ರವಾಸದಲ್ಲಿ ಪ್ರತಿಯೊಂದು ಶುಭ ಸಂದರ್ಭದಲ್ಲಿಯೂ ಸಂಗೀತವು ಅವಿಭಾಜ್ಯ ಅಂಗವಾಗಿರುವುದು ಕಂಡು ಬರುತ್ತದೆ.

ಸಂಗೀತವು ಮಾನವ ಜೀವನದಲ್ಲಿನ ಎಲ್ಲಕ್ಕಿಂತ ಪ್ರಾಚೀನ ಮತ್ತು ಪವಿತ್ರ ಕಲೆ ಗಳಲ್ಲಿ ಒಂದಾಗಿದೆ. ಇದು ಕೇವಲ ಶ್ರವಣಾನಂದ ನೀಡುವ ಕಲೆಯಲ್ಲ, ಭಾವವಿಶ್ವದಲ್ಲಿ ಕರೆದೊಯ್ಯುವ, ಮನಸ್ಸನ್ನು ಸ್ಥಿರಗೊಳಿಸುವ ಮತ್ತು ಅಧ್ಯಾತ್ಮದ ಕಡೆಗೆ ಕರೆದೊಯ್ಯುವ ಸಾಧನೆಯಾಗಿದೆ. ಸಂಗೀತವು ಮನುಷ್ಯನಿಗೆ ಆನಂದ ಮತ್ತು ಆತ್ಮಿಕ ಶಾಂತಿ ನೀಡುವ ಕಲೆಯಾಗಿದೆ. ‘ಭಾವವನ್ನು ವ್ಯಕ್ತಪಡಿಸಲು ಭಗವಂತನು ಮನುಷ್ಯನಿಗೆ ಕಲಾತ್ಮಕ ರೂಪದಲ್ಲಿ ನೀಡಿದ ಮಾಧ್ಯಮವೆಂದರೆ ಸಂಗೀತ. ಸ್ವರ, ಲಯ, ತಾಳ, ಭಾವ ಮತ್ತು ನಾದ ಇವುಗಳ ಕಲಾತ್ಮಕ ಮಿಲನದಿಂದ ಸಂಗೀತ ಕಲೆಯು ರೂಪುಗೊಳ್ಳುತ್ತದೆ. ‘ಶ್ರುತಿಪ್ರಧಾನ ಸಂಗೀತ ಇದು ಭಾರತೀಯ ಸಂಗೀತದ ಒಂದು ವೈಶಿಷ್ಟ್ಯವಾಗಿದೆ.

ಭಾರತೀಯ ಸಂಗೀತವು ‘ಶ್ರುತಿ (ಶ್ರುತಿ ಎಂದರೆ ನಾದದ ಸೂಕ್ಷ್ಮತಮ ಅವಿಷ್ಕಾರವಾಗಿದೆ) ಮತ್ತು ‘ಸ್ವರ (ಸಂಗೀತದಲ್ಲಿ ಉಪಯೋಗಿಸುವ ನಾದಕ್ಕೆ ‘ಸ್ವರ ಎಂದು ಹೇಳಲಾಗುತ್ತದೆ) ಆಧಾರದ ಮೇಲೆ ನಿಂತಿದೆ. ‘ಸ್ವರವು ಸಂಗೀತದ ಪ್ರಾಣವಾಗಿದೆ.

ಶ್ರೀ. ರಾಮ ಹೊನಪ

೧. ‘ಗಾಯನ ಪದಕ್ಕೆ ಸಮಾನಾರ್ಥಕ ಪದಗಳು

ಸ್ವರಗಾಯನ, ರಾಗಗಾಯನ, ಗಾನ, ಗೀತ.

೨. ಗ್ರಂಥಗಳಲ್ಲಿ ನೀಡಲಾದ ಸಂಗೀತದ ವ್ಯಾಖ್ಯೆ

ಅ. ಗೀತಂ ವಾದ್ಯಂ ತಥಾ ನೃತ್ಯಂ ತ್ರಯಂ ಸಂಗೀತಮುಚ್ಯತೇ |

– ಸಂಗೀತ ರತ್ನಾಕರ, ಅಧ್ಯಾಯ ೧, ಪ್ರಕರಣ ೧, ಶ್ಲೋಕ ೨೧

ಅರ್ಥ : ಗಾಯನ, ವಾದನ ಮತ್ತು ನೃತ್ಯ ಇವುಗಳ ಒಟ್ಟು ಆವಿಷ್ಕಾರಕ್ಕೆ ‘ಸಂಗೀತ ಎಂದು ಹೇಳಲಾಗುತ್ತದೆ.

ಆ. ಭರತಮುನಿಯು ನಾಟ್ಯಶಾಸ್ತ್ರದಲ್ಲಿ ಹೀಗೆ ಹೇಳಿದ್ದಾರೆ,

ಗಾಂಧರ್ವಮಿತಿ ತಜ್ಞೇಯಂ ಸ್ವರತಾಲಪದಾತ್ಮಕಮ್ |

– ನಾಟ್ಯಶಾಸ್ತ್ರ, ಅಧ್ಯಾಯ ೨೮, ಶ್ಲೋಕ ೮

ಅರ್ಥ : ‘ಯಾವುದು ಸ್ವರ, ತಾಳ ಮತ್ತು ಶಬ್ದಗಳಿಂದ ಸಿದ್ಧವಾಗಿದೆಯೋ, ಅದನ್ನು ಗಾಂಧರ್ವ (ಶಾಸ್ತ್ರೀಯ ಸಂಗೀತ) ಎಂದು ತಿಳಿಯಬೇಕು.

೩. ಪದ್ಮಪುರಾಣದಲ್ಲಿ ಸಾಕ್ಷಾತ್ ಭಗವಾನ್

ಶ್ರೀವಿಷ್ಣುವು ಹೇಳಿದ ಗಾಯನದ ಮಹತ್ವ !

ಮೇಲಿನ ವ್ಯಾಖ್ಯೆಗಳನ್ನು ಸಂಗೀತಕ್ಕೆ ಸಂಬಂಧಿಸಿದ ಗ್ರಂಥಗಳಲ್ಲಿ ನೀಡಲಾಗಿದೆ. ಸಾಕ್ಷಾತ್ ಭಗವಾನ್ ಶ್ರೀವಿಷ್ಣು ಕೂಡ ಪದ್ಮಪುರಾಣದಲ್ಲಿ

ಭಕ್ತರು ಮಾಡಿದ ಗಾಯನದ ಮಹತ್ವವನ್ನು ವರ್ಣಿಸಿದ್ದಾನೆ.

ನಾಹಂ ವಸಾಮಿ ವೈಕುಂಠೇ ಯೋಗೀನಾಂ ಹೃದಯೇ ನ ಚ |

ಮದ್ಭಕ್ತಾ ಯತ್ರ ಗಾಯಂತಿ ತತ್ರ ತಿಷ್ಠಾಮಿ ನಾರದ ||

ಅರ್ಥ : ಹೇ ನಾರದಾ, ನಾನು ವೈಕುಂಠದಲ್ಲಿ ವಾಸಿಸುವುದಿಲ್ಲ ಮತ್ತು ಯೋಗಿಗಳ ಹೃದಯದಲ್ಲಿಯೂ ಇರುವುದಿಲ್ಲ; ಎಲ್ಲಿ ನನ್ನ ಭಕ್ತರು ಗಾಯನ ಮಾಡುತ್ತಾರೋ (ಭಜನೆ ಮತ್ತು ಕೀರ್ತನೆಗಳ ಮೂಲಕ ನನ್ನ ನಾಮ ತೆಗೆದುಕೊಳ್ಳುತ್ತಾರೋ), ಅಲ್ಲಿ ನಾನು ವಾಸಿಸುತ್ತೇನೆ.

ಭಗವಂತನ ಈ ಮೇಲಿನ ವಚನದಿಂದ ‘ಸಂಗೀತವು ಕೇವಲ ಒಂದು ಕಲೆಯಲ್ಲ, ಅದು ಜೀವದ ಪರಮೇಶ್ವರನೊಂದಿಗೆ ನಡೆಸುವ ಪವಿತ್ರ ಸಂವಾದವಾಗಿದೆ ಎಂಬುದು ಗಮನಕ್ಕೆ ಬರುತ್ತದೆ.

ಸಂಗೀತದಲ್ಲಿನ ಪ್ರತಿಯೊಂದು ಸ್ವರ, ಲಯ ಮತ್ತು ನಾದದಲ್ಲಿ ಒಂದು ಆಧ್ಯಾತ್ಮಿಕ ಅನುಭೂತಿ ಅಡಗಿದೆ. ಭಾರತೀಯ ಸಂಸ್ಕೃತಿಯಲ್ಲಿ ಸಂಗೀತವನ್ನು ‘ನಾದಬ್ರಹ್ಮ ಎಂದು ಕರೆಯಲಾಗುತ್ತದೆ.

೪. ಆಧ್ಯಾತ್ಮಿಕ ಪರಿಭಾಷೆಯಿಂದ ಗಾಯನ ಕಲೆ

ಸಂಗೀತ ಮತ್ತು ಗಾಯನಕ್ಕೆ ಸಂಬಂಧಿಸಿದ ಮೇಲಿನ ವ್ಯಾಖ್ಯೆಗಳು ಎಲ್ಲರಿಗೂ ಪರಿಚಿತವಾಗಿವೆ. ‘ಗಾಯನ ಕಲೆಯನ್ನು ಸಾಧನೆಯೆಂದು ಹೇಗೆ ನೋಡಬೇಕು ? ಗಾಯನವು ನಮಗೆ ಮನಸ್ಸು ಮತ್ತು ಬುದ್ಧಿಯ ಆಚೆಗಿನ ಅನುಭವವನ್ನು ಹೇಗೆ ನೀಡಬಹುದು ? ಎಂಬುದನ್ನು ಹೇಳುವ ಸಂಗೀತ (ಗಾಯನ) ಮತ್ತು ಅಧ್ಯಾತ್ಮವನ್ನು ಜೋಡಿಸುವ ಕೆಲವು ಪರಿಭಾಷೆಗಳನ್ನು ಮುಂದೆ ನೀಡಲಾಗಿದೆ. ಈ ಪರಿಭಾಷೆಗಳು ಸನಾತನದ ಸೂಕ್ಷ್ಮ ಜ್ಞಾನ ಪ್ರಾಪ್ತಮಾಡಿಕೊಳ್ಳುವ ಸಾಧಕ ಶ್ರೀ. ರಾಮ ಹೊನಪ ಅವರಿಗೆ ಸೂಕ್ಷ್ಮ ಜ್ಞಾನದಿಂದ ದೊರೆತಿವೆ.

ಅ. ಶೃಂಗಾರ, ಪ್ರೇಮ, ಸುಖ, ದುಃಖ, ಭಾವ ಮತ್ತು ಭಾವನೆಗಳನ್ನು ವ್ಯಕ್ತಪಡಿಸಲು ಈಶ್ವರನಿಂದ ಮನುಷ್ಯನಿಗೆ ದೊರೆತ ನೈಸರ್ಗಿಕ ಮಾಧ್ಯಮವೆಂದರೆ ಗಾಯನ.

ಆ. ಸ್ಥೂಲ ಶಬ್ದಗಳ ಮೂಲಕ ಸೂಕ್ಷ್ಮ ಭಗವಂತನನ್ನು ಅನುಭವಿಸುವ ಪ್ರಕ್ರಿಯೆಯೆಂದರೆ ಗಾಯನ.

ಇ. ಸಾಧಕನು ಭಗವಂತನಿಗೆ ಮಾಡಿದ ಆತ್ಮನಿವೇದನೆಯ ರೂಪದ ಪ್ರಾರ್ಥನೆಯೆಂದರೆ ಗಾಯನ.

ಈ. ಗಾಯನದಲ್ಲಿನ ಸ್ವರವು ಭಕ್ತನನ್ನು ಭಗವಂತನ ಬಳಿ ತಲುಪಿಸುವ ಒಂದು ‘ಸೇತುವೆ ಆಗಿದೆ.

ಉ. ಹೃದಯ ಕಮಲದಲ್ಲಿ ವಿರಾಜಮಾನನಾದ ಭಗವಂತನಿಗೆ ಸಾಧಕನು ಶಬ್ದ ರೂಪದಲ್ಲಿ ಮಾಡಿದ ಪೂಜೆಯೆಂದರೆ ಗಾಯನ.

ಊ. ಯಾವುದು ಸಾಧಕನಿಗೆ ಅಲ್ಪಾವಧಿಯಲ್ಲಿ ಭಗವಂತನ ಭೇಟಿ ಮಾಡಿಸುವುದೋ ಅದುವೇ ಗಾಯನ.

ಎ. ಸಾಧಕನು ಭಗವಂತನಿಗಾಗಿ ಮಾಡಿದ ಶಬ್ದರೂಪಿ ಪುಷ್ಪಗಳ ಹಾರವೆಂದರೆ ಗಾಯನ.

– ಶ್ರೀ. ರಾಮ ಹೊನಪ (ಸೂಕ್ಷ್ಮದಿಂದ ಪ್ರಾಪ್ತವಾದ ಜ್ಞಾನ), ಸನಾತನ ಆಶ್ರಮ, ರಾಮನಾಥಿ, ಗೋವಾ.

೫. ವಿದೇಶಿ ಸಾಹಿತಿಗಳು ಮತ್ತು ಕಲಾವಿದರು ಹೇಳಿದ ಸಂಗೀತದ ಆಧ್ಯಾತ್ಮಿಕ ಮಹತ್ವ

ಸೌ. ಭಕ್ತಿ ಕುಲಕರ್ಣಿ

ಸಂಗೀತದಲ್ಲಿನ ಅಧ್ಯಾತ್ಮವು ಕೇವಲ ಭಾರತೀಯ ಕಲಾವಿದರು ಅಥವಾ ಸಂತ ಪುರುಷರಿಗೆ ಮಾತ್ರ ತಿಳಿದಿದೆ ಎಂದೇನಿಲ್ಲ್ಲ, ಕೆಲವು ವಿದೇಶಿ ಸಾಹಿತಿಗಳು ಮತ್ತು ಕಲಾವಿದರೂ ‘ಸಂಗೀತವು ಈಶ್ವರಪ್ರಾಪ್ತಿಗಾಗಿ ಇರುವ ಶ್ರೇಷ್ಠ ಮಾಧ್ಯಮವಾಗಿದೆ ಎಂದು ಹೇಳಿದ್ದಾರೆ.

ಅ. ಸಂಗೀತ ಕೇ ಪೀಛೇ-ಪೀಛೇ ಖುದಾ ಚಲತಾ ಹೈ | (ಸಂಗೀತ ಇರುವಲ್ಲಿ ಈಶ್ವರನ ಅಸ್ತಿತ್ವವಿರುತ್ತದೆ.)

– ಶೇಖ್ ಸಾದಿ, ಪರ್ಶಿಯನ್ ಸಾಹಿತ್ಯ ಪರಂಪರೆಯ ಮಹಾನ್ ಕವಿ

(ಆಧಾರ : ಮಾಸಿಕ ‘ಭಕ್ತಿ ಸಂಗೀತ ಅಂಕ, ಜನವರಿ ೧೯೭೦)

ಆ. ಸಂಗೀತ ಪರಮಾತ್ಮಾ ಕೀ ಪ್ರಾಪ್ತಿ ಕೇ ಲಿಯೇ ಮಾನವ ಕಾ ಸರ್ವೋಚ್ಚ ಸಾಧನ ಹೈ (ಮಾನವನಿಗೆ ಪರಮಾತ್ಮನ ಪ್ರಾಪ್ತಿಗಾಗಿ ಸಂಗೀತ ಸರ್ವೋಚ್ಚ ಮಾಧ್ಯಮವಾಗಿದೆ.)

– ಯೆಹೂದಿ ಮೆನ್ಯುಹಿನ್, ಬ್ರಿಟಿಷ್-ಅಮೆರಿಕನ್ ಸಂಗೀತಕಾರ

(ಆಧಾರ : ಮಾಸಿಕ ‘ಭಕ್ತಿ ಸಂಗೀತ ಅಂಕ, ಜನವರಿ ೧೯೭೦)

೬. ಸಾರಾಂಶ

ಮೇಲಿನ ಪರಿಭಾಷೆಯಂತೆ ಸಂಗೀತೋಪಾಸಕನು ಗಾಯನವನ್ನು ನೋಡುವ ದೃಷ್ಟಿಕೋನವನ್ನು ಇಟ್ಟುಕೊಂಡರೆ, ಗಾಯನದ ಮೂಲಕ ಸಾಕ್ಷಾತ್ ಭಗವಂತನನ್ನೇ ಅನುಭವಿಸಬಹುದು.

(ಲೇಖನಮಾಲೆಯ ಮುಂದಿನ ಭಾಗದಲ್ಲಿ ನಾವು ವಾದನದ ವ್ಯಾಖ್ಯೆಯನ್ನು ನೋಡುವವರಿದ್ದೇವೆ.)

ಸಂಗ್ರಹ : ಸೌ. ಭಕ್ತಿ ಕುಲಕರ್ಣಿ, ಸಂಗೀತ ಅಭ್ಯಾಸಕಿ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೨೧.೮.೨೦೨೫)

ಸಾಧಕರಿಗೆ ಸೂಚನೆ ಮತ್ತು ಹಿತಚಿಂತಕರಲ್ಲಿ ವಿನಂತಿ

ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದಿಂದ ‘ಸನಾತನ ಪ್ರಭಾತದಲ್ಲಿ ಕಳೆದ ವಾರದಿಂದ ಗಾಯನ, ವಾದನ, ನೃತ್ಯ ಮತ್ತು ನಾಟಕ ಇವುಗಳ ಮೂಲಕ ಈಶ್ವರಪ್ರಾಪ್ತಿಗಾಗಿ ಸಾಧನೆಯ ಪ್ರಾಸ್ತಾವಿಕ ವಿವೇಚನೆ ! ಈ ಲೇಖನಮಾಲೆ ಪ್ರಾರಂಭವಾಗಿದೆ. ಈ ಲೇಖನಮಾಲೆಯಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಕಲೆಗಳನ್ನು ಸಾಧನೆಯ ದೃಷ್ಟಿಯಿಂದ ಹೇಗೆ ನೋಡಬೇಕು ? ಈ ಕುರಿತು ನೀಡಿದ ನಿರ್ದೇಶನದಂತೆ ಮಾರ್ಗದರ್ಶಕ ಲೇಖನಗಳು ಇರಲಿವೆ. ನಿಮ್ಮ ಸಂಪರ್ಕದಲ್ಲಿರುವ ಕಲಾಪ್ರೇಮಿಗಳು, ಕಲಾವಿದರು ಮತ್ತು ಕಲೆಯ ಕುರಿತು ಇರುವ ಜಿಜ್ಞಾಸುಗಳವರೆಗೆ ಈ ಲೇಖನಗಳನ್ನು ತಲುಪಿಸಲು ಪ್ರಯತ್ನಿಸಿರಿ.

ಈ ಲೇಖನಗಳ ಬಗ್ಗೆ ಯಾರಿಗಾದರೂ ಸಂದೇಹ ಅಥವಾ ಪ್ರಶ್ನೆಗಳಿದ್ದರೆ, ಈ ಕೆಳಗಿನ ಸಂಖ್ಯೆಗೆ ಸಂಪರ್ಕಿಸಬಹುದು.

– ಸಂಗೀತ ವಿಭಾಗ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ.

ಸಂಪರ್ಕಕ್ಕಾಗಿ ವಿಳಾಸ :

ಶ್ರೀ. ಅಭಿಜಿತ ಸಾವಂತ

ಸಂಪರ್ಕ ಸಂಖ್ಯೆ : 8793678178

ಇಮೇಲ್ : [email protected]