ಭವಿಷ್ಯದಲ್ಲಿ ಸಂಸ್ಕೃತವೇ ಜಗತ್ತನ್ನು ಬೆಸೆಯುವ ಭಾಷೆಯಾಗಲಿದೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ

ಜಗತ್ತಿನ ಮೊದಲ ವಿಶ್ವವಿದ್ಯಾಲಯವಾದ ತಕ್ಷಶಿಲಾ ಭಾರತದ ಕೊಡುಗೆಯೇ ಆಗಿದೆ !

ವಾರಾಣಸಿ (ಉತ್ತರಪ್ರದೇಶ) – ಸಂಸ್ಕೃತವು ದಿವ್ಯ ಜ್ಞಾನದ ಭಾಷೆಯಾಗಿದೆ. ಭವಿಷ್ಯದಲ್ಲಿ ಸಂಸ್ಕೃತವೇ ಜಗತ್ತನ್ನು ಬೆಸೆಯುವ ಭಾಷೆಯಾಗಲಿದೆ. ಸಂಸ್ಕೃತದಿಂದ ಪರಸ್ಪರ ಸಂಸ್ಕೃತಿಗಳೊಂದಿಗೆ ಆತ್ಮೀಯತೆ ಬೆಳೆಯುವುದರ ಜೊತೆಗೆ ವಿಶ್ವಕಲ್ಯಾಣದ ಮಾರ್ಗವೂ ದೊರೆಯಲಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಹೇಳಿದರು. ವಾರಾಣಸಿಯಲ್ಲಿ ‘ಅನ್ನಪೂರ್ಣ ಟ್ರಸ್ಟ್’ ವತಿಯಿಂದ ಆಯೋಜಿಸಿದ್ದ ಹೊಲಿಗೆ, ಕಸೂತಿ ಮತ್ತು ಕಂಪ್ಯೂಟರ್ ತರಬೇತಿ ಕೇಂದ್ರದ ೧೪ನೇ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಕೈಯಿಂದ ೨೫೦ ಹುಡುಗ-ಹುಡುಗಿಯರಿಗೆ ಹೊಲಿಗೆ ಯಂತ್ರಗಳು ಮತ್ತು ಲ್ಯಾಪ್ಟಾಪ್‌ಗಳನ್ನು ವಿತರಿಸಲಾಯಿತು.

ಮುಖ್ಯಮಂತ್ರಿಗಳು ಮಾತನಾಡುತ್ತಾ, ಜಗತ್ತಿನ ಮೊದಲ ವಿಶ್ವವಿದ್ಯಾಲಯವಾದ ತಕ್ಷಶಿಲಾ ಭಾರತದ ಕೊಡುಗೆಯೇ ಆಗಿದೆ. ಈ ವಿಶ್ವವಿದ್ಯಾಲಯದಿಂದಲೇ ಪಾಣಿನಿಯಂತಹ ವಿದ್ವಾಂಸರು ಹೊರಹೊಮ್ಮಿದರು. ಮಹರ್ಷಿ ವಾಲ್ಮೀಕಿ ಅವರು ಜಗತ್ತಿನ ಮೊದಲ ಸಂಸ್ಕೃತ ಮಹಾಕಾವ್ಯವನ್ನು ರಚಿಸಿದರು. ಸಂಸ್ಕೃತದ ಪ್ರಸಾರಕ್ಕಾಗಿ ಸರಕಾರವು ವಿದ್ಯಾರ್ಥಿವೇತನದೊಂದಿಗೆ ಉನ್ನತ ಮಟ್ಟದ ಸಂಶೋಧನೆಗೂ ನಿರಂತರವಾಗಿ ಪ್ರಯತ್ನಿಸುತ್ತಿದೆ. (ಶಾಲಾ ಪಠ್ಯಕ್ರಮದಲ್ಲಿ ಸಂಸ್ಕೃತ ಭಾಷೆಯನ್ನು ಸೇರಿಸಲು ಮತ್ತು ಅದನ್ನು ಕಲಿಸಲು ತರಬೇತಿ ಹೊಂದಿದ ಶಿಕ್ಷಕರನ್ನು ಒದಗಿಸಲು ಆಡಳಿತಗಾರರು ಪ್ರಯತ್ನಿಸುವುದು ಅಪೇಕ್ಷಿತವಾಗಿದೆ! – ಸಂಪಾದಕರು) ಆರೋಗ್ಯ, ಶಿಕ್ಷಣ ಮತ್ತು ಕೌಶಲ್ಯ ಅಭಿಯಾನಗಳ ಮೂಲಕ ಸರಕಾರವು ಮಹಿಳೆಯರನ್ನು ಸ್ವಾವಲಂಬಿಯನ್ನಾಗಿ ಮಾಡುತ್ತಿದ್ದು, ಅವರ ಜೀವನವನ್ನು ಸರಳಗೊಳಿಸಲು ಪ್ರಯತ್ನಿಸುತ್ತಿದೆ.