ಪ್ರಭೋ ಶಕ್ತಿ ಮನ್ಹಿನ್ದುರಾಷ್ಟ್ರಾಙ್ಗಭೂತಾ !

ವಿಜಯದಶಮಿಯ ಪವಿತ್ರ ದಿನದಂದು, ‘ರಾಷ್ಟ್ರೀಯ ಸ್ವಯಂಸೇವಕ ಸಂಘ’ ಎಂಬ ಹಿಂದುತ್ವನಿಷ್ಠ ಸಂಘಟನೆಗೆ ಶತಮಾನೋತ್ಸವದ ಗೌರವ ದೊರಕಿರುವುದು, ಈ ಸಂಘಟನೆಗೆ ಮಾತ್ರವಲ್ಲದೆ, ಇತಿಹಾಸಕ್ಕೂ ಹೆಮ್ಮೆಯ ಕ್ಷಣವಾಗಿದೆ ! ಕೆಲವು ಘಟನೆಗಳಿಗೆ ಕಾಲದ ಮಿತಿಯಿರುವುದಿಲ್ಲ; ಅವು ಇತಿಹಾಸದ ಪುಟಗಳಿಂದ ನೇರವಾಗಿ ಜನರ ಮನಸ್ಸಿನ ಹೃದಯದಲ್ಲಿ ಕೆತ್ತಲ್ಪಡುತ್ತವೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಕ್ತಿಯ ‘ಸುವರ್ಣ’ಯುಗವು ಅಂತಹ ಒಂದು ಘಟನೆಯಾಗಿದೆ. ೧೯೨೫ ರ ವಿಜಯ ದಶಮಿಯಂದು ಜನಿಸಿದ ಈ ಶತಾಯುಷಿ ಸಂಘಟನೆಯ ಪಯಣ ಕೇವಲ ಇತಿಹಾಸವಲ್ಲ, ಅದು ರಾಷ್ಟ್ರದ ಪುನರುತ್ಥಾನದ ಕಥೆ. ಸಂಘದ ಪ್ರಾರ್ಥನೆಯಲ್ಲಿರುವ ”ಮಹಾಮಙ್ಗಲೇ ಪುಣ್ಯಭೂಮೇ ತ್ವದರ್ಥೇ, ಪತತ್ವೇಷ ಕಾಯೋ ನಮಸ್ತೇ ನಮಸ್ತೇ’ (ಅರ್ಥ :ಹೇ ಮಹಾಮಂಗಳಮಯಿ ಪುಣ್ಯಭೂಮಿಯೇ, ನಿನ್ನ ಸೇವೆಯಲ್ಲಿ ನಮ್ಮ ಶರೀರ ಅರ್ಪಣೆಯಾಗಲಿ, ನಾವು ನಿನಗೆ ನಮಸ್ಕರಿಸುತ್ತೇವೆ) ಈ ೭ ಶಬ್ದಗಳಲ್ಲಿ ಸಂಘದ ಪಯಣದ ಹಿಂದಿನ ಸ್ಪೂರ್ತಿ ಅಡಗಿದೆ.

 ಅದು ೧೯೨೫ ರ ಕಾಲಘಟ್ಟ. ಪರಕೀಯ ಆಡಳಿತದ ಬಂಧನಗಳನ್ನು ಕಿತ್ತುಹಾಕಲು ಇಡೀ ದೇಶವು ಹೆಣಗಾಡುತ್ತಿತ್ತು. ಎಲ್ಲರೂ ಪ್ರಯತ್ನಿಸುತ್ತಿದ್ದರು; ಆದರೆ ಸಂಘಟಿತರಾಗಿರಲಿಲ್ಲ. ಗುಲಾಮಗಿರಿಯಿಂದಾಗಿ ಹಿಂದೂ ಸಮಾಜದ ಆತ್ಮಬಲವು ಕುಂದಿತ್ತು. ಇನ್ನೊಂದೆಡೆ, ಕಾಂಗ್ರೆಸ್‌ ಖಿಲಾಫತ್‌ ಚಳುವಳಿಗೆ ಬೆಂಬಲ ನೀಡಿದ್ದು, ಅಹಿಂಸಾವಾದದ ಅತಿರೇಕ, ಗೋಹತ್ಯೆಯ ಕಡೆಗೆ ನಿರ್ಲಕ್ಷ್ಯ, ಮುಸಲ್ಮಾನರ ಓಲೈಕೆ ಮತ್ತು ಹಿಂದೂಗಳೊಂದಿಗೆ ನಡೆಸಿದ ತಾರತಮ್ಯದಿಂದಾಗಿ ಪ್ರತಿಯೊಬ್ಬ ಹಿಂದೂ ಮನಸ್ಸು ಅಳುತ್ತಿತ್ತು. ಇಂತಹ ಪರಿಸ್ಥಿತಿಯಲ್ಲಿ, ಡಾ. ಕೇಶವ ಹೆಡಗೇವಾರ್‌ ಅವರು ಚದುರಿದ ಹಿಂದೂಗಳನ್ನು ಸಂಘಟಿಸುವ ಗುರಿಯನ್ನು ಇರಿಸಿ, ವಿಜಯದಶಮಿಯ ಶುಭಮುಹೂರ್ತದಲ್ಲಿ ನಾಗಪುರದಲ್ಲಿ ‘ರಾಷ್ಟ್ರೀಯ ಸ್ವಯಂಸೇವಕ ಸಂಘ’ದ ಅಡಿಪಾಯ ಹಾಕಿದರು ಮತ್ತು ಹಿಂದೂಸಂಘಟನೆಯ ಕೊರತೆಯನ್ನು ತುಂಬಿದರು. ಆರಂಭದಲ್ಲಿ ಕೆಲವು ಯುವಕರನ್ನು ಒಟ್ಟುಗೂಡಿಸಿ ಸಾಮೂಹಿಕ ಪ್ರಾರ್ಥನೆ, ವ್ಯಾಯಾಮ, ಲಾಠಿಯ ಆಟಗಳು ಮತ್ತು ಏಕಾತ್ಮತೆಯ ಸಂಸ್ಕಾರಗಳ ಮೂಲಕ ಸಂಘದ ಕಾರ್ಯಕ್ಕೆ ಅಡಿಪಾಯ ಹಾಕಲಾಯಿತು. ಅದು ದೈಹಿಕ ಮತ್ತು ಮಾನಸಿಕ ಶಕ್ತಿಯನ್ನು ಹೆಚ್ಚಿಸುವ ರಾಷ್ಟ್ರಭಕ್ತಿಯ ತರಬೇತಿಯಂತಿತ್ತು ! ನಂತರ, ದ್ವಿತೀಯ ಸರಸಂಘಚಾಲಕ ಪೂ. ಗೋಳವಲ್ಕರ್‌ ಗುರೂಜಿ ಅವರ ಕಾಲದಲ್ಲಿ ಸಂಘದ ಕಾರ್ಯವು ಎಲ್ಲೆಡೆ ವಿಸ್ತರಿಸಿತು. ೧೯೪೭ ರಲ್ಲಿ ದೇಶವು ವಿಭಜನೆಯ ನೋವಿನ ಗಾಯಗಳೊಂದಿಗೆ ಸ್ವತಂತ್ರವಾಯಿತು; ಸಾವಿರಾರು ಹಿಂದೂ ಮಹಿಳೆಯರ ಮೇಲೆ ಅತ್ಯಾಚಾರಗಳಾದವು. ಸಾವಿರಾರು ಜನರ ಹತ್ಯೆಗಳಾದವು. ಇಂತಹ ಸಮಯದಲ್ಲಿ ಸ್ವಯಂಸೇವಕರು ಅಸಂಖ್ಯಾತ ಕುಟುಂಬಗಳಿಗೆ ಆಧಾರ ನೀಡಿದರು. ದೇಶ ಸ್ವತಂತ್ರವಾದ ನಂತರ ಸಂಘದ ಗೌರವ ಹೆಚ್ಚುವ ಬದಲು, ಅದರ ಉಪೇಕ್ಷೆಯೇ ಹೆಚ್ಚಾಯಿತು. ಗಾಂಧಿ ಹತ್ಯೆಯ ಪ್ರಕರಣದಲ್ಲಿ ಹಿಂದೂದ್ವೇಷಿ ಕಾಂಗ್ರೆಸ್‌ ಮೊದಲ ಬಾರಿಗೆ ನಿರ್ದೋಷಿ ಸಂಘದ ಮೇಲೆ ನಿಷೇಧ ಹೇರಿತು; ಆದರೆ ನಂತರ ಸಂಘದ ನಿರ್ದೋಷತ್ವವು ಸಾಬೀತಾಯಿತು. ಮುಂದೆ ಕಾಂಗ್ರೆಸ್‌ ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿಗೊಳಿಸಿದಾಗ, ಸಂಘದ ಮೇಲೆ ಎರಡನೇ ಬಾರಿಗೆ ನಿಷೇಧ ಹೇರಿತು ಮತ್ತು ಸಾವಿರಾರು ಸ್ವಯಂಸೇವಕರನ್ನು ಜೈಲಿನಲ್ಲಿ ಬಂಧಿಸಿತು; ಆದರೆ ಸ್ವಯಂಸೇವಕರ ಮನೋಸ್ಥೈರ್ಯವು ಎಂದಿಗೂ ಕುಗ್ಗಲಿಲ್ಲ, ಬದಲಿಗೆ ಅದು ಹೆಚ್ಚುತ್ತಲೇ ಹೋಯಿತು. ಮುಂದೆ ೧೯೯೦ ರ ದಶಕದಲ್ಲಿ ಅಯೋಧ್ಯೆಯ ಶ್ರೀರಾಮಜನ್ಮಭೂಮಿ ಆಂದೋಲನದಲ್ಲಿಯೂ ಸಂಘದ ಸ್ವಯಂಸೇವಕರು ಮುಂಚೂಣಿ ಯಲ್ಲಿದ್ದರು. ಈ ಆಂದೋಲನವು ಹಿಂದೂಗಳ ಸ್ವಾಭಿಮಾನವನ್ನು ಜಾಗೃತಗೊಳಿಸಿತು. ‘ರಾಮಲಲ್ಲಾ ಹಮ್‌ ಆಯೇಂಗೆ, ಮಂದಿರ್‌ ವಹೀಂ ಬನಾಯೇಂಗೆ’ ಎಂಬ ಘೋಷಣೆಯು ಹಿಂದೂಗಳಿಗೆ ಧ್ಯೇಯಮಂತ್ರವಾಯಿತು. ಸಾವಿರಾರು ಸ್ವಯಂಸೇವಕರ ತ್ಯಾಗ ಮತ್ತು ಬಲಿದಾನಗಳ ಆಧಾರದ ಮೇಲೆ ಇಂದು ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮಮಂದಿರ ನಿಂತಿದೆ ! ಈ ಕ್ಷಣವು ಸ್ವಯಂಸೇವಕರಿಗೆ ‘ಪ್ರಭೋ ಶಕ್ತಿ ಮನ್ಹಿನ್ದುರಾಷ್ಟ್ರಾಙ್ಗಭೂತಾ, ಇಮೇ ಸಾದರಂ ತ್ವಾಮ್‌ ನಮಾಮೋ ವಯಮ್‌ |’ (ಅರ್ಥ : ಹೇ ಶಕ್ತಿಶಾಲಿ ಪರಮೇಶ್ವರನೇ, ನಾವು ಹಿಂದೂ ರಾಷ್ಟ್ರದ ಸುಪುತ್ರರು ನಿನಗೆ ಪ್ರಣಾಮಗಳು), ಈ ಸಂಘ ಪ್ರಾರ್ಥನೆಯ ಸಾಲುಗಳ ಸಾಕ್ಷಾತ್ಕಾರವಾಗಿತ್ತು.

ಸಾಮಾಜಿಕ ಕಾರ್ಯಗಳಲ್ಲಿಯೂ ಮುಂಚೂಣಿ !

ನಂತರ, ಪೂ. ಗೋಳವಲ್ಕರ್‌ ಗುರೂಜಿ ಅವರು ಶಿಸ್ತು, ನಿಷ್ಠೆ, ದೇಶಪ್ರೇಮ ಮತ್ತು ಸಮಾಜಸೇವೆ ಎಂಬ ನಾಲ್ಕು ಸೂತ್ರಗಳ ಮೇಲೆ ಸಂಘವನ್ನು ನಿರ್ಮಿಸಿದರು. ಪ್ರತಿಯೊಂದು ಆಪತ್ತಿನಲ್ಲಿ, ಅದು ಭೂಜ್‌ ಮತ್ತು ಕಿಲ್ಲಾರಿಯ ಭೂಕಂಪವಿರಲಿ, ಉತ್ತರಾಖಂಡದ ಪ್ರವಾಹವಿರಲಿ, ತಮಿಳುನಾಡಿನ ಸುನಾಮಿಯಾಗಲಿ ಅಥವಾ ಕೊರೊನಾ ಸಾಂಕ್ರಾಮಿಕವಾಗಲಿ, ಸ್ವಯಂಸೇವಕರು ಯಾವುದೇ ಆಹ್ವಾನವಿಲ್ಲದೆ ಜನಸಾಮಾನ್ಯರ ಸಹಾಯಕ್ಕಾಗಿ ಧಾವಿಸಿದರು. ಎಲ್ಲಿಯೂ ಪ್ರಚಾರವಿಲ್ಲ. ಶಾಖೆಯ ಪ್ರಾರ್ಥನೆಯಲ್ಲಿನ ಶಬ್ದಗಳು ಸಂಕಷ್ಟದ ಸಮಯದಲ್ಲಿ ಸೇವಾಭಾವದ ರೂಪದಲ್ಲಿ ಬೇರೂರುತ್ತವೆ ಮತ್ತು ಲಕ್ಷಾಂತರ ಜನರಿಗೆ ಜೀವದಾನ ನೀಡುತ್ತವೆ ! ವೈಚಾರಿಕ ಮಟ್ಟದಲ್ಲಿಯೂ ಸಂಘ ಹಿಂದೆ ಇಲ್ಲ. ಸ್ವಯಂಸೇವಕರ ವೈಚಾರಿಕ ನಿಲುವನ್ನು ಗಟ್ಟಿಗೊಳಿಸುವ ಸಂಘದ ‘ಬೌದ್ಧಿಕ’ ಎಂಬ ಉಪಕ್ರಮವು ‘ವೈಚಾರಿಕ ಯೋಧರನ್ನೇ’ ಸೃಷ್ಟಿಸಿತು. ಸಾಮ್ಯವಾದಿಗಳ ವೈಚಾರಿಕ ಸವಾಲನ್ನು ಎದುರಿಸಲು ಸಂಘವು ವೈಚಾರಿಕ ಯುದ್ಧಭೂಮಿಯಲ್ಲಿಯೂ ತನ್ನನ್ನು ತಾನು ಸಾಬೀತುಪಡಿಸಿತು. ಪ್ರತಿವಾದ ಮತ್ತು ಬದ್ಧತೆ, ಇದು ಈ ಯೋಧರ ಬರಹ, ವಿಚಾರಗಳಲ್ಲಿನ ವೈಶಿಷ್ಟ್ಯವಾಗಿತ್ತು. ‘ಭಾರತೀಯ ವಿಚಾರ ಸಾಧನಾ’ ಎಂಬ ಸಂಘದ ಪ್ರಕಾಶನ ಸಂಸ್ಥೆಯಲ್ಲಿನ ವಿಪುಲ ಗ್ರಂಥಸಂಪತ್ತು ಇದಕ್ಕೆ ಸಾಕ್ಷಿಯಾಗಿದೆ. ಇಂದು ಸಂಘದ ಕಾರ್ಯವು ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ಜಗತ್ತಿನ ೪೦ ಕ್ಕೂ ಹೆಚ್ಚು ದೇಶಗಳಲ್ಲಿ ಸಂಘಶಾಖೆಗಳು ನಡೆಯುತ್ತವೆ. ಸಂಘವು ಸ್ಥಾಪಿಸಿದ ಅಸಂಖ್ಯಾತ ಸಂಸ್ಥೆಗಳಿಂದಾಗಿ ಅನೇಕ ಕ್ಷೇತ್ರಗಳಲ್ಲಿ ಪರಿವರ್ತನೆ ಉಂಟಾಗಿದೆ. ‘ವಿಶ್ವ ಹಿಂದೂ ಪರಿಷತ್’ ಮತ್ತು ‘ಬಜರಂಗ ದಳ’ ಹಿಂದೂವಿರೋಧಿ ಕೃತ್ಯಗಳಿಗೆ ಕಟುವಾದ ಪ್ರತ್ಯುತ್ತರ ನೀಡಿದವು. ‘ದುರ್ಗಾವಾಹಿನಿ’ ಮತ್ತು ‘ರಾಷ್ಟ್ರ ಸೇವಿಕಾ ಸಮಿತಿ’ ಮಹಿಳೆಯರ ಮೇಲಿನ ದೌರ್ಜನ್ಯಗಳಿಗೆ ಧ್ವನಿಯಾದವು. ‘ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್’ ಯುವಕರಲ್ಲಿ ಜಾಗೃತಿ ಮೂಡಿಸಿತು ಮತ್ತು ‘ಸಂಸ್ಕಾರ ಭಾರತಿ’ ಕಲೆಯ ಮೂಲಕ ರಾಷ್ಟ್ರಪ್ರೇಮವನ್ನು ಜಾಗೃತಗೊಳಿಸಿತು. ಈ ರೀತಿಯಾಗಿ, ಸಂಘವು ಒಂದು ‘ಪರಿವಾರ’ವನ್ನೇ ಸೃಷ್ಟಿಸಿತು.

ಈಗ ಗುರಿ… !

ಸಂಘವು ಸದಾ ‘ರಾಷ್ಟ್ರ ಪ್ರಥಮ’ ಎಂಬ ಘೋಷಣೆ ಮಾಡಿದೆ. ಪರಕೀಯ ಶಕ್ತಿಗಳು ಈಶಾನ್ಯರಾಜ್ಯಗಳನ್ನು ನುಂಗಿ ಹಾಕಲು ಸಾಧ್ಯವಾಗದಿರಲು ಹೆಚ್ಚಿನ ಶ್ರೇಯಸ್ಸು ಸಂಘಕ್ಕೆ ಸಲ್ಲುತ್ತದೆ. ಸ್ವಯಂಸೇವಕರು ತಮ್ಮ ಪ್ರಾಣದ ಹಂಗು ತೊರೆದು ಈ ರಾಜ್ಯಗಳು, ಹಾಗೆಯೇ ಬಂಗಾಲ ಮತ್ತು ಕೇರಳದಲ್ಲಿ ಭಾರತೀಯತೆಯ ನಂಟನ್ನು ಉಳಿಸಿದರು. ಅದಕ್ಕಾಗಿ ಅನೇಕ ಸ್ವಯಂಸೇವಕರು ತಮ್ಮ ಜೀವವನ್ನೂ ಕಳೆದುಕೊಳ್ಳಬೇಕಾಯಿತು. ಸಂಘವು ರಾಜಕಾರಣಕ್ಕೆ ಪ್ರವೇಶಿಸದಿದ್ದರೂ, ರಾಜಕಾರಣಕ್ಕೆ ದಿಕ್ಕು ತೋರುವ ಕೆಲಸವನ್ನು ಮಾಡಿದೆ. ಇದರಿಂದ ಇಂದು ದೇಶದ ಪ್ರಧಾನಿ ಹುದ್ದೆಯಲ್ಲಿ ಮತ್ತು ಅನೇಕ ರಾಜ್ಯಗಳ ಮುಖ್ಯಮಂತ್ರಿ ಹುದ್ದೆಗಳಲ್ಲಿ ಸಂಘದ ಗರಡಿಯಲ್ಲಿ ಸಿದ್ಧರಾದ ನಾಯಕತ್ವವಿದೆ. ಹೀಗಿದ್ದರೂ, ರಾಷ್ಟ್ರದ ಮುಂದೆ ಇನ್ನೂ ಅನೇಕ ಸವಾಲುಗಳು ಬಾಯಿ ತೆರೆದು ನಿಂತಿವೆ. ಸಾಮ್ಯವಾದಿ, ಧರ್ಮಾಂಧ ಇತ್ಯಾದಿ ಭಾರತವಿರೋಧಿ ಶಕ್ತಿಗಳು ದೇಶವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿವೆ; ಅವರ ಪ್ರಯತ್ನಗಳನ್ನು ವಿಫಲಗೊಳಿಸಿ ಭಾರತದ ಮೂಲ ಸಾಂಸ್ಕೃತಿಕ ಗುರುತು ಮತ್ತು ಆಧ್ಯಾತ್ಮಿಕ ಸಾರಕ್ಕೆ ಬಲ ನೀಡುವುದು ಅವಶ್ಯಕವಾಗಿದೆ. ಅಧ್ಯಾತ್ಮವು ಸನಾತನ ಸಂಸ್ಕೃತಿಯ ಅಡಿಪಾಯವಾಗಿದೆ. ಆದ್ದರಿಂದ, ಮುಂದಿನ ದಿನಗಳಲ್ಲಿ ದೇಶಭಕ್ತರ ಪಯಣವು ಸಾಂಸ್ಕೃತಿಕ ರಾಷ್ಟ್ರವಾದದಿಂದ ಆಧ್ಯಾತ್ಮಿಕ ರಾಷ್ಟ್ರ ನಿರ್ಮಾಣದ ಕಡೆಗೆ ನಡೆದರೆ, ಭಾರತವು ಸ್ವಯಂಪ್ರಕಾಶಿತ ಹಿಂದೂ ರಾಷ್ಟ್ರವಾಗುತ್ತದೆ ಮತ್ತು ಅದರ ತೇಜೋಮಯ ಪ್ರಕಾಶದಲ್ಲಿ ಇಡೀ ವಿಶ್ವವು ಮಾರ್ಗದರ್ಶನ ಪಡೆಯುತ್ತದೆ !