ವಾರಕರಿ ಪರಿಷತ್‌ನಿಂದ ರಾಷ್ಟ್ರಪತಿಯವರಿಗೆ ಮನವಿ ಮೂಲಕ ಬೇಡಿಕೆ ! – CJI Gavai Lord Vishnu Controversy

ಮುಖ್ಯ ನ್ಯಾಯಮೂರ್ತಿ ಭೂಷಣ ಗವಾಯಿ ಅವರ ವಿರುದ್ಧ ನ್ಯಾಯಾಂಗ ಕ್ರಮ ಕೈಗೊಳ್ಳಿ!

ಪುಣೆ – ಮುಖ್ಯ ನ್ಯಾಯಮೂರ್ತಿ ಭೂಷಣ ಗವಾಯಿ ಅವರು ಭಗವಾನ್ ಶ್ರೀವಿಷ್ಣು ಬಗ್ಗೆ ಮಾಡಿದ ಹೇಳಿಕೆಯಿಂದಾಗಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ನೋವಾಗಿದೆ ಎಂದು ಆರೋಪಿಸಿ, ರಾಷ್ಟ್ರೀಯ ವಾರಕರಿ ಪರಿಷತ್‌ನ ‘ವೈದಿಕ ಹಿಂದೂ ವಾರಕರಿ ಬಹು ಉದ್ದೇಶಿತ ಸೇವಾ ಸಂಘ, ಮಹಾರಾಷ್ಟ್ರ ರಾಜ್ಯ’ವು ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರಿಗೆ ಮನವಿಯನ್ನು ಸಲ್ಲಿಸಿದೆ. ಸಾಂವಿಧಾನಿಕ ಸ್ಥಾನದಲ್ಲಿರುವ ಯಾವುದೇ ವ್ಯಕ್ತಿಗೆ ಸಮಾಜ, ಜಾತಿ, ಧರ್ಮ ಅಥವಾ ದೇವರುಗಳ ಬಗ್ಗೆ ಅವಮಾನಕರ ಹೇಳಿಕೆ ನೀಡುವ ಹಕ್ಕಿಲ್ಲ. ಆದರೆ; ಭೂಷಣ ಗವಾಯಿ ಅವರು ಭಗವಾನ್ ಶ್ರೀವಿಷ್ಣು ಬಗ್ಗೆ ನೀಡಿರುವ ಹೇಳಿಕೆಯು ಹಿಂದೂಗಳ ಮತ್ತು ವಿಶೇಷವಾಗಿ ವಾರಕರಿ ಸಮಾಜದ ಭಾವನೆಗಳಿಗೆ ನೋವುಂಟು ಮಾಡುವಂತಿದೆ. ಹಿಂದೂಗಳ ಬಗ್ಗೆ ಅವರಿಗೆ ಇರುವ ದ್ವೇಷದ ಹಿನ್ನೆಲೆಯಲ್ಲಿ, ಅವರು ತಮ್ಮ ನ್ಯಾಯಾಂಗ ತೀರ್ಪುಗಳಲ್ಲಿಯೂ ಹಿಂದೂಗಳ ಮೇಲೆ ಅನ್ಯಾಯ ಮಾಡಿರಬಹುದು ಎಂಬ ದಟ್ಟವಾದ ಅನುಮಾನ ನಮಗಿದೆ. ಆದ್ದರಿಂದ ಅವರು ಇದುವರೆಗೆ ನೀಡಿದ ತೀರ್ಪುಗಳ ಬಗ್ಗೆಯೂ ಕೂಲಂಕಷವಾಗಿ ತನಿಖೆ ನಡೆಸಬೇಕು. ಅವರ ವಿರುದ್ಧ ಸೂಕ್ತ ನ್ಯಾಯಾಂಗ ಕ್ರಮ ಕೈಗೊಳ್ಳಬೇಕು ಮತ್ತು ಅವರನ್ನು ಅವರ ಸ್ಥಾನದಿಂದ ವಜಾ ಮಾಡಬೇಕು, ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಪಂಢರಪುರದ ಪಾಂಡುರಂಗ ಮತ್ತು ವಿಠ್ಠಲ ಅವರೇ ಶ್ರೀವಿಷ್ಣು ಎಂದು ಸಂತ ಪರಂಪರೆಯು ಹೇಳಿಕೊಟ್ಟಿರುವಾಗ, ಗವಾಯಿ ಅವರ ಹೇಳಿಕೆ ಅತ್ಯಂತ ಖಂಡನೀಯವಾಗಿದೆ. ಆದ್ದರಿಂದ ಭೂಷಣ ಗವಾಯಿ ಅವರು ತಕ್ಷಣವೇ ಬಹಿರಂಗವಾಗಿ ಕ್ಷಮೆಯಾಚಿಸಬೇಕು.

ಏನು ಈ ಪ್ರಕರಣ?

ಮಧ್ಯಪ್ರದೇಶದ ಖಜುರಾಹೋದಲ್ಲಿರುವ ಶ್ರೀ ವಾಮನ ದೇವಸ್ಥಾನದಲ್ಲಿ ಮೊಘಲರು ಕೆಡವಿದ 7 ಅಡಿ ಎತ್ತರದ ವಿಷ್ಣು ವಿಗ್ರಹವನ್ನು ಪುನಃ ಸ್ಥಾಪಿಸುವಂತೆ ಕೋರಿದ್ದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯ ತಿರಸ್ಕರಿಸಿತ್ತು. ನ್ಯಾಯಾಲಯವು, ಭಕ್ತರು ಪೂಜೆ ಮಾಡಬೇಕಿದ್ದರೆ, ಅವರು ಬೇರೆ ದೇವಸ್ಥಾನಕ್ಕೆ ಹೋಗಬಹುದು. ಹೋಗಿ, ದೇವರೇ ಏನಾದರೂ ಮಾಡಲು ಹೇಳಿ, ಎಂದು ಹೇಳಿದ್ದರು. ನೀವೇನಾದರೂ ಭಗವಾನ್ ವಿಷ್ಣುವಿನ ಪರಮ ಭಕ್ತರಾಗಿದ್ದರೆ, ದೇವರಲ್ಲಿ ಪ್ರಾರ್ಥಿಸಿ ಮತ್ತು ಧ್ಯಾನ ಮಾಡಿ ಎಂದು ಅರ್ಜಿದಾರರಾದ ರಾಕೇಶ ದಲಾಲ್ ಅವರಿಗೆ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮತ್ತು ನ್ಯಾಯಮೂರ್ತಿ ಕೆ. ವಿನೋದ ಚಂದ್ರನ್ ಅವರ ಪೀಠವು ಸಲಹೆ ನೀಡಿತ್ತು.