ಕಾಶಿಯಲ್ಲಿ ಆನ್‌ಲೈನ್‌ ಮೂಲಕ ಪಿಂಡದಾನ ವಿಧಿ ! – Kashi Pitru Paksha Online

ವಾರಣಾಸಿ (ಉತ್ತರ ಪ್ರದೇಶ) –ಪ್ರಸ್ತುತ ಶ್ರಾದ್ಧ ಪಕ್ಷ (ಪಿತೃಪಕ್ಷ) ನಡೆಯುತ್ತಿದೆ. ಅನೇಕರಿಗೆ ಕಾಶಿ ಅಥವಾ ಗಯಾಗೆ ಹೋಗಿ ಶ್ರಾದ್ಧ ಮಾಡಲು ಇಚ್ಛೆ ಇರುತ್ತದೆ; ಆದರೆ ಅದು ಸಾಧ್ಯವಾಗುವುದಿಲ್ಲ. ಇಂತಹವರಿಗಾಗಿ ಕಾಶಿಯಲ್ಲಿ ಪುರೋಹಿತರು ಆನ್‌ಲೈನ್ ಮೂಲಕ ಶ್ರಾದ್ಧ ಮಾಡಿಸುವ ವ್ಯವಸ್ಥೆ ಒದಗಿಸಿದ್ದಾರೆ. ಇದರ ಲಾಭವನ್ನು ವಿದೇಶದಲ್ಲಿರುವ ಹಿಂದೂಗಳೂ ಪಡೆದುಕೊಳ್ಳುತ್ತಿದ್ದಾರೆ. ಇಲ್ಲಿ ಕ್ಯಾಮರಾ ಜೋಡಿಸಲಾಗಿರುತ್ತದೆ ಮತ್ತು ಪುರೋಹಿತರು ಸಂಬಂಧಪಟ್ಟ ವ್ಯಕ್ತಿಗಳಿಗಾಗಿ ಶ್ರಾದ್ಧ ಮಾಡಿ, ಅದರ ಲೈವ್ ಪ್ರಸಾರ ಮಾಡುತ್ತಾರೆ. ಕೆಲವು ಪುರೋಹಿತರು ತಮ್ಮ ಮೊಬೈಲ್‌ನಲ್ಲಿ ವಿಡಿಯೋ ಮಾಡಿ ಅದನ್ನು ಸಂಬಂಧಪಟ್ಟವರಿಗೆ ಕಳುಹಿಸುತ್ತಿದ್ದಾರೆ. ಈ ಆನ್‌ಲೈನ್ ವಿಧಿಗಾಗಿ ಆ್ಯಪ್ ಮೂಲಕ ಬುಕಿಂಗ್ ಮಾಡಲಾಗುತ್ತದೆ ಮತ್ತು ಕ್ಯೂಆರ್ ಕೋಡ್ ಮೂಲಕ ಹಣ ಕಳುಹಿಸಲಾಗುತ್ತದೆ.

ಈ ಕುರಿತು ಆಚಾರ್ಯ ಮೋಹಿತ್ ಉಪಾಧ್ಯಾಯ ಅವರನ್ನು ವಿಚಾರಿಸಿದಾಗ ಅವರು, “ಪೂಜೆ ಮಾಡಿಸಿಕೊಳ್ಳುವವರು ವಿದೇಶದಲ್ಲಿ ಕುಳಿತು ನೇರವಾಗಿ ವಿಧಿಗಳನ್ನು ನೋಡುತ್ತಿದ್ದಾರೆ. ಆಸ್ಟ್ರೇಲಿಯಾ, ಯುಕೆ, ಅಥವಾ ಅಮೆರಿಕಾದಲ್ಲಿ ಅನೇಕ ಭಾರತೀಯರು ಇದ್ದಾರೆ. ಅವರು ಅಲ್ಲಿ ನೆಲೆಸಿದ್ದಾರೆ; ಆದರೆ ಅವರಿಗೆ ಕಾಶಿಯಲ್ಲಿ ತಮ್ಮ ಪೂರ್ವಜರಿಗಾಗಿ ಪಿಂಡದಾನ ಮಾಡಿಸಬೇಕಿದೆ. ಅವರಿಗೆ ಇಲ್ಲಿಗೆ ಬರಲು ತೊಂದರೆ ಆಗುತ್ತದೆ. ಅನೇಕ ಜನರು ಆರೋಗ್ಯ ಸಮಸ್ಯೆಗಳಿಂದ ಬರಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಅವರು ನಮ್ಮನ್ನು ಸಂಪರ್ಕಿಸುತ್ತಾರೆ. ನಾವು ಯಾರಿಗೆ ಪಿಂಡದಾನ ಮಾಡಬೇಕಿದೆಯೋ ಅವರ ಗೋತ್ರ, ವಂಶ, ಹೆಸರು ಮತ್ತು ವಿಳಾಸವನ್ನು ಕೇಳುತ್ತೇವೆ. ಮೊಬೈಲ್‌ನಲ್ಲಿಯೇ ಸಂಕಲ್ಪ ಮಾಡಲಾಗುತ್ತದೆ, ನಂತರ ಪೂಜೆ ಪ್ರಾರಂಭವಾಗುತ್ತದೆ. ನಾವು ಒಂದೇ ಸಮಯದಲ್ಲಿ 5-6 ಜನರಿಗಾಗಿ ಪೂಜೆ ಮಾಡಬಹುದು” ಎಂದು ಹೇಳಿದರು.

ಪಂಡಿತ್ ಯೋಗಿ ಅಲೋಕ್ ಅವರು, “ವಿದೇಶದಿಂದ ಜನರು ಸದಾ ಕಾಶಿಗೆ ಬರುತ್ತಿದ್ದಾರೆ; ಆದರೆ ಈಗ ಜನಸಂದಣಿ ಹೆಚ್ಚಾಗಿ ವಿದೇಶದಿಂದ ಬರುವ ಭಕ್ತರಿಗೆ ತೊಂದರೆ ಆಗುತ್ತಿದೆ. ಆದ್ದರಿಂದ ಜನರು ಪಿಂಡದಾನವನ್ನು ಆನ್‌ಲೈನ್ ಮೂಲಕ ಮಾಡಿಸಿಕೊಳ್ಳಲು ಪ್ರಾರಂಭಿಸಿದ್ದಾರೆ” ಎಂದು ತಿಳಿಸಿದರು.