‘ಅಲ್ಲಾಹ್ ನಿಮ್ಮನ್ನು (ಮಹಿಳೆಯರನ್ನು) ಮಸೀದಿಗೆ ಕರೆಯದಿದ್ದಾಗ, ನಮ್ಮ ದೇವರು ನಿಮ್ಮನ್ನು ಹೇಗೆ ಕರೆಯುತ್ತಾರೆ?’ – ಮಾಜಿ ಸಂಸದ ಪ್ರತಾಪ ಸಿಂಹ

ಬಾನು ಮುಷ್ತಾಕ್ ಪ್ರಕರಣ; ಭಾಜಪ ಮಾಜಿ ಸಂಸದ ಪ್ರತಾಪ ಸಿಂಹ ಅವರ ಪ್ರಶ್ನೆ

ಮೈಸೂರು – “ಮುಸ್ಲಿಂ ಆಗಿರುವುದರಿಂದ ಬಾನು ಮುಷ್ತಾಕ್ ಅವರಿಗೆ ಮೈಸೂರು ದಸರಾ ಉದ್ಘಾಟನೆಗೆ ವಿರೋಧ ವ್ಯಕ್ತಪಡಿಸುತ್ತಿಲ್ಲ. ಮುಸ್ಲಿಮರು ಟಿಪ್ಪು ಜಯಂತಿ ಆಚರಿಸಲು ಬೇಡಿಕೆ ಇಟ್ಟಿರಲಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಮುಸ್ಲಿಮರ ಓಲೈಕೆಗಾಗಿ ಅದನ್ನು ಆರಂಭಿಸಿದರು. ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟನೆಗೆ ಕರೆಯುವಂತೆ ಯಾವುದೇ ಮುಸ್ಲಿಮರು ಬೇಡಿಕೆ ಮಾಡಿಲ್ಲ. ಆದರೂ ಸಿದ್ದರಾಮಯ್ಯ ಅವರನ್ನು ಕರೆದರು. ನೀವು ನಂಬುವ ಅಲ್ಲಾಹ್ ನಿಮ್ಮನ್ನು ಮಸೀದಿಗೆ ಕರೆಯುವುದಿಲ್ಲ. ಹಾಗಾದರೆ ನಮ್ಮ ದೇವರು ನಿಮ್ಮನ್ನು ದೇವಸ್ಥಾನಗಳಿಗೆ ಹೇಗೆ ಕರೆಯುತ್ತಾರೆ?” ಎಂದು ಭಾಜಪ ಮಾಜಿ ಸಂಸದ ಶ್ರೀ. ಪ್ರತಾಪ ಸಿಂಹ ಅವರು ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಆಕ್ರೋಶ ವ್ಯಕ್ತಪಡಿಸಿದರು. ಬಾನು ಮುಷ್ತಾಕ್ ಅವರು ಚಾಮುಂಡೇಶ್ವರಿ ದೇವಿಯೇ ತಮ್ಮನ್ನು ದಸರಾ ಉತ್ಸವಕ್ಕೆ ಕರೆದಿದ್ದಾಳೆ ಎಂದು ಹೇಳಿದ್ದರು. ಇದಕ್ಕೆ ಪ್ರತಾಪ ಸಿಂಹ ಅವರು ಈ ಮೇಲಿನ ಪ್ರತಿಕ್ರಿಯೆ ನೀಡಿದರು.

ಪ್ರತಾಪ ಸಿಂಹ ಅವರು ತಮ್ಮ ಮಾತು ಮುಂದುವರಿಸಿ ..

1. ಬಾನು ಮುಷ್ತಾಕ್ ಅವರು ಕನ್ನಡ ಕಲಿಯಲು ಶ್ರೀ ಭುವನೇಶ್ವರೀ ದೇವಿಯ ಮೂರ್ತಿ ಅಡ್ಡಿಯಾಗಿದೆ ಎಂದು ಹೇಳಿದ್ದರು. ಶ್ರೀ ಭುವನೇಶ್ವರೀ ದೇವಿಯನ್ನೇ ಒಪ್ಪಿಕೊಳ್ಳದ ಬಾನು ಮುಷ್ತಾಕ್ ಅವರಿಗೆ ಶ್ರೀ ನಾಡದೇವಿ (ಕರ್ನಾಟಕದ ಕುಲಸ್ವಾಮಿನಿ) ರೂಪದಲ್ಲಿರುವ ಶ್ರೀ ಚಾಮುಂಡೀದೇವಿಯ ಬಗ್ಗೆ ನಂಬಿಕೆ ಇದೆಯೇ?

2. ಬಾನು ಮುಷ್ತಾಕ್ ಅವರಿಗೆ ಅರಿಶಿನ-ಕುಂಕುಮದ ಬಗ್ಗೆ ಇಷ್ಟೊಂದು ತೊಂದರೆ ಮತ್ತು ಸಮಸ್ಯೆ ಏಕೆ? ಹಿಂದೂಗಳ ಮನೆಗೆ ಯಾವುದೇ ಮುತ್ತೈದೆ ಹೋದರೆ ಅವರಿಗೆ ಕುಂಕುಮ ಇಡುತ್ತಾರೆ. ದೇವಸ್ಥಾನದಲ್ಲಿ ಪ್ರಸಾದದ ರೂಪದಲ್ಲಿ ಕುಂಕುಮ ಕೊಡುತ್ತಾರೆ. ಅಂತಹ ಕುಂಕುಮ ಬಾನು ಮುಷ್ತಾಕ್ ಅವರಿಗೆ ತೊಂದರೆ ಎನಿಸುತ್ತದೆ. ಅವರ ಮನಸ್ಸಿನಲ್ಲಿ ಅರಿಶಿನ-ಕುಂಕುಮದ ಬಗ್ಗೆ ದ್ವೇಷವಿದೆ.

3. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರ ‘ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿಯಲ್ಲ’ ಎಂಬ ಹೇಳಿಕೆಯ ಬಗ್ಗೆ ಸಿಂಹ ಅವರು ಪ್ರತಿಕ್ರಿಯಿಸಿ, ಶಿವನ ‘ಕಾಪಾಲಿ ಬೆಟ್ಟ’ವನ್ನು ‘ಯೇಸು ಬೆಟ್ಟ’ ಮಾಡಲು ಪ್ರಯತ್ನಿಸುವ ಡಿ.ಕೆ. ಶಿವಕುಮಾರ ಅವರಿಂದ ನಮಗೆ ಧರ್ಮದ ಜ್ಞಾನ ಬೇಡ. ಪರಧರ್ಮೀಯರ ಓಲೈಕೆಗಾಗಿ ‘ಬ್ರದರ್ಸ್’ ಎಂದು ಹೇಳುವ ಶಿವಕುಮಾರ ಅವರು ನಮಗೆ ಧರ್ಮದ ಬಗ್ಗೆ ಉಪದೇಶ ಮಾಡಬಾರದು ಎಂದು ಹೇಳಿದರು.