ಅಮೇರಿಕಾದ ಮೇಲೆ ಹೆಚ್ಚುವರಿ ಶೇ.50% ರಷ್ಟು ಆಮದು ತೆರಿಗೆ ವಿಧಿಸಿ! – Chamber of Trade and Industry

  • ‘ಚೇಂಬರ್ ಆಫ್ ಟ್ರೇಡ್ ಆ್ಯಂಡ್ ಇಂಡಸ್ಟ್ರಿ’ ಯಿಂದ ಕೇಂದ್ರ ಸರಕಾರಕ್ಕೆ ಮನವಿ

  • ಜರ್ಮನಿ, ಬ್ರಿಟನ್, ಸಿಂಗಾಪುರ ಮಾರುಕಟ್ಟೆಗಳನ್ನು ಒದಗಿಸುವಂತೆ ಬೇಡಿಕೆ.

  • ಅಮೇರಿಕಾದ ಹೆಚ್ಚುವರಿ ತೆರಿಗೆಯಿಂದ 10-20 ಲಕ್ಷ ಜನರ ಉದ್ಯೋಗ ಕಳೆದುಕೊಳ್ಳುವ ಭೀತಿ.

ನವದೆಹಲಿ – ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದ ಮೇಲೆ ಒಟ್ಟು ಶೇ.50% ರಷ್ಟು ಆಮದು ತೆರಿಗೆಯನ್ನು ಘೋಷಿಸಿದ್ದು, ಅದರ ಅನುಷ್ಠಾನವು ಆಗಸ್ಟ್ 27 ರಿಂದ ಜಾರಿಯಲ್ಲಿ ಬಂದಿದೆ. ಇದರಿಂದ ಭಾರತದಲ್ಲಿ ಸುಮಾರು 10-20 ಲಕ್ಷ ಜನರು ತಮ್ಮ ಉದ್ಯೋಗವನ್ನು ಕಳೆದುಕೊಳ್ಳುವ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ದೇಶದ ವ್ಯಾಪಾರಿಗಳು ಮತ್ತು ಉದ್ಯಮಿಗಳ ಉನ್ನತ ಮಂಡಳಿಯಾದ ‘ಚೇಂಬರ್ ಆಫ್ ಟ್ರೇಡ್ ಆ್ಯಂಡ್ ಇಂಡಸ್ಟ್ರಿ’ಯು ಕೇಂದ್ರ ಸರಕಾರಕ್ಕೆ ಕೆಲವು ಬೇಡಿಕೆಗಳನ್ನು ಇಟ್ಟಿದೆ. ಭಾರತವು ಇದಕ್ಕೆ ಪ್ರತಿಯಾಗಿ ಅಮೇರಿಕಾದ ಮೇಲೆ ಹೆಚ್ಚುವರಿ ಶೇ.50% ರಷ್ಟು ತೆರಿಗೆ ವಿಧಿಸಬೇಕೆಂದು ಮಂಡಳಿಯು ಒತ್ತಾಯಿಸಿದೆ. ಅಲ್ಲದೆ, ಜರ್ಮನಿ, ಬ್ರಿಟನ್, ಸಿಂಗಾಪುರ್, ಮಲೇಷಿಯಾದಂತಹ ದೇಶಗಳಲ್ಲಿ ಭಾರತೀಯ ವಸ್ತುಗಳಿಗೆ ಉತ್ತಮ ಬೇಡಿಕೆಯಿದೆ. ಈ ದೇಶಗಳ ರಾಯಭಾರ ಕಚೇರಿಗಳೊಂದಿಗೆ ಮಾತುಕತೆ ನಡೆಸಿ ಭಾರತೀಯ ಸರಕುಗಳಿಗೆ ಮಾರುಕಟ್ಟೆ ಒದಗಿಸುವಂತೆ ಮಂಡಳಿಯು ಕೋರಿದೆ.

ಆಮದು ತೆರಿಗೆ ಮತ್ತು ಉದ್ಯೋಗಗಳಿಗೆ ಏನು ಸಂಬಂಧ?

ಅಮೇರಿಕಾದ ಶೇ.50% ರಷ್ಟು ಆಮದು ತೆರಿಗೆಯಿಂದ ಸಹಜವಾಗಿಯೇ ಭಾರತದ ವಸ್ತುಗಳು ಅಮೇರಿಕಾದಲ್ಲಿ ದುಬಾರಿಯಾಗುತ್ತವೆ. ಇದರಿಂದ ಅಮೇರಿಕಾದ ನಾಗರಿಕರು ಭಾರತೀಯ ವಸ್ತುಗಳಿಂದ ವಿಮುಖರಾಗುತ್ತಾರೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಬೇಡಿಕೆ ಕಡಿಮೆಯಾಗುವುದರಿಂದ ಉತ್ಪಾದನೆಯ ಅವಶ್ಯಕತೆಯೂ ಕಡಿಮೆಯಾಗುತ್ತದೆ. ವ್ಯಾಪಾರದಲ್ಲಿ ಇಳಿಮುಖವಾಗುತ್ತದೆ. ಇದರಿಂದ ಅಮೇರಿಕಾಕ್ಕೆ ರಫ್ತು ಮಾಡುವ ವಸ್ತುಗಳಿಗೆ ಸಂಬಂಧಿಸಿದ ಉದ್ಯೋಗಗಳು ಕಡಿಮೆಯಾಗುತ್ತವೆ. ಇದು ಮೀನುಗಾರಿಕೆ, ಜವಳಿ, ಪೀಠೋಪಕರಣ, ರತ್ನಗಳು-ಆಭರಣಗಳು, ಚರ್ಮದ ವ್ಯಾಪಾರದಂತಹ ವಿವಿಧ ಉದ್ಯಮಗಳ ಮೇಲೆ ಪರಿಣಾಮ ಬೀರುತ್ತವೆ.