ಭಾಗ್ಯನಗರ (ತೆಲಂಗಾಣ)ದಲ್ಲಿ ಸಾರ್ವಜನಿಕ ಗಣೇಶೋತ್ಸವದಲ್ಲಿ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರ ವೇಷದಲ್ಲಿ ಶ್ರೀ ಗಣೇಶ ಮೂರ್ತಿ !

  • ಮೂರ್ತಿಗೆ ಜೀನ್ಸ್, ಟೀ-ಶರ್ಟ್, ಬೂಟು ಮತ್ತು ಕುತ್ತಿಗೆಗೆ ಹಸಿರು ಶಾಲು ಹಾಕಲಾಗಿದೆ

  • ಹಿಂದೂಗಳಿಂದ ತೀವ್ರ ವಿರೋಧ ವ್ಯಕ್ತ

(ಈ ಛಾಯಾಚಿತ್ರ ಯಾರಿಗಾದರೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶದಿಂದ ಪ್ರಕಟಿಸಿಲ್ಲ, ಬದಲಾಗಿ ವಾಸ್ತವಿಕ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ನೀಡಲಾಗಿದೆ.)

ಮುಖ್ಯಮಂತ್ರಿ ರೇವಂತ ರೆಡ್ಡಿ ಇವರ ವೇಷದಲ್ಲಿರುವ ಶ್ರೀ ಗಣೇಶನ ಮೂರ್ತಿ

ಭಾಗ್ಯನಗರ (ತೆಲಂಗಾಣ) – ಇಲ್ಲಿನ ಹಬೀಬ್‌ನಗರದಲ್ಲಿ ನಡೆಯುತ್ತಿರುವ ಸಾರ್ವಜನಿಕ ಗಣೇಶೋತ್ಸವದ ಪೆಂಡಾಲ್‌ನಲ್ಲಿ, ಶ್ರೀ ಗಣೇಶನ ಮೂರ್ತಿಯನ್ನು ರಾಜ್ಯದ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರ ವೇಷದಲ್ಲಿ ಸ್ಥಾಪಿಸಲಾಗಿದೆ. ಮೂರ್ತಿಗೆ ಜೀನ್ಸ್, ಟೀ-ಶರ್ಟ್, ಬೂಟುಗಳು ಮತ್ತು ಕುತ್ತಿಗೆಗೆ ಹಸಿರು ಶಾಲು ಹಾಕಲಾಗಿದೆ. ಈ ಉಡುಗೆಯು ರೇವಂತ್ ರೆಡ್ಡಿ ಅವರ ಹಳೆಯ ಪಾದಯಾತ್ರೆಯೊಂದರ ಫೋಟೋದಿಂದ ಪ್ರೇರಿತವಾಗಿದೆ. ಈ ಮೂರ್ತಿಯನ್ನು ತೆಲಂಗಾಣ ಮೀನುಗಾರರ ಸಹಕಾರಿ ಮಹಾ ಸಂಘದ ಅಧ್ಯಕ್ಷ ಮತ್ತು ಕಾಂಗ್ರೆಸ್ ನಾಯಕ ಮೆಟ್ಟು ಸಾಯಿಕುಮಾರ್ ಅವರು ಪ್ರತಿಷ್ಠಾಪಿಸಿದ್ದಾರೆ. ಸ್ಥಳೀಯ ನಾಗರಿಕರು ಮತ್ತು ಗೋಶಾಮಹಲ್‌ನ ಪ್ರಖರ ಹಿಂದುತ್ವನಿಷ್ಠ ಶಾಸಕ ಟಿ. ರಾಜಾ ಸಿಂಗ್ ಅವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

ಶ್ರೀ ಗಣೇಶನ ಈ ಮೂರ್ತಿಯನ್ನು ‘ತೆಲಂಗಾಣ ರೈಸಿಂಗ್’ ಎಂಬ ಪರಿಕಲ್ಪನೆಯ ಮೇಲೆ ಆಧರಿಸಿ ನಿರ್ಮಿಸಲಾಗಿದೆ. ಮೆಟ್ಟು ಸಾಯಿಕುಮಾರ್ ಅವರು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿ, ಕಳೆದ ಕೆಲವು ವರ್ಷಗಳಲ್ಲಿ ಚಲನಚಿತ್ರಗಳ ಪರಿಕಲ್ಪನೆಯ ಆಧಾರದ ಮೇಲೆ ಮೂರ್ತಿಗಳನ್ನು ಮಾಡಲಾಗಿತ್ತು; ಆದರೆ ಈ ಬಾರಿ ತೆಲಂಗಾಣದ ಅಭಿವೃದ್ಧಿ ಮತ್ತು ಮುಖ್ಯಮಂತ್ರಿಗಳ ಸ್ಫೂರ್ತಿಯನ್ನು ಪ್ರದರ್ಶಿಸಲು ಈ ದೃಶ್ಯವನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.

ಟಿ. ರಾಜಾ ಸಿಂಗ್ ಅವರ ವಿರೋಧ

ಶಾಸಕ ಟಿ. ರಾಜಾ ಸಿಂಗ್ ಅವರು, “ಈ ಮೂರ್ತಿಯಿಂದ ಹಿಂದೂಗಳ ಶ್ರದ್ಧೆಗೆ ಧಕ್ಕೆ ಉಂಟಾಗಿದೆ” ಎಂದು ಹೇಳಿದ್ದಾರೆ. ಅವರು ಭಾಗ್ಯನಗರ ಪೊಲೀಸ್ ಆಯುಕ್ತರಿಗೆ ಪತ್ರ ಬರೆದು ದೂರು ಸಲ್ಲಿಸಿದ್ದಾರೆ ಅದರಲ್ಲಿ “ಮುಖ್ಯಮಂತ್ರಿಗಳ ಬಗ್ಗೆ ನಮಗೆ ಗೌರವವಿದೆ; ಆದರೆ ಅವರು ನಮಗೆ ದೇವರು ಅಲ್ಲ. ಇಂತಹ ಪ್ರದರ್ಶನಗಳು ಹಿಂದೂ ಸಮುದಾಯದ ಭಾವನೆಗಳಿಗೆ ನೋವುಂಟು ಮಾಡುತ್ತವೆ. ಪೊಲೀಸರು ಕೂಡಲೇ ಕ್ರಮ ಕೈಗೊಂಡು ಈ ಪೆಂಡಾಲ್ ತೆಗೆದುಹಾಕಿ ಮತ್ತು ಧಾರ್ಮಿಕ ಸೌಹಾರ್ದತೆಯನ್ನು ಕಾಪಾಡಬೇಕು” ಎಂದು ಒತ್ತಾಯಿಸಿದ್ದಾರೆ.

ಸ್ಥಳೀಯರ ಆಕ್ರೋಶ

ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ಹರಡಿದ ನಂತರ, ಸ್ಥಳೀಯ ನಾಗರಿಕರು ಮತ್ತು ಭಕ್ತರು ಇದನ್ನು ಧಾರ್ಮಿಕ ಅವಮಾನ ಎಂದು ಪರಿಗಣಿಸಿದ್ದಾರೆ. ಒಬ್ಬ ಸ್ಥಳೀಯ ನಿವಾಸಿ, “ಗಣೇಶೋತ್ಸವವು ಒಂದು ಪವಿತ್ರ ಹಬ್ಬವಾಗಿದೆ. ದೇವತೆಯನ್ನು ಈ ರೀತಿ ಚಿತ್ರಿಸುವುದು ತಪ್ಪು ಮತ್ತು ಇದು ಸಂಪ್ರದಾಯಗಳನ್ನು ಅಪಹಾಸ್ಯ ಮಾಡಿದಂತಿದೆ” ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಹಿಂದೂಗಳಿಗೆ ಧರ್ಮಶಿಕ್ಷಣದ ಕೊರತೆಯಿಂದಾಗಿ, ಅವರು ದೇವತೆಗಳನ್ನು ಈ ರೀತಿ ಮಾನವ ರೂಪದಲ್ಲಿ ಚಿತ್ರಿಸಿ ಅವಮಾನ ಮಾಡುತ್ತಾರೆ! ಇತರ ಧರ್ಮದವರು ತಮ್ಮ ಶ್ರದ್ಧಾ ಕೇಂದ್ರಗಳನ್ನು ಎಂದಿಗೂ ಹೀಗೆ ಅಪಮಾನಿಸುವುದಿಲ್ಲ; ಆದರೆ ಹಿಂದೂಗಳು ಇದನ್ನು ನಿರಂತರವಾಗಿ ಮಾಡುತ್ತಿದ್ದಾರೆ. ಇಂತಹ ವಿಷಯಗಳನ್ನು ತಡೆಯಲು ಹಿಂದೂಗಳಿಗೆ ಧರ್ಮಶಿಕ್ಷಣ ನೀಡುವುದು ಅನಿವಾರ್ಯವಾಗಿದೆ!