ಬೀದಿ ನಾಯಿಗಳ ಸಂತಾನಶಕ್ತಿ ಹರಣದ ನಂತರವೇ ಅವುಗಳನ್ನು ಆಶ್ರಯತಾಣಗಳಿಂದ ಬಿಡುಗಡೆ – Stray Dogs Menace Supreme Court Modifies Order

  • ಸರ್ವೋಚ್ಚ ನ್ಯಾಯಾಲಯದ ಪರಿಷ್ಕೃತ ತೀರ್ಪು

  • ಆಕ್ರಮಣಕಾರಿ ನಾಯಿಗಳನ್ನು ಬಿಡುವುದಿಲ್ಲ!

  • ಕಾರ್ಯಾಚರಣೆಯಲ್ಲಿ ಹಸ್ತಕ್ಷೇಪ ಮಾಡುವವರ ವಿರುದ್ಧ ಕ್ರಮ

ನವದೆಹಲಿ – ಸರ್ವೋಚ್ಚ ನ್ಯಾಯಾಲಯವು ಬೀದಿ ನಾಯಿಗಳ ಸಮಸ್ಯೆ ಕುರಿತಾದ ಪ್ರಕರಣಕ್ಕೆ  ಸಂಬಂಧಿಸಿದಂತೆ ಪರಿಷ್ಕೃತ ತೀರ್ಪುನೀಡಿದೆ. ಇದರಲ್ಲಿ ನ್ಯಾಯಾಲಯವು ಆಗಸ್ಟ್ 11ರ ತನ್ನ ಆದೇಶದಲ್ಲಿ ಬದಲಾವಣೆ ಮಾಡಿದೆ. ನ್ಯಾಯಾಲಯವು ಬೀದಿ ನಾಯಿಗಳನ್ನು ಹಿಡಿದು, ಅವುಗಳಿಗೆ ಲಸಿಕೆ, ಸಂತಾನಶಕ್ತಿ ಹರಣ (ನಸಬಂದಿ) ಮತ್ತು ರೋಗನಿರೋಧಕ ಔಷಧಿ ನೀಡಿದ ನಂತರವೇ ಅವುಗಳನ್ನು ಆಶ್ರಯತಾಣಗಳಿಂದ ಅವುಗಳ ಮೂಲ ಸ್ಥಳಕ್ಕೆ ಮರಳಿ ಬಿಡಬೇಕು ಎಂದು ಆದೇಶ ನೀಡಿದೆ. ಸಂತಾನಶಕ್ತಿ ಹರಣವಾಗುವವರೆಗೂ ಅವುಗಳನ್ನು ಬಿಡಲಾಗುವುದಿಲ್ಲ. ಹಾಗೆಯೇ, ಆಕ್ರಮಣಕಾರಿ ಮತ್ತು ಕಚ್ಚುವ ನಾಯಿಗಳು ಹಾಗೂ ರೇಬೀಸ್ ರೋಗದಿಂದ ಬಳಲುತ್ತಿರುವ ನಾಯಿಗಳನ್ನು ಬಿಡಬಾರದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಈ ನಿರ್ಧಾರವು ದೆಹಲಿ-ಎನ್‌.ಸಿ.ಆರ್‌.ಗೆ (ರಾಷ್ಟ್ರೀಯ ರಾಜಧಾನಿ ಪ್ರದೇಶ) ಮಾತ್ರವಲ್ಲದೆ, ಇಡೀ ದೇಶಕ್ಕೆ ಅನ್ವಯವಾಗುತ್ತದೆ ಎಂದು ನ್ಯಾಯಾಲಯ ತಿಳಿಸಿದೆ. ಅಲ್ಲದೆ, ಈ ಕ್ರಮಗಳಲ್ಲಿ ಹಸ್ತಕ್ಷೇಪ ಮಾಡಲು ಯತ್ನಿಸುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆದೇಶಿಸಿದೆ.

ಆಗಸ್ಟ್ 11 ರಂದು ನಡೆದ ವಿಚಾರಣೆಯಲ್ಲಿ ನಾಯಿ ಕಡಿತ ಮತ್ತು ರೇಬೀಸ್ ಘಟನೆಗಳು ಹೆಚ್ಚಿದ ಕಾರಣ ಸರ್ವೋಚ್ಚ ನ್ಯಾಯಾಲಯವು ದೆಹಲಿ-ಎನ್‌.ಸಿ.ಆರ್‌.ನ ವಸತಿ ಪ್ರದೇಶಗಳಿಂದ ಎಲ್ಲಾ ಬೀದಿ ನಾಯಿಗಳನ್ನು ತೆಗೆದುಹಾಕಿ, 8 ವಾರಗಳಲ್ಲಿ ಆಶ್ರಯತಾಣಗಳಿಗೆ ಕಳುಹಿಸುವಂತೆ ಆದೇಶಿಸಿತ್ತು.

ಸಾರ್ವಜನಿಕ ಸ್ಥಳಗಳಲ್ಲಿ ಆಹಾರ ನೀಡುವುದಕ್ಕೆ ನಿಷೇಧಿಸಿ, ಪ್ರತ್ಯೇಕ ಸ್ಥಳ ನಿರ್ಧರಿಸಲು ಆದೇಶ

ಬೀದಿ ನಾಯಿಗಳಿಗೆ ಸಾರ್ವಜನಿಕ ಸ್ಥಳಗಳಲ್ಲಿ ಆಹಾರ ನೀಡಲು ಅನುಮತಿ ಇರುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಇದಕ್ಕಾಗಿ ಪ್ರತ್ಯೇಕ ಸ್ಥಳಗಳನ್ನು ಸಿದ್ಧಪಡಿಸಲಾಗುವುದು. ರಸ್ತೆಗಳಲ್ಲಿ ಆಹಾರ ನೀಡುವ ಅನೇಕ ಘಟನೆಗಳು ನಡೆದಿರುವ ಕಾರಣ, ಇನ್ನು ಮುಂದೆ ಇದಕ್ಕೆ ನಿಷೇಧವಿರುತ್ತದೆ.
ಪ್ರಾಣಿಪ್ರೇಮಿಗಳು ಮತ್ತು ಸ್ವಯಂಸೇವಾ ಸಂಸ್ಥೆಗಳ ಮೇಲಿನ ನಿರ್ಬಂಧಗಳು ಹಾಗೆಯೇ ಮುಂದುವರಿಕೆ

ನ್ಯಾಯಾಲಯವು ಈ ಹಿಂದೆ ನೀಡಿದ ಸೂಚನೆಗಳ ಪ್ರಕಾರ, ಪ್ರಾಣಿ ಹಕ್ಕುಗಳ ಕಾರ್ಯಕರ್ತರು ನಗರಸಭೆಗಳ ಕೆಲಸಗಳಿಗೆ ಅಡ್ಡಿಪಡಿಸಬಾರದು ಎಂಬ ನಿರ್ಬಂಧವನ್ನು ಮುಂದುವರೆಸಿದೆ. ಅಲ್ಲದೆ, ಈ ಪ್ರಕರಣದಲ್ಲಿ ಹಸ್ತಕ್ಷೇಪ ಮಾಡಲು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿರುವ ಪ್ರಾಣಿಪ್ರೇಮಿಗಳು ಮತ್ತು ಸ್ವಯಂಸೇವಾ ಸಂಸ್ಥೆಗಳು ಕ್ರಮವಾಗಿ 25 ಸಾವಿರ ರೂ. ಮತ್ತು 2 ಲಕ್ಷ ರೂ.ಗಳನ್ನು ನ್ಯಾಯಾಲಯಕ್ಕೆ ಜಮಾ ಮಾಡುವುದು ಕಡ್ಡಾಯವಾಗಿದೆ. ಈ ಹಣವನ್ನು 7 ದಿನಗಳೊಳಗೆ ಜಮಾ ಮಾಡದಿದ್ದರೆ, ಮುಂದಿನ ವಿಚಾರಣೆಯಲ್ಲಿ ಹಾಜರಾಗಲು ಅವರಿಗೆ ಅನುಮತಿ ದೊರೆಯುವುದಿಲ್ಲ.

ರಾಷ್ಟ್ರೀಯ ನೀತಿ ರೂಪಿಸಲಾಗುವುದು!

ಈ ಹಿಂದೆ ಈ ಪ್ರಕರಣ ಕೇವಲ ದೆಹಲಿ-ಎನ್‌‌.ಸಿ.ಆರ್‌. ಗೆ ಸೀಮಿತವಾಗಿತ್ತು. ಈಗ ಸರ್ವೋಚ್ಚ ನ್ಯಾಯಾಲಯವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಸಹ ಪಕ್ಷಗಾರರನ್ನಾಗಿ ಮಾಡಿದೆ. ಹೀಗಾಗಿ ವಿಚಾರಣೆಯ ವ್ಯಾಪ್ತಿಯು ವಿಸ್ತರಿಸಿದೆ. ವಿವಿಧ ಉಚ್ಚ ನ್ಯಾಯಾಲಯಗಳಲ್ಲಿ ಬಾಕಿ ಇರುವ ಇದೇ ರೀತಿಯ ಎಲ್ಲಾ ಪ್ರಕರಣಗಳನ್ನು ಸರ್ವೋಚ್ಚ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿದೆ. ಎಲ್ಲಾ ರಾಜ್ಯಗಳ ವಿಚಾರಣೆ ನಡೆಸಿದ ನಂತರ ರಾಷ್ಟ್ರೀಯ ನೀತಿಯನ್ನು ರೂಪಿಸಲಾಗುವುದು ಎಂದು ಸರ್ವೋಚ್ಚ ನ್ಯಾಯಾಲಯ ಸ್ಪಷ್ಟಪಡಿಸಿದೆ. ಅಂತಿಮ ನೀತಿಗಾಗಿ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಪ್ರಕರಣಗಳನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಒಟ್ಟುಗೂಡಿಸಲಾಗುವುದು.

ಆಕ್ರಮಣಕಾರಿ ನಾಯಿ ಯಾವುದು ಎಂದು ಹೇಗೆ ನಿರ್ಧರಿಸುವುದು? – ತಜ್ಞರು ಮತ್ತು ನಾಗರಿಕರ ಪ್ರಶ್ನೆಗಳು

‘ಎಲ್ಲಾ ನಾಯಿಗಳು ಆಕ್ರಮಣಕಾರಿಯಾಗಿವೆ’ ಎಂದು ಹೇಳಿ, “ಯಾವುದನ್ನೂ ಬಿಡಬಾರದು” ಎಂದು ಯಾರಾದರೂ ಒತ್ತಾಯಿಸಿದರೆ ಆಶ್ಚರ್ಯಪಡಬೇಕಾಗಿಲ್ಲ!
ಸರ್ವೋಚ್ಚ ನ್ಯಾಯಾಲಯದ ಈ ನಿರ್ಣಯದ ನಂತರ ಸಮಾಜದಲ್ಲಿ ವಿವಿಧ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ತಜ್ಞರು ಮತ್ತು ನಾಗರಿಕರ ಪ್ರಕಾರ, ಆಡಳಿತವು ಬೀದಿ ನಾಯಿಗಳನ್ನು ಹಿಡಿದು ಸಂತಾನಶಕ್ತಿ ಹರಣ ಮಾಡಿದರೂ, ಅದು ಆಕ್ರಮಣಕಾರಿಯೇ ಅಥವಾ ಇಲ್ಲವೇ ಎಂದು ಹೇಗೆ ನಿರ್ಧರಿಸಲಾಗುತ್ತದೆ? ಹಾಗೆಯೇ, ಇಂದು ಆಕ್ರಮಣಕಾರಿ ಎಂದು ಕಾಣದ ನಾಯಿ ನಾಳೆ ಆಕ್ರಮಣಕಾರಿಯಾಗಿ ಕಚ್ಚಿದರೆ ಯಾರು ಜವಾಬ್ದಾರರು? ಎಲ್ಲಾ ನಾಯಿಗಳನ್ನು ಹಿಡಿದು ಅವುಗಳ ಸಂತಾನಶಕ್ತಿ ಹರಣ ಮತ್ತು ಲಸಿಕೆ ಹಾಕಲು ಎಷ್ಟು ಸಮಯ ಬೇಕಾಗುತ್ತದೆ? ಹಿಡಿದಿಟ್ಟಿರುವ ನಾಯಿಗಳನ್ನು ಇಡಲು ಜಾಗವನ್ನು ಯಾವಾಗ ಸಿದ್ಧಪಡಿಸಲಾಗುವುದು? ಪ್ರತ್ಯೇಕ ಸ್ಥಳಗಳಲ್ಲಿ ನಾಯಿಗಳಿಗೆ ಆಹಾರ ನೀಡಲು ಸ್ಥಳವನ್ನು ಯಾರು ಮತ್ತು ಹೇಗೆ ಆಯ್ಕೆ ಮಾಡುತ್ತಾರೆ? ಎಂಬ ಪ್ರಶ್ನೆಗಳು ಉದ್ಭವಿಸಿವೆ. ಅಲ್ಲದೆ, ಕೇವಲ ಸಂತಾನಶಕ್ತಿ ಹರಣದಿಂದ ನಾಯಿಗಳು ಕಚ್ಚುವುದಿಲ್ಲ, ಮಕ್ಕಳು ಮತ್ತು ವೃದ್ಧರ ಮೇಲೆ ದಾಳಿ ಮಾಡುವುದಿಲ್ಲ ಎಂಬುದಕ್ಕೆ ಏನು ಖಾತರಿ? ಎಂಬ ಪ್ರಶ್ನೆಯೂ ಕೇಳಿಬರುತ್ತಿದೆ.

ಆದೇಶದ ಪ್ರಮುಖ ಅಂಶಗಳು

1. ಲಸಿಕೆ, ರೋಗನಿರೋಧಕ ಔಷಧಿ ಮತ್ತು ಸಂತಾನಶಕ್ತಿ ಹರಣದ (ನಸಬಂದಿ) ನಂತರವೇ ಬೀದಿ ನಾಯಿಗಳನ್ನು ಆಶ್ರಯತಾಣಗಳಿಂದ ಬಿಡುಗಡೆ ಮಾಡಲಾಗುತ್ತದೆ.

2. ರೇಬೀಸ್‌ ಪೀಡಿತ ಅಥವಾ ಆಕ್ರಮಣಕಾರಿ ವರ್ತನೆಯ ನಾಯಿಗಳನ್ನು ಬಿಡಲಾಗುವುದಿಲ್ಲ.

3. ಆಹಾರ ನೀಡಲು ಪ್ರತ್ಯೇಕ ಸ್ಥಳವನ್ನು ನಿರ್ಧರಿಸಲಾಗುತ್ತದೆ.

4. ರಸ್ತೆಗಳಲ್ಲಿ ನಾಯಿಗಳಿಗೆ ಆಹಾರ ನೀಡುವುದನ್ನು ನಿಷೇಧಿಸಲಾಗುತ್ತದೆ ಮತ್ತು ಹಾಗೆ ಕಂಡುಬಂದರೆ ಕ್ರಮ ಕೈಗೊಳ್ಳಲಾಗುತ್ತದೆ.

5. ಪ್ರತಿ ನಗರ ಪಾಲಿಕೆಯು ಉಲ್ಲಂಘನೆಗಳ ದೂರುಗಳಿಗಾಗಿ ಪ್ರತ್ಯೇಕ ಸಹಾಯವಾಣಿ ಹೊಂದಿರಬೇಕು.

6. ಪ್ರಾಣಿ ಹಕ್ಕುಗಳ ಕಾರ್ಯಕರ್ತರು ಅಡ್ಡಿಪಡಿಸಬಾರದು.

7. ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸುವ ಪ್ರತಿಯೊಬ್ಬ ಪ್ರಾಣಿಪ್ರೇಮಿ ಮತ್ತು ಸ್ವಯಂಸೇವಾ ಸಂಸ್ಥೆಯು ನಿರ್ದಿಷ್ಟ ಮೊತ್ತವನ್ನು ಜಮಾ ಮಾಡಬೇಕು.

8. ದತ್ತು ಪಡೆದ ನಾಯಿಗಳನ್ನು ಮತ್ತೆ ರಸ್ತೆಯಲ್ಲಿ ಬಿಡಲು ಸಾಧ್ಯವಿಲ್ಲ.

9. ರಾಷ್ಟ್ರೀಯ ನೀತಿಯನ್ನು ಶೀಘ್ರದಲ್ಲೇ ರೂಪಿಸಲಾಗುವುದು.