ನಾವು ಪರಮಾಣು ಯುದ್ಧದ ಬೆದರಿಕೆಗಳನ್ನು ಸಹಿಸುವುದಿಲ್ಲ ! – ಕೆಂಪು ಕೋಟೆಯಿಂದ ಪಾಕಿಸ್ತಾನಕ್ಕೆ ತಿವಿದ ಪ್ರಧಾನಿಮಂತ್ರಿ ಮೋದಿ !

ನವದೆಹಲಿ – ಪರಮಾಣು ಯುದ್ಧದ ಬೆದರಿಕೆಗಳನ್ನು ನಾವು ಸಹಿಸುವುದಿಲ್ಲ ಎಂದು ಭಾರತ ಎಚ್ಚರಿಕೆ ನೀಡಿದೆ. ಅಣುಬಾಂಬ್ ಮೂಲಕ ಬ್ಲ್ಯಾಕ್‌ಮೇಲ್ ಮಾಡುವುದು ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ. ಇನ್ನು ಮುಂದೆ ಬ್ಲ್ಯಾಕ್‌ಮೇಲಿಂಗ್‌ ಸಹಿಸುವುದಿಲ್ಲ. ಮುಂದೆಯೂ ಶತ್ರುಗಳು ಇದೇ ರೀತಿ ಮುಂದುವರಿದರೆ, ನಮ್ಮ ಸೇನೆಯು ಗುರಿ ಇಟ್ಟುಕೊಂಡು ಅದಕ್ಕೆ ತಕ್ಕ ಪ್ರತಿಕ್ರಿಯೆ ನೀಡುತ್ತದೆ. ನಾವು ತಕ್ಕ ಉತ್ತರ ನೀಡುತ್ತೇವೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದರು. ಅವರು 79ನೇ ಸ್ವಾತಂತ್ರ್ಯ ದಿನಾಚರಣೆಯಂದು ದೆಹಲಿಯ ಕೆಂಪುಕೋಟೆಯಲ್ಲಿ ಮಾಡಿದ ಭಾಷಣದಲ್ಲಿ ಹೇಳಿದರು. ಕೆಲ ದಿನಗಳ ಹಿಂದೆ ಪಾಕಿಸ್ತಾನ ಸೇನೆಯ ಫೀಲ್ಡ್ ಮಾರ್ಷಲ್ ಅಸೀಮ್ ಮುನೀರ್ ಅವರು ಪರಮಾಣು ಯುದ್ಧದ ಬೆದರಿಕೆ ಹಾಕಿ, ‘ಅರ್ಧ ಜಗತ್ತನ್ನೇ ನಾಶ ಮಾಡುತ್ತೇವೆ’ ಎಂದು ಹೇಳಿದ್ದರು.

ಪ್ರಧಾನಿ ಮೋದಿ ಭಾಷಣದಲ್ಲಿ ಉಲ್ಲೇಖಿಸಿದ ಕೆಲವು ಅಂಶಗಳು

ಪಾಕಿಸ್ತಾನದ ನಿದ್ದೆ ಹಾರಿ ಹೋಗಿದೆ !

ಸ್ವಾತಂತ್ರ್ಯ ದಿನಾಚರಣೆಯ ಈ ಶುಭ ಸಂದರ್ಭದಲ್ಲಿ ನನಗೆ ‘ಆಪರೇಷನ್ ಸಿಂದೂರಿನ’ ಶೂರ ಯೋಧರಿಗೆ ನಮನ ಸಲ್ಲಿಸುವ ಅವಕಾಶ ಸಿಕ್ಕಿದೆ. ಭಾರತದ ವೀರ ಸೈನಿಕರು ಶತ್ರುಗಳಿಗೆ ಅವರು ಊಹಿಸಿದ್ದಕ್ಕಿಂತ ದೊಡ್ಡ ಶಿಕ್ಷೆ ನೀಡಿದ್ದಾರೆ. ಪಹಲ್‌ಗಾಮ್‌ನಲ್ಲಿ ಗಡಿಯಾಚೆಯಿಂದ ಬಂದ ಭಯೋತ್ಪಾದಕರು ಧರ್ಮ ಕೇಳಿ ಜನರ ಹತ್ಯೆ ಮಾಡಿದ್ದು, ಪತ್ನಿಯ ಎದುರೇ ಪತಿಯನ್ನು, ಮಕ್ಕಳ ಎದುರೇ ತಂದೆಯನ್ನು ಕೊಂದಿದ್ದರು. ಇಡೀ ಭಾರತದಲ್ಲಿ ಆಕ್ರೋಶ ಭುಗಿಲೆದ್ದಿತ್ತು. ಈ ಘಟನೆಯಿಂದ ಇಡೀ ಜಗತ್ತು ಬೆಚ್ಚಿಬಿದ್ದಿತ್ತು. ನಾವು ನಮ್ಮ ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದೆವು. ಕಾರ್ಯತಂತ್ರವನ್ನು ಅವರು ನಿರ್ಧರಿಸಿದರು, ಗುರಿಗಳನ್ನು ಅವರು ಆಯ್ಕೆ ಮಾಡಿಕೊಂಡರು, ಸಮಯವನ್ನು ಅವರು ನಿಗದಿಪಡಿಸಿದರು ಮತ್ತು ಹಲವು ದಶಕಗಳಿಂದ ಆಗದೇ ಇದ್ದ ಕೆಲಸವನ್ನು ಸೈನ್ಯವು ಮಾಡಿ ತೋರಿಸಿತು. ಶತ್ರುಗಳ ನೆಲಕ್ಕೆ ನುಗ್ಗಿ ಅವರ ಭಯೋತ್ಪಾದಕ ಕೇಂದ್ರಗಳನ್ನು ನಾಶಪಡಿಸಿತು. ಪಾಕಿಸ್ತಾನದ ನಿದ್ದೆ ಹಾರಿ ಹೋಗಿದೆ. ಪಾಕಿಸ್ತಾನಕ್ಕೆ ಆದ ನಷ್ಟ ಅಷ್ಟೊಂದು ದೊಡ್ಡದಿದ್ದು, ಪ್ರತಿದಿನ ಹೊಸ ಹೊಸ ಮಾಹಿತಿ ಬಹಿರಂಗವಾಗುತ್ತಿದೆ. ನಮ್ಮ ದೇಶ ಹಲವು ದಶಕಗಳಿಂದ ಭಯೋತ್ಪಾದನೆಯನ್ನು ಸಹಿಸಿಕೊಳ್ಳುತ್ತಿದೆ. ಅವರು ದೇಶದ ಹೃದಯಕ್ಕೆ ಘಾಸಿ ಮಾಡಿದ್ದರು. ಇನ್ನು ಮುಂದೆ ನಾವು ಭಯೋತ್ಪಾದಕರು ಮತ್ತು ಅವರಿಗೆ ಬೆಂಬಲ ನೀಡುವವರನ್ನು ಪ್ರತ್ಯೇಕವಾಗಿ ನೋಡುವುದಿಲ್ಲ. ಅವರೆಲ್ಲರೂ ಮಾನವೀಯತೆಯ ಶತ್ರುಗಳಾಗಿದ್ದಾರೆ.

ಸಿಂಧೂ ಜಲ ಹಂಚಿಕೆ ಒಪ್ಪಂದ ನಮಗೆ ಮಾನ್ಯವಾಗಿಲ್ಲ !

ಇನ್ನು ಮುಂದೆ ರಕ್ತ ಮತ್ತು ನೀರು ಒಟ್ಟಿಗೆ ಹರಿಯುವುದಿಲ್ಲ ಎಂದು ಭಾರತ ನಿರ್ಧರಿಸಿದೆ. ಸಿಂಧೂ ಜಲ ಹಂಚಿಕೆ ಒಪ್ಪಂದವು ಎಷ್ಟು ಅನ್ಯಾಯದ ಮತ್ತು ಏಕಪಕ್ಷೀಯವಾಗಿದೆ ಎಂದು ದೇಶವಾಸಿಗಳಿಗೆ ಅರ್ಥವಾಗಿದೆ. ನನ್ನ ದೇಶದ ರೈತರು ನೀರಿಲ್ಲದೆ ಬಳಲುತ್ತಿದ್ದಾರೆ. ಇದು ಯಾವ ರೀತಿಯ ಒಪ್ಪಂದ? ಕಳೆದ 7 ದಶಕಗಳಿಂದ ನನ್ನ ದೇಶದ ರೈತರಿಗೆ ಊಹಿಸಲಾಗದಷ್ಟು ನಷ್ಟವಾಗಿದೆ. ಇನ್ನು ಮುಂದೆ ಭಾರತಕ್ಕೆ ಸೇರಬೇಕಾದ ನೀರಿನ ಮೇಲೆ ಕೇವಲ ಮತ್ತು ಕೇವಲ ಭಾರತ ಮತ್ತು ಭಾರತದ ರೈತರ ಹಕ್ಕು ಇದೆ. ರೈತರ ಹಿತ ಮತ್ತು ರಾಷ್ಟ್ರ ಹಿತದ ದೃಷ್ಟಿಯಿಂದ ಈ ಒಪ್ಪಂದ ನಮಗೆ ಮಾನ್ಯವಿಲ್ಲ.

ಸುದರ್ಶನ ಚಕ್ರ ಯೋಜನೆಯನ್ನು ಜಾರಿಗೊಳಿಸಲಿದ್ದೇವೆ !

ಭಗವಾನ್ ಶ್ರೀಕೃಷ್ಣನ ಬಳಿ ಸುದರ್ಶನ ಚಕ್ರವಿತ್ತು. ಅದೇ ಚಕ್ರದ ಮಾರ್ಗವನ್ನು ನಾವು ಆಯ್ಕೆ ಮಾಡಿದ್ದೇವೆ. ಮಹಾಭಾರತ ಯುದ್ಧ ನಡೆಯುತ್ತಿದ್ದಾಗ, ಶ್ರೀಕೃಷ್ಣನು ಸುದರ್ಶನ ಚಕ್ರವನ್ನು ಉಪಯೋಗಿಸಿ ಸೂರ್ಯನ ಬೆಳಕನ್ನು ತಡೆದು ಹಗಲನ್ನು ಕತ್ತಲನ್ನಾಗಿಸಿದ್ದನು. ಆ ಸಮಯದಲ್ಲಿ ಅರ್ಜುನನು ಜಯದ್ರಥನನ್ನು ಕೊಲ್ಲುವ ಶಪಥವನ್ನು ಪೂರೈಸಿದ್ದನು. ಇದು ಸುದರ್ಶನ ಚಕ್ರದಿಂದಲೇ ಸಾಧ್ಯವಾಯಿತು. ಈಗ ದೇಶವು ‘ಸುದರ್ಶನ ಚಕ್ರ ಯೋಜನೆ’ಯನ್ನು ಜಾರಿಗೆ ತರಲಿದೆ. ಮುಂದಿನ 10 ವರ್ಷಗಳಲ್ಲಿ, ಅಂದರೆ 2035ರ ವೇಳೆಗೆ, ದೇಶದ ಎಲ್ಲಾ ಪ್ರಮುಖ ಸ್ಥಳಗಳಾದ ಆಸ್ಪತ್ರೆ, ರೈಲ್ವೆ, ಯಾತ್ರಾ ಕೇಂದ್ರಗಳಿಗೆ ಹೊಸ ತಂತ್ರಜ್ಞಾನದ ಸೌಲಭ್ಯಗಳ ಮೂಲಕ ಸಂಪೂರ್ಣ ಭದ್ರತಾ ಕವಚ ಒದಗಿಸಲಾಗುವುದು.

2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡೋಣ !

2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಸಂಕಲ್ಪ ನಮ್ಮದಾಗಿದೆ. ಇದಕ್ಕಾಗಿ ನಾವು ನಿಲ್ಲುವುದಿಲ್ಲ ಮತ್ತು ಬಗ್ಗುವುದಿಲ್ಲ. ಕಠಿಣ ಪರಿಶ್ರಮ ಮಾಡಿದವರೇ ಇತಿಹಾಸ ಸೃಷ್ಟಿಸಿದ್ದಾರೆ. ಕಾಲ ಬದಲಾಯಿಸುವ ಸರಿಯಾದ ಸಮಯ ಇದೇ ಆಗಿದೆ.

ರಾಷ್ಟ್ರೀಯ ಸ್ವಯಂಸೇವಕ ಸಂಘದ 100 ವರ್ಷಗಳ ಸೇವೆಗೆ ದೇಶಕ್ಕೆ ಹೆಮ್ಮೆ !

ಜಗತ್ತಿನ ಅತಿದೊಡ್ಡ ಸ್ವಯಂಸೇವಾ ಸಂಸ್ಥೆಯಾದ ರಾಷ್ಟ್ರೀಯ ಸ್ವಯಂಸೇವಕ ಸಂಘವು 100 ವರ್ಷಗಳ ವೈಭವಪೂರ್ಣ ಸೇವೆ ಸಲ್ಲಿಸಿದೆ. ಸಂಘದ 100 ವರ್ಷಗಳ ಸೇವೆಯ ಬಗ್ಗೆ ದೇಶಕ್ಕೆ ಹೆಮ್ಮೆ ಇದೆ. ಸಂಘವು ರಾಷ್ಟ್ರ ನಿರ್ಮಾಣಕ್ಕಾಗಿ ಕೆಲಸ ಮಾಡುತ್ತದೆ.

ದೀಪಾವಳಿಗೆ ಮೊದಲು ಸರಕು ಮತ್ತು ಸೇವಾ ತೆರಿಗೆಯಲ್ಲಿ ಕಡಿತ ಮಾಡಲಾಗುವುದು

ಈ ಬಾರಿಯ ದೀಪಾವಳಿಯನ್ನು ನಾನು ನಿಮ್ಮೆಲ್ಲರ ಸಂತೋಷವನ್ನು ದುಪ್ಪಟ್ಟುಗೊಳಿಸುತ್ತೇನೆ. ಈ ದೀಪಾವಳಿಗೆ ನಾನು ದೇಶದ ಜನರಿಗೆ ಅತಿ ದೊಡ್ಡ ಉಡುಗೊರೆ ನೀಡುತ್ತೇನೆ. ಸರಕು ಮತ್ತು ಸೇವಾ ತೆರಿಗೆ (GST)ಯಲ್ಲಿ ಸುಧಾರಣೆಗಳನ್ನು ಮಾಡಲಾಗುತ್ತದೆ ಮತ್ತು ತೆರಿಗೆಯಲ್ಲಿ ಕಡಿತ ಮಾಡಲಾಗುತ್ತದೆ.

ವರ್ಷಾಂತ್ಯದ ವೇಳೆಗೆ ಮೊದಲ ಭಾರತೀಯ ನಿರ್ಮಿತ ಸೆಮಿಕಂಡಕ್ಟರ್ ಚಿಪ್ ಬರಲಿದೆ !

ಈ ವರ್ಷದ ಕೊನೇಯ ವರೆಗೆ ಮೊದಲ ಭಾರತೀಯ ನಿರ್ಮಿತ ಸೆಮಿಕಂಡಕ್ಟರ್ ಚಿಪ್ ಬರಲಿದೆ. ನಾವು ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಗುರಿಯಿಟ್ಟುಕೊಂಡು ಕೆಲಸ ಮಾಡುತ್ತಿದ್ದೇವೆ. ಭಾರತದಲ್ಲಿ ತಯಾರಾದ ಚಿಪ್ ಈ ವರ್ಷದ ಕೊಣೇಯ ವರೆಗೆ ಭಾರತದಲ್ಲಿ ಲಭ್ಯವಾಗಲಿದೆ.