‘ರಾವಣನು ಸೀತೆಯನ್ನು ಅಪಹರಿಸಿದ ನಂತರ ಶ್ರೀರಾಮನು ಮಾನಸಿಕ ಸಮತೋಲನ ಕಳೆದುಕೊಂಡಿದ್ದ’ : Poet Vairamuthu

ಪ್ರಸಿದ್ಧ ತಮಿಳು ಕವಿ ವೈರಮುತ್ತು ಅವರ ಆಘಾತಕಾರಿ ಹೇಳಿಕೆ

ತಮಿಳು ಕವಿ ವೈರಮುತ್ತು

ಚೆನ್ನೈ (ತಮಿಳುನಾಡು) – ರಾವಣನು ಸೀತೆಯನ್ನು ಅಪಹರಿಸಿದ ನಂತರ ಶ್ರೀರಾಮನ ಮಾನಸಿಕ ಸಮತೋಲನವು ಕುಗ್ಗಿತ್ತು. ಶ್ರೀರಾಮ ಮತ್ತು ಸೀತೆ ಇಬ್ಬರೂ ಬೇರೆಯಾದಾಗ, ‘ನಾವು ಏನು ಮಾಡುತ್ತಿದ್ದೇವೆ, ಹೇಗೆ ವರ್ತಿಸುತ್ತಿದ್ದೇವೆ?’ ಎಂಬುದರ ಅರಿವು ಅವರಿಗಿರಲಿಲ್ಲ. ಆ ಸಮಯದಲ್ಲಿ ಶ್ರೀರಾಮನಿಂದ ಕೆಲವು ಅಪರಾಧ ಕೃತ್ಯಗಳು ಕೂಡ ನಡೆದವು; ಆದರೆ ಕವಿ ಕಂಬರ ಅವರು ಶ್ರೀರಾಮನ ಎಲ್ಲಾ ಕೀಳು ಅಂಶಗಳನ್ನು ಮರೆಮಾಚುವ ಕೆಲಸ ಮಾಡಿದರು. ಕಂಬರ ಅವರು ಶ್ರೀರಾಮನನ್ನು ಕ್ಷಮಿಸುವ, ದಯಾಪರ, ದೇವರೆಂದು ಚಿತ್ರಿಸಿದ್ದಾರೆ ಎಂದು ಪ್ರಸಿದ್ಧ ತಮಿಳು ಕವಿ ವೈರಮುತ್ತು ಹೇಳಿದ್ದಾರೆ. ಕವಿ ಕಂಬರ ಅವರ ಹೆಸರಿನಲ್ಲಿ ನೀಡುವ ಪ್ರಶಸ್ತಿಯನ್ನು ಸ್ವೀಕರಿಸಿದ ನಂತರ ಅವರು ಮಾತನಾಡುತ್ತಿದ್ದರು. (ಈ ಹೇಳಿಕೆಯಿಂದಾಗಿ ಅವರಿಗೆ ನೀಡಿದ ಪ್ರಶಸ್ತಿಯನ್ನು ಹಿಂಪಡೆಯುವಂತೆ ಹಿಂದೂಗಳು ಬೇಡಿಕೆ ಇಡಬೇಕು !- ಸಂಪಾದಕರು) ಕವಿ ಕಂಬರ ಅವರು ರಾಮಾಯಣದ ಕುರಿತು ಲೇಖನಗಳನ್ನು ಬರೆದಿದ್ದರು ಮತ್ತು ಕಾವ್ಯಗಳನ್ನು ರಚಿಸಿದ್ದರು. ‘ಕಂಬ ರಾಮಾಯಣಂ’ ಎಂಬ ಹೆಸರಿನಲ್ಲಿ ರಾಮಾಯಣದ ಮೇಲೆ ಆಧಾರಿತವಾದ ಮಹಾಕಾವ್ಯವನ್ನು ಬರೆದಿದ್ದಾರೆ. ಕವಿ ಕಂಬರ ಬರೆದ ಈ ಮಹಾಕಾವ್ಯಕ್ಕೆ ‘ಇರಾಮಾವತಾರಂ’ ಎಂಬ ಮತ್ತೊಂದು ಹೆಸರೂ ಇದೆ. ಇದರಲ್ಲಿ 4 ಸಾವಿರ ಶ್ಲೋಕಗಳಿವೆ.

ವೈರಮುತ್ತು ಮಾತು ಮುಂದುವರೆಸಿ,

1. ಒಬ್ಬ ವ್ಯಕ್ತಿಗೆ ಅಪಾರ ಖ್ಯಾತಿ ಸಿಕ್ಕಾಗ, ಅವನ ಜೀವನದಲ್ಲಿ ಅಪಖ್ಯಾತಿಯ ಕಾಲವೂ ಬರುತ್ತದೆ. ನಿಂದನೆ ಮತ್ತು ಜನಪ್ರಿಯತೆ ಎರಡೂ ಆ ವ್ಯಕ್ತಿಯ ಜೀವನದಲ್ಲಿ ಇರುತ್ತವೆ. ಭಗವಾನ್ ಶ್ರೀರಾಮನ ಜೀವನವೂ ಹೀಗೆಯೇ ಇತ್ತು; ಆದರೆ ಕಂಬರ ಅವರು ಶ್ರೀರಾಮನ ಚರಿತ್ರೆಯಿಂದ ಅಪಖ್ಯಾತಿಯನ್ನು ತೆಗೆದುಹಾಕಿದರು. ಶ್ರೀರಾಮನು ಮರೆಯಾಗಿ ವಾಲಿಗೆ ಬಾಣ ಹೊಡೆದನು. ಇದರಿಂದ ಅವನಿಗೆ ಅಪಖ್ಯಾತಿ ಬಂದಿತ್ತು; ಆದರೆ ಈ ಕಳಂಕವನ್ನು ಅಳಿಸುವ ಕೆಲಸವನ್ನು ಕಂಬರ ಮಾಡಿದರು. (ಇದನ್ನು ಅಧ್ಯಯನವಿಲ್ಲದ ಹೇಳಿಕೆ ಎನ್ನುತ್ತಾರೆ. ಆಧ್ಯಾತ್ಮ ಮತ್ತು ರಾಮಾಯಣದ ಆಳವಾದ ಜ್ಞಾನ ಮತ್ತು ಭಕ್ತಿ ಇರುವವನು ಮಾತ್ರ ಶ್ರೀರಾಮನ ಕೃತಿಗಳ ನಿಜವಾದ ಅರ್ಥವನ್ನು ಅರ್ಥಮಾಡಿಕೊಳ್ಳಬಹುದು. ಉಳಿದವರು ಕೇವಲ ಬುದ್ಧಿಯ ಜತೆ ಆಟವಾಡುವುದನ್ನು ಬಿಟ್ಟು ಬೇರೇನೂ ಮಾಡಲಾರರು! – ಸಂಪಾದಕರು)

2. ವಾಲಿಯ ಸಂವಾದದ ಸಂದರ್ಭವನ್ನು ಉಲ್ಲೇಖಿಸಿ, ‘ರಾಮನು ತನ್ನ ಸ್ವಂತ ಸಹೋದರನಿಗಾಗಿ ರಾಜ್ಯವನ್ನು ತ್ಯಾಗ ಮಾಡಿದ್ದರೆ, ನನ್ನ ರಾಜ್ಯವನ್ನು ನನ್ನ ಸಹೋದರನಿಗೆ ಏಕೆ ಕೊಟ್ಟನು?’ ರಾಮನು ಮಾಡಿದ್ದರಲ್ಲಿ ಅವನ ತಪ್ಪು ಇಲ್ಲ; ಏಕೆಂದರೆ ಸೀತೆಯ ಅಪಹರಣದ ನಂತರ ರಾಮನ ಮಾನಸಿಕ ಸಮತೋಲನವು ತಪ್ಪಿಹೋಗಿತ್ತು. ಆದ್ದರಿಂದ ಈ ವಿಷಯಗಳಿಗಾಗಿ ರಾಮನನ್ನು ಕ್ಷಮಿಸಬಹುದು. ರಾಮ ಮಾಡಿದ್ದು ಭಾರತೀಯ ದಂಡ ಸಂಹಿತೆಯ ಪ್ರಕಾರ ಒಂದು ಅಪರಾಧ ಕೃತ್ಯವಾಗಿತ್ತು. (ವೈರಮುತ್ತು ಅವರ ಹೇಳಿಕೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 295 ರ ಅಡಿಯಲ್ಲಿ ಅಪರಾಧ ಕೃತ್ಯವಾಗಿದ್ದು, ಅವರ ವಿರುದ್ಧ ಮೊದಲು ಕ್ರಮ ಕೈಗೊಳ್ಳಬೇಕು – ಸಂಪಾದಕರು)

3. ಕವಿ ಕಂಬರ ಅವರು ಶ್ರೀರಾಮನನ್ನು ಸೂರ್ಯನಿಗೆ ಹೋಲಿಸಲಿಲ್ಲ, ಬದಲಾಗಿ ಚಂದ್ರನಿಗೆ ಹೋಲಿಸಿದ್ದರು; ಏಕೆಂದರೆ ಸೂರ್ಯನ ಮೇಲೆ ಕಲೆ ಇರುವುದಿಲ್ಲ; ಆದರೆ ಚಂದ್ರನ ಮೇಲೆ ಕಲೆಗಳು ಇರುತ್ತವೆ. ಆದ್ದರಿಂದಲೇ ಕವಿ ಕಂಬರ್ ಹೀಗೆ ಮಾಡಿದ್ದರು. (ಹಾಸ್ಯಾಸ್ಪದ ಹೇಳಿಕೆಗಳನ್ನು ನೀಡುವ ವೈರಮುತ್ತು. ಶ್ರೀರಾಮನನ್ನು ‘ರಾಮಚಂದ್ರ’ ಎಂದು ಕರೆಯುತ್ತಾರೆ. ಸುಂದರ ವ್ಯಕ್ತಿಗೆ ಯಾವಾಗಲೂ ಚಂದ್ರನ ಉಪಮೆಯನ್ನು ನೀಡಲಾಗುತ್ತದೆ. ಅವರೆಲ್ಲಾ ಮೂರ್ಖರು ಮತ್ತು ವೈರಮುತ್ತು ಮಾತ್ರ ಬುದ್ಧಿವಂತರೇ? – ಸಂಪಾದಕರು)

ವೈರಮುತ್ತು ಬೇರೆ ಧರ್ಮಗಳ ದೇವರ ವಿರುದ್ಧ ಅವಮಾನಕಾರಿ ಹೇಳಿಕೆ ನೀಡುವ ಧೈರ್ಯ ಮಾಡಬಹುದೇ? – ಭಾಜಪ

ಭಾಜಪ ವಕ್ತಾರ ಸಿ.ಆರ್. ಕೇಶವನ ಅವರು, ವೈರಮುತ್ತು ಅವರು ಹಿಂದೂ ದೇವರುಗಳನ್ನು ಅವಮಾನಿಸಿದ್ದಾರೆ. ಈ ಪ್ರಕರಣದಲ್ಲಿ ಅವರು ಅಪರಾಧಿಯಾಗಿದ್ದಾರೆ. ಅವರು ಭಗವಾನ್ ಶ್ರೀರಾಮ ಮತ್ತು ಕೋಟ್ಯಂತರ ಭಕ್ತರ ಬಳಿ ಕ್ಷಮೆಯನ್ನು ಕೇಳಬೇಕು. ವೈರಮುತ್ತು ಅವರು ಇತರ ಧರ್ಮಗಳ ದೇವರುಗಳ ವಿರುದ್ಧ ಅವಮಾನಕಾರಿ ಹೇಳಿಕೆ ನೀಡುವ ಧೈರ್ಯ ಮಾಡಬಹುದೇ? ಎಂದು ಕೇಳಿದರು.

ಸಂಪಾದಕೀಯ ನಿಲುವು

  • ಈ ಹೇಳಿಕೆಯಿಂದ ಕವಿ ವೈರಮುತ್ತು ಅವರದೇ ಮಾನಸಿಕ ಸಮತೋಲನವನ್ನು ಕಳೆದುಹೋಗಿದೆ ಎಂಬುದು ಸ್ಪಷ್ಟವಾಗುತ್ತದೆ. ಇಂತಹವರ ವಿರುದ್ಧ ಪ್ರಕರಣ ದಾಖಲಿಸಿ ಜೈಲಿಗೆ ಹಾಕಿದರೆ ಅವರು ದಾರಿಗೆ ಬರಬಹುದು ಎಂದು ಅಪೇಕ್ಷಿಸಬಹುದು!
  • ವೈರಮುತ್ತು ಇವರು ಇತರ ಧರ್ಮದವರ ಶ್ರದ್ಧಾಸ್ಥಾನಗಳ ಬಗ್ಗೆ ಇಂತಹ ಹೇಳಿಕೆ ನೀಡುವ ಧೈರ್ಯವನ್ನು ಎಂದಿಗೂ ಮಾಡುವುದಿಲ್ಲ; ಏಕೆಂದರೆ ಅದರ ಪರಿಣಾಮಗಳು ಅವರಿಗೆ ಚೆನ್ನಾಗಿ ತಿಳಿದಿವೆ!