ಎಲ್ಲಾ ಬೀದಿ ನಾಯಿಗಳನ್ನು ಹಿಡಿದು ದೂರದ ಆಶ್ರಯಧಾಮದಲ್ಲಿ ಇಡಿ! – Stray Dogs Supreme Court Order

  • ದೆಹಲಿಯ ಬೀದಿ ನಾಯಿಗಳ ಸಮಸ್ಯೆಯ ಬಗ್ಗೆ ಸರ್ವೋಚ್ಚ ನ್ಯಾಯಾಲಯದ ಆದೇಶ

  • ಈ ಕಾರ್ಯಾಚರಣೆಗೆ ಅಡ್ಡಿಪಡಿಸುವ ಪ್ರಾಣಿಪ್ರಿಯರ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಆದೇಶ

ನವದೆಹಲಿ – ದೆಹಲಿ  ಎನ್.ಸಿ.ಆರ್. (ದೆಹಲಿ ರಾಷ್ಟ್ರೀಯ ರಾಜಧಾನಿ ಪ್ರದೇಶ) ನಲ್ಲಿ ಬೀದಿ ನಾಯಿಗಳ ಹೆಚ್ಚುತ್ತಿರುವ ಅಪಾಯವನ್ನು ಗಂಭೀರವಾಗಿ ಪರಿಗಣಿಸಿ, ಸರ್ವೋಚ್ಚ ನ್ಯಾಯಾಲಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ನ್ಯಾಯಾಲಯವು ದೆಹಲಿ ಆಡಳಿತಕ್ಕೆ ಎಲ್ಲಾ ಬೀದಿ ನಾಯಿಗಳನ್ನು ಹಿಡಿದು, ಅವುಗಳಿಗೆ ಲಸಿಕೆ ನೀಡಿ, ರೋಗನಿರೋಧಕಗೊಳಿಸಿ ಆಶ್ರಯಧಾಮದಲ್ಲಿ ಇಡುವಂತೆ  ನಿರ್ದೇಶಿಸಿದೆ. ಬೀದಿ ನಾಯಿಗಳ ದಾಳಿ ಮತ್ತು ರೇಬೀಸ್ ಸೋಂಕಿನ ಅನೇಕ ಪ್ರಕರಣಗಳು ವರದಿಯಾದ ನಂತರ ಸರ್ವೋಚ್ಚ ನ್ಯಾಯಾಲಯ ಈ ನಿಲುವು ತೆಗೆದುಕೊಂಡಿದೆ. ಬೀದಿ ನಾಯಿಗಳ ವಿರುದ್ಧದ ಕಾರ್ಯಾಚರಣೆಗೆ ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ಅಡ್ಡಿಪಡಿಸಿದರೆ, ಅವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ.

ರೇಬೀಸ್‌ನಿಂದ ಮೃತಪಟ್ಟವರನ್ನು ಯಾರಾದರೂ ಮರಳಿ ತರಲು ಸಾಧ್ಯವೇ?

ಹೆಚ್ಚುವರಿ ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ ಅವರು ನ್ಯಾಯಾಲಯದಲ್ಲಿ, ದೆಹಲಿಯ ಅನೇಕ ಪ್ರದೇಶಗಳಲ್ಲಿ ಪರಿಸ್ಥಿತಿ ಗಂಭೀರವಾಗಿದೆ. ವಿಶೇಷವಾಗಿ ಮಕ್ಕಳು ಮತ್ತು ವೃದ್ಧರು ರೇಬೀಸ್‌ನಿಂದ ಬಳಲುತ್ತಿದ್ದಾರೆ. ಈ ಹಿಂದೆ ನಾಯಿಗಳನ್ನು ತೆರವುಗೊಳಿಸಲು ಪ್ರಯತ್ನಿಸಲಾಗಿತ್ತು, ಆದರೆ ನಾಯಿಗಳ ಹಕ್ಕುಗಳಿಗಾಗಿ ಕೆಲಸ ಮಾಡುವ ಕಾರ್ಯಕರ್ತರು ನ್ಯಾಯಾಲಯದಿಂದ ತಡೆಯಾಜ್ಞೆ ತಂದ ಕಾರಣ ಕೆಲಸ ನಿಲ್ಲಿಸಬೇಕಾಯಿತು ಎಂದು ಹೇಳಿದರು. ಇದಕ್ಕೆ ನ್ಯಾಯಾಲಯವು, ‘ಈ ಕಾರ್ಯಕರ್ತರು ರೇಬೀಸನಿಂದ ಮೃತಪಟ್ಟವರನ್ನು ಮರಳಿ ತರಲು ಸಾಧ್ಯವೇ?’ ಎಂದು ಪ್ರಶ್ನಿಸಿತು.

ಪ್ರತ್ಯೇಕ ತಂಡ ರಚಿಸಿರಿ

ನ್ಯಾಯಾಲಯವು ದೆಹಲಿ ಆಡಳಿತಕ್ಕೆ ತಕ್ಷಣವೇ ಬೀದಿ ನಾಯಿಗಳನ್ನು ಹಿಡಿಯುವ ಅಭಿಯಾನವನ್ನು ಪ್ರಾರಂಭಿಸಲು ಮತ್ತು ವಿಶೇಷವಾಗಿ ಬೀದಿ ನಾಯಿಗಳ ಉಪಟಳ ಹೆಚ್ಚಿರುವ ಪ್ರದೇಶಗಳಲ್ಲಿ ಇದನ್ನು ಮಾಡಲು ನಿರ್ದೇಶಿಸಿದೆ. ಎಲ್ಲಾ ಪ್ರದೇಶಗಳಿಂದ ನಾಯಿಗಳನ್ನು ಹಿಡಿದು ದೂರ ಕರೆದೊಯ್ಯಿರಿ. ನಾಯಿಗಳಿಗಾಗಿ ಆಶ್ರಯಧಾಮಗಳನ್ನು ನಿರ್ಮಿಸಿ ಮತ್ತು ಅಲ್ಲಿ ಅವುಗಳಿಗೆ ನಪುಂಸಕೀಕರಣಗೊಳಿಸಿ ಮತ್ತು ಲಸಿಕೆಗಳನ್ನು ನೀಡಿರಿ. ಯಾವುದೇ ನಾಯಿಯನ್ನು ಮತ್ತೆ ಬೀದಿಗೆ ಬಿಡದಂತೆ ಅಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ. ಮೊದಲಿಗೆ ಎಲ್ಲಾ ಪ್ರದೇಶಗಳನ್ನು ಬೀದಿ ನಾಯಿಗಳಿಂದ ಮುಕ್ತಗೊಳಿಸಬೇಕು. ಈ ಕೆಲಸಕ್ಕಾಗಿ ಅಗತ್ಯವಿದ್ದರೆ ಪ್ರತ್ಯೇಕ ತಂಡವನ್ನು ರಚಿಸಬಹುದು. ಬೀದಿ ನಾಯಿಗಳ ವಿರುದ್ಧದ ಕಾರ್ಯಾಚರಣೆಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು. ಈ ನಿರ್ಧಾರವು ಜನರ ಹಿತಾಸಕ್ತಿಗಾಗಿದ್ದು, ಭಾವನಾತ್ಮಕತೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಸಂಪಾದಕೀಯ ನಿಲುವು

ಇಂತಹ ಆದೇಶ ದೆಹಲಿಗೆ ಮಾತ್ರ ಸೀಮಿತವಾಗಬಾರದು, ಇಡೀ ದೇಶಕ್ಕೆ ಅನ್ವಯವಾಗಬೇಕು ಎಂದು ಸಾರ್ವಜನಿಕರು ಭಾವಿಸುತ್ತಾರೆ. ದೇಶದ ಹೆಚ್ಚಿನ ಜನರು ಬೀದಿ ನಾಯಿಗಳ ಸಮಸ್ಯೆಯಿಂದ ತೊಂದರೆ ಅನುಭವಿಸುತ್ತಿದ್ದಾರೆ. ನಾಯಿಗಳ ದಾಳಿಯಿಂದ ಇಲ್ಲಿಯವರೆಗೆ ಅನೇಕರು ಮೃತಪಟ್ಟಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು, ಕೇಂದ್ರ ಮತ್ತು ಎಲ್ಲಾ ರಾಜ್ಯ ಸರಕಾರಗಳು ಈ ಆದೇಶ ತಮ್ಮ ರಾಜ್ಯಕ್ಕೂ ಅನ್ವಯಿಸುತ್ತದೆ ಎಂದು ಭಾವಿಸಿ ಕ್ರಮ ಕೈಗೊಳ್ಳಬೇಕು!