ಭಾರತದ ಮೇಲೆ ಶೇ. ೫೦ರಷ್ಟು ತೆರಿಗೆಯನ್ನು ಹೇರಿದ ಅಮೆರಿಕ !

ರಷ್ಯಾದಿಂದ ತೈಲ ಖರೀದಿಯನ್ನು ನಿಲ್ಲಿಸದ ಕಾರಣ ಡೊನಾಲ್ಡ್ ಟ್ರಂಪ್ ಅವರ ಏಕಪಕ್ಷೀಯ ಕ್ರಮ!

ವಾಷಿಂಗ್ಟನ್ (ಅಮೆರಿಕ) – ಭಾರತವು ರಷ್ಯಾದಿಂದ ತೈಲ ಖರೀದಿಯನ್ನು ನಿಲ್ಲಿಸದ ಕಾರಣ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದ ಮೇಲೆ ಹೆಚ್ಚುವರಿ ಶೇ. ೨೫ರಷ್ಟು ತೆರಿಗೆ ವಿಧಿಸುವ ಕಠಿಣ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಈ ಹಿಂದೆ ಟ್ರಂಪ್ ಅವರು ಭಾರತದ ಮೇಲೆ ಶೇ. ೨೫ರಷ್ಟು ತೆರಿಗೆ ವಿಧಿಸಿದ್ದರು, ಅದು ಆಗಸ್ಟ್ ೭ರಿಂದ ಜಾರಿಗೆ ಬರಲಿದೆ. ಹೊಸ ತೆರಿಗೆಯು ಆಗಸ್ಟ್ ೨೭ರಿಂದ ಜಾರಿಗೆ ಬರಲಿದೆ. ಇದರಿಂದಾಗಿ ಆಗಸ್ಟ್ ೨೭ರಿಂದ ಭಾರತವು ಅಮೆರಿಕಕ್ಕೆ ರಫ್ತಾಗುವ ವಸ್ತುಗಳ ಮೇಲೆ ಒಟ್ಟು ಶೇ. ೫೦ರಷ್ಟು ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ರಷ್ಯಾದಿಂದ ತೈಲ ಖರೀದಿಯನ್ನು ನಿಲ್ಲಿಸದ ಭಾರತದ ಕ್ರಮದಿಂದ ಆಕ್ರೋಶಗೊಂಡ ಟ್ರಂಪ್ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ. ಟ್ರಂಪ್ ಅವರು ಈ ಹೆಚ್ಚುವರಿ ತೆರಿಗೆಯ ದಾಖಲೆಗಳಿಗೆ ಸಹಿ ಹಾಕಿದ್ದಾರೆ.

ಈ ನಿರ್ಧಾರವು ಏಕಪಕ್ಷೀಯ ಮತ್ತು ಪಕ್ಷಪಾತದಿಂದ ಕೂಡಿದೆ ಎಂದು ವಿದೇಶಾಂಗ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅಮೆರಿಕದ ಈ ಹಠಮಾರಿ ನೀತಿಗೆ ಭಾರತವು ಹೇಗೆ ಪ್ರತಿಕ್ರಿಯಿಸಲಿದೆ ಎಂಬುದನ್ನು ಇಡೀ ಜಗತ್ತು ಕಾತರದಿಂದ ನೋಡುತ್ತಿದೆ.