ಶೀಘ್ರವೇ ಪರಿಹಾರ ಕ್ರಮಗಳನ್ನು ಕೈಗೊಳ್ಳದಿದ್ದರೆ ಹಿಮಾಚಲ ಪ್ರದೇಶ ಗಾಳಿಯಲ್ಲಿ ಮಾಯವಾಗುತ್ತದೆ! – SC Slams Himachal Pradesh Government

ಅನಿಯಂತ್ರಿತ ಅಭಿವೃದ್ಧಿಯಿಂದಾಗುವ ಪರಿಸರ ಹಾನಿಕ್ಕೆ ಹಾನಿ; ರಾಜ್ಯ ಸರಕಾರ ಬೆಂಡೆತ್ತಿದ ಸರ್ವೋಚ್ಚ ನ್ಯಾಯಾಲಯ!

ಸೌಜನ್ಯ : Court Book

ನವದೆಹಲಿ – ಹಿಮಾಚಲ ಪ್ರದೇಶದಲ್ಲಿ ಅನಿಯಂತ್ರಿತ ಅಭಿವೃದ್ಧಿಯಿಂದಾಗುವ ಪರಿಸರ ಹಾನಿಯ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದ ಸರ್ವೋಚ್ಚ ನ್ಯಾಯಾಲಯ, ರಾಜ್ಯ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಶೀಘ್ರವೇ ಪರಿಹಾರ ಕ್ರಮಗಳನ್ನು ಕೈಗೊಳ್ಳದಿದ್ದರೆ, ಇಡೀ ಹಿಮಾಚಲ ಪ್ರದೇಶ ನಕ್ಷೆಯಿಂದ ‘ಗಾಳಿಯಲ್ಲಿ ಮಾಯವಾಗುವ’ ಅಪಾಯವಿದೆ ಎಂದು ನ್ಯಾಯಾಲಯ ಸ್ಪಷ್ಟವಾಗಿ ಹೇಳಿದೆ.

ರಾಜ್ಯ ಸರಕಾರದಿಂದ ವರದಿ ಕೇಳಿದೆ

ನ್ಯಾಯಾಲಯವು ಸ್ವಯಂಪ್ರೇರಿತವಾಗಿ ಈ ಪ್ರಕರಣವನ್ನು ದಾಖಲಿಸಿಕೊಂಡು, ಪರಿಸರ ಸಂರಕ್ಷಣೆಗಾಗಿ ಇದುವರೆಗೆ ಯಾವ ಕ್ರಮಗಳನ್ನು ಕೈಗೊಳ್ಳಲಾಗಿದೆ ಮತ್ತು ಭವಿಷ್ಯದ ಯೋಜನೆಗಳೇನು ಎಂಬುದನ್ನು ಸ್ಪಷ್ಟಪಡಿಸುವಂತೆ ರಾಜ್ಯ ಸರಕಾರಕ್ಕೆ 4 ವಾರಗಳಲ್ಲಿ ವರದಿ ಸಲ್ಲಿಸಲು ಆದೇಶಿಸಿದೆ.

ಆದಾಯಕ್ಕಿಂತ ಪರಿಸರ ಮುಖ್ಯ!

ಹಿಮಾಚಲದಲ್ಲಿನ ಪರಿಸರ ಅಸಮತೋಲನವು ಗಂಭೀರ ಮಟ್ಟವನ್ನು ತಲುಪಿದೆ ಮತ್ತು ಕಳೆದ ಕೆಲವು ವರ್ಷಗಳಲ್ಲಿ ದೊಡ್ಡ ನೈಸರ್ಗಿಕ ವಿಕೋಪಗಳು ಸಂಭವಿಸಿವೆ ಎಂದು ನ್ಯಾಯಾಲಯ ಹೇಳಿದೆ. ಸರಕಾರದ ಗುರಿ ಕೇವಲ ಆದಾಯ ಗಳಿಸುವುದು ಮಾತ್ರವಲ್ಲ. ಪರಿಸರಕ್ಕೆ ಅಪಾಯವನ್ನುಂಟುಮಾಡಿ ಆದಾಯ ಗಳಿಸುವುದು ಸರಿಯಲ್ಲ. (ಇದನ್ನು ನ್ಯಾಯಾಲಯ ಏಕೆ ಹೇಳಬೇಕಾಗುತ್ತಿದೆ? – ಸಂಪಾದಕರು)

ವಿನಾಶಕ್ಕೆ ಪ್ರಕೃತಿಯನ್ನು ಹೊಣೆಗಾರರನ್ನಾಗಿ ಮಾಡಲು ಸಾಧ್ಯವಿಲ್ಲ

ಪ್ರಸ್ತುತ ನಡೆಯುತ್ತಿರುವ ಅನಿಯಂತ್ರಿತ ಅಭಿವೃದ್ಧಿಯಿಂದ ಪ್ರಕೃತಿ ಕೆರಳಿದೆ ಎಂದು ನ್ಯಾಯಾಲಯ ಹೇಳಿದೆ. ಈ ವರ್ಷವೂ ಭೂಕುಸಿತ ಮತ್ತು ಪ್ರವಾಹದಿಂದಾಗಿ ನೂರಾರು ಜನರು ಸಾವನ್ನಪ್ಪಿದ್ದಾರೆ; ಸಾವಿರಾರು ಆಸ್ತಿಗಳು ನಾಶವಾಗಿವೆ; ಆದರೆ ಈ ವಿನಾಶಕ್ಕೆ ಕೇವಲ ಪ್ರಕೃತಿಯನ್ನು ಮಾತ್ರ ಹೊಣೆಗಾರರನ್ನಾಗಿ ಮಾಡಲು ಸಾಧ್ಯವಿಲ್ಲ, ಇದು ಮಾನವ ನಿರ್ಮಿತ ವಿಪತ್ತು. ಪರ್ವತಗಳು ಕುಸಿಯುವುದು, ಕಟ್ಟಡಗಳು ಬಿದ್ದು ಹೋಗುವುದು, ರಸ್ತೆಗಳು ಕುಸಿಯುವುದು – ಇವೆಲ್ಲವೂ ಇದರ ಲಕ್ಷಣಗಳಾಗಿವೆ.

ವಿನಾಶಕ್ಕೆ ಯೋಜನೆಗಳು ಮೂಲ ಕಾರಣ

ಜಲವಿದ್ಯುತ್ ಯೋಜನೆಗಳು, ನಾಲ್ಕು ಪಥಗಳ ರಸ್ತೆಗಳು, ಅರಣ್ಯನಾಶ ಮತ್ತು ಎತ್ತರದ ಕಟ್ಟಡಗಳಿಂದಾಗಿ ಹಿಮಾಚಲದಲ್ಲಿ ವಿನಾಶ ಸಂಭವಿಸುತ್ತಿದೆ. ಇಂತಹ ಸೂಕ್ಷ್ಮ ಪ್ರದೇಶದಲ್ಲಿ ಯಾವುದೇ ಅಭಿವೃದ್ಧಿ ಯೋಜನೆಗೆ ಅನುಮೋದನೆ ನೀಡುವಾಗ ಪರಿಸರ ತಜ್ಞರು ಮತ್ತು ಸ್ಥಳೀಯ ಜನರ ಸಲಹೆಯನ್ನು ಪಡೆಯುವುದು ಅತ್ಯಗತ್ಯ ಎಂದು ನ್ಯಾಯಾಲಯ ಹೇಳಿದೆ.

ಸಂಪಾದಕೀಯ ನಿಲುವು

ಅಭಿವೃದ್ಧಿಯ ಹೆಸರಿನಲ್ಲಿ ಕಳೆದ 100 ವರ್ಷಗಳಲ್ಲಿ ಮಾನವಕುಲದಿಂದ ಭೂಮಿಯ ವಿನಾಶ ನಡೆದಿರುವುದರಿಂದ, ಮುಂದಿನ ಕೆಲವು ವರ್ಷಗಳಲ್ಲಿ ಪ್ರಕೃತಿಯು ಇಡೀ ಮಾನವಕುಲಕ್ಕೆ ದೊಡ್ಡ ಪಾಠ ಕಲಿಸದೆ ಬಿಡುವುದಿಲ್ಲ ಎಂದು ಹೇಳಿದರೆ ತಪ್ಪಾಗಲಾರದು!