37 ವರ್ಷಗಳ ನಂತರ ಅತ್ಯಾಚಾರ ಆರೋಪಿಯ ದೋಷಾರೋಪಣೆ ಖಾಯಂ, ಆದರೆ ಶಿಕ್ಷೆ ರದ್ದು!

ಅಪರಾಧ ನಡೆದಾಗ ಆರೋಪಿ ಅಪ್ರಾಪ್ತ ವಯಸ್ಕ ಎಂದು ಬಹಿರಂಗ

ನವದೆಹಲಿ – 37 ವರ್ಷಗಳ ಹಿಂದೆ ನಡೆದ ಅತ್ಯಾಚಾರದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಆರೋಪಿಯ ಮೇಲಿನ ದೋಷಾರೋಪಣೆಯನ್ನು ಎತ್ತಿಹಿಡಿದಿದೆ; ಆದರೆ ಆತನ ಶಿಕ್ಷೆಯನ್ನು ರದ್ದುಗೊಳಿಸಿದೆ; ಏಕೆಂದರೆ, ನ್ಯಾಯಾಲಯದ ಮಾಹಿತಿಯ ಪ್ರಕಾರ, 1988ರಲ್ಲಿ ಅಪರಾಧ ನಡೆದಾಗ ಆರೋಪಿ ಅಪ್ರಾಪ್ತ ವಯಸ್ಕನಾಗಿದ್ದ.

ಆರೋಪಿಯ ಅರ್ಜಿಯ ನಂತರ, ಸುಪ್ರೀಂ ಕೋರ್ಟ್ ಆರೋಪಿಯ ವಯಸ್ಸನ್ನು ದೃಢೀಕರಿಸಲು ಜಿಲ್ಲಾ ನ್ಯಾಯಾಧೀಶರಿಂದ ವರದಿಯನ್ನು ಕೇಳಿತ್ತು. ಈ ವರದಿಯಲ್ಲಿ, 1988ರ ನವೆಂಬರ್ 7ರಂದು ಆರೋಪಿ ಕೇವಲ 16 ವರ್ಷ, 2 ತಿಂಗಳು ಮತ್ತು 3 ದಿನ ವಯಸ್ಸಿನವನಾಗಿದ್ದ ಎಂದು ಸ್ಪಷ್ಟವಾಗಿದೆ. 11 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಈ ಆರೋಪಿಯನ್ನು ದೋಷಿ ಎಂದು ಘೋಷಿಸಲಾಗಿತ್ತು. ಜಿಲ್ಲಾ ನ್ಯಾಯಾಲಯವು 3 ವರ್ಷಗಳ ಕಾರಾಗೃಹ ಶಿಕ್ಷೆಯನ್ನು ವಿಧಿಸಿತ್ತು, ನಂತರ ರಾಜಸ್ಥಾನ ಹೈಕೋರ್ಟ್ ಅದನ್ನು 5 ವರ್ಷಗಳಿಗೆ ಹೆಚ್ಚಿಸಿತ್ತು. ಇದನ್ನು ಆರೋಪಿ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದನು. ಈಗ ಈ ಪ್ರಕರಣವನ್ನು ಬಾಲ ನ್ಯಾಯ ಮಂಡಳಿಗೆ ವರ್ಗಾಯಿಸಲಾಗಿದೆ.