ಶಿರ್ಡಿ (ಅಹಿಲ್ಯಾನಗರ) ಸಾಯಿಬಾಬಾ ಮಂದಿರಕ್ಕೆ ಬಾಂಬ್ ಬೆದರಿಕೆ! – Bomb Threat Sai Baba Temple

ಶಿರ್ಡಿ (ಅಹಿಲ್ಯಾನಗರ ಜಿಲ್ಲೆ) – ಇಲ್ಲಿನ ಸಾಯಿಬಾಬಾ ಮಂದಿರಕ್ಕೆ ಬಾಂಬ್ ಹಾಕುವುದಾಗಿ ಬೆದರಿಕೆ ಹಾಕಲಾಗಿದೆ. ಭಗವಂತ ಮಾನ್ ಎಂಬ ವ್ಯಕ್ತಿಯು ಶಿರ್ಡಿಯ ಸಾಯಿಬಾಬಾ ಮಂದಿರಕ್ಕೆ ಬಾಂಬ್ ಹಾಕಿ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದಾನೆ. ಬೆದರಿಕೆ ಹಾಕಿದ ವ್ಯಕ್ತಿಯ ಹೆಸರು ಇ-ಮೇಲ್ ಐಡಿಯಿಂದ ತಿಳಿದುಬಂದಿದೆ. ಬೆದರಿಕೆ ಇ-ಮೇಲ್ ಸ್ವೀಕರಿಸಿದ ತಕ್ಷಣ, ಶಿರ್ಡಿ ಸಾಯಿಬಾಬಾ ಮಂದಿರ ಟ್ರಸ್ಟ್ ತಕ್ಷಣವೇ ಸ್ಥಳೀಯ ಶಿರ್ಡಿ ಪೊಲೀಸ್ ಠಾಣೆಗೆ ದೂರು ದಾಖಲಿಸಿದೆ. ಸಾಯಿ ಮಂದಿರದ ಸಮಾಧಿ ಸ್ಥಳ ಮತ್ತು ದ್ವಾರಕಾಮಾಯಿಯಲ್ಲಿ ಬಾಂಬ್ ಇಡಲಾಗಿದೆ ಎಂದು ಇ-ಮೇಲ್‌ನಲ್ಲಿ ಹೇಳಲಾಗಿದೆ. ಬೆದರಿಕೆ ಎಲ್ಲಿಂದ ಬಂದಿದೆ? ಅದು ನಿಜವೇ ಅಥವಾ ಸುಳ್ಳೇ? ಎಂಬುದರ ಬಗ್ಗೆ ವಿವರವಾದ ತನಿಖೆ ನಡೆಯುತ್ತಿದೆ. ಸಂಪೂರ್ಣ ಮಂದಿರದ ಆವರಣದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಸಾಯಿಬಾಬಾ ಸಂಸ್ಥಾನವು ಭಕ್ತರಿಗೆ ಭಯಪಡದೆ ಸಹಕರಿಸುವಂತೆ ಮನವಿ ಮಾಡಿದೆ.

ಈ ಹಿಂದೆ ಈ ವರ್ಷದ ಮೇ ತಿಂಗಳಿನಲ್ಲಿಯೂ ಇ-ಮೇಲ್ ಮೂಲಕ ಶಿರ್ಡಿ ಸಾಯಿ ಮಂದಿರಕ್ಕೆ ಬಾಂಬ್ ಬೆದರಿಕೆ ಬಂದಿತ್ತು. ನಂತರ ಸಾಯಿ ಭಕ್ತರ ಸುರಕ್ಷತೆಯನ್ನು ಹೆಚ್ಚಿಸಲಾಗಿತ್ತು. ಆ ಸಮಯದಲ್ಲಿ ಶಿರ್ಡಿ ಸಾಯಿ ಮಂದಿರಕ್ಕೆ ಬಾಂಬ್ ಹಾಕುವುದಾಗಿ ಬೆದರಿಕೆ ಅಜಿತ್ ಜೋಕಮುಲ್ಲಾ ಎಂಬ ಇ-ಮೇಲ್ ಐಡಿಯಿಂದ ಬಂದಿತ್ತು.

ಸಂಪಾದಕೀಯ ನಿಲುವು

ಹಿಂದೂ ದೇವಾಲಯಗಳು ಅಸುರಕ್ಷಿತವಾಗಿರುವುದು ಗಂಭೀರ ವಿಷಯವಾಗಿದೆ. ಬೆದರಿಕೆ ಹಾಕಿದವರನ್ನು ಆಡಳಿತವು ಪತ್ತೆ ಹಚ್ಚಿ ಅವರಿಗೆ ಕಠಿಣ ಶಿಕ್ಷೆ ವಿಧಿಸಿದರೆ, ಮತ್ತೆ ಯಾರೂ ಇಂತಹ ಬೆದರಿಕೆ ಹಾಕಲು ಧೈರ್ಯ ಮಾಡುವುದಿಲ್ಲ.