ದೇವಸ್ಥಾನಗಳ ರೂಢಿ-ಪರಂಪರೆಗಳಲ್ಲಿ ಸರಕಾರದ ಹಸ್ತಕ್ಷೇಪ ಬೇಡ!

ಆಂಧ್ರಪ್ರದೇಶ ಸರಕಾರದ ಶ್ಲಾಘನೀಯ ಆದೇಶ

ಅಮರಾವತಿ (ಆಂಧ್ರಪ್ರದೇಶ) – ಆಂಧ್ರಪ್ರದೇಶ ಸರಕಾರವು ಹೊರಡಿಸಿದ ಅಧಿಸೂಚನೆಯ ಪ್ರಕಾರ, ‘ಯಾವುದೇ ಆಡಳಿತಾಧಿಕಾರಿ (ಆಯುಕ್ತರು, ಪ್ರಾದೇಶಿಕ ಜಂಟಿ ಆಯುಕ್ತರು, ಉಪ ಆಯುಕ್ತರು ಅಥವಾ ಸಹಾಯಕ ಆಯುಕ್ತರು) ತಮ್ಮ ವ್ಯಾಪ್ತಿಯಲ್ಲಿನ ದೇವಸ್ಥಾನಗಳ ಆಗಮ ಸಂಪ್ರದಾಯಗಳು, ರೂಢಿಗಳು ಮತ್ತು ಆಚರಣೆಗಳಲ್ಲಿ ಯಾವುದೇ ಹಸ್ತಕ್ಷೇಪ ಮಾಡುವಂತಿಲ್ಲ’ ಎಂದು ಸ್ಪಷ್ಟಪಡಿಸಲಾಗಿದೆ.

ಈ ಕುರಿತು ಹೊರಡಿಸಲಾದ ಆದೇಶದಲ್ಲಿ ‘ವೇದಶಾಸ್ತ್ರ ಮತ್ತು ಆಗಮಶಾಸ್ತ್ರಗಳ ವಿಷಯದಲ್ಲಿ ದೇವಸ್ಥಾನಗಳಿಗೆ ಸ್ವಾಯತ್ತತೆ ನೀಡಬೇಕು, ದೇವಸ್ಥಾನಗಳ ಪದ್ಧತಿಗಳು ಮತ್ತು ಸಂಪ್ರದಾಯಗಳ ಪಾವಿತ್ಯ್ರತೆ ಕಾಪಾಡಬೇಕು, ಹಾಗೂ ಧರ್ಮದಾಯ ಅಧಿನಿಯಮದ ಕಲಂ ೧೩(೧) ರ ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು’ ಎಂದು ಸ್ಪಷ್ಟಪಡಿಸಲಾಗಿದೆ.

ಆದೇಶವೇನು?

೧. ಪ್ರಮುಖ ಧಾರ್ಮಿಕ ನಿರ್ಧಾರಗಳಲ್ಲಿ ಆಚಾರ್ಯ ಅಥವಾ ಅರ್ಚಕರ ನಿರ್ಧಾರ ಅಂತಿಮ!

ಪೂಜಾ ವಿಧಿಗಳು, ಸೇವೆಗಳು (ಸೇವಾ ಪದ್ಧತಿಗಳು), ಯಾಗ, ಕುಂಭಾಭಿಷೇಕ, ಹಬ್ಬ-ಸಮಾರಂಭಗಳ ಕುರಿತು ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ದೇವಸ್ಥಾನದ ಹಿರಿಯ ಅರ್ಚಕರು ಮತ್ತು ಧಾರ್ಮಿಕ ಅಧಿಕಾರಿಗಳ ಅಭಿಪ್ರಾಯವು ನಿರ್ಣಾಯಕವಾಗಿರುತ್ತದೆ. ಈ ಸಂಬಂಧ ಅಗತ್ಯವಿದ್ದಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳು ದೇವಾಲಯಗಳಿಗಾಗಿ ವೇದಶಾಸ್ತ್ರ ಸಮಿತಿಯನ್ನು ಸ್ಥಾಪಿಸಬಹುದು. ಭಿನ್ನಾಭಿಪ್ರಾಯ ಉಂಟಾದಲ್ಲಿ, ಆ ಆಗಮ ಸಂಪ್ರದಾಯಕ್ಕೆ ಸಂಬಂಧಿಸಿದ ಪೀಠದ ಪೀಠಾಧಿಪತಿಗಳ ಸಲಹೆಯನ್ನು ಪಡೆಯಬೇಕು.

೨. ಪ್ರತಿ ದೇವಸ್ಥಾನವನ್ನು ಸ್ವತಂತ್ರವೆಂದು ಪರಿಗಣಿಸಲಾಗುವುದು!

ಯಾವುದೇ ದೇವಸ್ಥಾನದ ಮೇಲೆ, ಅದು ಒಂದೇ ಆಗಮ ಸಂಪ್ರದಾಯಕ್ಕೆ ಸೇರಿದ್ದರೂ, ಇತರ ದೇವಸ್ಥಾನಗಳ ಸಂಪ್ರದಾಯಗಳನ್ನು ಪಾಲಿಸುವಂತೆ ಒತ್ತಾಯಿಸಲಾಗುವುದಿಲ್ಲ.

೩. ಸೇವಾ ಪದ್ಧತಿಯಲ್ಲಿ ಆಡಳಿತದ ಹಸ್ತಕ್ಷೇಪ ನಿಷಿದ್ಧ!

ಕಾರ್ಯನಿರ್ವಾಹಕ ಅಧಿಕಾರಿಗಳು ಯಾವುದೇ ಆಗಮ-ವಿರೋಧಿ ಬದಲಾವಣೆಗಳು ಆಗದಂತೆ ಖಚಿತಪಡಿಸಿಕೊಳ್ಳಲು ಮಾತ್ರ ಹಸ್ತಕ್ಷೇಪ ಮಾಡಬಹುದು; ಆದರೆ ಆ ಅಧಿಕಾರಿಯು ನೇರವಾಗಿ ಸೇವೆ ಅಥವಾ ಪೂಜಾ ವಿಧಿಗಳಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ.