ಚೀನಾದಿಂದ ಬ್ರಹ್ಮಪುತ್ರ ನದಿಯ ಮೇಲೆ ವಿಶ್ವದ ಅತಿ ದೊಡ್ಡ ಅಣೆಕಟ್ಟು ನಿರ್ಮಾಣ ಪ್ರಾರಂಭ

ಬೀಜಿಂಗ್ (ಚೀನಾ) – ಚೀನಾವು ಬ್ರಹ್ಮಪುತ್ರ ನದಿಯ ಮೇಲೆ ವಿಶ್ವದ ಅತಿ ದೊಡ್ಡ ಅಣೆಕಟ್ಟಿನ ನಿರ್ಮಾಣವನ್ನು ಪ್ರಾರಂಭಿಸಿದೆ. ಚೀನಾದ ಪ್ರಧಾನಮಂತ್ರಿ ಲಿ ಕೆಕಿಯಾಂಗ್ ಅವರು ಜುಲೈ 19 ರಂದು ಈ ಅಣೆಕಟ್ಟಿನ ನಿರ್ಮಾಣಕ್ಕೆ ಚಾಲನೆ ನೀಡಿದರು. ಟಿಬೆಟ್ ಮತ್ತು ಅರುಣಾಚಲ ಪ್ರದೇಶದ ಗಡಿಯಲ್ಲಿರುವ ನ್ಯಿಂಗ್ಚಿ ನಗರದಲ್ಲಿ ಈ ಅಣೆಕಟ್ಟನ್ನು ನಿರ್ಮಿಸಲಾಗುತ್ತಿದ್ದು, ಇದಕ್ಕೆ 12 ಲಕ್ಷ ಕೋಟಿ ರೂಪಾಯಿ ವೆಚ್ಚವಾಗಲಿದೆ. ಇಲ್ಲಿ 5 ಜಲವಿದ್ಯುತ್ ಕೇಂದ್ರಗಳು ಇರಲಿವೆ. ಈ ಯೋಜನೆಯಿಂದ ವಾರ್ಷಿಕವಾಗಿ 300 ಶತಕೋಟಿ ಕಿಲೋವ್ಯಾಟ್‌ಗಳಿಗಿಂತ ಹೆಚ್ಚು ವಿದ್ಯುತ್ ಉತ್ಪಾದನೆಯಾಗಲಿದೆ. ಈ ವಿದ್ಯುತ್ 30 ಕೋಟಿ ಜನರ ಅಗತ್ಯಗಳನ್ನು ಪೂರೈಸಬಲ್ಲದು. ಈ ಅಣೆಕಟ್ಟಿಗೆ ಭಾರತವು ಮೊದಲಿನಿಂದಲೂ ವಿರೋಧ ವ್ಯಕ್ತಪಡಿಸುತ್ತಿದ್ದರೆ, ಬಾಂಗ್ಲಾದೇಶವೂ ಇದರ ಬಗ್ಗೆ ಕಳವಳ ವ್ಯಕ್ತಪಡಿಸಿದೆ.

ವಿರೋಧಕ್ಕೆ ಕಾರಣವೇನು?

ಟಿಬೆಟಿಯನ್ ಪ್ರಸ್ಥಭೂಮಿಯ ಪೂರ್ವ ಅಂಚಿನಲ್ಲಿರುವ ಹಿಮಾಲಯದ ವಿಶಾಲ ಕಣಿವೆಯಲ್ಲಿ ಈ ಅಣೆಕಟ್ಟನ್ನು ನಿರ್ಮಿಸಲಾಗುತ್ತಿದೆ. ಈ ಪ್ರದೇಶದಲ್ಲಿ ಆಗಾಗ್ಗೆ ಭೂಕಂಪಗಳು ಸಂಭವಿಸುತ್ತವೆ. ಅಣೆಕಟ್ಟಿನ ನಿರ್ಮಾಣವು ಪರಿಸರ ವ್ಯವಸ್ಥೆಯ ಮೇಲೆ ಒತ್ತಡವನ್ನು ಹೇರಬಹುದು, ಇದರಿಂದ ಹಲವು ಅಪಘಾತಗಳು ಸಂಭವಿಸಬಹುದು. ಭಾರತ ಮತ್ತು ಬಾಂಗ್ಲಾದೇಶದ ಈಶಾನ್ಯ ರಾಜ್ಯಗಳು ಈಗಾಗಲೇ ಪ್ರವಾಹ ಪರಿಸ್ಥಿತಿಗಳನ್ನು ಎದುರಿಸುತ್ತಿವೆ. ಹವಾಮಾನ ಬದಲಾವಣೆಯಿಂದಾಗಿ ಭೂಕುಸಿತ, ಭೂಕಂಪ ಮತ್ತು ಪ್ರವಾಹ ಇತ್ಯಾದಿ ಸವಾಲುಗಳನ್ನು ಅವು ಎದುರಿಸಬೇಕಾಗಬಹುದು. ಭಾರತೀಯ ವಿದೇಶಾಂಗ ಸಚಿವಾಲಯದ ವಕ್ತಾರರು 2025ರ ಜನವರಿ 3 ರಂದು ಪತ್ರಿಕಾಗೋಷ್ಠಿಯಲ್ಲಿ ಈ ಅಣೆಕಟ್ಟಿಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಬ್ರಹ್ಮಪುತ್ರದ ಮೇಲೆ ಅಣೆಕಟ್ಟು ನಿರ್ಮಿಸುವುದರಿಂದ ನದಿಯ ಕೆಳಭಾಗದ ರಾಜ್ಯಗಳಿಗೆ ಹಾನಿಯಾಗಬಾರದು ಎಂದು ಭಾರತ ಹೇಳಿತ್ತು.

ಸಂಪಾದಕೀಯ ನಿಲುವು

ಅಣೆಕಟ್ಟಿನ ಮೂಲಕ ನೀರನ್ನು ತಡೆಹಿಡಿದು ಭಾರತವನ್ನು ಇಕ್ಕಟ್ಟಿಗೆ ಸಿಲುಕಿಸುವ ಮತ್ತೊಂದು ಪ್ರಯತ್ನ ಇದು. ಇದನ್ನು ಆಕ್ರಮಣಕಾರಿಯಾಗಿ ತಡೆಯಲು ಭಾರತ ಪ್ರಯತ್ನಿಸುವುದು ಅವಶ್ಯಕ!