‘ಆಪರೇಷನ್ ಸಿಂದೂರ್’ ಪ್ರಾರಂಭದಲ್ಲಿ ಕೇವಲ ಭಯೋತ್ಪಾದಕ ನೆಲೆಗಳು ಗುರಿಯಾಗಿದ್ದರಿಂದ ಭಾರತ ಕೆಲವು ಯುದ್ಧ ವಿಮಾನಗಳನ್ನು ಕಳೆದುಕೊಂಡಿತು!

ಇಂಡೋನೇಷ್ಯಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ಸೇನಾಧಿಕಾರಿಯ ಹೇಳಿಕೆ

ಜಕಾರ್ತಾ (ಇಂಡೋನೇಷ್ಯಾ) / ನವದೆಹಲಿ – ‘ಆಪರೇಷನ್ ಸಿಂದೂರ್’ ಪ್ರಾರಂಭದಲ್ಲಿ ಭಾರತೀಯ ವಾಯುಪಡೆಗೆ ಪಾಕಿಸ್ತಾನಿ ಸೇನಾ ನೆಲೆಗಳ ಮೇಲೆ ಮತ್ತು ವಾಯು ರಕ್ಷಣಾ ವ್ಯವಸ್ಥೆಗಳ ಮೇಲೆ ದಾಳಿ ಮಾಡಲು ಅನುಮತಿ ಇರಲಿಲ್ಲ. ಭಯೋತ್ಪಾದಕರ ಮೂಲಸೌಕರ್ಯಗಳನ್ನು ಮಾತ್ರ ಗುರಿಯಾಗಿಸಲು ಸೂಚನೆಗಳನ್ನು ನೀಡಲಾಗಿತ್ತು. ಇದರಿಂದಲೇ ಭಾರತ ಕೆಲವು ಯುದ್ಧ ವಿಮಾನಗಳನ್ನು ಕಳೆದುಕೊಂಡಿತು ಎಂದು ಇಂಡೋನೇಷ್ಯಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ಸೇನಾಧಿಕಾರಿ ಕ್ಯಾಪ್ಟನ್ ಶಿವಕುಮಾರ ಹೇಳಿಕೆ ನೀಡಿದ ನಂತರ ವಿವಾದ ಸೃಷ್ಟಿಯಾಗಿದೆ. ಈ ಕುರಿತು ಭಾರತ ಸರಕಾರದಿಂದ ಸ್ಪಷ್ಟೀಕರಣ ನೀಡಲಾಗಿದೆ.

೧. ಜೂನ್ ೧೦ ರಂದು ಜಕಾರ್ತಾದ ಒಂದು ವಿಶ್ವವಿದ್ಯಾಲಯದಲ್ಲಿ ‘ಭಾರತ-ಪಾಕ್ ವಾಯು ಯುದ್ಧ ಮತ್ತು ಇಂಡೋನೇಷ್ಯಾದ ಕಾರ್ಯತಂತ್ರ’ ಎಂಬ ವಿಷಯದ ಕುರಿತ ಚರ್ಚಾಕೂಟದಲ್ಲಿ ಕ್ಯಾಪ್ಟನ್ ಶಿವಕುಮಾರ ಅವರು ಮೇಲಿನ ಹೇಳಿಕೆಯನ್ನು ನೀಡಿದ್ದರು. ಇದರ ವಿಡಿಯೋ ಈಗ ವೈರಲ್ ಆದ ನಂತರ ವಿವಾದ ಸೃಷ್ಟಿಯಾಗಿದೆ. ಈ ಮೊದಲು ಮೂರೂ ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ ಅವರು ಒಂದು ಸಂದರ್ಶನದಲ್ಲಿ ಕೆಲವು ವಿಮಾನಗಳನ್ನು ಕಳೆದುಕೊಂಡಿದ್ದನ್ನು ಒಪ್ಪಿಕೊಂಡಿದ್ದರು.

೨. ಕ್ಯಾಪ್ಟನ್ ಶಿವಕುಮಾರ ಅವರು ಮುಂದೆ ಮಾತನಾಡಿ, ವಿಮಾನಗಳ ಹಾನಿಯ ನಂತರ ಭಾರತ ತನ್ನ ಕಾರ್ಯತಂತ್ರವನ್ನು ಬದಲಾಯಿಸಿತು ಮತ್ತು ಸೇನಾ ನೆಲೆಗಳನ್ನು ಗುರಿಯಾಗಿಸಿತು. ಮೊದಲು ಶತ್ರುವಿನ ವಾಯು ರಕ್ಷಣಾ ವ್ಯವಸ್ಥೆಯನ್ನು ನಾಶಪಡಿಸಲಾಯಿತು ಎಂದು ಹೇಳಿದರು.

ಸರಕಾರ ದೇಶವನ್ನು ದಾರಿ ತಪ್ಪಿಸಿದೆ! – ಕಾಂಗ್ರೆಸ್

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಶಿವಕುಮಾರ ಅವರ ಹೇಳಿಕೆಯ ಕುರಿತು ಮಾತನಾಡಿ, ಈ ಹಿಂದೆ ಅನಿಲ್ ಚೌಹಾಣ ಅವರು ಸಿಂಗಾಪುರದಲ್ಲಿ ಅನೇಕ ವಿಷಯಗಳನ್ನು ಬಹಿರಂಗಪಡಿಸಿದ್ದರು. ಈಗ ಇಂಡೋನೇಷ್ಯಾದಲ್ಲಿ ಹಿರಿಯ ರಕ್ಷಣಾ ಅಧಿಕಾರಿಗಳು ಇಂತಹ ಹೇಳಿಕೆಗಳನ್ನು ನೀಡುತ್ತಾರೆ; ಆದರೆ ಪ್ರಧಾನಮಂತ್ರಿ ಏಕೆ ಸರ್ವಪಕ್ಷ ಸಭೆಯ ಅಧ್ಯಕ್ಷತೆ ವಹಿಸಲು ಮತ್ತು ವಿರೋಧ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ನಿರಾಕರಿಸುತ್ತಿದ್ದಾರೆ? ಸಂಸತ್ತಿನ ವಿಶೇಷ ಅಧಿವೇಶನದ ಬೇಡಿಕೆಯನ್ನು ಏಕೆ ತಿರಸ್ಕರಿಸಲಾಯಿತು? ಎಂದು ರಮೇಶ್ ಪ್ರಶ್ನಿಸಿದರು.

ಭಾರತೀಯ ರಾಯಭಾರ ಕಚೇರಿಯ ಸ್ಪಷ್ಟೀಕರಣ

ಇಂಡೋನೇಷ್ಯಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯು, ಶಿವಕುಮಾರ ಅವರ ಹೇಳಿಕೆ ಸಂದರ್ಭರಹಿತವಾಗಿದೆ. ಅವರ ಪ್ರಸ್ತುತಿಯ ಉದ್ದೇಶ ಮತ್ತು ಮೂಲ ಗುರಿ ತಪ್ಪಾಗಿದೆ. ಭಾರತೀಯ ಸೇನೆಯು ರಾಜಕೀಯ ನಾಯಕತ್ವದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ, ಇದು ನಮ್ಮ ಕೆಲವು ನೆರೆಯ ದೇಶಗಳಿಗಿಂತ ಭಿನ್ನವಾಗಿದೆ ಎಂದು ಪ್ರಸ್ತುತಿಯಲ್ಲಿ ಹೇಳಲಾಗಿದೆ. ‘ಆಪರೇಷನ್ ಸಿಂದೂರ್’ನ ಉದ್ದೇಶ ಭಯೋತ್ಪಾದಕ ಮೂಲಸೌಕರ್ಯಗಳನ್ನು ಗುರಿಯಾಗಿಸುವುದಾಗಿತ್ತು. ಭಾರತದ ಪ್ರತಿಕ್ರಿಯೆ ಪ್ರಚೋದನಕಾರಿ ಆಗಿರಲಿಲ್ಲ ಎಂದು ಸ್ಪಷ್ಟಪಡಿಸಿದೆ.