ಸಂತ್ರಸ್ತ ವಿದ್ಯಾರ್ಥಿನಿ ಘಟನಾ ಸ್ಥಳಕ್ಕೆ ಏಕೆ ಹೋಗಿದ್ದಳು? – ತೃಣಮೂಲ ಕಾಂಗ್ರೆಸ್ ಶಾಸಕ ಮದನ್ ಮಿತ್ರಾ ಅವರ ಆಘಾತಕಾರಿ ಪ್ರಶ್ನೆ

ಕೊಲಕಾತಾ: ಕಾನೂನು ಕಾಲೇಜಿನ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ

ಕೋಲಕಾತಾ (ಪ.ಬಂಗಾಳ) – ಕಾನೂನು ಕಾಲೇಜಿನಲ್ಲಿ 19 ವರ್ಷದ ವಿದ್ಯಾರ್ಥಿನಿ ಮೇಲೆ ಅದೇ ಕಾಲೇಜಿನ ಇಬ್ಬರು ಹಾಲಿ ವಿದ್ಯಾರ್ಥಿಗಳು ಮತ್ತು ಒಬ್ಬ ಮಾಜಿ ವಿದ್ಯಾರ್ಥಿ ಸೇರಿ ಮೂವರು ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ರಾಜ್ಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್ ಶಾಸಕ ಮದನ್ ಮಿತ್ರಾ ಅವರು, ‘ವಿದ್ಯಾರ್ಥಿನಿ ತಾನು ಎಲ್ಲಿಗೆ ಹೋಗುತ್ತಿದ್ದಾಳೆ ಎಂದು ಯಾರಿಗಾದರೂ ಹೇಳಿದ್ದರೆ, ಮತ್ತು ತನ್ನೊಂದಿಗೆ ಕೆಲವು ಸ್ನೇಹಿತರನ್ನು ಕರೆದುಕೊಂಡು ಹೋಗಿದ್ದರೆ, ಈ ಘಟನೆ ನಡೆಯುತ್ತಿರಲಿಲ್ಲ. ಅಪರಾಧಿಗಳು ಪರಿಸ್ಥಿತಿಯ ಲಾಭ ಪಡೆದರು’ ಎಂದು ಆಘಾತಕಾರಿ ಹೇಳಿಕೆ ನೀಡಿದ್ದಾರೆ. ಮಿತ್ರಾ ಅವರ ಹೇಳಿಕೆಗೆ ಬಿಜೆಪಿ ತೀವ್ರ ಟೀಕೆ ವ್ಯಕ್ತಪಡಿಸಿದ ನಂತರ, ಅವರು ಸ್ಪಷ್ಟನೆ ನೀಡಿದ್ದಾರೆ. ಮಿತ್ರಾ ಅವರು, ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಮತ್ತು ತಮ್ಮ ಮಾತಿಗೆ ಅಂತಹ ಅರ್ಥವಿರಲಿಲ್ಲ ಎಂದಿದ್ದಾರೆ.

ಮಿತ್ರಾ ಅವರಿಗಿಂತ ಮೊದಲು ತೃಣಮೂಲ ಕಾಂಗ್ರೆಸ್ ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು, ‘ಒಬ್ಬ ಸ್ನೇಹಿತ ತನ್ನ ಗೆಳತಿಯ ಮೇಲೆ ಅತ್ಯಾಚಾರ ಮಾಡಿದರೆ ಏನು ಮಾಡಬಹುದು? ಶಾಲೆಗಳಲ್ಲಿ ಪೊಲೀಸರು ಇರುತ್ತಾರೆಯೇ? ವಿದ್ಯಾರ್ಥಿಗಳು ಓರ್ವ ವಿದ್ಯಾರ್ಥಿನಯ ಬಲಾತ್ಕಾರ ಮಾಡಿದರೆ ಸಂತ್ರಸ್ತೆಯನ್ನು ಯಾರು ರಕ್ಷಿಸುತ್ತಾರೆ? ಈ ಎಲ್ಲಾ ಅಪರಾಧಗಳು ಮತ್ತು ಕಿರುಕುಳವನ್ನು ನೀಡುವವರು ಯಾರು? ಕೆಲವು ಪುರುಷರು ಹೀಗೆ ಮಾಡುತ್ತಾರೆ. ಮಹಿಳೆಯರು ಯಾರ ವಿರುದ್ಧ ಹೋರಾಡಬೇಕು? ಮಹಿಳೆಯರು ಈ ವಿಕೃತ ಪುರುಷರ ವಿರುದ್ಧ ಹೋರಾಡಬೇಕು’ ಎಂದಿದ್ದರು.

ಮದನ್ ಮಿತ್ರಾ ಮತ್ತು ಕಲ್ಯಾಣ್ ಬ್ಯಾನರ್ಜಿ ಅವರ ಹೇಳಿಕೆಗಳಿಗೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಎಂದು ತೃಣಮೂಲ ಕಾಂಗ್ರೆಸ್ ಕೈ ಜಾಡಿಸಿಕೊಂಡಿದೆ.

ಸಂಪಾದಕೀಯ ನಿಲುವು

ತೃಣಮೂಲ ಕಾಂಗ್ರೆಸ್ ಸರ್ಕಾರವಿರುವ ಪ.ಬಂಗಾಳದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಅಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸುವುದು ಅವಶ್ಯಕ ಎಂಬುದು ಈ ಹೇಳಿಕೆಯಿಂದ ತಿಳಿದುಬರುತ್ತದೆ!