ಮಧ್ಯಪ್ರದೇಶದ ಸಚಿವ ಸಂಪುಟದಿಂದ ಸಮಾನ ನಾಗರಿಕ ಸಂಹಿತೆಗೆ ಅನುಮೋದನೆ

ಭೋಪಾಲ (ಮಧ್ಯಪ್ರದೇಶ) – ಮಧ್ಯಪ್ರದೇಶದ ಭಾಜಪ ಸರಕಾರದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಎಲ್ಲಾ ಧರ್ಮೀಯರಿಗೆ ಸಮಾನ ಕಾನೂನುಗಳನ್ನು ಒಳಗೊಂಡಿರುವ ‘ಸಮಾನ ನಾಗರಿಕ ಸಂಹಿತೆ ವಿಧೇಯಕ, ೨೦೨೬’ಕ್ಕೆ ಅನುಮೋದನೆ ನೀಡಲಾಯಿತು. ವಿಧಾನಸಭೆಯಲ್ಲಿ ಈ ವಿಧೇಯಕ ಅಂಗೀಕಾರಗೊಂಡ ನಂತರ ಮತ್ತು ಅಧಿಸೂಚನೆಯ ಬಳಿಕ ಈ ಕಾಯ್ದೆ ಜಾರಿಗೆ ಬರಲಿದೆ.

​ವಿಧೇಯಕದಲ್ಲಿ ಯಾವ ನಿಯಮಗಳಿವೆ ?

ಬಹುವಿವಾಹದ ಮೇಲೆ ನಿಷೇಧ, ವಿಚ್ಛೇದನಕ್ಕೆ ಸಮಾನ ಕಾನೂನು ಪ್ರಕ್ರಿಯೆ, ಪುರುಷರು ಮತ್ತು ಮಹಿಳೆಯರಿಗೆ ಆಸ್ತಿಯಲ್ಲಿ ಸಮಾನ ಹಕ್ಕು, ಉತ್ತರಾಧಿಕಾರತ್ವ, ಗ್ರಾಮ ಮಟ್ಟದಲ್ಲಿ ವಿವಾಹದ ನೋಂದಣಿ ಮತ್ತು ‘ಲೀವ್-ಇನ್ ರಿಲೇಷನ್‌ಶಿಪ್’ನ ಕಡ್ಡಾಯ ನೋಂದಣಿಗಳು ಸೇರಿವೆ. ಆದರೆ ರಾಜ್ಯದ ಬುಡಕಟ್ಟು ಜನಸಂಖ್ಯೆಯನ್ನು ಈ ಕಾಯ್ದೆಯ ವ್ಯಾಪ್ತಿಯಿಂದ ಹೊರಗಿಡಲಾಗಿದೆ.

ಸಂಪಾದಕೀಯ ನಿಲುವು

ಒಂದೊಂದೇ ರಾಜ್ಯದಲ್ಲಿ ಈ ಕಾಯ್ದೆ ಜಾರಿಗೆ ತರುವುದಕ್ಕಿಂತ ಕೇಂದ್ರ ಸರಕಾರವು ಇಡೀ ದೇಶದಲ್ಲಿ ಈ ಕಾಯ್ದೆಯನ್ನು ಜಾರಿಗೊಳಿಸುವುದು ಅಗತ್ಯವಾಗಿದೆ. ಸದ್ಯಕ್ಕೆ ಭಾಜಪ ಆಡಳಿತವಿರುವ ರಾಜ್ಯಗಳಷ್ಟೇ ಈ ಕಾಯ್ದೆ ಜಾರಿಗೊಳಿಸುತ್ತಿವೆ, ಆದರೆ ಇತರ ಪಕ್ಷಗಳ ಸರಕಾರಗಳಿಂದ ಇಂತಹ ಕಾಯ್ದೆ ಜಾರಿಗೆ ತರದ ಕಾರಣ ಆ ರಾಜ್ಯಗಳಿಗೆ ಅನ್ಯಾಯ ಮಾಡಿದಂತಾಗುತ್ತದೆ !