ಹಿಂಸಾಚಾರಕ್ಕೆ ತಿರುಗಿದ ‘ಕಾಕರೋಚ್ ಜನತಾ ಪಾರ್ಟಿ’ಯ ಸಂಸತ್ ಭವನ ಚಲೋ ಪ್ರತಿಭಟನೆ; ಪೊಲೀಸರಿಂದ ಲಾಠಿ ಪ್ರಹಾರ

  • ಕಾರ್ಯಕರ್ತರಿಂದ ಕಲ್ಲು ತೂರಾಟ - ಪೊಲೀಸರು ಸೇರಿದಂತೆ ಕೆಲವರಿಗೆ ಗಾಯ

  • ಪೊಲೀಸರಿಂದ ಅಶ್ರುವಾಯು

  • ಜಂತರ್ ಮಂತರ್‌ನಲ್ಲಿದ್ದ ಪ್ರತಿಭಟನಾ ಸ್ಥಳವನ್ನು ತೆರವುಗೊಳಿಸಿದ ಪೊಲೀಸರು

ನವದೆಹಲಿ – ಕಳೆದ 31 ದಿನಗಳಿಂದ ಇಲ್ಲಿನ ಜಂತರ್ ಮಂತರ್‌ನಲ್ಲಿ ‘ಕಾಕರೋಚ್ ಜನತಾ ಪಾರ್ಟಿ’ ವತಿಯಿಂದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಗುತ್ತಿತ್ತು. ಜುಲೈ 20 ರಂದು ಯಾವುದೇ ಅನುಮತಿ ಇಲ್ಲದೆ ಪಕ್ಷದ ವತಿಯಿಂದ ಸಾವಿರಾರು ಕಾರ್ಯಕರ್ತರೊಂದಿಗೆ ಸಂಸತ್ ಭವನದ ಕಡೆಗೆ ಮೆರವಣಿಗೆ (ಮೋರ್ಚಾ) ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಪೊಲೀಸರು ಪ್ರತಿಭಟನಾಕಾರರನ್ನು ತಡೆಯಲು ಯತ್ನಿಸಿದಾಗ, ಪಕ್ಷದ ಹಿಂಸಾತ್ಮಕ ಕಾರ್ಯಕರ್ತರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಲು ಪ್ರಾರಂಭಿಸಿದರು. ಈ ಘಟನೆಯಲ್ಲಿ ಕೆಲವು ಪೊಲೀಸರು ಸೇರಿದಂತೆ ಹಲವರು ಗಾಯಗೊಂಡರು. ಇದರ ನಂತರ ಪೊಲೀಸರು ಕಾರ್ಯಕರ್ತರನ್ನು ಚದುರಿಸಲು ಲಾಠಿ ಪ್ರಹಾರ ನಡೆಸಿದರು ಮತ್ತು ಅಶ್ರುವಾಯು ಶೆಲ್‌ಗಳನ್ನು ಸಿಡಿಸಿದರು. ಕಾರ್ಯಕರ್ತರು ಸಂಸತ್ ಭವನದವರೆಗೆ ಹೋಗದಂತೆ ತಡೆಯಲಾಯಿತು. ಕಾರ್ಯಕರ್ತರು ಸಂಸತ್ತಿನಿಂದ 100 ಮೀಟರ್ ದೂರದಲ್ಲಿ ಪೊಲೀಸರು ಅಳವಡಿಸಿದ್ದ ಬ್ಯಾರಿಕೇಡ್‌ಗಳನ್ನು ಮುರಿಯಲು ಮತ್ತು ತಳ್ಳಾಟ ನಡೆಸಲು ಪ್ರಯತ್ನಿಸಿದರು. ಇದರಿಂದಾಗಿ ಇಲ್ಲಿ ಕೆಲವು ಗಂಟೆಗಳ ಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.

ಪರಿಸ್ಥಿತಿ ಹದಗೆಡುತ್ತಿರುವುದನ್ನು ಕಂಡು ಸಂಸತ್ ಭವನದ ಭದ್ರತೆಯನ್ನು ಇನ್ನಷ್ಟು ಹೆಚ್ಚಿಸಲಾಗಿತ್ತು. ಎಲ್ಲಾ ಮುಖ್ಯ ಪ್ರವೇಶ ದ್ವಾರಗಳನ್ನು ಮುಚ್ಚಲಾಗಿತ್ತು. ಪ್ರತಿಭಟನಾಕಾರರು ಸಂಸತ್ತಿನ ಆವರಣ ಪ್ರವೇಶಿಸುವ ತಂತ್ರ ರೂಪಿಸಿದ್ದರು. ಕಾಕರೋಚ್ ಜನತಾ ಪಕ್ಷದ ಕಾರ್ಯಕರ್ತರು ಮೆರವಣಿಗೆಯ ವೇಳೆ ‘ನಾವೆಲ್ಲರೂ ಒಟ್ಟಾಗಿ ಕೇಂದ್ರದ ಮೋದಿ ಸರಕಾರವನ್ನು ಉರುಳಿಸಬೇಕು’ ಎಂದು ಘೋಷಣೆ ಕೂಗುತ್ತಿದ್ದರು.

ಕಾರ್ಯಕರ್ತರ ಕೈಯಲ್ಲಿ ‘ಭೀಮ್ ಆರ್ಮಿ’ ಪಕ್ಷದ ನೀಲಿ ಧ್ವಜಗಳಿದ್ದವು ಮತ್ತು ಅವರು ‘ಜೈ ಭೀಮ್’ ಘೋಷಣೆಗಳನ್ನು ಕೂಡ ಕೂಗುತ್ತಿದ್ದರು. ಈ ಮೆರವಣಿಗೆಯ ಕೆಲವು ವೀಡಿಯೊಗಳು ಹರಿದಾಡುತ್ತಿದ್ದು, ಅದರಲ್ಲಿ ‘ಕಲ್ಲು ತೂರಾಟ ಅಂತೂ ನಡೆಯೇ ನಡೆಯುತ್ತದೆ’ ಎಂದು ಕಾರ್ಯಕರ್ತರು ಹೇಳುತ್ತಿರುವುದು ಕೇಳಿಬರುತ್ತಿದೆ.

ಒಂದೇ ದಿನದಲ್ಲಿ ಉಪವಾಸ ಸತ್ಯಾಗ್ರಹ ಹಿಂಪಡೆದ ಅಭಿಜೀತ್ ದೀಪ್ಕೆ!

ಜಂತರ್ ಮಂತರ್‌ನಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಅವರನ್ನು ದೆಹಲಿ ಹೈಕೋರ್ಟ್ ಆದೇಶದ ಬಳಿಕ ಪೊಲೀಸರು ಪ್ರತಿಭಟನಾ ಸ್ಥಳದಿಂದ ಕರೆದೊಯ್ದು ಆಸ್ಪತ್ರೆಗೆ ದಾಖಲಿಸಿದ್ದರು. ಅದರ ನಂತರ ಕಾಕರೋಚ್ ಜನತಾ ಪಕ್ಷದ ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹದ ಘೋಷಣೆ ಮಾಡಿದ್ದರು; ಆದರೆ ಅವರು ಮರುದಿನವೇ ತಮ್ಮ ಉಪವಾಸವನ್ನು ಹಿಂಪಡೆದರು. ಸೋನಮ್ ವಾಂಗ್ಚುಕ್ ಅವರ ವಿನಂತಿಯ ಮೇರೆಗೆ ದೀಪ್ಕೆ ಅವರು ಉಪವಾಸ ಸತ್ಯಾಗ್ರಹ ಹಿಂಪಡೆದಿದ್ದಾರೆಂದು ಹೇಳಲಾಗುತ್ತಿದೆ. (ಅನುಮತಿಯ ದುರುಪಯೋಗ ಪಡಿಸಿಕೊಳ್ಳುವುದು! – ಸಂಪಾದಕರು)

ಕಾಕರೋಚ್ ಜನತಾ ಪಕ್ಷದ ವಕ್ತಾರರಿಂದ ಕೇಂದ್ರ ಸಚಿವ ಜೆ.ಪಿ.ನಡ್ಡಾ ಭೇಟಿ

ಕಾಕರೋಚ್ ಜನತಾ ಪಕ್ಷದ ಇಬ್ಬರು ವಕ್ತಾರರು ಕೇಂದ್ರ ಸಚಿವ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿದರು. ಭೇಟಿಯ ನಂತರ ಅವರು ಮಾತನಾಡಿ, “ನಾವು ನಮ್ಮ ಮನವಿಯನ್ನು ಜೆ.ಪಿ.ನಡ್ಡಾ ಅವರಿಗೆ ಸಲ್ಲಿಸಿದ್ದೇವೆ. ಅವರು ನಮ್ಮ ಅಹವಾಲನ್ನು ಸಹಾನುಭೂತಿಯಿಂದ ಆಲಿಸಿದರು ಮತ್ತು ಈ ಇಡೀ ಚರ್ಚೆಯು ಅತ್ಯಂತ ಸೌಹಾರ್ದಯುತ ವಾತಾವರಣದಲ್ಲಿ ನಡೆಯಿತು. ಸರಕಾರ ನಮ್ಮ ಬೇಡಿಕೆಗಳನ್ನು ಖಂಡಿತವಾಗಿಯೂ ಪರಿಗಣಿಸುತ್ತದೆ ಎಂಬ ವಿಶ್ವಾಸ ನಮಗಿದೆ. ನಾವು ನಮ್ಮ ಸ್ಥಳಕ್ಕೆ ಹಿಂತಿರುಗಿ ಎಲ್ಲಾ ಬೆಂಬಲಿಗರಲ್ಲಿ ಶಾಂತಿ ಕಾಪಾಡುವಂತೆ ಮನವಿ ಮಾಡುತ್ತೇವೆ” ಎಂದು ಹೇಳಿದರು.

ಸಂಪಾದಕೀಯ ನಿಲುವು

ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದವರ ವಿರುದ್ಧ ಪ್ರಕರಣ ದಾಖಲಿಸಿ ಅವರನ್ನು ಜೈಲಿಗೆ ಅಟ್ಟಬೇಕು; ಆಗ ಅವರು ಇಂತಹ ಧೈರ್ಯ ಮತ್ತೊಮ್ಮೆ ಮಾಡುವುದಿಲ್ಲ!