೧೨ ವರ್ಷಗಳ ನಂತರ ಎಲ್ಲಾ ಆರೋಪಿಗಳನ್ನು ಪಾಕಿಸ್ತಾನದ ಸರ್ವೋಚ್ಚ ನ್ಯಾಯಾಲಯದಿಂದ ಖುಲಾಸೆ!

  • ಕ್ರೈಸ್ತ ದಂಪತಿಯನ್ನು ಇಟ್ಟಿಗೆ ಭಟ್ಟಿಯಲ್ಲಿ ಜೀವಂತವಾಗಿ ಸುಟ್ಟುಹಾಕಿದ ಪ್ರಕರಣ

  • ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ದಮನ ಮುಂದುವರಿದಿದೆ!

ಇಸ್ಲಾಮಾಬಾದ (ಪಾಕಿಸ್ತಾನ) – ಪಾಕಿಸ್ತಾನದಲ್ಲಿ ೧೨ ವರ್ಷಗಳ ಹಿಂದೆ ಕ್ರೈಸ್ತ ದಂಪತಿಯನ್ನು ಜೀವಂತವಾಗಿ ಸುಟ್ಟುಹಾಕಿದ ಎಲ್ಲಾ ಆರೋಪಿಗಳನ್ನು ಪಾಕಿಸ್ತಾನದ ಸರ್ವೋಚ್ಚ ನ್ಯಾಯಾಲಯವು ಖುಲಾಸೆಗೊಳಿಸಿದೆ.

ಸಂಪೂರ್ಣ ಭಯಾನಕವಾಗಿರುವ ಪ್ರಕರಣ ಯಾವುದು?

ನವೆಂಬರ್ ೪, ೨೦೧೪ ರಂದು ಪಾಕಿಸ್ತಾನದ ಪಂಜಾಬ ಪ್ರಾಂತ್ಯದ ಕಸೂರ್ ಜಿಲ್ಲೆಯಲ್ಲಿ ೨೬ ವರ್ಷದ ಶಹಜಾದ ಮಸೀಹ್ ಮತ್ತು ಅವನ ೨೪ ವರ್ಷದ ಗರ್ಭಿಣಿ ಹೆಂಡತಿ ಶಮಾ ಬೀಬಿ ಎಂಬ ಕ್ರೈಸ್ತ ದಂಪತಿ ಸ್ಥಳೀಯ ಇಟ್ಟಿಗೆ ಭಟ್ಟಿಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಭಟ್ಟಿಯ ಮಾಲೀಕನೊಂದಿಗೆ ಹಣದ ವಿಷಯವಾಗಿ ಅವರಿಗೆ ಭಿನ್ನಾಭಿಪ್ರಾಯ ಇತ್ತು. ಇದೇ ಕಾರಣಕ್ಕೆ ಮಾಲೀಕನು ಅವರನ್ನು ಅಲ್ಲಿಂದ ಹೋಗಲು ಬಿಡಲಿಲ್ಲ. ಒಂದು ದಿನ ಸಂಚು ರೂಪಿಸಿ ಈ ದಂಪತಿಯ ಮೇಲೆ ಕುರಾನ್ ಅವಮಾನಿಸಿದ ಸುಳ್ಳು ಆರೋಪ ಹೊರಿಸಲಾಯಿತು. ಇದರ ನಂತರ ಸ್ಥಳೀಯ ಮೌಲ್ವಿ (ಇಸ್ಲಾಂನ ಧಾರ್ಮಿಕ ನಾಯಕ) ಮಸೀದಿಯಿಂದ ಮುಸಲ್ಮಾನ್ ಗುಂಪನ್ನು ಪ್ರಚೋದಿಸಿದನು. ನೋಡನೋಡುತ್ತಿದ್ದಂತೆ ೧ ಸಾವಿರಕ್ಕೂ ಹೆಚ್ಚು ಜನರ ಹಿಂಸಾತ್ಮಕ ಗುಂಪು ಅಲ್ಲಿ ನೆರೆಯಿತು. ಗುಂಪು ಈ ನಿರಪರಾಧಿ ದಂಪತಿಯ ಮೇಲೆ ಮೊದಲು ಅಮಾನವೀಯವಾಗಿ ಹಲ್ಲೆ ಮಾಡಿತು. ಅವರನ್ನು ನರಳುವಂತೆ ಮಾಡಿ, ನಂತರ ಅವರು ಜೀವಂತವಾಗಿದ್ದಾಗಲೇ ಉರಿಯುತ್ತಿರುವ ಇಟ್ಟಿಗೆ ಭಟ್ಟಿಯ ಬೆಂಕಿಗೆ ಎಸೆದರು.

ಈ ರಾಕ್ಷಸಿ ಕೃತ್ಯದ ನಂತರ ಆರಂಭದಲ್ಲಿ ಪಾಕಿಸ್ತಾನದ ಭಯೋತ್ಪಾದನಾ ವಿರೋಧಿ ನ್ಯಾಯಾಲಯವು ಕಠಿಣ ನಿಲುವು ತಳೆದಿತ್ತು. ನ್ಯಾಯಾಲಯವು ೫ ಮುಖ್ಯ ಆರೋಪಿಗಳಿಗೆ ಗಲ್ಲಿಗೇರಿಸುವ ಶಿಕ್ಷೆಯನ್ನು ವಿಧಿಸಿತ್ತು ಮತ್ತು ಇತರ ೮ ಜನರನ್ನು ಕಾರಾಗೃಹಕ್ಕೆ ಕಳುಹಿಸಿತ್ತು; ಆದರೆ ಕಾಲಕ್ರಮೇಣ ಉಚ್ಛ ನ್ಯಾಯಾಲಯವು ಸಾಕ್ಷ್ಯಗಳ ಕೊರತೆಯ ನೆಪ ಒಡ್ಡಿ ಹಂತಹಂತವಾಗಿ ಎಲ್ಲರನ್ನೂ ಬಿಡುಗಡೆ ಮಾಡಲು ಪ್ರಾರಂಭಿಸಿತು. ಈಗ ಜುಲೈ ೧೦ ರಂದು ಪಾಕಿಸ್ತಾನದ ಸರ್ವೋಚ್ಚ ನ್ಯಾಯಾಲಯವು ಉಳಿದ ಕೊನೆಯ ೩ ಮುಖ್ಯ ದೋಷಿಗಳ ಗಲ್ಲಿಗೇರಿಸುವ ಶಿಕ್ಷೆಯನ್ನೂ ಸಂಪೂರ್ಣವಾಗಿ ರದ್ದುಗೊಳಿಸಿತು. ಅಷ್ಟೇ ಅಲ್ಲದೆ, ಹಿಂಸಾಚಾರದಲ್ಲಿ ಭಾಗಿಯಾಗಿದ್ದ ಇತರ ೧೦೨ ಆರೋಪಿಗಳನ್ನು ಬಿಡುಗಡೆ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಪಂಜಾಬ್ ಸರಕಾರದ ಅರ್ಜಿಯನ್ನೂ ಸರ್ವೋಚ್ಚ ನ್ಯಾಯಾಲಯವು ವಜಾಗೊಳಿಸಿತು.

ಪಾಕಿಸ್ತಾನದ ‘ಕ್ಯಾಥೋಲಿಕ್ ಬಿಷಪ್ಸ್ ಕಾನ್ಫರೆನ್ಸ್’ನ ಅಧ್ಯಕ್ಷ ಬಿಷಪ್ ಸ್ಯಾಮ್ಸನ್ ಶುಕಾರ್ಡಿನ್ ಈ ಪ್ರಕರಣದ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನದಲ್ಲಿ ಕ್ರೈಸ್ತ ಮತ್ತು ಇತರ ಅಲ್ಪಸಂಖ್ಯಾತರ ಮೇಲೆ ನಡೆಯುವ ಉದ್ದೇಶಪೂರ್ವಕ ಹಿಂಸಾಚಾರದ ನಂತರ ಅವರಿಗೆ ನಿಯಮಿತವಾಗಿ ನ್ಯಾಯ ಸಿಗುವುದಿಲ್ಲ ಎಂದು ಶುಕಾರ್ಡಿನ್ ಹೇಳಿದರು.