ಭಾರತೀಯ ನಾವಿಕರಿದ್ದ ಹಡಗಿನ ಮೇಲೆ ರಷ್ಯಾದಿಂದ ದಾಳಿ : 6 ಜನರ ಸಾವು : Russia Ukraine War

ರಷ್ಯಾದಿಂದ ದೋಣಿಯ ಮೇಲೆ ದಾಳಿ

ಕೀವ್ (ಉಕ್ರೇನ್) – ಕಪ್ಪು ಸಮುದ್ರದಲ್ಲಿ (Black Sea) ಭಾರತೀಯ ನಾವಿಕರಿದ್ದ ಸರಕು ಸಾಗಣೆ ಹಡಗಿನ ಮೇಲೆ ರಷ್ಯಾ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಆರು ಜನರು ಸಾವನ್ನಪ್ಪಿದ್ದಾರೆ.

ಒಡೆಸ್ಸಾ ಬಂದರಿನ ಬಳಿ ಟರ್ಕಿ ಮಾಲೀಕತ್ವದ ಮತ್ತು ಗಿನಿ-ಬಿಸೌ ಧ್ವಜವನ್ನು ಹೊಂದಿದ್ದ ‘ಗೋಲ್ಡನ್ ಲಿಯೋ’ ಎಂಬ ಹೆಸರಿನ ಹಡಗಿನ ಮೇಲೆ ರಷ್ಯಾ ಸತತವಾಗಿ 3 ಕ್ಷಿಪಣಿಗಳನ್ನು ಉಡಾಯಿಸಿದೆ. ಈ ಹಡಗಿನಲ್ಲಿ ಭಾರತ ಮತ್ತು ಸಿರಿಯಾ ದೇಶಗಳ ಒಟ್ಟು 17 ನಾವಿಕರು ಹಾಗೂ ಓರ್ವ ಉಕ್ರೇನಿಯನ್ ಕ್ಯಾಪ್ಟನ್ ಕೆಲಸ ಮಾಡುತ್ತಿದ್ದರು. ಈ ದಾಳಿಯಲ್ಲಿ ಕ್ಯಾಪ್ಟನ್ ಸೇರಿದಂತೆ ಇತರೆ 5 ಜನರು ಮೃತಪಟ್ಟಿದ್ದಾರೆ. 4 ಜನರು ನಾಪತ್ತೆಯಾಗಿದ್ದು, 8 ಜನರನ್ನು ರಕ್ಷಿಸಲಾಗಿದೆ. ರಕ್ಷಿಸಲ್ಪಟ್ಟ ನಾವಿಕರಲ್ಲಿ ಇಬ್ಬರು ಗಾಯಗೊಂಡಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ರಷ್ಯಾವು ಉಕ್ರೇನ್ ರಾಜಧಾನಿ ಕೀವ್ ಸೇರಿದಂತೆ ಖಾರ್ಕಿವ್, ಜಪೋರಿಝಿಯಾ ಮತ್ತು ಸುಮಿ ನಗರಗಳ ಮೇಲೆಯೂ ಕ್ಷಿಪಣಿ ಮತ್ತು ಡ್ರೋನ್ ಮೂಲಕ ದಾಳಿ ನಡೆಸಿದೆ. ಈ ದಾಳಿಗಳಲ್ಲಿ 8 ಜನರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ನಾಗರಿಕ ವಸತಿ ಪ್ರದೇಶಗಳು, ಗೋದಾಮುಗಳು ಮತ್ತು ಇತರ ಆಸ್ತಿಪಾಸ್ತಿಗಳಿಗೆ ಭಾರಿ ಹಾನಿಯಾಗಿದೆ. ಇದಕ್ಕೆ ಪ್ರತಿಯಾಗಿ ಉಕ್ರೇನ್ ಕೂಡ ರಷ್ಯಾದ ಹಡಗುಗಳ ಮೇಲೆ ದಾಳಿ ನಡೆಸಿತ್ತು. ಇದಕ್ಕೆ ತಕ್ಕ ಉತ್ತರ ನೀಡಲು ರಷ್ಯಾ ಉಕ್ರೇನ್‌ಗೆ ಸಂಬಂಧಿಸಿದ ಕಪ್ಪು ಸಮುದ್ರದ ಹಡಗುಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಈ ದಾಳಿಯಲ್ಲಿ ಭಾರತೀಯ ನಾವಿಕರೊಬ್ಬರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ.