ಇರಾನಿನ 3 ಪರಮಾಣು ಕೇಂದ್ರಗಳ ಮೇಲೆ ಬಾಂಬ್ ದಾಳಿ ಮಾಡಿದ ಅಮೇರಿಕಾ!

ಇರಾನ್-ಇಸ್ರೇಲ್ ಯುದ್ಧ; ಅಮೇರಿಕಾ ಪ್ರವೇಶ!

ತೆಹರಾನ (ಇರಾನ್) – ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದಲ್ಲಿ ಅಂತಿಮವಾಗಿ ಅಮೇರಿಕಾ ಕೂಡ ಭಾಗಿಯಾಗಿದೆ. ಅಮೇರಿಕಾದ ‘ಬಿ-2 ಬಾಂಬರ್ಸ್’ ಯುದ್ಧ ವಿಮಾನಗಳು ಇರಾನ್‌ನ ಫೋರ್ಡೋ, ನಟಾಂಜ್ ಮತ್ತು ಇಸ್ಫಹಾನ್‌ನಲ್ಲಿರುವ ಪರಮಾಣು ಇಂಧನ ಕೇಂದ್ರಗಳ ಮೇಲೆ ದಾಳಿ ಮಾಡಿ ಅವುಗಳನ್ನು ನಾಶಪಡಿಸಿವೆ. ಈ ಇಂಧನ ಕೇಂದ್ರಗಳು ಭೂಮಿಯಿಂದ 300 ಅಡಿ ಆಳದಲ್ಲಿದ್ದವು. ಅವುಗಳನ್ನು ನಾಶಪಡಿಸುವ ಸಾಮರ್ಥ್ಯವಿರುವ ಬಾಂಬ್‌ಗಳು ಮತ್ತು ಅವುಗಳನ್ನು ಹಾಕುವ ವಿಮಾನಗಳು ಇಸ್ರೇಲ್ ಬಳಿ ಇರಲಿಲ್ಲ. ಆದ್ದರಿಂದ ಅದು ಅಮೇರಿಕಾಕ್ಕೆ ಮನವಿ ಮಾಡಿತ್ತು. ಅಮೇರಿಕಾದ ‘ಬಿ-2 ಬಾಂಬರ್ಸ್’ ವಿಮಾನಗಳು 37 ಗಂಟೆಗಳ ಕಾಲ ಪ್ರಯಾಣ ನಡೆಸಿ ಇರಾನ್‌ ಮೇಲೆ ಈ ದಾಳಿಯನ್ನು ನಡೆಸಿದವು ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಹಿತಿ ನೀಡಿದರು. ಇರಾನ್ ಮೇಲೆ ದಾಳಿ ಮಾಡಿದ ನಂತರ, ಟ್ರಂಪ್ ‘ಫಾಕ್ಸ್ ನ್ಯೂಸ್’ಗೆ, ಫೋರ್ಡೋ ಮೇಲೆ 6 ಬಂಕರ್-ಬಸ್ಟರ್ ಬಾಂಬ್‌ಗಳನ್ನು ಹಾಕಲಾಗಿದೆ, ಆದರೆ ಇತರ ಪರಮಾಣು ಸ್ಥಳಗಳ ಮೇಲೆ 30 ಟೋಮಾಹಾಕ್ ಕ್ಷಿಪಣಿಗಳನ್ನು ಹಾರಿಸಲಾಗಿದೆ ಎಂದು ವಿವರಿಸಿದರು.

ಅಮೇರಿಕಾ ಈ ಹಿಂದಿನಿಂದಲೂ ಇರಾನ್‌ನ ಪರಮಾಣು ಬಾಂಬ್ ತಯಾರಿಕೆಗೆ ವಿರೋಧ ವ್ಯಕ್ತಪಡಿಸುತ್ತಿತ್ತು. ಈ ಬಗ್ಗೆ ಅಮೇರಿಕಾ ಹಲವು ಬಾರಿ ಇರಾನ್‌ಗೆ ಎಚ್ಚರಿಕೆ ನೀಡಿತ್ತು. ಆದರೂ ಇರಾನ್ ಪರಮಾಣು ಬಾಂಬ್ ತಯಾರಿಸುವುದನ್ನು ಮುಂದುವರಿಸಿತು. ಈಗ ಅಮೇರಿಕಾ ನಡೆಸಿದ ದಾಳಿಯಿಂದ ಇರಾನ್‌ಗೆ ಭಾರಿ ಹಾನಿಯಾಗಿದೆ.

ಈಗ ಶಾಂತಿಯ ಸಮಯ ಬಂದಿದೆ! – ಟ್ರಂಪ್

ಟ್ರಂಪ್ ‘ಎಕ್ಸ್’ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿ, “ದಾಳಿಗಳನ್ನು ಮಾಡಿ ನಮ್ಮ ಎಲ್ಲಾ ಯುದ್ಧ ವಿಮಾನಗಳು ಈಗ ಇರಾನ್‌ನ ವಾಯುಗಡಿಯಿಂದ ಸುರಕ್ಷಿತವಾಗಿ ಹೊರಬಂದಿವೆ. ವಿಶ್ವದ ಯಾವುದೇ ಇತರ ಸೇನೆಗೆ ಇಂತಹ ಸಾಮರ್ಥ್ಯವಿರಲಿಲ್ಲ. ಇದು ಅಮೇರಿಕಾದ ಮಿಲಿಟರಿ ಶಕ್ತಿಯ ಯಶಸ್ಸು. ಈಗ ಶಾಂತಿಯ ಸಮಯ ಬಂದಿದೆ” ಎಂದು ಹೇಳಿದರು.

… ಇಲ್ಲದಿದ್ದರೆ ಭವಿಷ್ಯದ ದಾಳಿಗಳು ಇನ್ನಷ್ಟು ಭಯಾನಕವಾಗಿರುತ್ತಿದವು!

ದಾಳಿಯ ನಂತರ ಅಧ್ಯಕ್ಷ ಟ್ರಂಪ್ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದರು. “ಇರಾನ್‌ನ ಪ್ರಮುಖ ಪರಮಾಣು ಯೋಜನೆಗಳು ಸಂಪೂರ್ಣವಾಗಿ ನಾಶವಾಗಿವೆ ನಾನು ಜಗತ್ತಿಗೆ ಹೇಳಬಲ್ಲೆ. ಇರಾನ್ ಇನ್ನೂ ಶಾಂತಿಯನ್ನು ಒಪ್ಪಿಕೊಳ್ಳದಿದ್ದರೆ, ಭವಿಷ್ಯದ ದಾಳಿಗಳು ಇನ್ನಷ್ಟು ಭಯಾನಕವಾಗಿರುತ್ತವೆ” ಎಂದು ಅವರು ಎಚ್ಚರಿಸಿದರು. “ನಾವು ಉಳಿದ ಗುರಿಗಳ ಮೇಲೆ ದಾಳಿ ಮಾಡುತ್ತೇವೆ. ಅವುಗಳಲ್ಲಿ ಹಲವನ್ನು ಕೆಲವೇ ನಿಮಿಷಗಳಲ್ಲಿ ನಾಶಪಡಿಸಬಹುದು” ಎಂದು ಎಚ್ಚರಿಕೆ ನೀಡಿದರು. ಇರಾನ್‌ನಲ್ಲಿ ಶಾಂತಿ ಅಥವಾ ವಿನಾಶ ಎರಡರಲ್ಲಿ ಯಾವುದಾದರೂ ಒಂದೇ ಇರುತ್ತದೆ ಎಂದವರು ಹೇಳಿದರು. ಇರಾನ್ ಕಳೆದ 40 ವರ್ಷಗಳಿಂದ ಅಮೇರಿಕಾದ ವಿರುದ್ಧ ಕೆಲಸ ಮಾಡುತ್ತಿದೆ. ಅನೇಕ ಅಮೇರಿಕನ್ನರು ಇರಾನ್‌ನ ದ್ವೇಷಕ್ಕೆ ಬಲಿಯಾಗಿದ್ದಾರೆ. ಆದ್ದರಿಂದ ಈಗ ಇದನ್ನು ಸಹಿಸಲಾಗುವುದಿಲ್ಲ. ಭಯೋತ್ಪಾದನೆಯನ್ನು ಬೆಂಬಲಿಸುವ ದೇಶವು ಪರಮಾಣು ಬಾಂಬ್ ತಯಾರಿಸುತ್ತಿದ್ದರೆ, ಅದು ಎಲ್ಲರಿಗೂ ಅಪಾಯಕಾರಿ ಎಂದು ಟ್ರಂಪ್ ಹೇಳಿದರು.

ಶಕ್ತಿಯಿಂದ ಮಾತ್ರ ಶಾಂತಿ ಸ್ಥಾಪನೆಯಾಗುತ್ತದೆ! – ನೆತನ್ಯಾಹು

ಇರಾನ್ ಮೇಲೆ ಅಮೇರಿಕಾ ನಡೆಸಿದ ದಾಳಿಯ ನಂತರ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು “ಇದು ಇತಿಹಾಸವನ್ನು ಸೃಷ್ಟಿಸುವ ಧೈರ್ಯಶಾಲಿ ನಿರ್ಧಾರ. ಟ್ರಂಪ್ ಮತ್ತು ನಾನು ಹಲವು ಬಾರಿ ಈ ಮಾತನ್ನು ಹೇಳುತ್ತೇವೆ, ‘ಶಾಂತಿ ಕೇವಲ ಶಕ್ತಿಯಿಂದ ಮಾತ್ರ ಸ್ಥಾಪನೆಯಾಗುತ್ತದೆ.’ ಮೊದಲು ಶಕ್ತಿ ತೋರಿಸಲಾಗುತ್ತದೆ, ನಂತರ ಶಾಂತಿ ಸ್ಥಾಪನೆಯಾಗುತ್ತದೆ” ಎಂದು ಹೇಳಿದರು. ಈ ದಾಳಿಯ ನಂತರ ನೆತನ್ಯಾಹು ಮತ್ತು ಟ್ರಂಪ್ ನಡುವೆ ದೂರವಾಣಿ ಮಾತುಕತೆ ನಡೆಯಿತು. ನೆತನ್ಯಾಹು ಅಮೇರಿಕಾದ ಈ ದಿಟ್ಟ ಕ್ರಮಕ್ಕಾಗಿ ಕೃತಜ್ಞತೆ ಸಲ್ಲಿಸಿದರು.

ಅಮೇರಿಕಾದ ನಾಗರಿಕರು ಹಾನಿಗೆ ಸಿದ್ಧರಾಗಿರಬೇಕು! – ಖಮೇನಿ ಅವರ ಬೆದರಿಕೆ

ಇರಾನ್‌ನ ಸರ್ವೋಚ್ಚ ನಾಯಕ ಅಯಾತುಲ್ಲಾ ಅಲಿ ಖಮೇನಿ ಈ ದಾಳಿಯ ನಂತರ ಬೆದರಿಕೆ ಹಾಕುತ್ತಾ, “ಅಮೇರಿಕನ್ನರು ಹಿಂದೆಂದೂ ಅನುಭವಿಸದ ಹಾನಿ ಮತ್ತು ಆಘಾತಗಳಿಗೆ ಈಗ ಸಿದ್ಧರಾಗಿರಬೇಕು” ಎಂದು ಎಚ್ಚರಿಸಿದರು.

ಇಸ್ರೇಲ್‌ನ 10 ನಗರಗಳ ಮೇಲೆ 30 ಕ್ಷಿಪಣಿಗಳನ್ನು ಹಾರಿಸಿದ ಇರಾನ್!

ಅಮೇರಿಕಾ ನಡೆಸಿದ ದಾಳಿಯ ನಂತರ, ಇರಾನ್ ಪ್ರತ್ಯುತ್ತರವಾಗಿ ಇಸ್ರೇಲ್‌ನ 10 ನಗರಗಳ ಮೇಲೆ 30 ಕ್ಷಿಪಣಿಗಳನ್ನು ಹಾರಿಸಿತು. ತೇಲ ಅವೀವ್, ಹೈಫಾ ಮತ್ತು ಜೆರುಸಲೆಮ್ ನಗರಗಳ ಮೇಲೆ ದಾಳಿ ನಡೆಸಿದೆ.

ಅಮೇರಿಕಾದ ನೆಲೆಗಳ ಮೇಲೆ ಇರಾನ್ ದಾಳಿ ಮಾಡಲಿದೆ!

ಖಮೇನಿ ಅವರ ಈ ಬೆದರಿಕೆಯ ನಂತರ, ಅವರಿಗೆ ಅತ್ಯಂತ ಆಪ್ತರೆಂದು ಪರಿಗಣಿಸಲ್ಪಟ್ಟ ‘ಕಯಾನ್’ ಪತ್ರಿಕೆಯ ಸಂಪಾದಕ ಹುಸೇನ್ ಷರಿಯಾತ್ಮದಾರಿ, ಇರಾನ್ ದಾಳಿ ಮಾಡಲಿರುವ ಸ್ಥಳಗಳ ಪಟ್ಟಿಯನ್ನು ನೀಡಿದರು. “ಈಗ ವಿಳಂಬ ಮಾಡದೆ ಕ್ರಮ ಕೈಗೊಳ್ಳುವ ಸಮಯ ಬಂದಿದೆ. ಇದರಲ್ಲಿ ಮೊದಲ ಹೆಜ್ಜೆ ಬಹ್ರೇನ್‌ನಲ್ಲಿರುವ ಅಮೇರಿಕಾದ ನೌಕಾಪಡೆಯ ಮೇಲೆ ಕ್ಷಿಪಣಿ ದಾಳಿ ಮಾಡುವುದು ಮತ್ತು ಅಮೇರಿಕಾ, ಬ್ರಿಟಿಷ್, ಜರ್ಮನ್ ಮತ್ತು ಫ್ರೆಂಚ್ ಹಡಗುಗಳಿಗೆ ಹಾರ್ಮುಜ್ ಜಲಸಂಧಿಯನ್ನು ಮುಚ್ಚುವುದಾಗಿದೆ” ಎಂದು ಅವರು ಹೇಳಿದರು. ಹಾರ್ಮುಜ್ ಜಲಸಂಧಿಯು ಪರ್ಷಿಯನ್ ಮತ್ತು ಒಮಾನ್ ಕೊಲ್ಲಿಗಳನ್ನು ಸಂಪರ್ಕಿಸುತ್ತದೆ. ಈ ಜಲಮಾರ್ಗವು ಇರಾನ್ ಮತ್ತು ಒಮಾನ್ ನಡುವೆ ಇದ್ದು ಇದು ವಿಶ್ವದ ಅತ್ಯಂತ ಪ್ರಮುಖ ತೈಲ ಸಾರಿಗೆ ಮಾರ್ಗವಾಗಿದೆ. ವಿಶ್ವದ 20% ತೈಲ ಸಾರಿಗೆಯು ಈ ಮಾರ್ಗದಿಂದಲೇ ನಡೆಯುತ್ತದೆ. ಅಮೇರಿಕಾ, ಬ್ರಿಟನ್, ಜರ್ಮನಿ ಮತ್ತು ಫ್ರಾನ್ಸ್‌ನ ಯುದ್ಧನೌಕೆಗಳು ಮತ್ತು ವಾಣಿಜ್ಯ ಹಡಗುಗಳು ಈ ಮಾರ್ಗದಲ್ಲಿ ನಿಯೋಜಿಸಲ್ಪಟ್ಟಿವೆ. ಈ ಮಾರ್ಗವನ್ನು ಮುಚ್ಚಿದರೆ, ಜಾಗತಿಕ ತೈಲ ಬೆಲೆಗಳು ಹೆಚ್ಚಾಗುವುದರೊಂದಿಗೆ ದೊಡ್ಡ ಅಂತರರಾಷ್ಟ್ರೀಯ ಬಿಕ್ಕಟ್ಟು ಸೃಷ್ಟಿಯಾಗುವ ಸಾಧ್ಯತೆಯಿದೆ.

ಬಾಂಬ್ ಹಾಕಿದ ಸ್ಥಳದಲ್ಲಿ ಯುರೇನಿಯಂ ಇರಲಿಲ್ಲ: ಇರಾನ್‌ನ

ಅಮೇರಿಕಾ ದಾಳಿ ಮಾಡಿದ 3 ಪರಮಾಣು ಇಂಧನ ಕೇಂದ್ರಗಳಲ್ಲಿ ಯಾವುದೇ ಪರಮಾಣು ಸೋರಿಕೆಯಾಗಿಲ್ಲ ಎಂದು ಇರಾನ್ ತಿಳಿಸಿದೆ. “ನಾವು ಅಲ್ಲಿಂದ ಯುರೇನಿಯಂ ಅನ್ನು ಈಗಾಗಲೇ ತೆಗೆದುಹಾಕಿದ್ದೆವು” ಎಂದು ಅದು ಹೇಳಿದೆ. ಸ್ಥಳೀಯ ಇರಾನಿನ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದ ಮೊಹಮ್ಮದ್ ಮನನ್ ರಯಿಸಿ, ಫೋರ್ಡೋ ಪರಮಾಣು ಇಂಧನ ಕೇಂದ್ರಕ್ಕೆ ಗಂಭೀರ ಹಾನಿಯಾಗಿಲ್ಲ ಎಂದು ಹೇಳಿದರು. “ಕೇವಲ ಮೇಲ್ಮೈ ಭಾಗಕ್ಕೆ ಹಾನಿಯಾಗಿದೆ ಮತ್ತು ಅದನ್ನು ದುರಸ್ತಿ ಮಾಡಬಹುದು” ಎಂದು ಅವರು ತಿಳಿಸಿದರು. ಇರಾನ್‌ನ ಪರಮಾಣು ಶಕ್ತಿ ಸಂಸ್ಥೆಯು, ಭದ್ರತಾ ಪರಿಶೀಲನೆಯಲ್ಲಿ ಯಾವುದೇ ವಿಕಿರಣ ಸೋರಿಕೆ ಕಂಡುಬಂದಿಲ್ಲ ಎಂದು ಹೇಳಿದೆ. ದೇಶದ ಪರಮಾಣು ಶಸ್ತ್ರಾಸ್ತ್ರ ಅಭಿವೃದ್ಧಿ ಕಾರ್ಯಕ್ರಮ ನಿಲ್ಲುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ದಾಳಿಗೆ ಎಂಒಪಿ ಬಾಂಬ್ ಬಳಕೆ!

ಅಮೇರಿಕಾ ಹಾಕಿದ ಬಾಂಬ್‌ಗೆ ‘ಎಂಒಪಿ’ ಅಂದರೆ ‘ಮ್ಯಾಸಿವ್ ಆರ್ಡ್ನೆನ್ಸ್ ಪೆನಿಟ್ರೇಟರ್’ ಕರೆಯಲಾಗುತ್ತದೆ. ಈ ಬಾಂಬ್ 30 ಸಾವಿರ ಪೌಂಡ್ ತೂಕವಿದ್ದು ಭೂಮಿಯ ಆಳದಲ್ಲಿರುವ ಬಂಕರ್ ಗಳನ್ನು ಗುರಿಯಾಗಿಸಲು ಇದನ್ನು ಬಳಸಲಾಗುತ್ತದೆ. ನೂರಾರು ಅಡಿ ಭೂಮಿಯೊಳಗೆ ನುಗ್ಗುವ ಸಾಮರ್ಥ್ಯ ಇದಕ್ಕಿದೆ. ಭೂಮಿಯೊಳಗೆ ಹೋಗಿ ಇದು ಸ್ಫೋಟಗೊಳ್ಳುತ್ತದೆ. ಇದರಿಂದ ಬಂಕರ್‌ನಲ್ಲಿರುವ ಸ್ಥಳವು ಸಂಪೂರ್ಣವಾಗಿ ನಾಶವಾಗುತ್ತದೆ. ಈ ಬಾಂಬ್ ಸ್ಟೀಲ್ ಮಿಶ್ರಲೋಹದಿಂದ ಮಾಡಲ್ಪಟ್ಟಿದೆ. ಈ ಬಾಂಬ್ ‘ಜಿಪಿಎಸ್ ಗೈಡೆಡ್’ ಆಗಿದ್ದು, ಇದನ್ನು ‘ಬಿ-2 ಬಾಂಬರ್ಸ್’ ವಿಮಾನದಿಂದ ಮಾತ್ರ ಹಾಕಬಹುದು. ಈ ವಿಮಾನವು ರೇಡಾರ್‌ ಅನ್ನು ವಂಚಿಸಿ ದೂರದ ಗಮ್ಯಸ್ಥಾನವನ್ನು ತಲುಪಬಲ್ಲದು. ಗಾಳಿಯಲ್ಲಿಯೇ ಇಂಧನವನ್ನು ಪುನಃ ತುಂಬಿಸಿಕೊಂಡು ಗುರಿಯವರೆಗೆ ಈ ವಿಮಾನ ಹೋಗಬಹುದು.

ಅಮೇರಿಕಾದ ದಾಳಿಯಿಂದ ಜಾಗತಿಕ ಶಾಂತಿಗೆ ಅಪಾಯ! – ಆಂಟೋನಿಯೊ ಗುಟೆರಸ್, ವಿಶ್ವಸಂಸ್ಥೆ

ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, “ಅಮೇರಿಕಾ ಇರಾನ್ ವಿರುದ್ಧ ನಡೆಸಿದ ಮಿಲಿಟರಿ ಕ್ರಮದ ಬಗ್ಗೆ ಕೇಳಿ ನನಗೆ ಬಹಳ ಕಳವಳವಾಗಿದೆ. ಈಗಾಗಲೇ ಉದ್ವಿಗ್ನತೆಯ ಅಂಚಿನಲ್ಲಿರುವ ಭೂ ಪ್ರದೇಶದಲ್ಲಿ ಇದು ಪ್ರಚೋದನಕಾರಿ ಕೃತ್ಯವಾಗಿದೆ ಮತ್ತು ಇದು ಅಂತರರಾಷ್ಟ್ರೀಯ ಶಾಂತಿ ಮತ್ತು ಸುರಕ್ಷತೆಗೆ ನೇರ ಬೆದರಿಕೆಯಾಗಿದೆ. ಈ ಸಂಘರ್ಷವು ನಿಯಂತ್ರಣದಿಂದ ಹೊರಬರುವ ಅಪಾಯವಿದೆ. ಇದು ಸಾಮಾನ್ಯ ನಾಗರಿಕರ ಮೇಲೆ ಮಾತ್ರವಲ್ಲದೆ, ಇಡೀ ಭೂ ಪ್ರದೇಶದ ಮೇಲೆ ಮತ್ತು ಇಡೀ ವಿಶ್ವದ ಮೇಲೆ ವಿನಾಶಕಾರಿ ಪರಿಣಾಮ ಬೀರಬಹುದು. ನಾನು ಎಲ್ಲಾ ಸದಸ್ಯ ರಾಷ್ಟ್ರಗಳಿಗೆ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಮತ್ತು ವಿಶ್ವಸಂಸ್ಥೆಯ ಚಾರ್ಟರ್ ಮತ್ತು ಅಂತರರಾಷ್ಟ್ರೀಯ ಕಾನೂನಿನ ಇತರ ನಿಯಮಗಳ ಪ್ರಕಾರ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಲು ಕರೆ ನೀಡುತ್ತೇನೆ” ಎಂದು ಹೇಳಿದರು.