ಇರಾನ್ ವಿರುದ್ಧ ‘ಆಪರೇಷನ್ ರೈಸಿಂಗ್ ಲಯನ್’ ಆರಂಭಿಸಿದ ಇಸ್ರೇಲ್‌

  • ಇರಾನ್‌ ನಲ್ಲಿನ ಪರಮಾಣು ನೆಲೆಗಳ ಮೇಲೆ ದಾಳಿ

  • ಕಮಾಂಡರ್ ಇನ್ ಚೀಫ್ ಜನರಲ್ ಹೊಸೆನ್ ಸಲಾಮಿ ಮತ್ತು ಇರಾನಿ ಸೇನೆಯ ಮುಖ್ಯಸ್ಥ ಮಹಮ್ಮದ್ ಬಾಘೇರಿ ಸಾವು

  • 2 ವಿಜ್ಞಾನಿಗಳ ಸಾವು

ಟೆಲ್ ಅವಿವ್ (ಇಸ್ರೇಲ್) – ಭಾರತವು ಪಾಕಿಸ್ತಾನದ ವಿರುದ್ಧ ನಡೆಸಿದ ‘ಆಪರೇಷನ್ ಸಿಂದೂರ್’ ಬಗ್ಗೆ ಜಗತ್ತಿನಾದ್ಯಂತ ಚರ್ಚೆ ನಡೆಯುತ್ತಿರುವಾಗಲೇ, ಈಗ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಇರಾನ್ ವಿರುದ್ಧ ‘ಆಪರೇಷನ್ ರೈಸಿಂಗ್ ಲಯನ್’ ಪ್ರಾರಂಭಿಸಿರುವುದಾಗಿ ಘೋಷಿಸಿದ್ದಾರೆ. ಭಾರತೀಯ ಕಾಲಮಾನದ ಪ್ರಕಾರ ಜೂನ್ 13 ರ ಮುಂಜಾನೆ, ಇಸ್ರೇಲ್ ಇರಾನ್ ನ ರಾಜಧಾನಿ ಟೆಹರಾನ್ ನಲ್ಲಿರುವ ಅನೇಕ ಸೇನಾ ನೆಲೆಗಳ ಮೇಲೆ ವೈಮಾನಿಕ ದಾಳಿ ನಡೆಸಿತು, ಹಾಗೆಯೇ ಅಲ್ಲಿನ ಪರಮಾಣು ನೆಲೆಗಳನ್ನು ಗುರಿಯಾಗಿಸಿತು. ಇದರಲ್ಲಿ ಇರಾನಿನ ಪರಮಾಣು ಶಕ್ತಿ ಸ್ಥಾವರವು ನಾಶವಾಗಿದೆ. ಕ್ಷಿಪಣಿ ಉತ್ಪಾದನಾ ಕಾರ್ಖಾನೆಯೂ ನಾಶವಾಗಿದೆ. ಇರಾನ್ ತನ್ನ ‘ನತಾಂಜ’ ಅಣು ಯೋಜನಾ ಘಟಕ ನಾಶವಾಗಿರುವುದನ್ನು ಒಪ್ಪಿಕೊಂಡಿದೆ. ಈ ಯೋಜನಾ ಘಟಕದಲ್ಲಿ ಇರಾನ್ ಯುರೇನಿಯಂ ಅಭಿವೃದ್ಧಿ ಮಾಡುತ್ತಿತ್ತು. ಯುರೇನಿಯಂ ಅಭಿವೃದ್ಧಿ ಮೂಲಕ ಅಣುಬಾಂಬ್ ತಯಾರಿಸುವ ಪ್ರಯತ್ನ ಇರಾನಿನದ್ದಾಗಿತ್ತು. ಈ ದಾಳಿಯಲ್ಲಿ ‘ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್’ನ ಕಮಾಂಡರ್ ಇನ್ ಚೀಫ್ ಜನರಲ್ ಹೊಸೇನ್ ಸಲಾಮಿ ಮತ್ತು ಇರಾನಿ ಸೇನೆಯ ಮುಖ್ಯಸ್ಥ ಮಹಮ್ಮದ್ ಬಾಘೇರಿ ಅವರು ಹತರಾಗಿದ್ದಾರೆ ಎಂದು ಇರಾನಿನ ಅನೇಕ ಸರಕಾರಿ ಮಾಧ್ಯಮಗಳು ವರದಿ ಮಾಡಿವೆ. ಇದರ ಜೊತೆಗೆ, ಈ ದಾಳಿಯಲ್ಲಿ ಇರಾನಿನ 2 ಪರಮಾಣು ವಿಜ್ಞಾನಿಗಳಾದ ಡಾ. ಮಹಮ್ಮದ್ ತೆಹರಾಂಚಿ ಮತ್ತು ಡಾ. ಫೆರೇಯದೂನ ಅಬ್ಬಾಸಿ ಅವರೂ ಮೃತಪಟ್ಟಿದ್ದಾರೆ. “ಇಸ್ರೇಲ್‌ ಗೆ ಇರುವ ಅಪಾಯವನ್ನು ಸಂಪೂರ್ಣವಾಗಿ ನಿವಾರಿಸದೆ ಈ ಕಾರ್ಯಾಚರಣೆ ನಿಲ್ಲುವುದಿಲ್ಲ” ಎಂದು ನೆತನ್ಯಾಹು ಮಾಡಿದ ಭಾಷಣದಲ್ಲಿ ಪ್ರತಿಜ್ಞೆ ಮಾಡಿದರು.

ಬೆಂಜಮಿನ್ ನೆತನ್ಯಾಹು ಅವರು ಈ ಕಾರ್ಯಾಚರಣೆಯ ಮಾಹಿತಿ ನೀಡಿದರು!

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಈ ಕುರಿತು ವೀಡಿಯೊ ಮೂಲಕ ಹೇಳಿಕೆ ನೀಡಿದ್ದು, ಅದರಲ್ಲಿ ಇರಾನ್ ಮೇಲಿನ ದಾಳಿಯ ಬಗ್ಗೆ ಮಾಹಿತಿ ನೀಡಿದ್ದಾರೆ. “ಕೆಲವು ಸಮಯದ ಹಿಂದೆ ಇಸ್ರೇಲ್ ‘ಆಪರೇಷನ್ ರೈಸಿಂಗ್ ಲಯನ್’ ಅನ್ನು ಪ್ರಾರಂಭಿಸಿದೆ. ದಶಕಗಳಿಂದ ಇರಾನಿನ ಸರ್ವಾಧಿಕಾರಿಗಳು ಇಸ್ರೇಲ್‌ ವಿನಾಶದ ಬಗ್ಗೆ ಮಾತನಾಡುತ್ತಿದ್ದರು. ಇದಕ್ಕಾಗಿ ಪರಮಾಣು ಶಸ್ತ್ರಾಸ್ತ್ರ ಕಾರ್ಯಕ್ರಮವನ್ನು ಕೈಗೆತ್ತಿಕೊಂಡಿದ್ದರು. ಅಣುಬಾಂಬ್ ತಯಾರಿಸಲು ಹೆಚ್ಚು ಅಭಿವೃದ್ಧಿ ಪಡಿಸಿದ ಯುರೇನಿಯಂ ಅನ್ನು ಉತ್ಪಾದಿಸಿದರು. ಇಸ್ರೇಲ್‌ ಅಸ್ತಿತ್ವಕ್ಕೆ ಅಪಾಯವನ್ನುಂಟುಮಾಡಿದ ಇರಾನಿನ ಬಿಕ್ಕಟ್ಟನ್ನು ಹಿಮ್ಮೆಟ್ಟಿಸಲು ಈ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ. ಇಸ್ರೇಲ್ ಮೇಲಿನ ಈ ಬಿಕ್ಕಟ್ಟು ಸಂಪೂರ್ಣವಾಗಿ ದೂರವಾಗುವವರೆಗೆ ಈ ಕಾರ್ಯಾಚರಣೆ ಮುಂದುವರಿಯಲಿದೆ” ಎಂದು ನೆತನ್ಯಾಹು ಸ್ಪಷ್ಟಪಡಿಸಿದರು.

ದಾಳಿಗೆ ‘ಅಂತರರಾಷ್ಟ್ರೀಯ ಪರಮಾಣು ಶಕ್ತಿ ಆಯೋಗ’ದ ದೃಢೀಕರಣ!

ಇಸ್ರೇಲ್ ಇರಾನಿನ ಸೇನಾ ಮತ್ತು ಪರಮಾಣು ನೆಲೆಗಳ ಮೇಲೆ ನಡೆಸಿದ ವೈಮಾನಿಕ ದಾಳಿಗಳಲ್ಲಿ ಇರಾನಿಗೆ ಬಹಳ ದೊಡ್ಡ ಹಾನಿಯಾಗಿದೆ ಎಂದು ಹೇಳಲಾಗುತ್ತಿದೆ. ಈ ದಾಳಿಗೆ ‘ಅಂತರರಾಷ್ಟ್ರೀಯ ಪರಮಾಣು ಶಕ್ತಿ ಆಯೋಗ’ವೂ ದೃಢೀಕರಣ ನೀಡಿದೆ.

ಇಸ್ರೇಲ್ ಮತ್ತು ಅಮೇರಿಕಾ ದೊಡ್ಡ ಬೆಲೆ ತೆರಬೇಕಾಗುತ್ತದೆ! – ಇರಾನ್

ಇಸ್ರೇಲ್‌ ನ ದಾಳಿಗೆ ನಾವು ತಕ್ಕ ಪ್ರತ್ಯುತ್ತರ ನೀಡುತ್ತೇವೆ ಎಂದು ಇರಾನ್ ಸೇನೆಯ ವಕ್ತಾರ ಬ್ರಿಗೇಡಿಯರ್ ಜನರಲ್ ಅಬುಲ್ ಫಝಲ್ ಶೇಕರಚಿ ಅವರು ರಾಷ್ಟ್ರೀಯ ಸುದ್ದಿವಾಹಿನಿಯೊಂದಿಗೆ ಮಾತನಾಡುವಾಗ ಎಚ್ಚರಿಕೆ ನೀಡಿದರು. ಇಸ್ರೇಲ್ ಅಮೇರಿಕಾದ ಸಹಾಯದಿಂದ ಈ ದಾಳಿಯನ್ನು ನಡೆಸಿದೆ ಎಂದು ಆರೋಪಿಸಿದ ಅವರು, ಇಸ್ರೇಲ್ ಮತ್ತು ಅಮೇರಿಕಾ ಈ ದಾಳಿಗೆ ದೊಡ್ಡ ಬೆಲೆ ತೆರಬೇಕಾಗುತ್ತದೆ ಎಂದು ಬ್ರಿಗೇಡಿಯರ್ ಜನರಲ್ ಅಬುಲ್ಫಝಲ್ ಶೇಕರ್ಚಿ ಖಡಕ್ ಆಗಿ ಹೇಳಿದರು.

ಇರಾನ್‌ ನಿಂದ ಪ್ರತ್ಯುತ್ತರ!

ಇಸ್ರೇಲ್‌ ನ ದಾಳಿಯ ನಂತರ, ಇರಾನ್ 100 ಕ್ಕೂ ಹೆಚ್ಚು ಡ್ರೋನ್‌ಗಳ ಮೂಲಕ ಇಸ್ರೇಲ್ ಮೇಲೆ ಪ್ರತೀಕಾರವಾಗಿ ದಾಳಿ ನಡೆಸಿತು. ಈ ದಾಳಿಯಿಂದ ಇಸ್ರೇಲ್ ಗೆ ಎಷ್ಟು ಹಾನಿಯಾಗಿದೆ? ಅಥವಾ ಇರಾನಿನ ಎಷ್ಟು ಡ್ರೋನ್‌ಗಳನ್ನು ಇಸ್ರೇಲ್ ಆಕಾಶದಲ್ಲಿ ನಾಶಪಡಿಸಿತು? ಎಂಬುದು ಇನ್ನು ಸ್ಪಷ್ಟವಾಗಿಲ್ಲ. ಈ ಕಾರ್ಯಾಚರಣೆಗೆ ಇರಾನ್ ‘ಆಪರೇಷನ್ ಟು ಪ್ರಾಮಿಸ್’ ಎಂದು ಹೆಸರಿಸಿದೆ.

ಇಸ್ರೇಲ್‌ ನಲ್ಲಿರುವ ಭಾರತೀಯ ನಾಗರಿಕರಿಗೆ ಮಾರ್ಗದರ್ಶಿ ಸೂತ್ರಗಳ ಪ್ರಸಾರ!

ಇಸ್ರೇಲ್‌ ನ ದಾಳಿಯ ನಂತರ, ಭಾರತ ಸರಕಾರವು ಇಸ್ರೇಲ್‌ ನಲ್ಲಿ ವಾಸಿಸುವ ಭಾರತೀಯರಿಗೆ ಅಲ್ಲಿನ ಭಾರತೀಯ ರಾಯಭಾರ ಕಚೇರಿಯ ಮೂಲಕ ಮಾರ್ಗದರ್ಶಿ ಸೂತ್ರಗಳನ್ನು ಪ್ರಸಾರ ಮಾಡಿದೆ. “ಪ್ರಸ್ತುತ ಉದ್ವಿಗ್ನ ಪರಿಸ್ಥಿತಿಯಲ್ಲಿ ಇಸ್ರೇಲ್‌ ನಲ್ಲಿ ವಾಸಿಸುವ ಎಲ್ಲಾ ಭಾರತೀಯರು ಜಾಗರೂಕರಾಗಿರಬೇಕು. ಎಲ್ಲರೂ ಇಸ್ರೇಲ್ ಸರ್ಕಾರವು ನೀಡುವ ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು. ಅಗತ್ಯವಿಲ್ಲದಿದ್ದರೆ, ದೇಶದೊಳಗೆ ಪ್ರಯಾಣಿಸುವುದನ್ನು ತಪ್ಪಿಸಬೇಕು” ಎಂದು ಅಲ್ಲಿನ ಭಾರತೀಯರಿಗೆ ನಿರ್ದೇಶನ ನೀಡಲಾಗಿದೆ.

ಸಂಪಾದಕೀಯ ನಿಲುವು

  • ಒಟ್ಟಾರೆ ಜಾಗತಿಕ ಮಟ್ಟದ ಪರಿಸ್ಥಿತಿಯನ್ನು ನೋಡಿದರೆ, ಇದು ವೇಗವಾಗಿ ಮೂರನೇ ಮಹಾಯುದ್ಧದತ್ತ ಸಾಗುತ್ತಿದೆ ಎಂದು ತೋರುತ್ತದೆ. ಈ ದೃಷ್ಟಿಯಿಂದ, ಸರಕಾರವು ಸಿದ್ಧವಾಗುವುದು ಮತ್ತು ನಾಗರಿಕರಿಂದಲೂ ಸಿದ್ಧತೆಯನ್ನು ಮಾಡಿಸಿಕೊಳ್ಳುವುದು ಅವಶ್ಯಕವಾಗಿದೆ!
  • ಇಸ್ರೇಲ್ ದೇಶವು ಶತ್ರುಗಳಿಂದ ದಾಳಿ ಆಗುವವರೆಗೆ ಕಾಯದೆ, ಅದಕ್ಕೂ ಮುನ್ನವೇ ಶತ್ರು ದೇಶಕ್ಕೆ ನುಗ್ಗಿ ಅವರ ಮೇಲೆ ದಾಳಿ ಮಾಡುತ್ತದೆ. ದಾಳಿಯೇ ರಕ್ಷಣೆಯ ಯೋಗ್ಯ ಮಾರ್ಗವಾಗಿರುವುದರಿಂದ, ಭಾರತವೂ ಇಂತಹ ಕ್ರಮಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದರೆ, ಭಾರತದ ಕಡೆಗೆ ಕಣ್ಣೆತ್ತಿ ನೋಡುವ ಧೈರ್ಯ ಯಾರೂ ಮಾಡುವುದಿಲ್ಲ!