ರಾಹುಲ್ ಗಾಂಧಿಗೆ ಸಮುದಾಯ ಶಿಕ್ಷೆ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ಸರ್ವೋಚ್ಚ ನ್ಯಾಯಾಲಯದಿಂದ ವಜಾ

ಸ್ವಾತಂತ್ರ್ಯವೀರ ಸಾವರಕರ ಅವರ ಅಪಮಾನ ಪ್ರಕರಣ

ನವದೆಹಲಿ – ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸ್ವಾತಂತ್ರ್ಯವೀರ ಸಾವರಕರ ಅವರ ವಿರುದ್ಧ ಮಾಡಿದ ಆರೋಪಗಳಿಗೆ ಸಂಬಂಧಿಸಿದಂತೆ ಅವರಿಗೆ ಮುಂಬೈನ ಸಾವರಕರ ಸಂಗ್ರಹಾಲಯದಲ್ಲಿ ಒಂದು ದಿನ ಪೊರಕೆ ಹಿಡಿದು ಕಸ ತೆಗೆಯುವ ಸಮುದಾಯ ಸೇವೆಯನ್ನು ಮಾಡುವಂತೆ ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯ ವಜಾಗೊಳಿಸಿದೆ. ಡಾ. ಪಂಕಜ ಫಡಣೀಸ ಅವರು ಈ ಅರ್ಜಿಯನ್ನು ಸಲ್ಲಿಸಿದ್ದರು.

ಮುಖ್ಯ ನ್ಯಾಯಮೂರ್ತಿ ಭೂಷಣ ಗವಾಯಿ ಮತ್ತು ನ್ಯಾಯಮೂರ್ತಿ ಅಗಸ್ಟಿನ್ ಜಾರ್ಜ್ ಮಸಿಹ ಅವರನ್ನೊಳಗೊಂಡ ವಿಭಾಗೀಯ ಪೀಠವು ಈ ಅರ್ಜಿಯನ್ನು ವಜಾಗೊಳಿಸುವಾಗ, “ಅರ್ಜಿದಾರರ ಯಾವುದೇ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗದಿರುವುದರಿಂದ, ನ್ಯಾಯಾಲಯವು ಇದರಲ್ಲಿ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ” ಎಂದು ಹೇಳಿದೆ.

ರಾಹುಲ್ ಗಾಂಧಿ ಹೇಳಿದ್ದೇನು?

ನವೆಂಬರ್ 17, 2022 ರಂದು ಮಹಾರಾಷ್ಟ್ರದ ಅಕೋಲಾ ಜಿಲ್ಲೆಯಲ್ಲಿ ‘ಭಾರತ ಜೋಡೋ’ ಯಾತ್ರೆಯ ಸಮಯದಲ್ಲಿ, ರಾಹುಲ್ ಗಾಂಧಿ ಅವರು ಮಾಧ್ಯಮಗಳ ಮುಂದೆ ಒಂದು ಪತ್ರವನ್ನು ತೋರಿಸಿ, “ಈ ಪತ್ರವನ್ನು ಸಾವರಕರ ಅವರು ಬ್ರಿಟಿಷರಿಗೆ ಬರೆದಿದ್ದರು. ಅದರಲ್ಲಿ ಅವರು ಬ್ರಿಟಿಷರ ಸೇವಕನಾಗಿ ಉಳಿಯುವುದಾಗಿ ಹೇಳಿದ್ದರು. ಅವರು ಭಯದಿಂದ ಕ್ಷಮೆಯಾಚಿಸಿದರು. ಮಹಾತ್ಮ ಗಾಂಧಿ ಮತ್ತು ನೆಹರೂ ಎಂದಿಗೂ ಹೀಗೆ ಮಾಡಲಿಲ್ಲ; ಅದಕ್ಕಾಗಿಯೇ ಅವರು ವರ್ಷಗಟ್ಟಲೆ ಜೈಲಿನಲ್ಲಿದ್ದರು. ಸಾವರಕರ ಅವರು ಕೇವಲ ಭಯದಿಂದ ಈ ದಾಖಲೆಗೆ ಸಹಿ ಹಾಕಿದ್ದರು. ಅವರಿಗೆ ಭಯವಿರದಿದ್ದರೆ, ಅವರು ಎಂದಿಗೂ ಸಹಿ ಹಾಕುತ್ತಿರಲಿಲ್ಲ. ಸಾವರಕರ ಅವರು ಸಹಿ ಮಾಡುವ ಮೂಲಕ ಗಾಂಧಿ ಮತ್ತು ಸರ್ದಾರ ಪಟೇಲ್ ಅವರಿಗೆ ದ್ರೋಹ ಮಾಡಿದರು” ಎಂದು ಆರೋಪಿಸಿದ್ದರು. (ಯಾವುದೇ ಅಧ್ಯಯನವಿಲ್ಲದೆ, ಕೇವಲ ಸಾವರಕರ ದ್ವೇಷದಿಂದ ರಾಹುಲ್ ಗಾಂಧಿ ಇಂತಹ ಹೇಳಿಕೆಗಳನ್ನು ನೀಡಿದ್ದಾರೆ. ನ್ಯಾಯಾಲಯವು ಈ ಬಗ್ಗೆ ನಿರ್ಣಯ ನೀಡುತ್ತದೆ. ಆದರೆ ಜನಸಾಮಾನ್ಯರು ಕಾಂಗ್ರೆಸ್ ಅನ್ನು ಅಧಿಕಾರದಿಂದ ಕೆಳಗಿಳಿಸಿದ್ದಾರೆ ಎಂಬುದನ್ನು ಪಕ್ಷವು ನೆನಪಿನಲ್ಲಿಟ್ಟುಕೊಳ್ಳಬೇಕು ಮತ್ತು ಸ್ವತಃ ಸುಧಾರಣೆ ಮಾಡಿಕೊಳ್ಳಬೇಕು! – ಸಂಪಾದಕರು).