‘ವ್ಯಾಯಾಮ ಮತ್ತು ಮನಸ್ಸಿನ ಸ್ಥಿತಿ’, ಈ ಘಟಕಗಳು ಪರಸ್ಪರ ಹೇಗೆ ಪೂರಕವಾಗಿರುತ್ತವೆ ?

ಆರೋಗ್ಯಕರ ಜೀವನಕ್ಕಾಗಿ ವ್ಯಾಯಾಮ – ಭಾಗ ೧೮

ಜಗತ್ತಿನ ಆಧುನಿಕರಣದೊಂದಿಗೆ ಉದ್ಭವಿಸಿರುವ ದೈಹಿಕ ಸಮಸ್ಯೆಗಳಿಗೆ ‘ವ್ಯಾಯಾಮ’ವು ಒಂದು ಪರಿಣಾಮಕಾರಿ ಉಪಾಯ ವಾಗಿದೆ. ಸದ್ಯದ ಅನೇಕ ಶಾರೀರಿಕ ಸಮಸ್ಯೆಗಳಿಗೆ ಔಷಧೋಪಚಾರಗಳೊಂದಿಗೆ ಅನೇಕ ಮಾರ್ಗಗಳನ್ನು ಆಯ್ಕೆ ಮಾಡಲಾಗುತ್ತದೆ; ಆದರೆ ವ್ಯಾಯಾಮದ ಹೊರತು ಈ ಎಲ್ಲ ಪರಿಹಾರೋಪಾಯಗಳು ಅಪೂರ್ಣವಾಗಿವೆ. ಈ ವಿಷಯದಿಂದ ನಾವು ವ್ಯಾಯಾಮದ ಆವಶ್ಯಕತೆ ಮತ್ತು ಮಹತ್ವವನ್ನು ತಿಳಿದುಕೊಳ್ಳಲಿದ್ದೇವೆ. ಹಾಗೆಯೇ ವ್ಯಾಯಾಮದ ಕುರಿತಾದ ಸಂದೇಹ ನಿವಾರಣೆ ಮಾಡಲಿದ್ದೇವೆ.

ಶ್ರೀ. ನಿಮಿಷ ಮ್ಹಾತ್ರೆ

‘ದೇಹಕ್ಕೆ ‘ಮನಸ್ಸಿನ ಕನ್ನಡಿ’, ಎಂದು ಹೇಳಲಾಗುತ್ತದೆ. ಮನಸ್ಸಿನಲ್ಲಿ ಬರುವ ಸೂಕ್ಷ್ಮಾತಿಸೂಕ್ಷ್ಮ ವಿಚಾರಗಳು ದೇಹದ ಮೇಲೆ ದೃಶ್ಯ ಮತ್ತು ಅದೃಶ್ಯವಾಗಿ ಪರಿಣಾಮವಾಗುತ್ತಿರುತ್ತದೆ. ವ್ಯಾಯಾಮದ ಗುಣಮಟ್ಟವು ನಮ್ಮ ಮನಸ್ಸಿನ ಸ್ಥಿತಿಯ ಮೇಲೆ ಅವಲಂಬಿಸಿರುತ್ತದೆ. ಮನಸ್ಸು ಆನಂದವಾಗಿದ್ದರೆ, ವ್ಯಾಯಾಮ ಹೆಚ್ಚು ಪರಿಣಾಮಕಾರಿಯಾಗಿ ಉತ್ಸಾಹ ಹೆಚ್ಚುತ್ತದೆ. ಸಕಾರಾತ್ಮಕ ಮಾನಸಿಕ ಸ್ಥಿತಿಯಿದ್ದರೆ, ಅಂದರೆ ಆನಂದ ಮತ್ತು ಉತ್ಸಾಹವಿರುವ ವ್ಯಕ್ತಿಗೆ ವ್ಯಾಯಾಮ ಮಾಡುವ ಇಚ್ಛೆ ಹೆಚ್ಚಾಗಿರುತ್ತದೆ. ಉತ್ಸಾಹವಿರುವ ಮನಸ್ಸಿಗೆ ವ್ಯಾಯಾಮ ಮಾಡುವಾಗ ದೇಹದಲ್ಲಿನ ಊರ್ಜೆ ಹೆಚ್ಚಾಗುತ್ತದೆ ಮತ್ತು ಕಾರ್ಯಕ್ಷಮತೆ ಸುಧಾರಿಸುತ್ತದೆ. ತದ್ವಿರುದ್ಧ ಒಂದು ವೇಳೆ ಮನಸ್ಸಿನಲ್ಲಿ ಒತ್ತಡ, ಚಿಂತೆ ಅಥವಾ ನಿರಾಶೆ ಇದ್ದರೆ ವ್ಯಾಯಾಮ ಮಾಡಿದ ನಂತರ ಬೇಗ ದಣಿವಾಗುತ್ತದೆ ಮತ್ತು ಅಪೇಕ್ಷಿತ ರೀತಿಯಲ್ಲಿ ವ್ಯಾಯಾಮದ ಲಾಭವಾಗುವುದಿಲ್ಲ. ಆದ್ದರಿಂದ ದಿನದ ಒತ್ತಡಗಳನ್ನು ದೂರಗೊಳಿಸಿ ಮತ್ತು ಮನಸ್ಸು ಸಕಾರಾತ್ಮಕವಾಗಿಟ್ಟು ವ್ಯಾಯಾಮ ಮಾಡುವುದು ಆವಶ್ಯಕವಾಗಿರುತ್ತದೆ. ಅದಕ್ಕಾಗಿ ವ್ಯಾಯಾಮವನ್ನು ಮಾಡುವಾಗ ‘ಉಸಿರಾಟದ ಮೇಲೆ ಏಕಾಗ್ರತೆಯಿಂದ ಗಮನಿಸುವುದು, ನಾಮಜಪ ಮಾಡುವುದು, ಸಣ್ಣ ಧ್ವನಿಯಲ್ಲಿ ಉತ್ಸಾಹವರ್ಧಕ ಸಂಗೀತವನ್ನು ಕೇಳುವುದು, ನಮ್ಮ ಉದ್ದೇಶಗಳನ್ನು ಸ್ಮರಿಸುವುದು, ಮನಸ್ಸಿನಲ್ಲಿ ಪ್ರಾರ್ಥನೆ ಮಾಡುವುದು’, ಇಂತಹ ಪ್ರಯತ್ನಗಳನ್ನು ಮಾಡಬಹುದು.

ವ್ಯಾಯಾಮದಿಂದಲೂ ಮನಸ್ಸಿನ ಸ್ಥಿತಿಯಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ಮಾಡಬಹುದು. ದೈಹಿಕ ಚಟುವಟಿಕೆಗಳಿಂದ ಆನಂದ ಮತ್ತು ಸಕಾರಾತ್ಮಕ ಭಾವನೆಗಳನ್ನುಂಟು ಮಾಡುವ ಎಂಡೋಫ್ರಿನ್, ಡೋಪಾಮೈನ್‌ ಮತ್ತು ಸೆರೊಟೋನಿನ್‌ ಇಂತಹ ರಾಸಾಯನಿಕಗಳ ಸ್ರಾವದ ಪ್ರಮಾಣ ಹೆಚ್ಚಾಗುತ್ತದೆ. ನಿಯಮಿತ ವ್ಯಾಯಾಮದಿಂದ ಒತ್ತಡ ಮತ್ತು ಚಿಂತೆ ಕಡಿಮೆಯಾಗುತ್ತಿರುವುದರಿಂದ ವ್ಯಕ್ತಿಗೆ ಮಾನಸಿಕ ಶಾಂತಿ ಸಿಗುತ್ತದೆ. ಸಕಾರಾತ್ಮಕ ಮಾನಸಿಕತೆಯು ವ್ಯಾಯಾಮಕ್ಕೆ ಪ್ರೋತ್ಸಾಹಿಸುತ್ತದೆ ಮತ್ತು ನಿಯಮಿತ ವ್ಯಾಯಾಮವು ಮನಸ್ಸಿನ ಸ್ಥಿತಿಯನ್ನು ಸುಧಾರಿಸುತ್ತದೆ. ಈ ರೀತಿ ಈ ಎರಡೂ ಘಟಕಗಳು ಪರಸ್ಪರಗಳಲ್ಲಿ ಪೂರಕವಾಗಿರುತ್ತವೆ.’

– ಶ್ರೀ. ನಿಮಿಷ ತ್ರಿಭುವನ ಮಾತ್ರೆ, ಭೌತಿಕೋಪಚಾರ ತಜ್ಞರು (ಫಿಜಿಯೋಥೆರಪಿಸ್ಟ್‌), ಫೋಂಡಾ, ಗೋವಾ. (೩೦.೯.೨೦೨೪)