
ಬೇಸಿಗೆಯು ಸಾಮಾನ್ಯವಾಗಿ ಶುಷ್ಕವಾಗಿರು ತ್ತದೆ. ನೈಸರ್ಗಿಕವಾಗಿ ಬೇಸಿಗೆಯಲ್ಲಿ ರಸಭರಿತ ಹಣ್ಣುಗಳು ಹೆಚ್ಚು ಪ್ರಮಾಣದಲ್ಲಿ ಬರುತ್ತವೆ. ಇದಕ್ಕನುಸಾರ ಬೇಸಿಗೆಯಲ್ಲಿ ಪಾಲಿಸಬೇಕಾದ ಕೆಲವು ಪಥ್ಯಗಳನ್ನು ಇಲ್ಲಿ ಕೊಟ್ಟಿದ್ದೇನೆ.
೧. ಆಹಾರವು ತೆಳ್ಳಗಿರಬೇಕು, ಸಿಹಿಯಾಗಿರಬೇಕು, ಸ್ನಿಗ್ಧ, ಹೆಚ್ಚು ಬಿಸಿ ಇಲ್ಲದ, ಕಡಿಮೆ ಮಸಾಲೆಯ ಹಾಗೂ ಹಗುರ ಇರಬೇಕು. ಇದರಲ್ಲಿ ಈ ಮುಂದಿನ ಕೆಲವು ಪದಾರ್ಥಗಳಿವೆ – ಅನ್ನ, ಹೆಸರುಕಾಳು, ಚನ್ನಂಗಿ, ದೋಸೆ, ರೊಟ್ಟಿ (ಜೋಳ, ಅಕ್ಕಿ, ರಾಗಿ), ರಾಗಿ ಅಥವಾ ಸಿಂಗಾರ ಹಿಟ್ಟಿನ ಉಪ್ಪಿಟ್ಟು, ಹಣ್ಣುತರಕಾರಿಗಳು, ತೆಂಗಿನಕಾಯಿ, ಪಾಯಸ, ಶಿರಾ, ತುಪ್ಪ, ಬೆಣ್ಣೆ, ಹಾಲು, ಕಲ್ಲುಸಕ್ಕರೆ ಇತ್ಯಾದಿ.
೨. ಊಟದಲ್ಲಿ ದೇಶಿ ಹಸುವಿನ ತುಪ್ಪ ಇರಲೇಬೇಕು, ಹಸಿವೆಯನ್ನು ತಡೆಯಬಾರದು. ಒಂದೇ ಸಲಕ್ಕೆ ಹೆಚ್ಚು ಆಹಾರ ಸೇವಿಸುವುದಕ್ಕಿಂತ ಮಧ್ಯಮ ಪ್ರಮಾಣದಲ್ಲಿ ನಡುನಡುವೆ ಸೇವಿಸುತ್ತಾ ಇರಬೇಕು. ಒಣದ್ರಾಕ್ಷಿ, ನೀರು, ಅರಳಿನ ನೀರು, ಶರಬತ್ ಹಾಗೂ ಹಣ್ಣುಗಳ ರಸವನ್ನು ಸೇವಿಸಬೇಕು.
೩. ಪಲ್ಯದಲ್ಲಿ ಮಸಾಲೆಯನ್ನು ಉಪಯೋಗಿಸುವುದಿದ್ದರೆ ಗರಮ್ ಮಸಾಲೆ ಅಥವಾ ಹಸಿಮೆಣಸಿನಕಾಯಿ ಬದಲು ಜೀರಿಗೆ, ಕೊತ್ತಂಬರಿ, ಎಳ್ಳಿನ ಪುಡಿಯನ್ನು ಬಳಸಬಹುದು. ಶುಂಠಿ, ಕಾಳುಮೆಣಸು, ನಿಂಬೆ, ಕೊತ್ತಂಬರಿ ಸೊಪ್ಪು ಇವು ಪದಾರ್ಥಗಳ ರುಚಿಯನ್ನು ಹೆಚ್ಚಿಸುತ್ತವೆ.

೪. ಹುಳಿ, ಉಪ್ಪು, ಖಾರ ಬಳಸುವುದನ್ನು ತಪ್ಪಿಸಬೇಕು. ಇದರಲ್ಲಿ ಬಾದಾಮಿ, ಗೋಡಂಬಿ, ಪಿಸ್ತಾ, ಹುಣಸೆಹಣ್ಣು, ಚಾಟ್‌ಪದಾರ್ಥ, ಬ್ರೆಡ್, ಹಸಿಮೆಣಸು, ಮಸಾಲೆಯ ಪದಾರ್ಥ ಹಾಗೂ ಬೇಕರಿಯ ಪದಾರ್ಥಗಳಿರುತ್ತವೆ. ಹಸಿ ತರಕಾರಿ, ನೆನೆಸಿ ಮೊಳಕೆ ಯೊಡೆಸಿದ ಧಾನ್ಯಗಳನ್ನು ಹಾಗೆಯೆ ಸೇವಿಸಬಾರದು.
೫. ಮಜ್ಜಿಗೆಯನ್ನು ಹೆಚ್ಚು ಕುಡಿಯಬಾರದು. ಊಟದಲ್ಲಿ ಒಂದು ಬಟ್ಟಲು ಮಜ್ಜಿಗೆಯಲ್ಲಿ ಸೈಂಧವ ಲವಣ ಮತ್ತು ಜೀರಿಗೆ ಹಾಕಿ ಕುಡಿಯಬಹುದು. ಎದೆ ಉರಿ, ಹುಳಿತೇಗು, ಇಂತಹ ತೊಂದರೆ ಇರುವವರು ಮಜ್ಜಿಗೆ ಕುಡಿಯಲೇಬಾರದು.
೬. ಮದ್ಯಪಾನ, ಸಿಗರೇಟ್ ಪೂರ್ಣ ವರ್ಜಿಸಬೇಕು. ಉಷ್ಣ ಋತುವಿನಲ್ಲಿ ಇದರಿಂದ ಉರಿ, ದಾಹ, ಆಮ್ಲಪಿತ್ತ, ತಲೆ ಸುತ್ತುವುದು, ಊತ ಇಂತಹ ತೊಂದರೆಯಾಗಬಹುದು.
೭. ಮಧ್ಯಾಹ್ನ ಮಲಗಬಹುದು ಆದರೆ ರಾತ್ರಿ ಜಾಗರಣೆ ಮಾಡಬಾರದು.
೮. ವ್ಯಾಯಾಮ ಮಾಡುತ್ತಿದ್ದರೆ ಅದು ಅತಿಯಾಗಬಾರದು, ಆಯಾಸವಾಗುವಷ್ಟು ವ್ಯಾಯಾಮ ಮಾಡಬಾರದು. ನಿಯಮಿತ ವ್ಯಾಯಾಮಕ್ಕಿಂತ ಕಡಿಮೆ ಮಾಡಬೇಕು.
೯. ತೂಕ ಕಡಿಮೆ ಮಾಡುವ ಪ್ರಯೋಗವನ್ನು ಬೇಸಿಗೆಯಲ್ಲಿ ಆರಂಭಿಸಬಾರದು.
೧೦. ಬೇಸಿಗೆಯಲ್ಲಿ ಚರ್ಮ ಒಣಗಬಾರದೆಂದು ತುಪ್ಪ ಮತ್ತು ಕೊಬ್ಬರಿ ಎಣ್ಣೆ ಉಪಯೋಗಿಸಬೇಕು. ಬಿಸಿಲಿನಲ್ಲಿ ವಾಹನದಲ್ಲಿ ಪ್ರಯಾಣ ಮಾಡಲಿಕ್ಕಿದ್ದರೆ, ಕಣ್ಣುಗಳು ಕೆಂಪಾಗುತ್ತಿದ್ದರೆ ಅಥವಾ ಕಣ್ಣುಗಳು ಉರಿಯುತ್ತಿದ್ದರೆ, ‘ಶತಧೌತ ಘೃತ’ವನ್ನು ಕಾಲುಗಳಿಗೆ ಹಾಗೂ ಕಣ್ಣುಗಳ ಬದಿಗೆ ಹಚ್ಚಿದರೆ, ಲಾಭವಾಗುತ್ತದೆ. ತೊಂದರೆ ಕಡಿಮೆಯಾಗದಿದ್ದರೆ, ವೈದ್ಯರ ಸಲಹೆ ಪಡೆದು ಸರಿಯಾದ ಔಷಧೋಪಚಾರ ಮಾಡಬೇಕು.
೧೧. ಉರಿಬಿಸಿಲಿನಲ್ಲಿ (ಬೆಳಗ್ಗೆ ೧೧ ರಿಂದ ಮಧ್ಯಾಹ್ನ ೪ ರ ಅವಧಿಯಲ್ಲಿ) ದ್ವಿಚಕ್ರ ವಾಹನದಲ್ಲಿ ತಿರುಗಾಡಬಾರದು. ಬಿಸಿಲಿಗೆ ಹೋಗಲೇ ಬೇಕಿದ್ದರೆ, ಟೊಪ್ಪಿಯನ್ನು ಧರಿಸಬೇಕು ಅಥವಾ ಸ್ಕಾರ್ಫ್ ಧರಿಸಿಯೇ ಹೋಗಬೇಕು.
೧೨. ಬಿಸಿಲಿನಿಂದ ಬಂದ ತಕ್ಷಣ ತಂಪಾದ ನೀರು ಮತ್ತು ಶರಬತ್ ಕುಡಿಯಬಾರದು. ಹೊಟ್ಟೆ ತುಂಬ ಊಟ ಮಾಡಿ ತಕ್ಷಣ ಬಿಸಿಲಿಗೆ ಹೋಗಬಾರದು. ಬಿಸಿಲಿನಿಂದ ನೇರವಾಗಿ ಏಯರ್ ಕಂಡಿಶನ್ ಕೋಣೆಗೆ ಅಥವಾ ಅಲ್ಲಿಂದ ತಕ್ಷಣ ಹೊರಗೆ ಬಿಸಿಲಿಗೆ ಹೋಗಬಾರದು.
೧೩. ‘ಮೂಗಿನ ಹೊಳ್ಳೆ ಒಡೆದಿದ್ದರೆ’, ಸಕ್ಕರೆ ನೀರು, ಬೆಣ್ಣೆ, ಜೇನು-ಕಲ್ಲುಸಕ್ಕರೆ, ದುರ್ವಾ ಕಲ್ಪ ಇವುಗಳನ್ನು ವೈದ್ಯರ ಸಲಹೆ ಪಡೆದು ಉಪಯೋಗಿಸಬೇಕು. ಬೇಸಿಗೆಯಲ್ಲಿ ಆಗುವ ತೊಂದರೆಗಳು (ಮೂತ್ರ ವಿಸರ್ಜನೆಯ ಸಮಯದಲ್ಲಿ ಉರಿಉರಿ, ಮೇಲಿಂದ ಮೇಲೆ ಆದರೆ ಅಪೂರ್ಣ ಮೂತ್ರ ವಿಸರ್ಜನೆ) ಇಂತಹ ತೊಂದರೆ ಇದ್ದರೆ ಕೊತ್ತಂಬರಿ ಬೀಜ ಮತ್ತು ಜೀರಿಗೆಯ ನೀರನ್ನು ಉಪಯೋಗಿಸಬಹುದು.
ಸದ್ಯ ಬೇಸಿಗೆಯ ತೀವ್ರತೆ ಮತ್ತು ಉಷ್ಣಾಘಾತದ ಪ್ರಮಾಣವನ್ನು ಗಮನಿಸಿದರೆ, ಎಲ್ಲರೂ ಈ ಕೆಲವು ಸರಳ ನಿಯಮಗಳನ್ನು ಪಾಲಿಸಿದರೆ, ಉಪಯುಕ್ತವಾಗುತ್ತದೆ.
– ವೈದ್ಯೆ (ಸೌ.) ಸ್ವರಾಲಿ ಶೆಂಡ್ಯೆ, ಯಶಪ್ರಭಾ ಆಯುರ್ವೇದ, ಪುಣೆ. (೨೮.೪.೨೦೨೫)
ಸ್ಪೇನ್: ನೌಕೆಯಲ್ಲಿದ್ದ ಇಬ್ಬರು ಭಾರತೀಯ ಸಿಬ್ಬಂದಿಗೆ ಹಂತಾ ವೈರಸ್ !
ಟ್ರೆಂಡ್ – ತೂಕ ಇಳಿಸುವ ಸೆಳೆತ ಮತ್ತು ನಾವು !
‘ರ್ಯಾಂಡಮೈಜ್ಡ್ಡ ಕಂಟ್ರೋಲ್ಡ್ ಟ್ರಾಯಲ್ಸ್’ (ಆರ್.ಸಿ.ಟಿ) : ‘ಗೋಲ್ಡ್ ಸ್ಟ್ಯಾಂಡರ್ಡ್’ನ ಮುಖವಾಡ ಮತ್ತು ವಾಸ್ತವದ ಮಿತಿ !
ವೈಷ್ಣೋ ದೇವಿ ದೇವಸ್ಥಾನದಲ್ಲಿ ಭಕ್ತರು ಅರ್ಪಿಸಿದ ‘ಬೆಳ್ಳಿ’ಯಲ್ಲಿ ಕಲಬೆರಕೆ ಪತ್ತೆ!
ಅಮೇರಿಕಾದ ೬೦ ವೈದ್ಯಕೀಯ ಸಂಸ್ಥೆಗಳಲ್ಲಿ ‘ಪಾಕಕಲೆ ಔಷಧ’ ಪಠ್ಯಕ್ರಮದ ಬೋಧನೆ !
‘ವಂದೇ ಭಾರತ್’ ಎಕ್ಸ್ಪ್ರೆಸ್ನಲ್ಲಿ ಇಬ್ಬರು ಪ್ರಯಾಣಿಕರ ಊಟದಲ್ಲಿ ಜಿರಲೆ ಪತ್ತೆ !