ಅಣುಬಾಂಬ್ ದಾಳಿಯ ಬೆದರಿಕೆಗೆ ಭಾರತ ‘ನಿರ್ಣಾಯಕ’ ಉತ್ತರ ನೀಡಲಿದೆ! – ಪ್ರದಾನಿ ಮೋದಿ

  • ಪ್ರಧಾನ ಮಂತ್ರಿ ನರೇಂದ್ರ ಮೋದಿಯಿಂದ ಪಾಕಿಸ್ತಾನಕ್ಕೆ ಎಚ್ಚರಿಕೆ !

  • ಇನ್ನು ಮುಂದೆ ಪಾಕಿಸ್ತಾನದ ಸರಕಾರ ಮತ್ತು ಭಯೋತ್ಪಾದಕರ ಮುಖ್ಯಸ್ಥರನ್ನು ಬೇರೆ ಬೇರೆ ಎಂದು ಪರಿಗಣಿಸಲಾಗುವುದಿಲ್ಲ

ನವದೆಹಲಿ – ‘ಆಪರೇಷನ್ ಸಿಂದೂರ್’ ಭಯೋತ್ಪಾದನೆಯ ವಿರುದ್ಧ ಭಾರತದ ನೀತಿಯಾಗಿದೆ. ಈ ಕಾರ್ಯಾಚರಣೆಯು ಹೊಸ ದಾರಿದೀಪವನ್ನು ಸ್ಥಾಪಿಸಿದೆ. ಭಾರತದ ಮೇಲೆ ದಾಳಿ ಮಾಡಿದರೆ, ಅದಕ್ಕೆ ತಕ್ಕ ಉತ್ತರ ನೀಡಲಾಗುವುದು. ನಾವು ನಮ್ಮ ಷರತ್ತುಗಳ ಮೇಲೆ ಈ ಉತ್ತರವನ್ನು ನೀಡುತ್ತೇವೆ. ಭಯೋತ್ಪಾದಕರ ಮೂಲ ಎಲ್ಲಿದೆಯೋ ಅಲ್ಲಿಯೇ ದಾಳಿ ಮಾಡುತ್ತೇವೆ. ‘ಅಣುಬಾಂಬ್ ದಾಳಿಯ ಬೆದರಿಕೆಯನ್ನು ಭಾರತ ಸಹಿಸುವುದಿಲ್ಲ. ಅದರ ಮುಖವಾಡದ ಹಿಂದೆ ಅಡಗಿರುವ ಭಯೋತ್ಪಾದನೆಯ ಮೇಲೆ ತೀಕ್ಷ್ಣವಾದ ಮತ್ತು ನಿರ್ಣಾಯಕ ದಾಳಿ ಮಾಡುತ್ತೇವೆ. ಪಾಕಿಸ್ತಾನದ ಸರಕಾರ ಮತ್ತು ಭಯೋತ್ಪಾದಕರ ಮುಖ್ಯಸ್ಥರನ್ನು ಬೇರೆ ಬೇರೆಯಾಗಿ ಪರಿಗಣಿಸಲಾಗುವುದಿಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಮೇ 12 ರ ರಾತ್ರಿ 8 ಗಂಟೆಗೆ ದೇಶವನ್ನು ಉದ್ದೇಶಿಸಿ ಮಾತನಾಡುತ್ತಾ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದರು. ‘ಆಪರೇಷನ್ ಸಿಂದೂರ್’ ನ್ಯಾಯದ ಅವಿಭಾಜ್ಯ ಪ್ರತಿಜ್ಞೆಯಾಗಿದ್ದು, ಅದನ್ನು ಇಡೀ ಜಗತ್ತು ನೋಡಿದೆ. ಸಿಂದೂರವನ್ನು ಅಳಿಸುವ ಬೆಲೆಯನ್ನು ನಾವು ವಸೂಲಿ ಮಾಡಿದ್ದೇವೆ’, ಎಂದು ಅವರು ಸ್ಪಷ್ಟಪಡಿಸಿದರು.

ಪ್ರಧಾನ ಮಂತ್ರಿಗಳು ಮಂಡಿಸಿದ ಅಂಶಗಳು

1. ಪಾಕಿಸ್ತಾನದ ಸೇನೆ ಮತ್ತು ಸರಕಾರವು ಯಾವ ಭಯೋತ್ಪಾದನೆಗೆ ಸೊಪ್ಪು ಹಾಕುತ್ತದೆಯೋ, ಅದು ಒಂದು ದಿನ ಪಾಕಿಸ್ತಾನವನ್ನೇ ನಾಶ ಮಾಡುತ್ತದೆ. ಪಾಕಿಸ್ತಾನ ಬದುಕಬೇಕೆಂದರೆ, ಅದು ತನ್ನ ಭಯೋತ್ಪಾದಕ ಸೌಲಭ್ಯಗಳನ್ನು ನಾಶಪಡಿಸಲೇಬೇಕು. ಇದರ ಹೊರತಾಗಿ ಶಾಂತಿಯ ಯಾವುದೇ ಮಾರ್ಗವಿಲ್ಲ.

2. ಭಾರತದ ಅಭಿಪ್ರಾಯವು ಸ್ಪಷ್ಟವಾಗಿದೆ. ಭಯೋತ್ಪಾದನೆ ಮತ್ತು ಚರ್ಚೆ ಒಟ್ಟಿಗೆ ಸಾಧ್ಯವಿಲ್ಲ. ಭಯೋತ್ಪಾದನೆ ಮತ್ತು ವ್ಯಾಪಾರ ಒಟ್ಟಿಗೆ ನಡೆಯಲು ಸಾಧ್ಯವಿಲ್ಲ. ನೀರು ಮತ್ತು ರಕ್ತ ಒಟ್ಟಿಗೆ ಹರಿಯಲು ಸಾಧ್ಯವಿಲ್ಲ.

3. ಈಗ ಪಾಕಿಸ್ತಾನದೊಂದಿಗೆ ಚರ್ಚೆಯಾದರೆ, ಅದು ಭಯೋತ್ಪಾದನೆಯ ಬಗ್ಗೆ ಮಾತ್ರ. ಪಾಕ್ ಆಕ್ರಮಿತ ಕಾಶ್ಮೀರದ ಬಗ್ಗೆ ಮಾತ್ರ ಅದರೊಂದಿಗೆ ಚರ್ಚೆ ನಡೆಯುತ್ತದೆ.

4. ನಮ್ಮ ವೀರ ಸೈನಿಕರು ‘ಆಪರೇಷನ್ ಸಿಂದೂರ್’ ಯಶಸ್ಸಿಗಾಗಿ ಪರಾಕ್ರಮದ ಪರಾಕಾಷ್ಠೆ ಮೆರೆದಿದ್ದಾರೆ. ಈ ಪರಾಕ್ರಮವನ್ನು ತಾಯಿ, ಸಹೋದರಿ ಮತ್ತು ಮಗಳಿಗೆ ಅರ್ಪಿಸುತ್ತೇನೆ. ‘ಆಪರೇಷನ್ ಸಿಂದೂರ್’ ಕೇವಲ ಹೆಸರಲ್ಲ, 140 ಕೋಟಿ ಜನರ ಭಾವನೆಗಳ ಪ್ರತಿನಿಧಿಯಾಗಿದೆ.

5. ಭಯೋತ್ಪಾದಕರ ನೆಲೆಗಳ ಮೇಲೆ ನಾವು ದಾಳಿ ಮಾಡಿದ್ದೇವೆ. ಬಹವಾಲ್ಪುರ ಮತ್ತು ಮುರಿದ್ಕೆ ಮುಂತಾದ ಭಯೋತ್ಪಾದಕರ ನೆಲೆಗಳು ಜಾಗತಿಕ ಭಯೋತ್ಪಾದನೆಯ ವಿಶ್ವವಿದ್ಯಾಲಯಗಳಾಗಿದ್ದವು. ಜಗತ್ತಿನಲ್ಲಿ ಎಲ್ಲಿ ದೊಡ್ಡ ದಾಳಿಗಳು ನಡೆದರೂ, ಉದಾ. 9/11, ಇತ್ಯಾದಿ, ಅವುಗಳೊಂದಿಗೆ ಈ ಸ್ಥಳಗಳು (ಬಹವಾಲ್ಪುರ, ಮುರಿದ್ಕೆ ಇತ್ಯಾದಿ) ಯಾವಾಗಲೋ ಒಂದು ಸಲ ಸಂಬಂಧ ಹೊಂದಿದ್ದವು.

6. ಈ ನೆಲೆಗಳು ಭಾರತೀಯ ಮಹಿಳೆಯರ ಕುಂಕುಮವನ್ನು ಕಸಿದುಕೊಂಡಿದ್ದರಿಂದ ನಾವು ಅವುಗಳನ್ನು ಧ್ವಂಸಗೊಳಿಸಿದ್ದೇವೆ. 100 ಕ್ಕೂ ಹೆಚ್ಚು ಭಯೋತ್ಪಾದಕರನ್ನು ನಾವು ಹತ್ಯೆ ಮಾಡಿದ್ದೇವೆ. ಭಯೋತ್ಪಾದಕರ ನಾಯಕರು ಪಾಕಿಸ್ತಾನದಲ್ಲಿ ಬಹಿರಂಗವಾಗಿ ತಿರುಗಾಡುತ್ತಿದ್ದರು, ಅವರನ್ನು ನಾವು ಒಂದೇ ಹೊಡೆತಕ್ಕೆ ಹತ್ಯೆ ಮಾಡಿದ್ದೇವೆ.

7. ಈ ಕಾರ್ಯಾಚರಣೆಯಿಂದ ಪಾಕಿಸ್ತಾನ ನಿರಾಶೆ ಮತ್ತು ಹತಾಶವಾಗಿದೆ. ಆಕ್ರೋಶಿತ ಪಾಕಿಸ್ತಾನ ಒಂದು ದುಸ್ಸಾಹಸ ಮಾಡಿದೆ. ಭಯೋತ್ಪಾದನೆಯ ವಿರುದ್ಧ ಭಾರತದ ಕಾರ್ಯಾಚರಣೆಗೆ ಬೆಂಬಲ ನೀಡುವ ಬದಲು ಭಾರತದ ಮೇಲೆ ದಾಳಿ ಮಾಡಲು ಪ್ರಾರಂಭಿಸಿತು. ಅದು ಮನೆಗಳು, ದೇವಾಲಯಗಳು, ಗುರುದ್ವಾರಗಳು, ಶಾಲೆಗಳು, ಸೇನಾ ನೆಲೆಗಳನ್ನು ಗುರಿಯಾಗಿಸಿತು. ಇದರಿಂದ ಅದರ ನಿಜವಾದ ಮುಖ ಮತ್ತೆ ಬಹಿರಂಗವಾಯಿತು.

8. ಪಾಕಿಸ್ತಾನದ ಡ್ರೋನ್‌ಗಳು, ಕ್ಷಿಪಣಿಗಳು ಭಾರತದ ಮುಂದೆ ನಿಷ್ಪ್ರಯೋಜಕವಾದವು. ಭಾರತವು ಪಾಕಿಸ್ತಾನದ ಎದೆಯ ಮೇಲೆ ದಾಳಿ ಮಾಡಿತು. ಪಾಕಿಸ್ತಾನವು ಹೆಮ್ಮೆ ಪಡುತ್ತಿದ್ದ ವಾಯುಪಡೆಯ ನೆಲೆಗಳನ್ನು ಭಾರತದ ಡ್ರೋನ್‌ಗಳು ಮತ್ತು ಕ್ಷಿಪಣಿಗಳು ತೀಕ್ಷ್ಣವಾದ ದಾಳಿ ನಡೆಸಿ ನಾಶಪಡಿಸಿದವು, ಪಾಕಿಸ್ತಾನವನ್ನು 3 ದಿನಗಳಲ್ಲಿಯೇ ಧ್ವಂಸ ಮಾಡಿದೆವು.

9. ಭಾರತದ ಆಕ್ರಮಣಶೀಲತೆಯಿಂದ ಅದು ಬದುಕುವ ಮಾರ್ಗಗಳನ್ನು ಹುಡುಕಲು ಪ್ರಾರಂಭಿಸಿತು. ಜಗತ್ತಿನ ಮುಂದೆ ಭಿಕ್ಷೆ ಬೇಡಲು ಪ್ರಾರಂಭಿಸಿತು. ಹೊಡೆತ ತಿಂದ ನಂತರ ಮೇ 10 ರ ಮಧ್ಯಾಹ್ನ ಪಾಕಿಸ್ತಾನದ ಸೇನೆಯು ನಮ್ಮ ಸೇನಾ ಅಧಿಕಾರಿಗಳನ್ನು ಸಂಪರ್ಕಿಸಿತು. ಅಲ್ಲಿಯವರೆಗೆ ನಾವು ಭಯೋತ್ಪಾದಕ ನೆಲೆಗಳನ್ನು ದೊಡ್ಡ ಪ್ರಮಾಣದಲ್ಲಿ ನಾಶಪಡಿಸಿದ್ದೆವು. ಭಯೋತ್ಪಾದಕರನ್ನು ಹತ್ಯೆ ಮಾಡಿದ್ದೆವು.

10. ಇದರ ನಂತರ ಪಾಕಿಸ್ತಾನವು ಇನ್ನು ಮುಂದೆ ತನ್ನಿಂದ ಯಾವುದೇ ಭಯೋತ್ಪಾದಕ ಕಾರ್ಯಾಚರಣೆ ಮತ್ತು ಸೇನಾ ಕಾರ್ಯಾಚರಣೆ ನಡೆಯುವುದಿಲ್ಲ ಎಂದು ವಿನಂತಿಸಿತು. ಇದರ ಬಗ್ಗೆ ಭಾರತವು ವಿಚಾರ ಮಾಡಿತು ಮತ್ತು ನಾವು ಈ ಕಾರ್ಯಾಚರಣೆಯನ್ನು ಕೇವಲ ಸ್ಥಗಿತಗೊಳಿಸಿದ್ದೇವೆ. ಮುಂದಿನ ದಿನಗಳಲ್ಲಿ ಅದು ಹೇಗೆ ವರ್ತಿಸುತ್ತದೆ ಎಂಬುದರ ಮೇಲೆ ನಮ್ಮ ಮುಂದಿನ ಕ್ರಮಗಳು ಇರುತ್ತವೆ.

11. ಸ್ವದೇಶಿ ಶಸ್ತ್ರಾಸ್ತ್ರಗಳ ಪ್ರಾಮಾಣಿಕತೆಯು ಈ ಯುದ್ಧದಲ್ಲಿ ಸಾಬೀತಾಗಿದೆ. ಸ್ವದೇಶಿ ಶಸ್ತ್ರಾಸ್ತ್ರಗಳ ಸಮಯ ಇದೀಗ ಬಂದಿದೆ.
12. ಭಾರತವು ಶಾಂತಿಯಿಂದ ಬದುಕಲು ಸಾಧ್ಯವಾಗಬೇಕು. ಅಭಿವೃದ್ಧಿ ಹೊಂದಿದ ಭಾರತದ ಕನಸನ್ನು ಪೂರೈಸಲು ಭಾರತವು ಶಕ್ತಿಶಾಲಿಯಾಗುವುದು ಅವಶ್ಯಕ ಮತ್ತು ಅಗತ್ಯವಿದ್ದಾಗ ಈ ಶಕ್ತಿಯನ್ನು ಬಳಸುವುದು ಸಹ ಅವಶ್ಯಕ. ಕಳೆದ ಕೆಲವು ದಿನಗಳಲ್ಲಿ ನಾವು ಅದನ್ನು ಬಳಸಿದ್ದೇವೆ.

ಪಾಕಿಸ್ತಾನ ಸರಕಾರ ಪ್ರಾಯೋಜಿತ ಭಯೋತ್ಪಾದನೆಯ ಈ ಸಾಕ್ಷ್ಯ!

ಪ್ರಧಾನ ಮಂತ್ರಿಗಳು, ಈ ಕಾರ್ಯಾಚರಣೆಯ ಮೂಲಕ ಜಗತ್ತು ಪಾಕಿಸ್ತಾನದ ಮುಖವನ್ನು ನೋಡಿದೆ ಎಂದು ಹೇಳಿದರು. ಇದರಲ್ಲಿ ಹತ್ಯೆಯಾದ ಭಯೋತ್ಪಾದಕರ ಅಂತ್ಯಕ್ರಿಯೆಯ ಸಮಯದಲ್ಲಿ ಪಾಕಿಸ್ತಾನದ ಸೇನಾ ಅಧಿಕಾರಿಗಳು ಉಪಸ್ಥಿತರಿದ್ದರು. ಇದು ಪಾಕಿಸ್ತಾನ ಸರಕಾರ ಪ್ರಾಯೋಜಿತ ಭಯೋತ್ಪಾದನೆಯ ಸಾಕ್ಷ್ಯವಾಗಿದೆ, ಎಂದು ಹೇಳಿದರು.