ವಿಸರ್ಜಿಸಿದ ಶ್ರೀಗಣೇಶ ಮೂರ್ತಿಗಳ ‘ಪಿಒಪಿ’ಯಿಂದ ಬೆಂಚು, ಇಟ್ಟಿಗೆ ಮತ್ತು ಅಲಂಕಾರಿಕ ವಸ್ತುಗಳ ತಯಾರಿ!

ಮುಂಬಯಿ ಮಹಾನಗರ ಪಾಲಿಕೆಯ ಪ್ರಯೋಗ !

ಮುಂಬಯಿ, 5 ಜೂನ್ (ಸುದ್ದಿ) – ಮುಂಬಯಿಯಲ್ಲಿ ಗಣೇಶೋತ್ಸವದ ಸಂದರ್ಭದಲ್ಲಿ ಸಮುದ್ರ ಮತ್ತು ಕೃತಕ ಹೊಂಡಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ ನ (‘ಪಿಒಪಿ’ಯ) ಶ್ರೀಗಣೇಶ ಮೂರ್ತಿಗಳನ್ನು ವಿಸರ್ಜಿಸಲಾಗುತ್ತದೆ. ನೀರಿನಲ್ಲಿ ಕರಗದೆ ಉಳಿಯುವ ‘ಪಿಒಪಿ’ ಮೂರ್ತಿಗಳನ್ನು ಪ್ರತಿವರ್ಷ ಆಡಳಿತ ವ್ಯವಸ್ಥೆಯು ಸಂಗ್ರಹಿಸುತ್ತದೆ. 2025 ರಲ್ಲಿ ಮುಂಬಯಿಯಲ್ಲಿ ವಿಸರ್ಜನೆಯಾದ ಶ್ರೀಗಣೇಶ ಮೂರ್ತಿಗಳಿಂದ ಬರೋಬ್ಬರಿ 2,500 ಟನ್ ಪಿಒಪಿ ಸಂಗ್ರಹವಾಗಿದೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿರುವ ‘ಪಿಒಪಿ’ಯನ್ನು ಏನು ಮಾಡಬೇಕು?, ಎಂಬ ಪ್ರಶ್ನೆ ಆಡಳಿತ ವ್ಯವಸ್ಥೆಯ ಮುಂದಿದೆ. ಇದಕ್ಕೆ ಪರಿಹಾರವಾಗಿ ಈ ‘ಪಿಒಪಿ’ಯಿಂದ ಸಾರ್ವಜನಿಕ ಉದ್ಯಾನವನಗಳಲ್ಲಿ ಕುಳಿತುಕೊಳ್ಳಲು ಬೆಂಚುಗಳು, ಇಟ್ಟಿಗೆಗಳು ಹಾಗೂ ಇತರ ಅಲಂಕಾರಿಕ ವಸ್ತುಗಳನ್ನು ತಯಾರಿಸುವ ಪ್ರಯೋಗವನ್ನು ಮುಂಬಯಿ ಮಹಾನಗರ ಪಾಲಿಕೆಯು ನಾಸಿಕ್ ನ ‘ಅಕರ್ಮ ಫೌಂಡೇಶನ್’ ನೆರವಿನೊಂದಿಗೆ ಮಾಡಿದೆ.

ಸರಕಾರದ ವರದಿ ಬಂದ ಬಳಿಕವೇ ಕ್ರಮ ! – ಪ್ರದೀಪ ಗವಳಿ, ಉಪಆಯುಕ್ತರು, ಪರಿಸರ ಮತ್ತು ಹವಾಮಾನ ಬದಲಾವಣೆ ವಿಭಾಗ, ಮುಂಬಯಿ ಮಹಾನಗರ ಪಾಲಿಕೆ

ವಿಸರ್ಜಿತ ಶ್ರೀಗಣೇಶ ಮೂರ್ತಿಗಳಿಗೆ ವಿಧಿವತ್ತಾಗಿ ಪೂಜೆ ಸಲ್ಲಿಸಿದ ನಂತರವೇ ಅವುಗಳನ್ನು ವಿಘಟಿಸಲಾಗಿದೆ. ಪ್ರಾಯೋಗಿಕ ತತ್ತ್ವದ ಆಧಾರದ ಮೇಲೆ 10 ಟನ್ ‘ಪಿಒಪಿ’ಯನ್ನು ‘ಅಕರ್ಮ ಫೌಂಡೇಶನ್’ಗೆ ನೀಡಲಾಗಿತ್ತು. ಅದರಲ್ಲಿ ದೊಡ್ಡ ಪ್ರಮಾಣದಲ್ಲಿ ತೆಂಗಿನ ನಾರು, ಕಲ್ಲು, ಮರ, ಜೇಡಿ ಮಣ್ಣು, ಬಟ್ಟೆ ಮುಂತಾದವು ಪತ್ತೆಯಾಗಿವೆ. ಆದುದರಿಂದ 10 ಟನ್ ಗಳ ಪೈಕಿ ಕೇವಲ ಮೂರೂವರೆ ಟನ್ ಪಿಒಪಿ ಲಭ್ಯವಾಗಿದೆ. ‘ಪಿಒಪಿ’ಯನ್ನು ಹೇಗೆ ವಿಲೇವಾರಿ ಮಾಡಬೇಕು?, ಎಂಬುದರ ಕುರಿತು ಸರಕಾರ ಸಮಿತಿಯೊಂದನ್ನು ರಚಿಸಿದೆ. ಈ ಸಮಿತಿಯ ವರದಿ ಇನ್ನೂ ಬರಬೇಕಿದೆ. ಈ ಪ್ರಯೋಗವನ್ನು ಕೇವಲ ಪ್ರಾಯೋಗಿಕವಾಗಿ ಮಾಡಲಾಗಿದ್ದು, ಸರಕಾರದ ಮಾರ್ಗಸೂಚಿಗಳು ಬಂದ ನಂತರ ಈ ಕ್ರಮ ಕೈಗೊಳ್ಳಬೇಕೋ ಬೇಡವೋ?, ಎಂಬುದನ್ನು ನಿರ್ಧರಿಸಲಾಗುವುದು.

ಏನಿದು ಪ್ರಕರಣ?

2025 ರಲ್ಲಿ ಮುಂಬಯಿ ಉಚ್ಚ ನ್ಯಾಯಾಲಯವು, ವಿಸರ್ಜನೆ ಮಾಡಲಾದ ಶ್ರೀಗಣೇಶ ಮೂರ್ತಿಗಳಲ್ಲಿನ ‘ಪಿಒಪಿ’ಯನ್ನು ಹೇಗೆ ವಿಲೇವಾರಿ ಮಾಡುತ್ತೀರಿ?, ಎಂಬ ಕುರಿತು ನೀತಿ ರೂಪಿಸುವಂತೆ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿತ್ತು. ಅದರಂತೆ ದೊಡ್ಡ ಮೂರ್ತಿಗಳನ್ನು ಸಮುದ್ರದಲ್ಲಿ, ಹಾಗೂ 6 ಅಡಿ ಎತ್ತರದವರೆಗಿನ ಮೂರ್ತಿಗಳನ್ನು ಕೃತಕ ಹೊಂಡಗಳಲ್ಲಿ ವಿಸರ್ಜಿಸುವ ತಾತ್ಕಾಲಿಕ ಪರ್ಯಾಯವನ್ನು ಸರಕಾರ ಕಂಡುಕೊಂಡಿದೆ. ಈ ಕುರಿತು ಸರಕಾರ ನ್ಯಾಯಾಲಯಕ್ಕೆ ಪ್ರಮಾಣಪತ್ರವನ್ನೂ ಸಲ್ಲಿಸಿದೆ. ಅಲ್ಲದೆ, ‘ಪಿಒಪಿ’ ವಿಲೇವಾರಿ ಹೇಗೆ ಮಾಡಬೇಕು?, ಎಂಬುದರ ಕುರಿತು ಧೋರಣಾತ್ಮಕ ನಿರ್ಧಾರ ಕೈಗೊಳ್ಳಲು ಅಣು ವಿಜ್ಞಾನಿ ಡಾ. ಅನಿಲ್ ಕಾಕೋಡ್ಕರ್ ಅವರ ಅಧ್ಯಕ್ಷತೆಯಲ್ಲಿ ಮಾರ್ಚ್ 2025 ರಲ್ಲಿ ಸಮಿತಿ ರಚಿಸಲಾಗಿದೆ. ಈ ಸಮಿತಿಯ ವರದಿ ಇನ್ನೂ ಬಂದಿಲ್ಲ. ಈ ವರದಿ ಬಂದ ತಕ್ಷಣ ರಾಜ್ಯ ಸರಕಾರ ಅದನ್ನು ನ್ಯಾಯಾಲಯಕ್ಕೆ ಸಲ್ಲಿಸಲಿದೆ ಮತ್ತು ನ್ಯಾಯಾಲಯದ ನಿರ್ದೇಶನದ ನಂತರವೇ ‘ಪಿಒಪಿ’ಗೆ ಸಂಬಂಧಿಸಿದ ನೀತಿ ನಿರ್ಧಾರ ಮಾಡಲಾಗುವುದು.

‘ಪಿಒಪಿ’ಯಿಂದ ಮಾಲಿನ್ಯವಾಗುತ್ತಿಲ್ಲ ಎಂದು ಡಾ. ಅನಿಲ್ ಕಾಕೋಡ್ಕರ್ ಸಮಿತಿಯ ವರದಿ !

ಸರಕಾರವು ‘ಪಿಒಪಿ’ ವಿಲೇವಾರಿ ಕುರಿತು ಸಮಿತಿ ರಚಿಸುವ ಮುನ್ನ ‘ಪಿಒಪಿ’ಯಿಂದ ಮಾಲಿನ್ಯ ಉಂಟಾಗುತ್ತದೆಯೇ ?’, ಎಂಬುದರ ಅಧ್ಯಯನ ನಡೆಸಲು ಸಹ ಡಾ. ಅನಿಲ್ ಕಾಕೋಡ್ಕರ್ ಅವರ ಅಧ್ಯಕ್ಷತೆಯಲ್ಲೇ ಸಮಿತಿ ರಚಿಸಿತ್ತು. ಈ ಸಮಿತಿಯು 2025 ರಲ್ಲಿ ಸರಕಾರಕ್ಕೆ ವರದಿ ಸಲ್ಲಿಸಿದೆ. ‘ಪಿಒಪಿ’ಯಿಂದ ಯಾವುದೇ ರೀತಿಯ ಮಾಲಿನ್ಯ ಉಂಟಾಗುವುದಿಲ್ಲ’, ಎಂದು ಈ ಸಮಿತಿ ತೀರ್ಮಾನಕ್ಕೆ ಬಂದಿದೆ. ಇನ್ನೊಂದೆಡೆ ‘ಪಿಒಪಿ’ ವಿಲೇವಾರಿ ಹೇಗೆ ಮಾಡಬೇಕು?, ಎಂಬ ವರದಿ ಮಾತ್ರ ಇನ್ನೂ ಬಾಕಿ ಉಳಿದಿದೆ. (‘ಪಿಒಪಿ’ಯಿಂದ ಮಾಲಿನ್ಯವಾಗದಿದ್ದರೆ, ಅದರ ವಿಲೇವಾರಿಗಾಗಿ ಇಷ್ಟೊಂದು ಹರಸಾಹಸ ಯಾಕೆ? ಮತ್ತು ಕೃತಕ ಹೊಂಡಗಳ ಯೋಜನೆಯಾದರೂ ಯಾತಕ್ಕಾಗಿ? ಮಾಲಿನ್ಯವೇ ಆಗದಿದ್ದರೆ, ನೈಸರ್ಗಿಕ ಜಲಮೂಲಗಳಲ್ಲೇ ಶ್ರೀಗಣೇಶ ಮೂರ್ತಿಗಳನ್ನು ವಿಸರ್ಜಿಸಲು ತೊಂದರೆ ಏನಿದೆ? – ಸಂಪಾದಕರು).