ಮಾರ್ಚ್ 31ರ ವರೆಗೆ ಅಭಿಯಾನ
ನವದೆಹಲಿ – ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಸಾಂಕ್ರಾಮಿಕವಲ್ಲದ ರೋಗಗಳ ಕುರಿತಾದ ಸಮಗ್ರ ಪರೀಕ್ಷಾ ಅಭಿಯಾನವನ್ನು ಫೆಬ್ರವರಿ 20ರಿಂದ ಪ್ರಾರಂಭಿಸಿದ್ದು, ಈ ಅಭಿಯಾನ 2025ರ ಮಾರ್ಚ್ 31ರ ವರೆಗೆ ನಡೆಯಲಿದೆ. ಈ ಅಭಿಯಾನದಡಿ 30 ವರ್ಷ ಮೇಲ್ಪಟ್ಟ ಪುರುಷರು ಮತ್ತು ಮಹಿಳೆಯರ ತಪಾಸಣೆ ನಡೆಸಲಾಗುವುದು. ಇದರಿಂದ ಎಷ್ಟು ಜನರು ರೋಗ ಪೀಡಿತರಾಗಿದ್ದಾರೆ ಅಥವಾ ರೋಗಕ್ಕೆ ತುತ್ತಾಗುವ ಸಾಧ್ಯತೆಯಿದೆ ಎಂಬ ಮಾಹಿತಿ ಪಡೆಯಬಹುದು. ಸುಮಾರು 89 ಕೋಟಿ ನಾಗರಿಕರು ಈ ಅಭಿಯಾನದ ಭಾಗವಾಗಲಿದ್ದಾರೆ. ಸಾಂಕ್ರಾಮಿಕವಲ್ಲದ ರೋಗಗಳು ಮತ್ತು ಮೂರು ರೀತಿಯ ಕ್ಯಾನ್ಸರ್ (ಬಾಯಿ, ಸ್ತನ ಮತ್ತು ಗರ್ಭಕೋಶ) ಗಳನ್ನು ಪತ್ತೆಹಚ್ಚಿ ಅದಕ್ಕೆ ಸೂಕ್ತ ಚಿಕಿತ್ಸೆಗಳನ್ನು ನಿರ್ಧರಿಸುವುದು ಈ ಅಭಿಯಾನದ ಉದ್ದೇಶವಾಗಿದೆ.
ದೇಶದಲ್ಲಿ ಮಧುಮೇಹ, ರಕ್ತದೊತ್ತಡ ಮತ್ತು ಕ್ಯಾನ್ಸರ್ ರೋಗಗಳ ಪ್ರಮಾಣವು ವೇಗವಾಗಿ ಹೆಚ್ಚುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ ಮತ್ತು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಅಂಕಿ-ಅಂಶಗಳ ಪ್ರಕಾರ ದೇಶದಲ್ಲಿ ಶೇ.80ರಷ್ಟು ಸಾವುಗಳು ಸಾಂಕ್ರಾಮಿಕವಲ್ಲದ ರೋಗಗಳಿಂದ ಸಂಭವಿಸುತ್ತವೆ.
ತಪಾಸಣೆ ನಡೆಯುವುದು ಹೇಗೆ ?
1. 30 ವರ್ಷ ಮೇಲ್ಪಟ್ಟ ಜನರ ‘ಆರೋಗ್ಯ ಕಾರ್ಡ್’ ಮಾಡಿ ಅದರಲ್ಲಿ ಅವರ ಐಡಿ ಅಥವಾ ಆಧಾರ್ ಸಂಖ್ಯೆ ಇರುವುದು. ಪ್ರಾಥಮಿಕ ಹಂತದಲ್ಲಿ ವೈದ್ಯಕೀಯ ಅಧಿಕಾರಿಗಳು ವರದಿಯಲ್ಲಿ ನಮೂದಿಸುವರು. ಇದರಲ್ಲಿ ರೋಗ, ರೋಗ ನಿರ್ಣಯ ಮಾಹಿತಿ, ಚಿಕಿತ್ಸೆಯ ವಿವರಗಳು ಇರಲಿವೆ.
2. 30 ವರ್ಷ ಮೇಲ್ಪಟ್ಟ ಪುರುಷರು ಮತ್ತು ಮಹಿಳೆಯರು ಹತ್ತಿರದ ಆರೋಗ್ಯ ಕೇಂದ್ರಕ್ಕೆ ಹೋಗಿ ತಪಾಸಣೆ ಮಾಡಿಸಿಕೊಳ್ಳಬಹುದು. ಈ ತಪಾಸಣೆ ಉಚಿತವಾಗಿರಲಿದೆ. ಈ ತಪಾಸಣೆ ನಡೆಸಲು ಆಶಾ ಕಾರ್ಯಕರ್ತೆಯರು, ಆರೋಗ್ಯ ಕಾರ್ಯಕರ್ತರು ಕೂಡ ಮನೆ-ಮನೆಗೆ ಭೇಟಿ ನೀಡಲಿದ್ದಾರೆ.
3. ಸಾಂಕ್ರಾಮಿಕವಲ್ಲದ ರೋಗಗಳು ಎಂದರೆ ಒಬ್ಬರಿಂದ ಇನ್ನೊಬ್ಬರಿಗೆ ಹರಡದ ಅಥವಾ ಸಂಪರ್ಕದಿಂದ ಹರಡದ ರೋಗಗಳು. ಇಂತಹ ರೋಗಗಳು ಬರಲು ದೀರ್ಘಕಾಲ ಬೇಕಾಗುತ್ತದೆ; ಆದರೆ ಆರಂಭಿಕ ಲಕ್ಷಣಗಳು ಬೇಗನೆ ಕಾಣಿಸುವುದಿಲ್ಲ. ಚಿಕಿತ್ಸೆಯನ್ನು ಜೀವನಪೂರ್ತಿ ತೆಗೆದುಕೊಳ್ಳಬೇಕಾಗುತ್ತದೆ. ಇಂತಹ ರೋಗಗಳು ಅಕಾಲಿಕ ಮರಣಕ್ಕೆ ಪ್ರಮುಖ ಕಾರಣವಾಗುತ್ತವೆ.