ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಡಾ. ಅಜಯ ಕುಮಾರ ಸೋನಕರ ಅವರ ಕರೆ
ಪ್ರಯಾಗರಾಜ (ಉತ್ತರ ಪ್ರದೇಶ) – ಗಂಗಾ ನದಿಯ ನೀರು ಕೇವಲ ಸ್ನಾನಕ್ಕೆ ಮಾತ್ರವಲ್ಲ, ಅದು ಕುಡಿಯುವ ನೀರಿನಷ್ಟೇ ಶುದ್ಧವಾಗಿದೆ. ಯಾರಿಗಾದರೂ ಸ್ವಲ್ಪವಾದರೂ ಸಂದೇಹವಿದ್ದರೆ ಅವರು ನನ್ನ ಮುಂದೆ ಗಂಗಾ ನೀರನ್ನು ತೆಗೆದುಕೊಂಡು ಪ್ರಯೋಗಾಲಯದಲ್ಲಿ ಪರೀಕ್ಷಿಸಿ ಸಮಾಧಾನಗೊಳ್ಳಬೇಕು’, ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಡಾ. ಅಜಯ ಕುಮಾರ ಸೋನಕರ ಹೇಳಿದ್ದಾರೆ. ಅವರು ತಮ್ಮ ಪ್ರಯೋಗಾಲಯದಲ್ಲಿ ಗಂಗಾ ನದಿಯ ನೀರನ್ನು ಪರೀಕ್ಷಿಸಿದ ನಂತರ ಈ ಹೇಳಿಕೆ ನೀಡಿದ್ದಾರೆ.
ವಿಜ್ಞಾನಿ ಡಾ. ಸೋನಕರ ಅವರು, ತ್ರಿವೇಣಿ ಸಂಗಮ ಮತ್ತು ಇತರ 5 ಘಾಟ್‌ಗಳಿಂದ ಗಂಗಾ ನದಿಯ ನೀರನ್ನು ಸಂಗ್ರಹಿಸಿದ್ದಾರೆ. ಅವರು 3 ತಿಂಗಳ ಕಾಲ ನಿರಂತರ ನಡೆಸಿದ ಸಂಶೋಧನೆಯಿಂದ ಗಂಗಾ ನದಿಯ ನೀರು ಅತ್ಯಂತ ಶುದ್ಧವಾಗಿದೆಯೆಂದು ಸಾಬೀತಾಗಿದೆ. ಗಂಗಾ ನದಿಯಲ್ಲಿ ಸ್ನಾನ ಮಾಡುವುದರಿಂದ ಯಾವುದೇ ರೀತಿಯ ಹಾನಿಯಾಗುವುದಿಲ್ಲ. ಇದರ ಶುದ್ಧತೆ ಪ್ರಯೋಗಾಲಯದಲ್ಲಿ ಸಂಪೂರ್ಣವಾಗಿ ಸಾಬೀತಾಗಿದೆ.
ಬ್ಯಾಕ್ಟೀರಿಯೊಫೇಜ್‌ನ ಪವಾಡ: ಗಂಗಾ ನದಿಯ ನೈಸರ್ಗಿಕ ಶುದ್ಧೀಕರಣ ಶಕ್ತಿ
ಡಾ. ಸೋನಕರ ತಮ್ಮ ಸಂಶೋಧನೆಯಲ್ಲಿ, ಗಂಗಾ ನದಿಯ ನೀರಿನಲ್ಲಿ 1 ಸಾವಿರ 100 ವಿಧದ ಬ್ಯಾಕ್ಟೀರಿಯೊಫೇಜ್‌ಗಳಿವೆ, ಇದು ಎಲ್ಲಾ ರೀತಿಯ ಹಾನಿಕಾರಕ ಬ್ಯಾಕ್ಟೀರಿಯಾವನ್ನು ನಾಶಪಡಿಸುತ್ತದೆ. ಇದೇ ಕಾರಣಕ್ಕೆ 57 ಕೋಟಿಗೂ ಹೆಚ್ಚು ಭಕ್ತರು ಗಂಗಾನದಿಯಲ್ಲಿ ಸ್ನಾನ ಮಾಡಿದ ನಂತರವೂ ಅದರ ನೀರು ಕಲುಷಿತವಾಗಲಿಲ್ಲ. ಗಂಗಾ ನದಿಯ ನೀರು ತನ್ನ ನೈಸರ್ಗಿಕ ಶಕ್ತಿಯಿಂದಾಗಿ ಇನ್ನೂ ರೋಗಮುಕ್ತವಾಗಿದೆ.
ಡಾ. ಸೋನಕರ ಹೇಳಿದರು,
1. ಗಂಗಾ ನದಿ ನೀರಿನ ಆಮ್ಲೀಯತೆ (ಪಿ.ಎಚ್.) ಸಾಮಾನ್ಯಕ್ಕಿಂತ ಉತ್ತಮವಾಗಿತ್ತು ಮತ್ತು ಅದರಲ್ಲಿ ಯಾವುದೇ ದುರ್ವಾಸನೆ ಅಥವಾ ಬ್ಯಾಕ್ಟೀರಿಯಾದ ಬೆಳವಣಿಗೆ ಪತ್ತೆಯಾಗಿಲ್ಲ. ವಿವಿಧ ಘಾಟ್‌ಗಳಿಂದ ತೆಗೆದುಕೊಂಡ ಮಾದರಿಗಳಲ್ಲಿನ ಪಿ.ಎಚ್. ಮಟ್ಟಗಳು ಪ್ರಯೋಗಾಲಯದಲ್ಲಿ 8.4 ರಿಂದ 8.6 ರ ನಡುವೆ ಇರುವುದು ಕಂಡುಬಂದಿದೆ, ಇದು ತುಂಬಾ ಉತ್ತಮವೆಂದು ಪರಿಗಣಿಸಲಾಗಿದೆ. ನೀರಿನ ಮಾದರಿಗಳನ್ನು ಪ್ರಯೋಗಾಲಯದಲ್ಲಿ 14 ಗಂಟೆಗಳ ಕಾಲ ಕೋಣೆಯ ಉಷ್ಣಾಂಶದಲ್ಲಿ ಇರಿಸಿದರೂ, ಅವುಗಳಲ್ಲಿ ಯಾವುದೇ ಹಾನಿಕಾರಕ ಬ್ಯಾಕ್ಟೀರಿಯಾಗಳು ಬೆಳೆಯಲಿಲ್ಲ. ಗಂಗಾ ನೀರು ಸ್ನಾನಕ್ಕೆ ಸುರಕ್ಷಿತ ಮಾತ್ರವಲ್ಲ, ಅದರ ಸಂಪರ್ಕದಿಂದ ಚರ್ಮ ರೋಗಗಳು ಬರುವುದಿಲ್ಲ.
2. ನೀರಿನಲ್ಲಿ ಬ್ಯಾಕ್ಟೀರಿಯಾಗಳ ಬೆಳವಣಿಗೆಯಿಂದಾಗಿ ಅದು ಆಮ್ಲೀಯವಾಗುತ್ತದೆ. ಅನೇಕ ಬ್ಯಾಕ್ಟೀರಿಯಾಗಳು ತಮ್ಮ ಚಯಾಪಚಯ ಪ್ರಕ್ರಿಯೆಗಳ ಭಾಗವಾಗಿ ಆಮ್ಲೀಯ ಉಪಉತ್ಪನ್ನಗಳನ್ನು ಉತ್ಪಾದಿಸುತ್ತವೆ, ಇದರಿಂದ ನೀರಿನ ಪಿ.ಎಚ್. ಮಟ್ಟ ಕಡಿಮೆಯಾಗುತ್ತದೆ. ಬ್ಯಾಕ್ಟೀರಿಯಾಗಳು ಪೋಷಕಾಂಶಗಳನ್ನು ಸೇವಿಸಿದಾಗ, ಅವು ಲ್ಯಾಕ್ಟಿಕ್ ಆಮ್ಲ ಅಥವಾ ಕಾರ್ಬೊನಿಕ್ ಆಮ್ಲದಂತಹ ಆಮ್ಲೀಯ ಸಂಯುಕ್ತಗಳನ್ನು ಬಿಡುಗಡೆ ಮಾಡುತ್ತವೆ. ಆದ್ದರಿಂದ, ಪಿ.ಎಚ್. ಕಡಿಮೆಯಾಗುತ್ತದೆ.
…ಹಾಗಿದ್ದರೆ, ಇಷ್ಟೊತ್ತಿಗಾಗಲೇ ಎಲ್ಲೆಡೆ ಹಾಹಾಕಾರವೆದ್ದಿರುತ್ತಿತ್ತು !
ಡಾ. ಸೋನಕರ ಮಾತನಾಡಿ, ಮಹಾಕುಂಭದ ಬಗ್ಗೆ ಒಂದು ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು, ಅದೆಂದರೆ, ಮಹಾಕುಂಭದ ಮೊದಲೇ, ‘ಗಂಗಾ ನದಿಯ ನೀರು ಅತ್ಯಂತ ಕಲುಷಿತವಾಗಿದೆ’, ಎಂಬ ಸುಳ್ಳು ಪ್ರಚಾರವನ್ನು ಹರಡಲಾಗುತ್ತಿದೆ; ಆದರೆ ಒಂದು ವೇಳೆ ಪರಿಸ್ಥಿತಿ ನಿಜಕ್ಕೂ ಹಾಗಿದ್ದಿದ್ದರೆ, ಇಷ್ಟೊತ್ತಿಗಾಗಲೇ ಜಗತ್ತಿನಲ್ಲಿ ಹಾಹಾಕಾರವೆದ್ದಿರುತ್ತಿತ್ತು. ಆಸ್ಪತ್ರೆಗಳಲ್ಲಿ ನಿಲ್ಲಲು ಸಹ ಸ್ಥಳವಿರುತ್ತಿರಲಿಲ್ಲ. ಗಂಗಾ ಮಾತೆಗೆ ತನ್ನನ್ನು ತಾನು ಶುದ್ಧೀಕರಿಸಿಕೊಳ್ಳುವ ಅದ್ಭುತ ಶಕ್ತಿ ಇದೆ, 57 ಕೋಟಿಗೂ ಹೆಚ್ಚು ಭಕ್ತರು ಅದರಲ್ಲಿ ಸ್ನಾನ ಮಾಡಿದ ನಂತರವೂ ಯಾರಿಗೂ ಹಾನಿಯಾಗಲಿಲ್ಲ. ಸುಳ್ಳು ಪ್ರಚಾರಗಳನ್ನು ಮಾಡುವವರಿಗೆ ಕಿಡಿಗೇಡಿಗಳನ್ನು ಕೇಳಬೇಕು, ಗಂಗಾ ನದಿಯ ನೀರು ಕಲುಷಿತವಾಗಿದ್ದರೆ, ಈ 57 ಕೋಟಿ ಭಕ್ತರಲ್ಲಿ ಒಬ್ಬನೇ ಒಬ್ಬ ಭಕ್ತನು ಯಾವುದೇ ರೀತಿಯ ಅನಾರೋಗ್ಯದ ಬಗ್ಗೆ ಏಕೆ ದೂರು ನೀಡಿರುವುದು ಕಂಡು ಬಂದಿಲ್ಲವೆಂದು ಕೇಳಬೇಕು ಎಂದು ಹೇಳಿದರು.