ಕೈಗೆ ಕೋಳ ಹಾಕಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಭಾರತ !
ನವದೆಹಲಿ – ಅಮೇರಿಕಾ ಇನ್ನು 487 ಭಾರತೀಯ ವಲಸಿಗರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಈ ಪೈಕಿ 298 ಜನರ ತನಿಖೆ ನಡೆಸುವಂತೆ ಭಾರತಕ್ಕೆ ಹೇಳಿದೆ. ಈ ಎಲ್ಲಾ ಅಕ್ರಮ ಭಾರತೀಯ ವಲಸಿಗರನ್ನು ಗಡೀಪಾರು ಮಾಡಲು ಅಂತಿಮ ಆದೇಶಗಳನ್ನು ನೀಡಲಾಗಿದೆ ಎಂದು ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ ಮಿಸರಿ ಮಾಹಿತಿ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರವರಿ 12 ರಿಂದ ಎರಡು ದಿನಗಳ ಅಮೇರಿಕಾ ಪ್ರವಾಸ ಕೈಗೊಳ್ಳಲಿದ್ದು, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾಗಲಿದ್ದಾರೆ. ಮೋದಿ ಅವರು ಫೆಬ್ರವರಿ 10 ರಿಂದ 12 ರವರೆಗೆ ಫ್ರಾನ್ಸ್ ಪ್ರವಾಸ ನಡೆಸಲಿದ್ದಾರೆ.
1. ಇದಕ್ಕೂ ಮೊದಲು, 104 ಭಾರತೀಯರನ್ನು ಮರಳಿ ಕಳುಹಿಸುವಾಗ ಅವರ ಕೈಕಾಲುಗಳಿಗೆ ಕೋಳ ಹಾಕಿರುವ ಬಗ್ಗೆ ಮಾತನಾಡಿದ ವಿಕ್ರಮ್ ಮಿಸರಿಯವರು “ಭಾರತೀಯ ವಲಸಿಗರಿಗೆ ಕೋಳ ಹಾಕಿ ಕಳುಹಿಸಿರುವ ಬಗ್ಗೆ ನಾವು ಅಮೇರಿಕಾಗೆ ಆಕ್ಷೇಪಣೆ ಸಲ್ಲಿಸಿದ್ದೇವೆ” ಎಂದು ಹೇಳಿದರು. ಕೋಳ ಹಾಕುವುದನ್ನು ತಪ್ಪಿಸಬಹುದಿತ್ತು. ಅಮೇರಿಕಾ ಈ ಬಗ್ಗೆ ಹೆಚ್ಚು ಮಾನವೀಯ ಮನೋಭಾವವನ್ನು ತೋರಿಸಬೇಕಿತ್ತು. ಭವಿಷ್ಯದಲ್ಲಿ ಗಡೀಪಾರು ಮಾಡುವಾಗ ಅಕ್ರಮ ವಲಸಿಗರ ಮೇಲೆ ಯಾವುದೇ ರೀತಿಯ ದೌರ್ಜನ್ಯ ನಡೆಸಬಾರದು ಎಂಬ ಸ್ಪಷ್ಟ ನಿಲುವನ್ನು ಭಾರತ ಹೊಂದಿದೆ.
2. ನಾವು ಅಮೇರಿಕಾಗೆ ನೀಡಿರುವ ಅಂಕಿ-ಅಂಶಗಳನ್ನು ಅವಲಂಬಿಸಿದ್ದೇವೆ. ಅಕ್ರಮ ವಲಸೆ ಸಮಸ್ಯೆ ಕ್ಯಾನ್ಸರ್ ರೋಗದಂತಿದ್ದು ಇದನ್ನು ನಿಲ್ಲಿಸಬೇಕೆಂದು ಮಿಸರಿ ಹೇಳಿದರು.
3. ವಿದೇಶಗಳಿಗೆ ಜನರನ್ನು ಅಕ್ರಮವಾಗಿ ಸಾಗಿಸುವುದು ಮತ್ತು ಉದ್ಯೋಗಗಳ ಹೆಸರಿನಲ್ಲಿ ವಂಚನೆ ಮಾಡುವುದನ್ನು ತಡೆಯಲು ಕೇಂದ್ರ ಸರಕಾರವು ಹೊಸ ಕಾನೂನನ್ನು ಜಾರಿಗೆ ತರಲಿದೆ. ಈ ಹೊಸ ಕಾನೂನು 42 ವರ್ಷಗಳಷ್ಟು ಹಳೆಯದಾದ ಪಾಸ್ಪೋರ್ಟ್ ಕಾಯ್ದೆಯನ್ನು ಬದಲಾಯಿಸಲಿದೆ. ಈ ಕರಡಿನ ಕುರಿತು ವಿವಿಧ ಸಚಿವಾಲಯಗಳು ಮತ್ತು ವಿದೇಶಾಂಗ ಸಚಿವಾಲಯದೊಂದಿಗೆ ಸಂಬಂಧಿಸಿರುವ ಸ್ಥಾಯಿ ಸಮಿತಿಯ ಜೊತೆ ಚರ್ಚೆಗಳು ನಡೆಯುತ್ತಿವೆ. ಸಲಹೆಗಳು ಮತ್ತು ಆಕ್ಷೇಪಣೆಗಳನ್ನು ಆಹ್ವಾನಿಸಲಾಗುವುದು. ಇದನ್ನು ಬಜೆಟ್ ಅಧಿವೇಶನದಲ್ಲಿ ಮಂಡಿಸಬಹುದು. ಕಾನೂನು ಉಲ್ಲಂಘಿಸುವವರಿಗೆ 5 ರಿಂದ 7 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 5 ಲಕ್ಷ ರೂ. ದಂಡ ವಿಧಿಸಲಾಗುವುದು. ಮಹಿಳೆಯರು ಮತ್ತು ಮಕ್ಕಳನ್ನು ಗುರಿಯಾಗಿಸಿ ವಂಚನೆ ಮಾಡಿದರೆ, ಶಿಕ್ಷೆ 7 ರಿಂದ 10 ವರ್ಷಗಳವರೆಗೆ ಮತ್ತು 15 ಲಕ್ಷದಿಂದ 20 ಲಕ್ಷ ರೂ.ಗಳವರೆಗೆ ದಂಡ ವಿಧಿಸಲಾಗುವುದು.