‘ಫೋನ್-ಪೇ, ಜಿ-ಪೇ, ಪೇ-ಟಿಎಮ್’ ಇವುಗಳ ಮಾಧ್ಯಮದಿಂದ ಹಣದ ವ್ಯವಹಾರವನ್ನು ಮಾಡುವವರಿಗೆ ಪೊಲೀಸರಿಂದ ಎಚ್ಚರಿಕೆಯ ಸಲಹೆ !
ಜನರ ಬ್ಯಾಂಕ್ ಖಾತೆಗಳಿಂದ ಹಣವನ್ನು ಸುಲಿಗೆ ಮಾಡಲು ಸೈಬರ್ ವಂಚಕರು ವಂಚನೆಯ ಹೊಸ ವಿಧಾನಗಳನ್ನು ರಚಿಸಿದ್ದಾರೆ. ನಿಮ್ಮ ಬ್ಯಾಂಕ್ ಖಾತೆಯಲ್ಲಿ ಅನಿರೀಕ್ಷಿತವಾಗಿ ಹಣ ಜಮಾ ಆದರೆ ಮರುಳಾಗ ಬೇಡಿ. ಬಹುಶಃ ಅದೇ ಹಣವು ಬ್ಯಾಂಕ್‌ನಲ್ಲಿನ ನಿಮ್ಮ ಎಲ್ಲ ಹಣವನ್ನು ದೋಚಲು ಕಾರಣವಾಗಬಹುದು, ಎಂದು ಪೊಲೀಸರು ಎಚ್ಚರಿಸಿದ್ದಾರೆ. ಪೊಲೀಸರು ಈ ರೀತಿಯ ವಂಚನೆಗೆ ‘ಜಂಪ್ಡ್ ಸ್ಕ್ಯಾಮ್’ ಎಂದು ಹೆಸರಿಸಿದ್ದಾರೆ. ಫೋನ್-ಪೇ, ಜಿ-ಪೇ, ಪೇ-ಟಿಎಮ್ ಇಂತಹ ‘ಮೊಬೈಲ್ ಯಾಪ್’ ಮೂಲಕ ಹಣದ ವಹಿವಾಟು ನಡೆಸುವವರಿಗೆ ಎಚ್ಚರಿಕೆ ವಹಿಸುವಂತೆ ಸೂಚಿಸಿದ್ದಾರೆ.
ಖಾತೆಯಲ್ಲಿ ಸಣ್ಣ ಮೊತ್ತ ಜಮೆ ಮಾಡಿ, ಖಾತೆಯಲ್ಲಿರುವ ದೊಡ್ಡ ಮೊತ್ತವನ್ನು ದೋಚುವ ಕುತಂತ್ರ !
ಸೈಬರ್ ಅಪರಾಧಿಗಳು ಅಳವಡಿಸಿಕೊಂಡಿರುವ ಹೊಸ ವಂಚನೆಯ ತಂತ್ರದ ಪ್ರಕಾರ, ಅವರಾಗಿ ಮೊದಲು ಸಣ್ಣ ಮೊತ್ತವನ್ನು (ಸಾಮಾನ್ಯವಾಗಿ ೫ ಸಾವಿರ ರೂಪಾಯಿಗಳು) ಅಥವಾ ಅದಕ್ಕಿಂತ ಕಡಿಮೆ ಹಣವನ್ನು ಬ್ಯಾಂಕ್ ಗ್ರಾಹಕರ ಖಾತೆಗೆ ಜಮೆ ಮಾಡುತ್ತಾರೆ. ನಂತರ ಅಪರಿಚಿತ ವ್ಯಕ್ತಿಯೊಬ್ಬರಿಂದ ಆ ಗ್ರಾಹಕರಿಗೆ ಕರೆ ಮಾಡಲಾಗುತ್ತದೆ ಮತ್ತು ತಮ್ಮ ಖಾತೆಗೆ ಹಣ ಜಮೆ ಆಗಿರುವುದಾಗಿ ತಿಳಿಸಲಾಗುತ್ತದೆ. ಈ ಮೊತ್ತವನ್ನು ಜಮೆ ಮಾಡುವಾಗ ಯಾವುದಾದರೊಂದು ‘ಬಹುಮಾನದ ಮೊತ್ತ’ದಂತಹ ಕಾರಣಗಳನ್ನು ನೀಡಲಾಗುತ್ತದೆ. ಇದೆಲ್ಲ ಪರಿಶ್ರಮ ಸಂಬಂಧಿಸಿದ ಗ್ರಾಹಕರಲ್ಲಿ ನಂಬಿಕೆಯನ್ನು ಹುಟ್ಟಿಸುವ ಪ್ರಯತ್ನವಾಗಿರುತ್ತದೆ. ಇದರಲ್ಲಿ ಅನೇಕರು ಯಶಸ್ವಿಯೂ ಆಗುತ್ತಾರೆ. ಹಣವನ್ನು ನಿಜವಾಗಿಯೂ ಕಳಿಸಿರುತ್ತಾರೆ. ಆದ್ದರಿಂದ ಗ್ರಾಹಕರಿಗೆ ಯಾವ ಸಂದೇಹವೂ ಬರುವುದಿಲ್ಲ.
‘ಪಿನ್’ ಸಂಖ್ಯೆ ನಮೂದಿಸಿದ ಬಳಿಕ ಹಣ ಮಾಯ !
ಗ್ರಾಹಕರು ‘ನಿಮ್ಮ ಮೊಬೈಲ್‌ನಲ್ಲಿ ಹಣವನ್ನು ಜಮೆ ಮಾಡಲಾಗಿದೆ’, ಎಂಬ ಸಂದೇಶವನ್ನು ಪಡೆದಾಗ, ಗ್ರಾಹಕರು ಸಂತೋಷಪಡುತ್ತಾರೆ ಮತ್ತು ಅವರ ಬ್ಯಾಂಕ್ ಖಾತೆಯಲ್ಲಿರುವ ಮೊತ್ತವನ್ನು ಪರಿಶೀಲಿಸಲು ಬಯಸುತ್ತಾರೆ. ಅದಕ್ಕಾಗಿ ಗ್ರಾಹಕರು ತಮ್ಮ ‘ಪಿನ್’ (ತಮ್ಮ ಗುಪ್ತ ಸಂಖ್ಯೆಗಳನ್ನು ಹಾಕುತ್ತಾರೆ. ಅಲ್ಲಿಯೇ ಸೈಬರ್ ಅಪರಾಧಿಗಳ ಯೋಜನೆಗಳು ಯಶಸ್ವಿ ಯಾಗುತ್ತವೆ. ಗ್ರಾಹಕರು ‘ಪಿನ್’ ಸಂಖ್ಯೆಯನ್ನು ನಮೂದಿಸಿದ ಕ್ಷಣದಲ್ಲಿ ಗ್ರಾಹಕರು ತಮ್ಮ ಖಾತೆಯಿಂದ ಹಣವನ್ನು ಹಿಂಪಡೆಯುವ ಅರ್ಜಿಯನ್ನು ಅನುಮೋದಿಸುತ್ತಾರೆ. ಅನಂತರ ಗ್ರಾಹಕನ ಬ್ಯಾಂಕ್ ಖಾತೆ ಕ್ಷಣಾರ್ಧದಲ್ಲಿ ಖಾಲಿಯಾಗುತ್ತದೆ. ಈ ಮಾಹಿತಿಯು ಪೊಲೀಸರಿಂದ ತಿಳಿದುಬಂದಿದೆ. ಚಿಕ್ಕ ಮೊತ್ತವನ್ನು ನೀಡಿ ದೊಡ್ಡ ಮೊತ್ತವನ್ನು ದೋಚುವ ಕುತಂತ್ರ ಇದಾಗಿದೆ.
ಪೊಲೀಸರು ಸೂಚಿಸಿದ ಪರಿಹಾರೋಪಾಯ !ಈ ಸಂದರ್ಭದಲ್ಲಿ ಪೊಲೀಸರು ಮುನ್ನೆಚ್ಚರಿಕೆ ಮತ್ತು ಪರಿಹಾರೋಪಾಯಗಳನ್ನು ಸೂಚಿಸಿದ್ದಾರೆ. ಈ ರೀತಿಯಾಗಿ, ನಿಮ್ಮ ಖಾತೆಗೆ ಅನಿರೀಕ್ಷಿತ ಹಣ ಬಂದರೆ ಮತ್ತು ಅದರ ಬಗ್ಗೆ ಅಪರಿಚಿತರಿಂದ ಕರೆ ಬಂದರೆ, ಅವರ ಹೇಳಿಕೆಗೆ ಮರುಳಾಗಬಾರದು. ಅಲ್ಲದೆ, ತಕ್ಷಣವೇ ಪಿನ್ ಸಂಖ್ಯೆಯನ್ನು ನಮೂದಿಸುವ ಮೂಲಕ ಖಾತೆಯಲ್ಲಿರುವ ಹಣದ ಮೊತ್ತವನ್ನು (ಎಷ್ಟು ಬ್ಯಾಲೆನ್ಸ್ ಇದೆ), ಪರಿಶೀಲಿಸುವ ತಪ್ಪನ್ನು ಮಾಡಬೇಡಿ. ಅಲ್ಲದೆ, ಇಂತಹ ವಂಚನೆಗಳನ್ನು ತಪ್ಪಿಸಲು, ಉದ್ದೇಶಪೂರ್ವಕವಾಗಿ ತಪ್ಪು ‘ಪಿನ್’ ಸಂಖ್ಯೆಯನ್ನು ನಮೂದಿಸಬೇಕು. ಹೀಗೆ ಮಾಡುವುದರಿಂದ ನಿಮ್ಮ ಹಣವನ್ನು ದೋಚಲು ಸೈಬರ್ ವಂಚಕರು ಮಾಡುವ ಪ್ರಯತ್ನಗಳು ವಿಫಲವಾಗುತ್ತವೆ. ಅನಂತರ, ನೀವು ನಿಜವಾಗಿಯೂ ಬ್ಯಾಲೆನ್ಸ್ನ್ನು ಪರಿಶೀಲಿಸಬೇಕಾದರೆ, ನೀವು ಹಾಗೆ ಮಾಡಬಹುದು ಎಂದು ಪೊಲೀಸರು ಸೂಚಿಸುತ್ತಾರೆ. ‘ಇಲೆಕ್ಟ್ರಾನಿಕ್ ಮನಿ ಟ್ರಾನ್ಸ್‌ಫರ್’ ಮತ್ತು ‘ಕೃತಕ ಬುದ್ಧಿಮತ್ತೆ’ಯ ಈ ಯುಗದಲ್ಲಿ ಈ ರೀತಿಯ ವಂಚನೆಯಿಂದ ತಮ್ಮನ್ನು ತಾವು ರಕ್ಷಿಸಿ ಕೊಳ್ಳಲು ಪ್ರತಿಯೊಬ್ಬರೂ ಸ್ವತಃ ಜಾಗರೂಕ ಮತ್ತು ಎಚ್ಚರಿಕೆಯಿಂದಿರ ಬೇಕು ಮತ್ತು ಸೈಬರ್ ಅಪರಾಧಿಗಳ ಬಗ್ಗೆ ಜಾಗೃತಿ ಮೂಡಿಸಲು ತಮ್ಮ ಕುಟುಂಬದ ಸದಸ್ಯರಿಗೆ ಮತ್ತು ಸಹೋದ್ಯೋಗಿಗಳಿಗೆ ಈ ಸಂದೇಶವನ್ನು ಹರಡಲು ಪೊಲೀಸರು ಮನವಿ ಮಾಡಿದ್ದಾರೆ. |