ದೆಹಲಿಯಲ್ಲಿ ಮಹಿಳೆಯರು ಮತ್ತು ವೃದ್ಧರು ಅತ್ಯಂತ ಅಸುರಕ್ಷಿತರು!

೨೦೨೪ ನೇ ಸಾಲಿನಲ್ಲಿ ಮಹಿಳೆಯರು ಮತ್ತು ವೃದ್ಧರಿಗೆ ಸಂಬಂಧಿಸಿದಂತೆ ಗರಿಷ್ಠ ಅಪರಾಧ ದಾಖಲು

AI ಚಿತ್ರ

ನವದೆಹಲಿ – ರಾಷ್ಟ್ರೀಯ ಅಪರಾಧ ದಾಖಲಾತಿ ವಿಭಾಗವು ೨೦೨೪ ನೇ ಸಾಲಿನಲ್ಲಿ ದೇಶದಲ್ಲಿ ನಡೆದ ಅಪರಾಧಗಳ ವರದಿಯನ್ನು ಪ್ರಸಾರ ಮಾಡಿದ್ದು, ಇದರಲ್ಲಿ ರಾಜಧಾನಿ ದೆಹಲಿಯಲ್ಲಿ ಮಹಿಳೆಯರು ಮತ್ತು ವೃದ್ಧರಿಗೆ ಸಂಬಂಧಿಸಿದ ಅಪರಾಧಗಳಲ್ಲಿ ಹೆಚ್ಚಳವಾಗಿರುವುದು ಕಂಡುಬಂದಿದೆ. ವರದಿಯ ಪ್ರಕಾರ, ೨೦೨೪ ರಲ್ಲಿ ಮೆಟ್ರೋ ನಗರಗಳಲ್ಲಿ ಮಹಿಳಾ ವಿರೋಧಿ ಅಪರಾಧಗಳ ವಿಷಯದಲ್ಲಿ ದೆಹಲಿ ಮೊದಲ ಸ್ಥಾನದಲ್ಲಿದೆ. ೨೦೨೪ ರಲ್ಲಿ ಮಹಿಳಾ ವಿರೋಧಿ ಪ್ರಕರಣಗಳಲ್ಲಿ ೧೩ ಸಾವಿರದ ೩೯೬ ಅಪರಾಧಗಳು ದಾಖಲಾಗಿದ್ದು, ಇದು ೨೦೨೩ ರಲ್ಲಿ ೧೩ ಸಾವಿರದ ೩೬೬ ರಷ್ಟಿತ್ತು.

೧. ದೆಹಲಿಯಲ್ಲಿ ವೃದ್ಧರ ವಿರುದ್ಧ ೧ ಸಾವಿರದ ೨೬೭ ಅಪರಾಧಗಳು ದಾಖಲಾಗಿವೆ. ದೆಹಲಿಯಲ್ಲಿ ವೃದ್ಧರ ಮೇಲಿನ ಅಪರಾಧಗಳ ಪ್ರಮಾಣವು ಪ್ರತಿ ಲಕ್ಷ ಜನಸಂಖ್ಯೆಗೆ ೧೧೦ ಪ್ರಕರಣಗಳಾಗಿದ್ದು, ಇದು ಕೇಂದ್ರಾಡಳಿತ ಪ್ರದೇಶಗಳಲ್ಲಿಯೇ ಅತ್ಯಂತ ಹೆಚ್ಚಿನ ಪ್ರಮಾಣಗಳಲ್ಲಿ ಒಂದಾಗಿದೆ.

೨. ಮಧ್ಯಪ್ರದೇಶದಲ್ಲಿ ಗರಿಷ್ಠ ಅಂದರೆ ೫ ಸಾವಿರದ ೮೭೫ ಅಪರಾಧಗಳು ದಾಖಲಾಗಿವೆ, ಈ ಸಂಖ್ಯೆಯು ೨೦೨೩ ರ ೫ ಸಾವಿರದ ೭೩೮ ಪ್ರಕರಣಗಳಿಗಿಂತ ಹೆಚ್ಚಾಗಿದೆ.

೩. ದೇಶದಲ್ಲಿ ವೃದ್ಧರ ಮೇಲಿನ ಅಪರಾಧಗಳಲ್ಲಿ ಕಳವಳಕಾರಿ ಹೆಚ್ಚಳ ಕಂಡುಬಂದಿದೆ. ೨೦೨೪ ರಲ್ಲಿ ಒಟ್ಟು ೩೨ ಸಾವಿರದ ೬೦೨ ಅಪರಾಧಗಳು ದಾಖಲಾಗಿದ್ದು, ಇದು ೨೦೨೩ ಕ್ಕೆ ಹೋಲಿಸಿದರೆ ಶೇ. ೧೬.೯ ರಷ್ಟು ಹೆಚ್ಚಾಗಿದೆ.

ದೇಶದಲ್ಲಿ ಮಹಿಳೆಯರ ಮೇಲಿನ ಅಪರಾಧಗಳಲ್ಲಿ ಶೇ. ೧.೫ ರಷ್ಟು ಇಳಿಕೆ

ಮಹಿಳೆಯರ ಮೇಲಿನ ಅಪರಾಧಗಳಲ್ಲಿಯೂ ಶೇ. ೧.೫ ರಷ್ಟು ಇಳಿಕೆ ದಾಖಲಾಗಿದೆ. ಮಹಿಳೆಯರ ಮೇಲಿನ ಅಪರಾಧಗಳ ಪ್ರಮಾಣವು ೨೦೨೩ ರಲ್ಲಿ ೬೬.೨ ರಷ್ಟಿದ್ದುದು ೨೦೨೪ ರಲ್ಲಿ ೬೪.೬ ಕ್ಕೆ ಇಳಿದಿದೆ. ೨೦೨೪ ರಲ್ಲಿ ಇಂತಹ ೪ ಲಕ್ಷದ ೪೧ ಸಾವಿರ ಅಪರಾಧಗಳು ದಾಖಲಾಗಿದ್ದರೆ, ೨೦೨೩ ರಲ್ಲಿ ಈ ಸಂಖ್ಯೆ ೪ ಲಕ್ಷದ ೪೮ ಸಾವಿರದಷ್ಟಿತ್ತು.

ದೇಶಾದ್ಯಂತ ಒಟ್ಟು ಅಪರಾಧಗಳಲ್ಲಿ ಶೇ. ೬ ರಷ್ಟು ಇಳಿಕೆ

ದೇಶದಲ್ಲಿ ಒಟ್ಟು ಅಪರಾಧಗಳು ಶೇ. ೬ ರಷ್ಟು ಕಡಿಮೆಯಾಗಿವೆ. ೨೦೨೪ ರಲ್ಲಿ ೫೮ ಲಕ್ಷದ ೮೫ ಸಾವಿರ ಅಪರಾಧಗಳು ದಾಖಲಾಗಿದ್ದರೆ, ೨೦೨೩ ರಲ್ಲಿ ೬೨ ಲಕ್ಷದ ೪೧ ಸಾವಿರ ಪ್ರಕರಣಗಳು ದಾಖಲಾಗಿದ್ದವು.

ಸೈಬರ್ (ಆನ್‌ಲೈನ್‌ಗೆ ಸಂಬಂಧಿಸಿದ) ಅಪರಾಧಗಳಲ್ಲಿ ಬೆಂಗಳೂರು ಮುಂಚೂಣಿಯಲ್ಲಿ

ದೇಶದಲ್ಲಿ ಸೈಬರ್ ಅಪರಾಧಗಳ ಪ್ರಮಾಣವು ೨೦೨೩ ರಲ್ಲಿ ಶೇ. ೬.೨ ರಷ್ಟಿದ್ದುದು ೨೦೨೪ ರಲ್ಲಿ ಶೇ. ೭.೩ ಕ್ಕೆ ಏರಿಕೆಯಾಗಿದೆ. ಮೆಟ್ರೋ (ದೊಡ್ಡ ಮತ್ತು ಆಧುನಿಕ) ನಗರಗಳಲ್ಲಿ ೨೦೨೪ ರಲ್ಲಿ ಸೈಬರ್ ಅಪರಾಧದ ವಿಷಯದಲ್ಲಿ ಬೆಂಗಳೂರು ಪ್ರಥಮ ಸ್ಥಾನದಲ್ಲಿದೆ. ಅಲ್ಲಿ ೧೭ ಸಾವಿರದ ೫೬೧ ಪ್ರಕರಣಗಳು ದಾಖಲಾಗಿವೆ. ಮೆಟ್ರೋ ನಗರಗಳಲ್ಲಿ ಬೆಂಗಳೂರಿನ ನಂತರ ಮುಂಬಯಿ ಎರಡನೇ ಸ್ಥಾನದಲ್ಲಿದೆ. ಮುಂಬಯಿಯಲ್ಲಿ ೪ ಸಾವಿರದ ೯೩೯ ಪ್ರಕರಣಗಳು ದಾಖಲಾಗಿವೆ. ಭಾಗ್ಯನಗರದಲ್ಲಿ ೪ ಸಾವಿರದ ೯ ಪ್ರಕರಣಗಳು ದಾಖಲಾಗಿವೆ.

ಸಂಪಾದಕೀಯ ನಿಲುವು

ರಾಜಧಾನಿ ದೆಹಲಿಯ ಈ ಸ್ಥಿತಿ ನಾಚಿಕೆಗೇಡು! ಭಾರತದಲ್ಲಿ ಮಹಿಳೆಯರನ್ನು ದೇವಿಯೆಂದು ಪರಿಗಣಿಸಲಾಗುತ್ತದೆ ಮತ್ತು ವೃದ್ಧರನ್ನು ಗೌರವಿಸಲಾಗುತ್ತದೆ. ಅವರ ಈ ಸ್ಥಿತಿಯು ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿರುವುದನ್ನು ತೋರಿಸುತ್ತದೆ!