ತಿರುವನಂತಪುರಂ (ಕೇರಳ) – ರಾಜ್ಯ ಸರಕು ಮತ್ತು ಸೇವಾ ತೆರಿಗೆಯ ತ್ರಿಶೂರ್ ನ ‘ಇಂಟೆಲಿಜೆನ್ಸ್ ಅಂಡ್ ಎನ್ಫೋರ್ಸಮೆಂಟ್ ವಿಂಗ್’ (ಗುಪ್ತಚರ ಮತ್ತು ಜಾರಿ ವಿಭಾಗವು) ಈ ಗುಪ್ತಚರ ವಿಭಾಗವು ಕೇರಳದ ತ್ರಿಶೂರ್‌ನಲ್ಲಿ ಚಿನ್ನಾಭರಣ ತಯಾರಕರ ಮೇಲೆ ರಹಸ್ಯ ದಾಳಿ ನಡೆಸಿ 120 ಕೆಜಿ ಅಕ್ರಮ ಚಿನ್ನವನ್ನು ವಶಪಡಿಸಿಕೊಂಡಿದೆ. ರಾಜ್ಯ ಸರಕು ಮತ್ತು ಸೇವಾ ತೆರಿಗೆ ಇಲಾಖೆಯ ಸುಮಾರು 700 ಅಧಿಕಾರಿಗಳು 78 ಸ್ಥಳಗಳಲ್ಲಿ ಇತ್ತೀಚೆಗೆ ದಾಳಿ ನಡೆಸಿದ್ದಾರೆ. ಅಧಿಕಾರಿಗಳು 5 ವರ್ಷಗಳ ತೆರಿಗೆ ವಂಚನೆಯ ಸಾಕ್ಷ್ಯವನ್ನು ಬಯಲಿಗೆಳೆದಿದ್ದಾರೆ.
ಈ ಕ್ರಮವು ರಾಜ್ಯ ಸರಕು ಮತ್ತು ಸೇವಾ ತೆರಿಗೆ ಇಲಾಖೆಯು ರಾಜ್ಯದಲ್ಲಿ ನಡೆಸಿದ ಇದುವರೆಗಿನ ಎಲ್ಲಕ್ಕಿಂತ ದೊಡ್ಡ ದಾಳಿಗಳಲ್ಲಿ ಒಂದಾಗಿದೆ. ಈ ದಾಳಿಯಲ್ಲಿ ಚಿನ್ನವನ್ನು ಕರಗಿಸಿ ತಯಾರು ಮಾಡುತ್ತಿದ್ದ ಆಭರಣದ ಕಾರ್ಖಾನೆಗಳನ್ನು ಕಂಡುಹಿಡಿಯಲಾಯಿತು. ಇದರೊಂದಿಗೆ ಚಿನ್ನದ ವ್ಯಾಪಾರಿಗಳ ಮನೆಗಳಲ್ಲೂ ದಾಳಿ ಮಾಡಲಾಗಿದೆ.
ಅಧಿಕಾರಿಗಳ ಹೇಳಿಕೆ ಪ್ರಕಾರ, ಅನೇಕ ಉತ್ಪಾದಕರು ತೆರಿಗೆ ಪಾವತಿಸದೆ ಚಿನ್ನದ ವ್ಯಾಪಾರದಲ್ಲಿ ತೊಡಗಿರುವುದು ಈ ಸಂದರ್ಭದಲ್ಲಿ ಬೆಳಕಿಗೆ ಬಂದಿದೆ. ಕೆಲವು ಮಾಲೀಕರು ತೆರಿಗೆ ವಂಚನೆ ಮಾಡಿದ್ದಾರೆ. ದಾಳಿಯಲ್ಲಿ ತೆರಿಗೆ ವಂಚನೆ ಮಾಡಿರುವ ಸಾಕ್ಷ್ಯಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.