ಬರೇಲಿ (ಉತ್ತರ ಪ್ರದೇಶ) – ಇಲ್ಲಿನ ಯುವಕನೊಬ್ಬ ಮೇಲೆ ಅತ್ಯಾಚಾರದ ಸುಳ್ಳು ಆರೋಪ ಹೊರಿಸಿದ್ದರಿಂದ ಕಳೆದ 4 ವರ್ಷ ಜೈಲಿನಲ್ಲಿದ್ದನು. ಯುವತಿ ಸುಳ್ಳು ಹೇಳುತ್ತಿದ್ದಾಳೆ ಎಂದು ನ್ಯಾಯಾಲಯಕ್ಕೆ ಸಂದೇಹ ಬಂದ ನಂತರ, ಆಕೆಯನ್ನು ಬಿಗಿಯಾಗಿ ವಿಚಾರಣೆ ನಡೆಸಿದಾಗ ಅವಳು ಯುವಕನ ಮೇಲೆ ಮಾಡಿದ ಅತ್ಯಾಚಾರದ ಆರೋಪ ಸುಳ್ಳು ಎಂದು ಸಾಬೀತಾಯಿತು. ಆ ನಂತರ, ನ್ಯಾಯಾಲಯವು ಯುವಕನನ್ನು ಗೌರವಯುತವಾಗಿ ದೋಷಮುಕ್ತಗೊಳಿಸಿ ಯುವತಿಯನ್ನು ನೇರ ಜೈಲಿಗೆ ಕಳುಹಿಸಿತು. ‘ಸುಳ್ಳು ಆರೋಪಕ್ಕೆ ಅಮಾಯಕ ಯುವಕ ಹೇಗೆ ಶಿಕ್ಷೆ ಅನುಭವಿಸಬೇಕಾಯಿತೋ, ಅದೇ ರೀತಿಯ ಶಿಕ್ಷೆಯನ್ನು ಆರೋಪ ಮಾಡಿದ ಯುವತಿಯು ಅನುಭವಿಸಬೇಕು’, ಎಂದು ನ್ಯಾಯಾಲಯವು ಸ್ಪಷ್ಟಪಡಿಸಿತು. ಸಂತ್ರಸ್ತ ಯುವಕನಿಗೆ 5 ಲಕ್ಷ ರೂಪಾಯಿ ನೀಡುವಂತೆ ಆರೋಪಿ ಯುವತಿಗೆ ನ್ಯಾಯಾಲಯವು ಆದೇಶಿಸಿದೆ. 5 ಲಕ್ಷ ದಂಡ ಪಾವತಿಸಲು ಯುವತಿ ನಿರಾಕರಿಸಿದರೆ, ಆಕೆಯ ಶಿಕ್ಷೆಯನ್ನು 6 ತಿಂಗಳು ವಿಸ್ತರಿಸಬೇಕು ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.
ನ್ಯಾಯಾಲಯದ ತೀರ್ಪಿನ ಬಗ್ಗೆ ಸಂತ್ರಸ್ತ ಯುವಕ ಅಜಯ ಅಲಿಯಾಸ್ ರಾಘವ್ ಸಂತಸ ವ್ಯಕ್ತಪಡಿಸಿದ್ದಾರೆ. ಅವರು ಮಾತನಾಡಿ, ”ಆರೋಪಿಗಳ ವಿರುದ್ಧದ ಆರೋಪಗಳು ನ್ಯಾಯಾಲಯದಲ್ಲಿ ಸುಳ್ಳು ಎಂದು ಸಾಬೀತಾದರೂ, ಸಮಾಜವು ಅವರನ್ನು ಅದೇ ದೃಷ್ಟಿಕೋನದಿಂದ ನೋಡುತ್ತದೆ. ಯುವತಿಯ ಒಂದು ಆಪಾದನೆಯಿಂದ ನನ್ನ ಆಯುಷ್ಯ ಹಾಳಾಯಿತು, ನಾನು ಎಲ್ಲೇ ಹೋದರೂ ಜನರು ಸಂದೇಹದಿಂದ ನೋಡುತ್ತಾರೆ.” ಎಂದು ಹೇಳಿದರು
ಯುವತಿಯ ಸುಳ್ಳು ಗೋಳು ಹೀಗೆ ಬಹಿರಂಗ ಆಯಿತು !
ನ್ಯಾಯಾಲಯದಲ್ಲಿ ಸಾಕ್ಷಿ ಹೇಳುವಾಗ ಯುವತಿ ಎಡವಿದಾಗ ಆಕೆಯ ಸುಳ್ಳುತನ ಬಯಲಾಗಿದೆ. ಆಕೆ ಮೊದಲು ನ್ಯಾಯಾಧೀಶರ ಮುಂದೆ, ತಾನು ಅನಕ್ಷರಸ್ಥೆ ಎಂದು ಹೇಳಿ ನಂತರ ಇಂಗ್ಲಿಷ್‌ನಲ್ಲಿ ಸಹಿ ಮಾಡಿದಳು. ಅವಳು ಸುಳ್ಳು ಹೇಳುತ್ತಿದ್ದಾಳೆಂದು ನ್ಯಾಯಾಧೀಶರಿಗೆ ಅರಿವಾಯಿತು. ಆ ನಂತರ ಆಕೆಯ ವಿರುದ್ಧ ಸುಳ್ಳು ಸಾಕ್ಷಿ ನೀಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಿ ಶಿಕ್ಷೆ ನೀಡಲಾಯಿತು.