Sadguru’s Isha Foundation Case : ಇಶಾ ಫೌಂಡೇಶನ್‌ನ ಆಶ್ರಮದ ತಪಾಸಣೆ ಮಾಡಲು ಮದ್ರಾಸ್ ಹೈಕೋರ್ಟ್‌ನ ಆದೇಶಕ್ಕೆ ತಡೆ ಹೇರಿದ ಸುಪ್ರೀಂ ಕೋರ್ಟ್ !

ಪೊಲೀಸ್ ಅಥವಾ ಸೇನೆಯು ಅಂತಹ ಸಂಸ್ಥೆಗಳಲ್ಲಿ ಪ್ರವೇಶಿಸುವಂತಿಲ್ಲ ! – ನ್ಯಾಯಾಲಯದ ವಿವರಣೆ

ನವ ದೆಹಲಿ – ತಮಿಳುನಾಡಿನ ಕೊಯಮತ್ತೂರಿನಲ್ಲಿ ಎಸ್. ಕಾಮರಾಜ ಎಂಬ ಮಾಜಿ ಪ್ರಧ್ಯಾಪಕರು ತಮ್ಮ ಇಬ್ಬರು ಹೆಣ್ಣು ಮಕ್ಕಳನ್ನು ಸದ್ಗುರು ಜಗ್ಗಿ ವಾಸುದೇವ್ ಅವರ ಇಶಾ ಫೌಂಡೇಶನ್‌ನ ಆಶ್ರಮದಲ್ಲಿ ಬಂಧಿಸಿ ಇರಿಸಲಾಗಿದೆ ಎಂದು ಆರೋಪಿಸಿ ಮದ್ರಾಸ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿ ಎಸ್.ಎಂ. ಸುಬ್ರಹ್ಮಣ್ಯಂ ಮತ್ತು ವಿ. ಶಿವಜ್ಞಾನ ಅವರು ಸದ್ಗುರು ಜಗ್ಗಿ ವಾಸುದೇವ್ ಅವರ ವ್ಯವಹಾರಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದರು ಮತ್ತು ಇಶಾ ಫೌಂಡೇಶನ್‌ಗೆ ಸಂಬಂಧಿಸಿದ ಎಲ್ಲಾ ಪ್ರಕರಣಗಳನ್ನು ತನಿಖೆ ಮಾಡುವಂತೆ ಪೊಲೀಸರಿಗೆ ಆದೇಶಿಸಿದ್ದರು. ಬಳಿಕ ಅಕ್ಟೋಬರ್ 1 ರಂದು ಸುಮಾರು 150 ಪೊಲೀಸರು ಕೊಯಮತ್ತೂರಿನ ಈಶಾ ಯೋಗ ಕೇಂದ್ರದಲ್ಲಿ ಪರಿಶೀಲನೆ ನಡೆಸಿದರು. ಈ ಘಟನೆಯನ್ನು ಗಮನಿಸಿದ ಸುಪ್ರೀಂ ಕೋರ್ಟ್, ಮದ್ರಾಸ್ ಹೈಕೋರ್ಟ್ ನ ಆದೇಶಕ್ಕೆ ತಡೆ ಹೇರಿತು.

1. ‘ಇಂತಹ ಸಂಸ್ಥೆಗಳಿಗೆ ಪೊಲೀಸ್ ಅಥವಾ ಸೇನೆಯು ಪ್ರವೇಶಿಸುವಂತಿಲ್ಲ’ ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಧನಂಜಯ್ ಚಂದ್ರಚೂಡ್ ಟೀಕಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದ ಇಬ್ಬರು ಮಹಿಳೆಯರೊಂದಿಗೆ ಸುಪ್ರೀಂ ಕೋರ್ಟ್ ಆನ್‌ಲೈನ್‌ನಲ್ಲಿ ಸಂವಾದ ನಡೆಸಲಿದೆ ಎಂದು ಅವರು ಹೇಳಿದರು.

2. ಮದ್ರಾಸ್ ಹೈಕೋರ್ಟಿನ ಆದೇಶದ ಮೇರೆಗೆ ತಮಿಳುನಾಡಿನ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶ್ರೇಣಿಯ ಅಧಿಕಾರಿಯೊಬ್ಬರ ನೇತೃತ್ವದಲ್ಲಿ 150 ಪೊಲೀಸರು ಕೊಯಮತ್ತೂರಿನ ಸದ್ಗುರು ಜಗ್ಗಿ ವಾಸುದೇವ್ ಅವರ ಆಶ್ರಮದ ಮೇಲೆ ದಾಳಿ ನಡೆಸಿದ್ದರು.

3. ಕಾಮರಾಜ ಅವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಇಶಾ ಫೌಂಡೇಶನ್ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಎಸ್. ಕಾಮರಾಜ ತನ್ನ ಇಬ್ಬರು ಪುತ್ರಿಯರಾದ ಗೀತಾ ಕಾಮರಾಜ್ ಅಲಿಯಾಸ್ ಮಾ ಮಾಥಿ (42 ವರ್ಷ) ಮತ್ತು ಲತಾ ಕಾಮರಾಜ ಅಲಿಯಾಸ್ ಮಾ ಮಾಯು (ವಯಸ್ಸು 39 ವರ್ಷ) ಅವರನ್ನು ಆಶ್ರಮದಲ್ಲಿ ಬಂಧಿಸಿ ಸನ್ಯಾಸ ಸ್ವೀಕರಿಸುವಂತೆ ಒತ್ತಾಯಿಸಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಿದ್ದರು.

4. ‘ನಮ್ಮನ್ನು ಬಲವಂತವಾಗಿ ಇಶಾ ಫೌಂಡೇಶನ್‌ ನಲ್ಲಿ ಬಂಧಿಸಿಡಲಿಲ್ಲ, ನಾವು ಸ್ವಯಂ ಪ್ರೇರಣೆಯಿಂದ ಅಲ್ಲಿ ವಾಸಿಸುತ್ತಿದ್ದೇವೆ’ ಎಂದು ಈ ಇಬ್ಬರು ಮಹಿಳೆಯರು ನ್ಯಾಯಾಲಯದಲ್ಲಿ ವಿಚಾರಣೆ ವೇಳೆ ಹೇಳಿದ್ದಾರೆ.

 ಸಂಪಾದಕೀಯ ನಿಲುವು

ಹೈಕೋರ್ಟ್‌ನ ಆದೇಶವನ್ನು ಸುಪ್ರೀಂ ಕೋರ್ಟ್ ಬದಲಾಯಿಸುವುದರಿಂದ ಕಾನೂನಿನ ಬಗ್ಗೆ ಜನರ ಮನದಲ್ಲಿ ವಿಭಿನ್ನ ಅರ್ಥಗಳು ಹುಟ್ಟಿಕೊಳ್ಳುತ್ತವೆ !